ತಿಪಟೂರು
ಜೈಜವಾನ್ ಜೈಕಿಸಾನ್ ಎಂದು ಕರೆಕೊಟ್ಟ ಲಾಲ್ ಬಹದ್ದೂರ್ ಶಾಸ್ತ್ರಿ, ಇದರೊಂದಿಗೆ ಜೈ ವಿಜ್ಞಾನ್ ಸೇರಿಸಿದ ಮಹಾನ್ ವಿಜ್ಞಾನಿ ಕಲಾಂ ಆದರೆ ಇವರೆಲ್ಲರನ್ನು ಮೀರಿಸಿದಂತೆ ಆರ್.ಸಿ.ಇ.ಪಿ ಒಪ್ಪಂದಕ್ಕೆ ಸಹಿ ಹಾಕಲು ಹೊರಟಿರುವ ಪ್ರಧಾನಿ ನರೇಂದ್ರ ಮೋದಿ ದೇಶದ ಬೆನ್ನೆಲುಬು ರೈತನಾದರೆ, ಅವನ ಬೆನ್ನೆಲುಬು ಹೈನುಗಾರಿಕೆ. ಈಗ ಅದನ್ನೇ ಮುರಿಯುತ್ತಿರುವುದು ವಿಪರ್ಯಾಸವಾಗಿದ್ದು ರೈತರನ್ನ ನಿರ್ನಾಮ ಮಾಡಲು ಹೊರಟಿದೆ ಎಂದು ಆರ್.ಕೆ.ಎಸ್ ಸಂಚಾಲಕ ಎಸ್.ಎಸ್.ಸ್ವಾಮಿ ತಿಳಿಸಿದರು.
ನಗರದಲ್ಲಿ ರೈತವಿರೋಧಿ `ಆರ್.ಸಿ.ಇ.ಪಿ’ ಒಪ್ಪಂದಕ್ಕೆ ಭಾರತ ಸರ್ಕಾರ ಸಹಿ ಮಾಡಬಾರದೆಂದು ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ತಾಲ್ಲೂಕು ರೈತಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಇಂದು ಗ್ರಾಮದೇವತೆ ಕೆಂಪಮ್ಮ ದೇವಿ ದೇವಸ್ಥಾನದಿಂದ ತಿಪಟೂರು ಉಪವಿಭಾಗಾಧಿಕಾರಿಗಳ ಕಚೇರಿಯವರೆಗೂ ಮಾಡಿ, ಉಪವಿಭಾಗಾಧಿಕಾರಿಗಳ ಕಚೇರಿ ಮುಂದೆ ಬೃಹತ್ ಸಭೆ ನಡೆಸಿ ಭಾರತ ಸರ್ಕಾರದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ತಾಲ್ಲೂಕು ಆಡಳಿತದ ಮೂಲಕ ವಿವಿಧ ರೈತ ಸಂಘಟನೆಗಳ ಸಹಿ ಹೊಂದಿರುವ ಆರ್.ಸಿ.ಇ.ಪಿ ವಿರೋಧಿಸಿ ಬರೆದ ಪತ್ರವನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಆರ್.ಕೆ.ಎಸ್ ಸ್ವಾಮಿ ನಮ್ಮ ದೇಶದ ರೈತರ ಹಾಲು ರಫ್ತು ಅವಕಾಶಗಳು ವಿದೇಶದಲ್ಲಿ ತೆರೆಯುತ್ತದೆ ಎಂದು ಕೇಂದ್ರ ಸರ್ಕಾರ ವಾದಿಸುತ್ತಿದೆ. ಇದು ಶುದ್ದ ಸುಳ್ಳು. 48 ಲಕ್ಷ ಜನಸಂಖ್ಯೆ ಇರುವ ನ್ಯೂಜಿಲೆಂಡ್‍ನಲ್ಲಿ ಕೇವಲ 10 ಸಾವಿರ ಜನರು 24 ಎಂ.ಟಿ.ಎಫ್ ಹಾಲು ಉತ್ಪಾದನೆ ಮಾಡಿ ಅದರಲ್ಲಿ ಶೇ.93 ರಷ್ಟು ರಫ್ತು ಮಾಡುತ್ತಾರೆ.
ಹಾಗೆಯೇ ಆಸ್ಟ್ರೇಲಿಯಾದಲ್ಲಿ 6 ಸಾವಿರ ರೈತರು 10 ಎಂ.ಟಿ.ಎಫ್ ಹಾಲು ಉತ್ಪಾದನೆ ಮಾಡಿ ಶೇಕಡ 95ರಷ್ಟು ರಫ್ತು ಮಾಡುತ್ತಾರೆ. ಅಲ್ಲಿನ ಹಾಲು ಉತ್ಪಾದಕರಿಗೆ ಲೀಟರಿಗೆ ನಲವತ್ತೇಳು ಸೆಂಟ್ ಹಣ (ಭಾರತೀಯ ಹಣ ಇಪ್ಪತ್ತೆರಡು ರೂ.) ಕೊಡಲಾಗುತ್ತದೆ. ದೊಡ್ಡ ದೊಡ್ಡ ಶೈತ್ಯಾಗಾರ ಹಡಗುಗಳಲ್ಲಿ ಹಾಲನ್ನು ಇಂಡಿಯಾಗೆ ಸಾಗಿಸಲು ಲೀಟರಿಗೆ ಹೆಚ್ಚೆಂದರೆ ಒಂದು ರೂಪಾಯಿ ಸಾಕು. ಸ್ವಂತಕ್ಕೆ ಒಂದು ರೂಪಾಯಿ ಇಟ್ಟುಕೊಂಡರೂ ಡೀಲರು ಸ್ಟೋರೇಜ್ ವೇಸ್ಟೇಜ್ ಎಲ್ಲಾ ತೆಗೆದು ಮೂವತ್ತು ರೂಪಾಯಿಗೆ ಲೀಟರ್ ಹಾಲು ಮಾರಬಹುದು.
ಇವು ಎಂತಹ ದೊಡ್ಡ ಬಂಡವಾಳದ ಬಲ ಹೊಂದಿರುವ ಕಂಪನಿಗಳೆಂದರೆ ಒಂದೆರಡು ವರ್ಷ ಲಾಸ್ ಮಾಡಿಕೊಂಡು ಇನ್ನೂ ಕಡಿಮೆ ಬೆಲೆಗೆ ಕೊಟ್ಟರೂ ಕೊಟ್ಟವೇ! ಏಕೆಂದರೆ ನಮಗೆ ಹತ್ತು ರೂಪಾಯಿ ಅವರಿಗೆ ಇಪ್ಪತ್ತು ಸೆಂಟ್‍ಗಳು ಮಾತ್ರ. ಅಷ್ಟು ಸಮಯ ಅಮುಲ್ ನಂದಿನಿಗಳು ದಿವಾಳಿಯಾಗಲು ಸಾಕು. ಇಂಡಿಯಾದ ಜನಸಂಖ್ಯೆಗೆ ವಾರ್ಷಿಕ ಕನಿಷ್ಠ ಬರೋಬ್ಬರಿ ಒಂಬೈನೂರು ಕೋಟಿ ರೂಪಾಯಿ ವ್ಯವಹಾರ ಆಗುತ್ತದೆ. ಇದರಿಂದ ಭಾರತೀಯರಿಗೆ ಸಂಪೂರ್ಣ ನಷ್ಟವಾಗುತ್ತದೆ ಎಂಬ ಅಂಕಿ ಅಂಶಗಳನ್ನ ನೀಡಿದರು.
ಸಹೋದರಿಯರು ಬೀದಿಗೆ :
ಹೈನುಗಾರಿಕೆ ಮಾಡಿ ಜೀವನವನ್ನು ಸ್ವಾಭಿಮಾನದಿಂದ ಸಾಗಿಸುತ್ತಿರುವ ನೂರಾರು ಮಹಿಳೆಯರು ಇಂದು ಪ್ರತಿಭಟನೆಗೆ ಆಗಮಿಸಿರುವುದನ್ನು ನೋಡಿದರೆ ತಿಳಿಯುತ್ತದೆ ಇಂದು ರೈತ ಮಹಿಳೆಯರು ಕಷ್ಟಪಟ್ಟು ದುಡಿದು ಮನೆಯನ್ನು ನಡೆಸುತ್ತಿದ್ದಾರೆ. ಬರಗಾಲದ ಪರಿಸ್ಥಿತಿಯಲ್ಲಿ ರೈತರಿಗೆ ಜೀವಾಳವಾಗಿದ್ದು ಹೈನುಗಾರಿಕೆಯೇ ಹೊರತು ಯಾವುದೇ ಸರ್ಕಾರವಲ್ಲ.
ರೈತರ ಬೆನ್ನುಮುರಿಯುತ್ತಿರುವ ಇಂತಹ ಕಾಯ್ದೆ ನಮಗೆ ಬೇಡ. ಇದು ಬರೀ ಹಾಲಷ್ಟೇ ಅಲ್ಲ ಚೀಸ್, ಮೊಸರು, ಹಣ್ಣು, ಕಾಳು ಇತ್ಯಾದಿ ಲೆಕ್ಕ ಹಾಕಿ. ಎಲ್ಲ ಕಡೆ ಯಂತ್ರಗಳ ಸಹಾಯದಿಂದ ಅತಿಹೆಚ್ಚು ಉತ್ಪಾದನೆ ಆಗುತ್ತಿದೆಯೆಂದರೆ ವರ್ಷಗಟ್ಟಲೆ ಶೈತ್ಯಾಗಾರದಲ್ಲಿ ಇಟ್ಟು ಮಾರಲಾಗುತ್ತದೆ. ಆಸ್ಟ್ರೇಲಿಯಾದಲ್ಲಿ ನಾವು ತಿನ್ನುವ ಹಣ್ಣುಗಳು ಒಂದು ವರ್ಷ ಹಳೆಯವು. ಹಾಲು ವಾರಕ್ಕಿಂತ ತಿಂಗಳು ಹಳೆಯದು. ನಂದಿನಿ ಹಾಲು ಹಿಂದಿನ ಸಂಜೆಯದು! ಈಗ ಈ ಕಸವನ್ನೆಲ್ಲ ಹಣವಾಗಿ ಇಂಡಿಯಾದಿಂದ ಹಿಂಪಡೆಯಲಾಗುತ್ತದೆ. ಆದ್ದರಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇದಕ್ಕೆ ಸಹಿ ಹಾಕದೆ ರೈತರ ಹಿತ ಕಾಯಬೇಕೆಂದು ದಕ್ಷಿಣ ಒಳನಾಡು ನೀರಾವರಿ ಸಮಿತಿ ಅಧ್ಯಕ್ಷ ಉಜ್ಜಜ್ಜಿ ರಾಜಣ್ಣ ಆಗ್ರಹಿಸಿದರು.
ಕಾಂಗ್ರೆಸ್, ಬಿಜೆಪಿ ಇದರಲ್ಲಿ ಸಮಪಾಪಿಗಳಾದ್ದರಿಂದ ಇದರ ಬಗ್ಗೆ ಜನರೇ ಅಭಿಪ್ರಾಯ ರೂಪಿಸಿಕೊಳ್ಳಬೇಕು. ಬಿಹಾರದಲ್ಲಿ ರಾಮನ ಗುಡಿ ಕಟ್ಟುವ ಸಂಭ್ರಮದಲ್ಲಿ ನಿಮ್ಮ ಮಕ್ಕಳ ತಲೆಯ ಮೇಲಿಂದ ಸೂರು ಹಾರಿ ಹೋಗದಿರಲಿ ಎಂಬುದು ನೆರೆದಿದ್ದ ರೈತರ ಆಗ್ರಹವಾಗಿತ್ತು.ಈ ಬೃಹತ್ ಪತ್ರಿಭಟನಾ ಮೆರವಣಿಗೆಯಲ್ಲಿ ಮಹಿಳೆಯನ್ನು ಒಳಗೊಂಡಂತೆ ತಾಲ್ಲೂಕಿನ ಎಲ್ಲ ಹಾಲು ಉತ್ಪಾದಕರ ಸಂಘದಿಂದ ತಾವೆ ತಿಂಡಿ ವ್ಯವಸ್ಥೆಯನ್ನು ಮಾಡಿಕೊಂಡು ಬಂದು ಉತ್ಸಾಹದಿಂದಲ್ಲದೆ ತಮ್ಮ ಉಳಿವಿಗಾಗಿ ಹೋರಾಟದಲ್ಲಿ ಭಾಗವಹಿಸಿದಂತೆ ಕಾಣುತ್ತಿತ್ತು.
ಬೃಹತ್ ಪತ್ರಿಭಟನಾ ಮೆರವಣಿಗೆಗೆ ತಾಲ್ಲೂಕು ಹಾಲು ಉತ್ಪಾದಕರ ಸಂಘಗಳು, ರೈತ ಕೃಷಿ ಕಾರ್ಮಿಕ ಸಂಘಟನೆ, ಪ್ರಾಂತ ರೈತಸಂಘ, ಬೆಲೆ ಕಾವಲು ಸಮಿತಿ, ಕರ್ನಾಟಕ ರೈತ ಕೃಷಿ ಬಂಧು ವೇದಿಕೆ, ಕನ್ನಡ ರಕ್ಷಣಾ ವೇದಿಕೆ, ವರ್ತಕರ ಸಂಘ, ತೆಂಗು ಬೆಳೆಗಾರರ ಸಂಘ, ತೆಂಗು ಮತ್ತು ತೆಂಗು ಉತ್ಪಾದನಾ ಘಟಕಗಳ ಸಂಘ ಹಾಗೆಯೇ ಇತರೆ ಸಂಘಟನೆಗಳು ಭಾಗಿಯಾಗಿದ್ದವು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ