ಚಳ್ಳಕೆರೆ
ಕಳೆದ ಹಲವಾರು ತಿಂಗಳುಗಳಿಂದ ತಾಲ್ಲೂಕಿನ ಬಹುತೇಕ ದೇವಸ್ಥಾನ, ಪೂಜಾ ಮಂದಿರ, ಜಾತ್ರೆ ಉತ್ಸವಗಳಲ್ಲಿ, ರಾಜಕಾರಣಿಗಳೂ ಸೇರಿದಂತೆ ಎಲ್ಲರೂ ಸಹ ದೇವರಲ್ಲಿ ಮಳೆಗಾಗಿ ಪ್ರಾರ್ಥಿನೆ ಸಲ್ಲಿಸುತ್ತಿದ್ದರು, ಈಗಾಗಲೇ ಈ ಭಾಗದ ಬಹುತೇಕ ಜಮೀನುಗಳ ಬೆಳೆ ಒಣಗಿದ್ದು, ಎಲ್ಲರೂ ಮಳೆಯ ಆಸೆಯನ್ನು ಕೈಬಿಟ್ಟ ಸಂದರ್ಭದಲ್ಲಿ ವರುಣರಾಯ ಕೃಪೆತೋರಿ ಸೋಮವಾರ ರಾತ್ರಿ ತಾಲ್ಲೂಕಿನಾದ್ಯಂತ ಉತ್ತಮ ಹದ ಮಳೆಯಾಗಿದ್ದು, ರೈತರೂ ಸೇರಿದಂತೆ ಎಲ್ಲರ ಮುಖದಲ್ಲೂ ಸಂತಸ ತಾಂಡವಾಡುತ್ತಿದೆ.
ತಾಲ್ಲೂಕಿನಲ್ಲಿರುವ ಹಲವಾರು ಗೋಶಾಲೆಗಳಲ್ಲಿನ ಸಾವಿರಾರು ಜಾನುವಾರುಗಳಿಗೆ ಮೇವು, ನೀರು ಕೊರತೆ ಉಂಟಾಗದಂತೆ ಜಾಗ್ರತೆ ವಹಿಸಲು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಸರ್ಕಾರಕ್ಕೆ ಪತ್ರ ಬರೆದು ಸೆಪ್ಟಂಬರ್ ಅಂತ್ಯದ ತನಕ ಗೋಶಾಲೆ ಕಾರ್ಯಾರಂಭಕ್ಕೆ ಅವಕಾಶ ಕಲ್ಪಿಸಿದ್ದರು. ಕೊನೆಯಲ್ಲಿ ಈ ಭಾಗದ ಜಾನುವಾರುಗಳ ರಕ್ಷಣೆ ಮಾಡಲೆಂದು ವರುಣರಾಯ ಕೃಪೆತೋರಿ ಸಮೃದ್ಧಿಯಲ್ಲದಿದ್ದರೂ ಸಮದಾನವಾಗುವ ಮಳೆ ಯಾಗಿದ್ದು, ಎಲ್ಲೆಡೆ ಈಗ ಮಳೆಯ ನೀರಿನ ದೃಶ್ಯ ಸಾಮಾನ್ಯವಾಗಿದೆ.
ಚಳ್ಳಕೆರೆ 35.04, ಪರಶುರಾಮಪುರ 32.02, ದೇವರಮರಿಕುಂಟೆ 25.03, ತಳಕು 26.08, ನಾಯಕನಹಟ್ಟಿ 33.02 ಎಂ.ಎಂ ಮಳೆಯಾಗಿದ್ದು, ಒಟ್ಟು 152.09 ಎಂ.ಎಂ. ಮಳೆಯಾಗಿದ್ದು, ಈ ಮಳೆ ಪ್ರಸ್ತುತ ವರ್ಷದಲ್ಲಿ ಅತಿಹೆಚ್ಚು ಎನ್ನಬಹುದಾಗಿದೆ. ಚಳ್ಳಕೆರೆ ನಗರಕ್ಕೆ ಹೊಂದಿಕೊಂಡಿರುವ ಮೈರಾಡ ಕಾಲೋನಿಯಲ್ಲಿ ಮಳೆ ನೀರು ಗುಡಿಸಲುಗಳಿಗೆ ನುಗ್ಗಿ ಅಲ್ಲಿನ ಜನರು ತೊಂದರೆ ಪಡುವಂತಾಗಿತ್ತು. ಅದೇ ರೀತಿ ನಗರದ ಪಿರಮೀಡ್ ಪಾರ್ಕ್ನ ಚರಂಡಿ ತುಂಬಿ ರಸ್ತೆ ಮೇಲೆ ನೀರು ಹರಿದವು. ಕೂಡಲೇ ನಗರಸಭೆಯ ಜೆಸಿಬಿ ವಾಹನ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡಲಾಯಿತು. ತಾಲ್ಲೂಕು ವ್ಯಾಪ್ತಿಯ ಹಲವಾರು ಸಣ್ಣಪುಟ್ಟ ಕಟ್ಟೆ, ಗುಂಡಿಗಳಲ್ಲಿ ನೀರು ನಿಂತಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
