ಹೊಸಪೇಟೆ:
ಕೇಂದ್ರ ಸರ್ಕಾರದ ಮೋಟರ್ ವಾಹನ ಕಾಯ್ದೆ ತಿದ್ದುಪಡಿ ವಿರುದ್ಧ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಸಿಐಟಿಯು ರಾಜ್ಯ ಸಮಿತಿಯ ಅಧ್ಯಕ್ಷೆ ಎಸ್. ರಾಜಲಕ್ಷ್ಮೀ ಎಚ್ಚರಿಸಿದರು.
ಇಲ್ಲಿನ ಅಂಬೇಡ್ಕರ ವೃತ್ತದಲ್ಲಿ ಶನಿವಾರ ಫೆಡರೇಶನ್ ಆಫ್ ಕರ್ನಾಟಕ ಆಟೋರಿಕ್ಷಾ ಡ್ರೈವರ್ಸ್ ಯೂನಿಯನ್ ಹಮ್ಮಿಕೊಂಡಿದ್ದ 2ನೇ ರಾಜ್ಯ ಸಮ್ಮೇಳನದ ಬಹಿರಂಗ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾನಾ ರೂಪದಲ್ಲಿ ಸರಕಾರಗಳಿಗೆ ಆಟೋ ಚಾಲಕರು ತೆರಿಗೆ ಪಾವತಿಸುತ್ತಿದ್ದರೂ ಅಭಿವೃದ್ಧಿ ಕಡೆ ಗಮನ ನೀಡುತ್ತಿಲ್ಲ. ಈ ನಡುವೆ ಹಳೆಯ ಆಟೋಗಳನ್ನು ಓಡಿಸುವುದಕ್ಕೆ ಪರವಾನಿಗೆ ನೀಡುತ್ತಿಲ್ಲ. ಹಾಗಾಗಿ ಹೊಸ ಆಟೋ ಖರೀದಿಗೆ ಸಬ್ಸಿಡಿ ಸಾಲ ಸೌಲಭ್ಯವನ್ನು ನೀಡಬೇಕು. ಗ್ಯಾಸ್ ಬೆಲೆ ಏರಿಕೆಯಿಂದ ಆಟೋ ಚಾಲಕರು ಕಂಗಾಲಾಗಿ ಹೋಗಿದ್ದಾರೆ. ದುಡಿದ ಹಣ ಗ್ಯಾಸ್‍ಗೆ ಹೋಗುತ್ತಿದೆ. ಹಾಗಾಗಿ ಸರಕಾರ ಸಬ್ಸಿಡಿ ದರದಲ್ಲಿ ಗ್ಯಾಸ್ ಒದಗಿಸಬೇಕು ಎಂದರು.
ವಾಹನ ಕಾಯ್ದೆ ತಿದ್ದುಪಡಿಯಿಂದ ಕೇಂದ್ರ ಸರ್ಕಾರ ಕಾರ್ಮಿಕರ ಹಕ್ಕನ್ನು ದಮನ ಮಾಡುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದರು.ಕಾಯ್ದೆಯಲ್ಲಿ ಹತ್ತು ಪಟ್ಟು ದಂಡವನ್ನು ತೆರಬೇಕಾಗಿರುವುದು ಚಾಲಕರಿಗೆ ಹೊರೆಯಾಗಲಿದೆ. ಆಟೋ ಚಾಲಕರ ಹಿತವನ್ನು ಕೇಂದ್ರ ಸರಕಾರ ಕಾಪಾಡುತ್ತಿಲ್ಲ.ಆಟೋ ಚಾಲಕರ ಕಲ್ಯಾಣ ಮಂಡಳಿ ಸ್ಥಾಪನೆಗಾಗಿ ಅನೇಕ ವರ್ಷಗಳಿಂದ ಬೇಡಿಕೆ ಇದೆ. ಆದರೆ, ಅದು ಅನುಷ್ಠಾನಗೊಳ್ಳುತ್ತಿಲ್ಲ. ಅದು ಭರವಸೆಯಾಗಿ ಉಳಿದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಿ.ಐ.ಟಿ.ಯು ರಾಜ್ಯ ಸಮಿತಿ ಉಪಾಧ್ಯಕ್ಷ ಆರ್.ಎಸ್.ಬಸವರಾಜ ಮಾತನಾಡಿ, ಆಟೋಚಾಲಕರು ಒಗ್ಗಟ್ಟು ಪ್ರದರ್ಶಿಸುವುದರಿಂದ ಹಕ್ಕುಗಳನ್ನು ಪಡೆದುಕೊಳ್ಳಬಹುದು. ಕೇಂದ್ರ ಸರಕಾರ ಎನ್‍ಆರ್‍ಸಿ ಹಾಗೂ ಸಿಎಎ ಧರ್ಮಾಧಾರಿತ ಆಧಾರದ ಮೇಲೆ ಅನುಷ್ಠಾನ ಮಾಡಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಇದಕ್ಕೂ ಮುನ್ನ ಗಾಂಧಿಚೌಕನಿಂದ ಪುಣ್ಯಮೂರ್ತಿ ವೃತ್ತ, ಬಸ್ ನಿಲ್ದಾಣ, ರೋಟರಿ ವೃತ್ತದ ಮೂಲಕ ಅಂಬೇಡ್ಕರ ವೃತ್ತದವರೆಗೆ ಮೆರವಣಿಗೆ ಮಾಡಲಾಯಿತು.
ಎಫ್.ಕೆ.ಆರ್.ಡಿ.ಯು ಅಧ್ಯಕ್ಷೆ ಮೀನಾಕ್ಷಿ ಸುಂದರಂ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕಾರ್ಯದರ್ಶಿ ಕೆ.ಎಂ.ಸಂತೋಷ್, ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಯು.ಬಸವರಾಜ, ಸಿ.ಐ.ಟಿ.ಯುನ ಜಿಲ್ಲಾ ಸಮಿತಿ ಅಧ್ಯಕ್ಷ ಆರ್.ಭಾಸ್ಕರ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಜೆ.ಸತ್ಯಬಾಬು, ಮುಖಂಡರಾದ ಜಂಬಯ್ಯನಾಯಕ, ಕೆ.ನಾಗರತ್ನಮ್ಮ ಸೇರಿದಂತೆ ಇತರರು ಇದ್ದರು.