ಚಳ್ಳಕೆರೆ
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಹಾಲಿ ಸಂಸದ ಬಿ.ಎನ್.ಚಂದ್ರಪ್ಪ ಮಾರ್ಚ್ 25ರ ಸೋಮವಾರ ಎರಡನೇ ಬಾರಿಗೆ ತಮ್ಮ ನಾಮಪತ್ರವನ್ನು ಸಲ್ಲಿಸಲಿದ್ದು, ಕ್ಷೇತ್ರದಾದ್ಯಂತ ಸುಮಾರು 3 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಹಾಗೂ ಅಭಿಮಾನಿಗಳು ನಾಮಪತ್ರ ಸಲ್ಲಿಕೆ ಕಾರ್ಯದಲ್ಲಿ ಭಾಗವಹಿಸುವವರು ಎಂದುಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ತಿಪ್ಪೇಸ್ವಾಮಿ ತಿಳಿಸಿದ್ಧಾರೆ.
ಈ ಬಗ್ಗೆ ಪತ್ರಿಕೆಗೆ ಮಾಹಿತಿ ನೀಡಿದ ಅವರು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಎರಡನೇ ಬಾರಿಗೆ ಗೆಲ್ಲಿಸುವ ನಿಟ್ಟಿನಲ್ಲಿ ಪಕ್ಷದ ವತಿಯಿಂದ ವಿಶೇಷ ಶಕ್ತಿಯನ್ನು ಮತ್ತು ಬೆಂಬಲವನ್ನು ನೀಡಲು ಕ್ಷೇತ್ರದ ಸಾವಿರಾರು ಕಾರ್ಯಕರ್ತರು ನಾಮಪತ್ರ ಸಲ್ಲಿಕೆ ಕಾರ್ಯದಲ್ಲಿ ಪಾಲ್ಗೊಳ್ಳುವರು. ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಎಲ್ಲಾ ಜಿಲ್ಲಾ, ತಾಲ್ಲೂಕು, ಗ್ರಾಮ ಹಾಗೂ ನಗರಸಭೆಗಳ ಸದಸ್ಯರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ಧಾರೆ.
ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಸಂಚಾಲಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯಾಧ್ಯಕ್ಷ ದಿನೇಶ್‍ಗುಂಡೂರಾವ್, ಮಾಜಿ ಸಚಿವ ಎಚ್.ಆಂಜನೇಯ, ಶಾಸಕ ಟಿ.ರಘುಮೂರ್ತಿ, ಎಂಎಲ್‍ಸಿ ಜಯಮ್ಮಬಾಲರಾಜು, ಮಾಜಿ ಶಾಸಕರಾದ ಡಿ.ಸುಧಾಕರ, ಬಿ.ಜಿ.ಗೋವಿಂದಪ್ಪ, ಎಸ್.ತಿಪ್ಪೇಸ್ವಾಮಿ, ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಫ್ಯಾತರಾಜನ್ ಸೇರಿದಂತೆ ಹಲವಾರು ಮುಖಂಡರು ನಾಮಪತ್ರ ಸಲ್ಲಿಕೆ ಕಾರ್ಯದಲ್ಲಿ ಪಾಲ್ಗೊಳ್ಳುವರು. ಕ್ಷೇತ್ರದ ಬೂತ್ ಮಟ್ಟದ ಎಲ್ಲಾ ಕಾರ್ಯಕರ್ತರು, ಅಭಿಮಾನಿಗಳು ತಪ್ಪದೆ ಆಗಮಿಸುವಂತೆ ಟಿ.ತಿಪ್ಪೇಸ್ವಾಮಿ ಮನವಿ ಮಾಡಿದ್ಧಾರೆ.