ಚಿತ್ರದುರ್ಗ
ಮಾಜಿ ಸಚಿವ ಹಾಗೂ ಪ್ರಭಾವಿ ನಾಯಕ ಡಿ.ಕೆ.ಶಿವಕುಮಾರ್ ಅವರ ಬಂಧನ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು
ಜಿಲ್ಲಾ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಜಮಾಯಿಸಿದ್ದ ನೂರಾರು ಮಂದಿ ಕಾರ್ಯಕರ್ತರು, ಟೈರ್‍ಗೆ ಬೆಂಕಿ ಹಚ್ಚಿ ಬಿಜೆಪಿ ಸರ್ಕಾರದ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಸೇಡಿನ ರಾಜಕಾರಣ ಮಾಡುತ್ತಿದೆ. ಪ್ರತಿಪಕ್ಷಗಳ ನಾಯಕರನ್ನು ಬೆದರಿಸುವ ಕೆಲಸ ಮಾಡಲಾಗುತ್ತಿದೆ. ಎಂದು ಆರೋಪಿಸಿದರು
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಸ್.ಮಂಜುನಾಥ್, ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಐಡಿ, ಇಡಿ, ಆರ್‍ಬಿಐ, ಸಿಬಿಐ ಸೇರಿ ಎಲ್ಲ ಸರ್ಕಾರಿ ಸಂಸ್ಥೆಗಳನ್ನೂ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರ ಬಂಧನ ರಾಜಕೀಯ ಪ್ರೇರಿತ. ಎಂದು ಕಿಡಿಕಾರಿದರು
ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಇಬ್ಬರೂ ಪ್ರಜಾಪ್ರಭುತ್ವ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಗುಜರಾತ್‍ನ ಶಾಸಕರನ್ನು ರಕ್ಷಿಸಿದ ಕಾರಣಕ್ಕಾಗಿ ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಲಾಗಿದೆ. ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಬಿಜೆಪಿಯ ನಾಯಕರು ಮಾಡುತ್ತಿರುವ ಪಿತೂರಿಗಳಿಗೆ ಕಾಂಗ್ರೆಸ್ ಹೆದರುವುದಿಲ್ಲ. ಅವರ ವಿರುದ್ದ ಪ್ರಬಲ ಹೋರಾಟ ಮಾಡುವ ಶಕ್ತಿ ನಮಗಿದೆ ಎಂದು ಜಿ.ಎಸ್.ಮಂಜುನಾಥ್ ಹೇಳಿದರು
ನಗರಾಭಿವೃದ್ಧಿ ಮಾಜಿ ಅಧ್ಯಕ್ಷ ಬಿ.ಟಿ.ಜಗದೀಶ್, ದೇಶದಲ್ಲಿ ವಿರೋಧ ಪಕ್ಷಗಳನ್ನು ದಮನ ಮಾಡುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಇದಕ್ಕಾಗಿ ಸ್ವಾಯತ್ತ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಕಳೆದ ನಾಲ್ಕು ದಶಕಗಳ ರಾಜಕೀಯ ಜೀವನದಲ್ಲಿ ಹೆಸರು ಮಾಡಿರುವ ನಾಯಕನನ್ನು ಮಾನಸಿಕವಾಗಿ ದುರ್ಬಲ ಮಾಡುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಕೇಂದ್ರದಲ್ಲಿ ಬಿಜೆಪಿ ಆಡಳಿತಕ್ಕೆ ಬಂದ ನಂತರ ಇಡೀ ದೇಶದಲ್ಲಿ ಯಾವುದೇ ವಿರೋಧ ಪಕ್ಷ ಇರಬಾರದು ಎಂದು ಸಾಂವಿಧಾನಿಕ ಸಂಸ್ಥೆಗಳನ್ನು ಬಳಸಿಕೊಂಡು ತನ್ನ ಕೆಲಸ ಮಾಡುತ್ತಿದೆ ಎಂದು ದೂರಿದರು.
ಮಾಜಿ ಶಾಸಕರಾದ ಉಮಾಪತಿ ಮಾತನಾಡಿ, ಪ್ರಧಾನಿಗಳಿಗೆ ಭ್ರಷ್ಟಾಚಾರವನ್ನು ನಿರ್ನಾಮ ಮಾಡುವ ಗುರಿ ಇದ್ದರೆ ಸ್ವಾಗತ. ಆದರೆ ಇತ್ತೀಚಿನ ದಿನಗಳಲ್ಲಿ ನಿಮ್ಮ ಪಕ್ಷದ ನಾಯಕರು ನಮ್ಮ ಶಾಸಕರನ್ನು ಕರೆದೊಯ್ದಿದ್ದಾಗ ನಿಮ್ಮ ಇಡಿ ಅಧಿಕಾರಿಗಳು ಎಲ್ಲಿ ಹೋಗಿದ್ದರು?. ಆಗ ಇಡಿ ಅಧಿಕಾರಿಗಳು ದೇಶದಲ್ಲಿ ಇರಲಿಲ್ವಾ” ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಫಾತ್ಯರಾಜನ್, ವಿಧಾನ ಪರಿಷತ್ ಸದಸ್ಯೆ ಶ್ರೀಮತಿ ಜಯಮ್ಮಬಾಲರಾಜ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಡಿ.ಟಿ.ವೆಂಕಟೇಶ್, ಪ್ರಧಾನ ಕಾರ್ಯದರ್ಶಿಗಳಾದ ಬಿ.ಜಿ.ಶ್ರೀನಿವಾಸ್, ಸಿ.ಶಿವುಯಾದವ್, ಮುಖಂಡರಾದ ಆರ್.ಶೇಷಣ್ಣಕುಮಾರ್, ಎಂ.ಕೆ.ತಾಜ್‍ಪೀರ್, ಮನೋಹರ್, ಡಿ.ಎನ್.ಮೈಲಾರಪ್ಪ, ಅಲ್ಲಾಬಕ್ಷಿ, ಆರ್.ಪ್ರಕಾಶ, ನಾಗರಾಜ್, ಜಿ.ಬಿ.ಬಾಲಕೃಷ್ಣ ಯಾದವ್, ಸೈಯದ್‍ಮೈನುದ್ದೀನ್(ಚೋಟು), ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಜಿ.ಕೆ.ಮಹಮ್ಮದ್‍ರಫೀ, ಅಶೋಕ್‍ನಾಯ್ಡು, ಖುದ್ದೂಸ್, ವಿಧಾನಸಭಾ ಪ್ರಧಾನ ಕಾರ್ಯದರ್ಶಿಗಳಾದ ಶಿವಕುಮಾರ್, ವಸೀಂಅಕ್ರಂ, ಸಾಧತ್‍ಬೇಗ್, ಮಹಮ್ಮದ್‍ಆಜಾಂ, ಹುಸೇನ್‍ಖಾನ್, ಮುನಿ ರಾಮಕಾಂದರ್, ಮೋಕ್ಷರುದ್ರಸ್ವಾಮಿ, ಮೆಹಬೂಬ್‍ಕಾತೂನ್, ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ