ಬೆಂಗಳೂರು
ಗಾರ್ಮೆಂಟ್ಸ್ ಉದ್ಯೋಗದಲ್ಲಿ ಮನೆ ನಿರ್ಮಾಣಕ್ಕೆ ಹಣ ಹೊಂದಿಸಲು ಸಾಧ್ಯವಾಗದೇ ಸರಗಳವು ಕೃತ್ಯಕ್ಕೆ ಇಳಿದಿದ್ದ ಐನಾತಿ ಗೌರಿಬಿದನೂರಿನ ಸರಗಳ್ಳನೊಬ್ಬನು ಈಶಾನ್ಯ ವಿಭಾಗದ ಪೋಲೀಸರ ಅತಿಥಿಯಾಗಿದ್ದಾನೆ.
ಗೌರಿಬಿದನೂರಿನ ಮಾದವ ನಗರದ ಸಾದಿಕ್ ಅಲಿಯಾಸ್ ಶಿವಕುಮಾರ (31) ಬಂಧಿತ ಸರಗಳ್ಳನಾಗಿದ್ದು, ಆತನಿಂದ 10 ಲಕ್ಷ ಮೌಲ್ಯದ 8 ಚಿನ್ನದ ಸರಗಳು, 2 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.ಆರೋಪಿಯು ಗೌರಿಬಿದನೂರಿನ ಮಾಧವನಗರದ ನ್ಯಾಷನಲ್ ಕಾಲೇಜು ಬಳಿ ನಿರ್ಮಿಸುತ್ತಿದ್ದ ಮನೆಗೆ ಹಣ ಹೊಂದಿಸಲು ಗಾರ್ಮೆಂಟ್ಸ್‍ನಲ್ಲಿನ ಕೆಲಸದಿಂದ ಬರುತ್ತಿದ್ದ ಸಂಬಳ ಸಾಕಾಗುತ್ತಿರಲಿಲ್ಲ. ಅದಕ್ಕಾಗಿ ಗಾರ್ಮೆಂಟ್ಸ್ ಕೆಲಸ ಬಿಟ್ಟು ಕಳೆದ ಐದಾರು ತಿಂಗಳಿಂದ ಸರಗಳ್ಳತನ ಕೃತ್ಯಕ್ಕಿಳಿದಿದ್ದ.
ವರ್ಷದ ಹಿಂದೆ ಖರೀದಿಸಿದ್ದ ಪಲ್ಸರ್ ಬೈಕ್‍ನಲ್ಲಿ ಗೌರಿಬಿದನೂರಿನಿಂದ ನಗರಕ್ಕೆ ಬರುತ್ತಿದ್ದ ಆರೋಪಿಯು ಯಲಹಂಕ, ಸಂಪಿಗೆಹಳ್ಳಿ, ಯಲಹಂಕ ಉಪನಗರ, ವಿದ್ಯಾರಣ್ಯಪುರ, ದೊಡ್ಡಬಳ್ಳಾಪುರ ಗ್ರಾಮಾಂತರ ಪ್ರದೇಶಗಳಲ್ಲಿ ಸುತ್ತಾಡುತ್ತ ಒಂಟಿ ಮಹಿಳೆಯರನ್ನು ಗುರುತಿಸಿ, ಸರಗಳವು ಮಾಡಿ ಗೌರಿಬಿದನೂರಿಗೆ ಪರಾರಿಯಾಗುತ್ತಿದ್ದ.
ಕಳವು ಮಾಡಿದ ಚಿನ್ನದ ಸರಗಳನ್ನು ಮನೆ ಕಟ್ಟಿಸಲು ಮಾರಾಟ ಮಾಡುವುದಾಗಿ ಗಿರವಿ ಅಂಗಡಿ ಮಾಲೀಕರನ್ನು ನಂಬಿಸಿ ಮಾರಾಟ ಮಾಡುತ್ತಿದ್ದ. ಪತ್ನಿಗೆ ಗೊತ್ತಿಲ್ಲದಂತೆ ಆಕೆಯಿಂದಲೂ ಸರ ಮಾರಾಟ ಮಾಡಿಸುತ್ತಿದ್ದ. ಈಶಾನ್ಯ ವಿಭಾಗದ ಠಾಣೆಗಳ ವ್ಯಾಪ್ತಿಯಲ್ಲಿ ಹೆಚ್ಚುತ್ತಿದ್ದ ಸರಗಳವು ಕೃತ್ಯಗಳನ್ನು ಗಂಭೀರವಾಗಿ ಪರಿಗಣಿಸಿದ ಡಿಸಿಪಿ ಕಲಾಕೃಷ್ಣಸ್ವಾಮಿ ಅವರು ಯಲಹಂಕ ಉಪನಗರ, ಯಲಹಂಕ ಹಾಗೂ ವಿದ್ಯಾರಣ್ಯಪುರ ಪೊಲೀಸರ ವಿಶೇಷ ತಂಡವನ್ನು ರಚಿಸಿದ್ದರು.
ಯಲಹಂಕ ಉಪನಗರದಲ್ಲಿ ಕೆಲದಿನಗಳ ಹಿಂದೆ ನಡೆದಿದ್ದ ಸರಗಳವು ಕೃತ್ಯವನ್ನು ಬೆನ್ನಟ್ಟಿದ ತಂಡವು ಕಾರ್ಯಾಚರಣೆ ಕೈಗೊಂಡು ಯಲಹಂಕ ಉಪನಗರದ ಬಳಿ ಪಲ್ಸರ್ ಬೈಕ್‍ನಲ್ಲಿ ಅನುಮಾನಾಸ್ಪದವಾಗಿ ನಿಂತಿದ್ದ ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಸರಗಳವು ಕೃತ್ಯವನ್ನು ಬಾಯ್ಬಿಟ್ಟಿದ್ದಾನೆ.
ಆರೋಪಿಯು ಐದಾರು ತಿಂಗಳಿಂದ ಸರಗಳವು ಕೃತ್ಯದಲ್ಲಿ ಭಾಗಿಯಾಗಿದ್ದರೂ ಪೋಲೀಸರ ಕಣ್ತಪ್ಪಿಸಿ ಪರಾರಿಯಾಗುತ್ತಿದ್ದ. ಮುಂಜಾನೆ ವೇಳೆಗೆ ನಗರಕ್ಕೆ ಬರುತ್ತಿದ್ದ ಆರೋಪಿಯು ಸರಗಳ್ಳತನ ಮಾಡಿ ಗೌರಿಬಿದನೂರಿಗೆ ಪರಾರಿಯಾಗಿ ಕೆಲ ದಿನಗಳನಂತರ ಮತ್ತೆ ನಗರಕ್ಕೆ ಬಂದು ಕೃತ್ಯ ನಡೆಸುತ್ತಿದ್ದ.
ಆರೋಪಿಯ ಬಂಧನದಿಂದ ಯಲಹಂಕ ಉಪನಗರದ 3, ಸಂಪಿಗೆಹಳ್ಳಿ-ದೇವನಹಳ್ಳಿ, ವಿದ್ಯಾರಣ್ಯಪುರ, ಯಲಹಂಕ ಹಾಗೂ ದೊಡ್ಡಬಳ್ಳಾಪುರ ಗ್ರಾಮಾಂತರ ತಲಾ 1 ಸೇರಿದಂತೆ 8 ಸರಗಳವು ಕೃತ್ಯಗಳು ಪತ್ತೆಯಾಗಿವೆ. ಆರೋಪಿಯನ್ನು ಬಂಧಿಸಿದ ಪೆÇಲೀಸ್ ತಂಡದ ಕಾರ್ಯಾಚರಣೆಯನ್ನು ಪ್ರಶಂಸಿಸಲಾಗಿದೆ ಎಂದು ಡಿಸಿಪಿ ಕಲಾಕೃಷ್ಣಸ್ವಾಮಿ ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








