ಬೆಂಗಳೂರು
ಕೆಪಿಸಿಸಿ ಕಚೇರಿಯಲ್ಲಿ 71ನೇ ಗಣರಾಜ್ಯೋತ್ಸವವನ್ನು ಸಂವಿಧಾನದ ಪ್ರಸ್ತಾವನೆ ವಾಚನ ಪ್ರಮಾಣವಚನ ಸ್ವೀಕರಿಸುಚ ಮೂಲಕ ಆಚರಿಸಲಾಯಿತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಕೇಂದ್ರ ಸಚಿವರಾದ ಮಲ್ಲಿಕಾರ್ಜುನ ಖರ್ಗೆ,ವೀರಪ್ಪ ಮೊಯ್ಲಿ,ಎಸ್ ಆರ್ ಪಾಟೀಲ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಬಳಿಕ ಮಾತನಾಡಿದ ದಿನೇಶ್ ಗುಂಡೂರಾವ್,ಪ್ರಸಕ್ತ ರಾಜಕೀಯ ದುರುದ್ದೇಶಗಳಿಗಾಗಿ ಸಂವಿಧಾನ ಅಂಗ ಸ್ಥಂಸ್ಥೆಗಳು ಕೇಂದ್ರದ ಅಧೀನದಲ್ಲಿ ಇವೆ.ಸ್ವಾಯತ್ತ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ತನ್ನ ಪಟ್ಟಬದ್ಧಹಿತಾಸಕ್ತಿಗಾಗಿ ದುರುಪಯೋಗ ಮಾಡಿಕೊಳ್ಳುತ್ತಿದೆ.ಬಿಜೆಪಿ ವಿಚಾರಧಾರೆಗಳ ವಿರುದ್ಧ ಮಾತನಾಡಿದವರಿಗೆ ದೇಶ ವಿರೋಧಿಗಳು ಎಂದು ಪಟ್ಟ ಕಟ್ಟಲಾಗುತ್ತಿದೆ ಎಂದು ಕಿಡಿಕಾರಿದರು.
ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ಹಿಂದೆಂದೂ ಇರದ ಸಂಕಷ್ಟದ ಪರಿಸ್ಥಿತಿ ನಿರ್ಮಾಣವಾಗಿದೆ.ಕೇಂದ್ರ ಬಿಜೆಪಿ ಸರ್ಕಾರ ದೇಶದ ಜನರನ್ನು ದಾರಿ ತಪ್ಪಿಸುವ ಕೆಲಸ ಕೇಂದ್ರ ಸರ್ಕಾರ ಮಾಡುತ್ತಿದೆ. ಕೇಂದ್ರದ ತಪ್ಪು ವಿಚಾರಗಳ ವಿರುದ್ಧ ಜನರ ಸಮಸ್ಯೆಗಳ ವಿರುದ್ಧ ಕಾಂಗ್ರೆಸ್ ಹೋರಾಟ ಮಾಡಬೇಕು.ಕೇಂದ್ರದ ಜನವಿರೋಧಿ ನೀತಿಗಳ ವಿರುದ್ಧ ಧ್ವನಿಯೆತ್ತುವುದು ಕಾಂಗ್ರೆಸಿಗರ ಕರ್ತವ್ಯವಾಗಬೇಕು.ಜನ ಕಾಂಗ್ರೆಸ್ ನಡೆಯನ್ನು ಗಮನಿಸುತ್ತಿದ್ದಾರೆ.ನಮ್ಮನಮ್ಮಲ್ಲಿ ಏನೇ ಸಣ್ಣಪುಟ್ಟ ಗೊಂದಲಗಳಿದ್ದರೂ ಅವುಗಳನ್ನೆಲ್ಲ ಬದಿಗೊತ್ತಿ ಸಂವಿಧಾನ ಉಳಿಸಿಕೊಳ್ಳುವ ಸಲುವಾಗಿ ಹೋರಾಟ ಮಾಡಬೇಕು ಎಂದು ಐಕ್ಯತೆಯ ಮಂತ್ರ ಜಪಿಸಿದರು
ಭಾರತ ಉಳಿಸುವುದು ನಮ್ಮ ಕರ್ತವ್ಯ.ಸಂವಿಧಾನ ವಿರೋಧಿಗಳು ಸಹ ಇಂದು ಗಣರಾಜ್ಯೋತ್ಸವ ಆಚರಣೆ ಮಾಡುತ್ತಿದ್ದಾರೆ .ಬಿಜೆಪಿಯ ನಾಯಕರು ಸಂದರ್ಭ ಸಿಕ್ಕಾಗಲೆಲ್ಲ ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡುತ್ತಾರೆ .ಕೋಮುವಾದವನ್ನು ಪ್ರತಿಪಾದಿಸುತ್ತಾರೆ.ಕಾಂಗ್ರೆಸಿಗರಾದ ತಾವು ದೇಶವನ್ನು ದೇಶದ ಸಂವಿಧಾನವನ್ನು ಉಳಿಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಸ್ವಾತಂತ್ರ ನಮ್ಮ ಆತ್ಮ, ಸಂವಿಧಾನ ಆತ್ಮಸಾಕ್ಷಿ. ಸಂವಿಧಾನನದಿಂದ ಬೃಹತ್ ಭಾರತ ಕಟ್ಟಿದ್ದೇವೆ ವಿಶ್ವದಲ್ಲಿಯೇ ಅತ್ಯಂತ ಶ್ರೇಷ್ಠ ಸಂವಿಧಾನ ನಮ್ಮದು.ಇಂದಿನ ಕೇಂದ್ರ ಸರ್ಕಾರ ಸಂವಿಧಾನದ ಮೂಲ ಮೌಲ್ಯಗಳ ಮೇಲೆ ಅಕ್ರಮಣಕಾರಿಯಾಗಿದ್ದು ಈ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಬೇಕಿದೆ ಎಂದು ದಿನೇಶ್ ಗುಂಡೂರಾವ್ ಅಭಿಪ್ರಾಯ ವ್ಯಕ್ತಪಡಿಸಿದರು.
ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಹಲವರ ಪ್ರಾಣ ತ್ಯಾಗದಿಂದಲೇ ದೇಶಕ್ಕೆ ಸ್ವತಂತ್ರ ಸಿಕ್ಕಿದೆ.ನಮ್ಮ ಸಂವಿಧಾನ ಶ್ರೇಷ್ಠ ಸಂವಿಧಾನ.ದೇಶದ ಸಂವಿಧಾನ ದ ಮೇಲೆ ಬಿಜೆಪಿ ಅವರಿಗೆ ನಂಬಿಕೆ ಇಲ್ಲ.ಮನುವಾದದ ಮೇಲೆ ನಂಬಿಕೆ ಅವರದ್ದು ಎಂದು ಕುಟುಕಿದರು ಬಿಜೆಪಿಯ ಸಂಸದರು ಸಂಸತ್ತಿ ನಲ್ಲಿ ಸಂವಿಧಾನ ವಿರೋಧ ಮಾಡಿ,ಸಂವಿಧಾನ ಬದಲಾವಣೆ ಮಾಡಬೇಕು ಎನ್ನುತ್ತಿದ್ದಾರೆ.ಕಾಂಗ್ರೆಸ್ ಕೇಂದ್ರದ ವಿರುದ್ಧ ಹೋರಾಡಿ ಸಂವಿಧಾನ ರಕ್ಷಣೆ ಮಾಡಬೇಕು.ಜೆಪಿ ಅಧಿಕಾರಕ್ಕೆ ಬಂದ ತರುವಾಯ ದೇಶ ಅಪಾಯಕ್ಕೆ ಸಿಲುಕಿದೆ.ಕೇಂದ್ರ ಸರ್ಕಾರ ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಕಾನೂನು ರೂಪಿಸುತ್ತಿದೆ.ಆದರೆ ಸಂವಿಧಾನದ ಪ್ರಕಾರ ಎಲ್ಲರೂ ಸಮಾನರು.ಸಂವಿಧಾನ ಉಳಿಸುವ ಪ್ರತಿಜ್ಞೆ ನಾವೆಲ್ಲರೂ ಮಾಡಿದ್ದೇವೆ ಎಂದು ಕಾರ್ಯಕರ್ತರಲ್ಲಿ ಪಕ್ಷದ ಮುಖಂಡರಲ್ಲಿ ಬಿಜೆಪಿ ವಿರುದ್ಧ ಹೋರಾಡಲು ಹುರುಪು ತುಂಬಿದರು.
ಉಪಚುನಾವಣೆಯಲ್ಲಿ ಸೋತವರಿಗೆ ಸಚಿವ ಸ್ಥಾನ ಇಲ್ಲ ಎಂದು ಯಡಿಯೂರಪ್ಪ ಹೇಳಿರುವುದು ಪಕ್ಷ ದ್ರೋಹಿಗಳಿಗೆ ಸರಿಯಾದ ಪಾಠ ಕಲಿಸಿದಂತಾಗಿದೆ.ನಂಬಿಸಿ ದ್ರೋಹ ಮಾಡಿದವರಿಗೆ ಇದೇ ಶಿಕ್ಷೆ ಆಗಬೇಕು ಎಂದರು.ಕೆಪಿಸಿಸಿ ವಿಪಕ್ಷ ನಾಯಕ ಸಮಸ್ಯೆಯನ್ನು ಪಕ್ಷದ ಹೈಕಮಾಂಡ್ ಬಗೆಹರಿಸಲಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಮಾಜಿ ಸಂಸದ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ,ಸಂವಿಧಾನವನ್ನು ಬದಲಾಯಿಸಲು ಬಿಜೆಪಿ ಮತ್ತು ಸಂಘ ಪರಿವಾರ ಯಾವ ರೀತಿಯ ಯೋಜನೆಗಳನ್ನು ಹಾಕಿಕೊಂಡಿವೆ, ಏನು ತಂತ್ರ ರೂಪಿಸಿವೆ ಎಂಬುದನ್ನು ಪತ್ತೆ ಮಾಡಿ,ಸಂವಿಧಾನವನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಮುಂದಿರುವ ಸವಾಲು ಎಂದರು. ಧರ್ಮದ ರಾಜಕೀಯ ಮೂಲಕ ಸಂವಿಧಾನವನ್ನ ತೆಗೆಯಬೇಕು.ಆ ಮೂಲಕ ಬಡವರಿಗೆ , ದಲಿತರಿಗೆ ರಕ್ಷಣೆ ಸಿಗುತ್ತಿದ್ದ ಸಂವಿಧಾನವನ್ನು ಬದಲಾಯಿಸಬೇಕು ಎಂದು ಅರ್‍ಎಸ್‍ಎಸ್ ಪ್ರಯತ್ನಿಸುತ್ತಿದೆ.ಸಂವಿಧಾನದ ರಕ್ಷಣೆಗೆ ನಾವುಗಳು ಒಗ್ಗಟ್ಟಿನಿಂದ ಹೋರಾಟ ಮಾಡಬೇಕು .
ಎಲ್ಲಾ ಎನ್ ಜಿ ಓ ಗಳು ಸಂಘಟನೆಗಳು ಸಂವಿಧಾನದ ರಕ್ಷಣೆಗೆ ಒಂದಾಗಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಕರೆ ನೀಡಿದರು.ಸಿಎಎ, ಎನ್ ಆರ್ ಸಿ ಹೋರಾಟಗಳನ್ನು ಹಿಂಸಾತ್ಮಕಗೊಳಿಸಿದ್ದಾರೆ.ಬಿಜೆಪಿ ಸಂಘಪರಿವಾರದವರು ಸಮಾಜವನ್ನು ವಿಭಜನೆ ಮಾಡುವ ಕೆಲಸ ಮಾಡಲು ಮನೆ ಮನೆಗೆ ತೆರಳಿ ಪೌರತ್ವ ತಿದ್ದುಪಡಿ ಪರ ಪ್ರಚಾರ ಮಾಡುತ್ತಿದ್ದಾರೆ .ಗುಡ್ಡಗಾಡಿನಲ್ಲಿ ಇರುವ ಜನರಿಗೆ ದಾಖಲೆಗಳು ಇರುವುದಿಲ್ಲ .ಅವರಲ್ಲಿ ಕುಂಡಲಿ ಜಾತಕ ಬರೆಯುವುದಕ್ಕೆ ಯಾರೂ ಇರುವುದಿಲ್ಲ .ಹೀಗಿದ್ದ ಮೇಲೆ ಬುಡಕಟ್ಟು ಜನರು ಅಲೆಮಾರಿಗಳು
ದಾಖಲೆಗಳನ್ನು ಎಲ್ಲಿಂದ ತರುತ್ತಾರೆ? ಸಾಮಾನ್ಯ ಜನರಿಗೆ ತೊಂದರೆ ಕೊಡಲೆಂದೇ ಕೇಂದ್ರ ಕಾಯಿದೆ ಜಾರಿ ಮಾಡುತ್ತಿದೆ.ಬಡ ಜನರಿಗೆ , ದಲಿತರಿಗೆ , ಹಿಂದುಳಿದ ವರ್ಗಗಳ ಜನರಿಗೆ ತೊಂದರೆ ಕೊಡಬೇಕು ಎಂಬ ದುರುದ್ದೇಶ ಅವರದ್ದಾಗಿದೆ.ಕೇಂದ್ರದ ನೀತಿ ಕಾಯಿದೆಗಳನ್ನು ವಿರೋಧಿಸಿ ಗುಲಬರ್ಗಾ ದಲ್ಲಿ ಬೃಹತ್ ಪ್ರಮಾಣದ ಪ್ರತಿಭಟನೆ ನಡೆದಿದೆ ಎಂದರು.ಪ್ರಧಾನಿ ಮೋದಿ ಯುವಕರಿಗೆ ಉದ್ಯೋಗ ಕೊಡುತ್ತೇನೆ ಎಂದು ಹೇಳಿ ಮೋಸಮಾಡಿದ್ದಾರೆ. ಜಿಡಿಪಿ ದರ ಕುಸಿದಿದೆ .ದೇಶದ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ ಎಂದು ಕೇಂದ್ರದ ಆರ್ಥಿಕ ತಜ್ಞರೇ ಸ್ಪಷ್ಟಪಡಿಸಿದ್ದಾರೆ.ನೊಬೆಲ್ ಪ್ರಶಸ್ತಿ ಪಡೆದ ತಜ್ಞರೇ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎಂದು ಹೇಳಿದ ಮೇಲೂ ಬಿಜೆಪಿ ನಾಯಕರು ಅದನ್ನು ಸುಳ್ಳು ಎಂದು ಪ್ರತಿಪಾದಿಸುತ್ತಿದ್ದಾರೆ.ಕೇಂದ್ರದ ಜನವಿರೋಧಿ ನೀತಿಗಳ ವಿರುದ್ಧ ದೇಶದ ಜನ ರೊಚ್ಚಿಗೆದ್ದಿದ್ದಾರೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ