ಹೇಮಾವತಿ ಚಾನಲ್ ಸೇತುವೆ ಕೆಳಗೆ ಅವಿತಿದ್ದ ಚಿರತೆ ಸೆರೆ

ತುಮಕೂರು

   ಜನರ ಕಣ್ಣಿಗೆ ಬಿದ್ದು ಗಾಬರಿಗೊಂಡು ಹೇಮಾವತಿ ಚಾನಲ್‍ನ ಸೇತುವೆ ಕೆಳಗೆ ಅವಿತುಕೊಂಡಿದ್ದ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಸೆರೆ ಹಿಡಿದಿರುವ ಘಟನೆ ತಾಲ್ಲೂಕಿನ ಹಾಲನೂರು ಸಮೀಪ ನಡೆದಿದೆ.

   ತಾಲ್ಲೂಕಿನ ಹಾಲನೂರು ಸಮೀಪದ ಆಚಾರಪಾಳ್ಯದ ರಸ್ತೆಯಲ್ಲಿ ಹೇಮಾವತಿ ಚಾನಲ್ ಹಾದು ಹೋಗಿದ್ದು, ಈ ಚಾನಲ್ ಮೇಲೆ ಚಿರತೆಯೊಂದು ಓಡಾಡುತ್ತಿದ್ದ ದೃಶ್ಯವನ್ನು ಸಾರ್ವಜನಿಕರು ನೋಡಿ ತೀವ್ರ ಭಯಭೀತರಾಗಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಸುದ್ದಿ ಮುಟ್ಟಿಸಿದ್ದಾರೆ.

   ಚಾನಲ್ ಬಳಿ ಸಾರ್ವಜನಿಕರು ತಂಡೋಪ ತಂಡವಾಗಿ ಹೋಗಿದ್ದನ್ನು ಅರಿತ ಚಿರತೆಯು ಗಾಬರಿಯಾಗಿ ಚಾನಲ್ ಬಳಿಯೆ ಇರುವ ಸೇತುವೆ ಕೆಳಗೆ ಅಡಗಿ ಕುಳಿತುಕೊಂಡಿದೆ. ಸಾರ್ವಜನಿಕರು ಚಿರತೆ ಸೇತುವೆಯಿಂದ ಹೊರ ಹೋಗದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಬರುವವರೆಗೂ ಅಲ್ಲಿಯೇ ಕಾದು ಕುಳಿತಿದ್ದರು.

  ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಸೇತುವೆ ಕೆಳಗೆ ಅವಿತು ಕುಳಿತಿದ್ದ ಚಿರತೆ ಸೆರೆಗೆ ಕಾರ್ಯಾಚರಣೆ ಕೈಗೊಂಡು ಪ್ರಯತ್ನಿಸಿದರೂ ಚಿರತೆ ಮಾತ್ರ ಅವಿತುಕೊಂಡಿದ್ದ ಜಾಗದಿಂದ ಹೊರಗೆ ಬರಲೇ ಇಲ್ಲ.

   ತಕ್ಷಣ ಅರಣ್ಯ ಅಧಿಕಾರಿಗಳು ನರಭಕ್ಷಕ ಚಿರತೆ ಕಾರ್ಯಾಚರಣೆಯಲ್ಲಿ ತೊಡಗಿದ್ದ ಅರವಳಿಕೆ ತಜ್ಞ ಡಾ. ಸನತ್ ಹಾಗೂ ಶಾರ್ಪ್‍ಶೂಟರ್ ಅಕ್ರಂ ಅವರನ್ನು ಸ್ಥಳಕ್ಕೆ ಕರೆಸಿ ಚಿರತೆ ಸೆರೆಗೆ ಮುಂದಾದರು. ಅರವಳಿಕೆ ತಜ್ಞ ಡಾ. ಸನತ್ ಅವರು ಸೇತುವೆ ಕೆಳಗೆ ಅಡಗಿದ್ದ 3 ವರ್ಷದ ಹೆಣ್ಣು ಚಿರತೆಗೆ ಅರವಳಿಕೆ ಚುಚ್ಚುಮದ್ದು ನೀಡಿದ್ದರಿಂದ ಚಿರತೆ ಪ್ರಜ್ಞಾ ಹೀನ ಸ್ಥಿತಿಯಲ್ಲಿ ಮಲಗಿತು.

    ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿ ಬಲೆ ಹಾಕಿ ಚಿರತೆಯನ್ನು ಬೋನಿಗೆ ಹಾಕಿಕೊಂಡು ಬನ್ನೇರುಘಟ್ಟ ಅಥವಾ ಬಂಡಿಪುರ ಅರಣ್ಯಕ್ಕೆ ಬಿಡಲು ತೆರಳಿದ್ದಾರೆ. ಹೇಮಾವತಿ ಚಾನಲ್‍ನ ಸೇತುವೆ ಕೆಳಗೆ ಚಿರತೆ ಅಡಗಿ ಕುಳಿತಿರುವ ಸುದ್ದಿ ತಿಳಿಯುತ್ತಿದ್ದಂತೆ ಹಾಲನೂರು ಅಕ್ಕಪಕ್ಕದ ಗ್ರಾಮದ ಜನತೆ ತಂಡೋಪ ತಂಡವಾಗಿ ಜಮಾಯಿಸಿ ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆಯನ್ನು ಕುತೂಹಲದಿಂದ ವೀಕ್ಷಿಸಿದರು.

   ಈ ಕಾರ್ಯಾಚರಣೆಯಲ್ಲಿ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯ ಸಬ್‍ಇನ್‍ಸ್ಪೆಕ್ಟರ್ ಲಕ್ಷ್ಮಯ್ಯ ಹಾಗೂ ಅರಣ್ಯ ಸಿಬ್ಬಂದಿ ಪಾಲ್ಗೊಂಡಿದ್ದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link