ಚಿತ್ರದುರ್ಗ :
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜನಸಂಖ್ಯೆ ನಿಯಂತ್ರಣಾ ಮಾಸಿಕದ ಪ್ರಯುಕ್ತ ತಾಲ್ಲೂಕಿನ ಚಿಕ್ಕಗೊಂಡನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಂಪತಿ ಸಂಪರ್ಕ ಪಾಕ್ಷಿಕ ನಡೆಸಲಾಯಿತು.
ವೈದ್ಯರಾದ ಡಾ.ಕೀರ್ತನ ಅವರು ದಂಪತಿಗಳನ್ನು ಉದ್ದೇಶಿಸಿ ಮಾತನಾಡಿ, ಆರೋಗ್ಯ ಇಲಾಖೆಯಿಂದ ಜನಸಂಖ್ಯೆ ನಿಯಂತ್ರಣಕ್ಕಾಗಿ ದೊರೆಯುವ ನಿರೋಧ್, ನುಂಗುವ ಮಾತ್ರೆಗಳಾದ ಮಾಲ, ವಾರಕ್ಕೊಮ್ಮೆ ನುಂಗುವ ಛಾಯ ಮಾತ್ರೆಗಳು, ವಂಕಿ ಧಾರಣ, ಶಾಶ್ವತ ಕುಟುಂಬ ಕಲ್ಯಾಣಾ ಚಿಕಿತ್ಸೆ, ಪುರುಷ ಸಂತಾನ ಹರಣ ಸೇವೆಗಳ ಬಗ್ಗೆ ತಿಳಿಸಿದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಮಾತನಾಡಿ, ಚಿಕ್ಕ ಕುಟುಂಬದ ಆದರ್ಶ ಪಾಲಿಸಿ ಕುಟುಂಬ ಕಲ್ಯಾಣ ಯೋಜನೆಗಳ ಅನುಷ್ಠಾನದಲ್ಲಿ ಪುರುಷರ ಸಹಬಾಗಿತ್ವ ಕ್ಷೀಣಿಸುತ್ತಿದೆ. ಎನ್.ಎಸ್.ವಿ. ಒಂದು ಸರಳ, ಗಾಯವಿಲ್ಲದ, ಹೊಲಿಗೆ ಇಲ್ಲದ, ಆಸ್ಪತ್ರೆಯಲ್ಲಿ ತಂಗಬೇಕಾಗಿಲ್ಲದ, ಲೈಂಗಿಕ ಸುಖಕ್ಕೆ ಅಡ್ಡಿಯಿಲ್ಲದ ಸುಲಭ ವಿಧಾನವಾಗಿದೆ.
ಆದರೆ ಪುರುಷರು ತಮ್ಮ ಪುರುಷತ್ವ ಕಡಿಮೆಯಾಗುತ್ತದೆ, ನಪುಂಸಕನಾಗುತ್ತೇನೆ ಎನ್ನುವ ತಪ್ಪು ಕಲ್ಪನೆಯಿಂದ ಹೊರಬಂದು, ಈ ವಿಧಾನವನ್ನು ಅನುಸರಿಸಿ ಮಾದರಿ ಪುರುಷರಾಗಿರಿ. ಹೆಂಗಸರಿಗೆ ರಕ್ತ ಹೀನತೆ, ಇತರೆ ತೊಂದರೆಯಲ್ಲಿರುವ ಸ್ತ್ರೀಯರು ಯಾವುದೇ ಭಯವಿಲ್ಲದೇ ಈ ಸುಲಭ ಯೋಜನೆಯಲ್ಲಿ ಭಾಗವಹಿಸಿ ಕುಟುಂಬ ಸಾರ್ಥಕತೆಗೆ ತಮ್ಮ ಗಂಡಂದಿರನ್ನು ಪ್ರೇರೇಪಿಸಿ ಮನ ಒಲಿಸಬೇಕು. ಕುಟುಂಬ ಕಲ್ಯಾಣ ನಿಭಾಯಿಸುವ ಜವಾಬ್ದಾರಿ, ತಾಯಿ ಮಗುವಿನ ಆರೋಗ್ಯದ ಪೂರ್ಣ ತಯಾರಿಯ ಗುರುತರ ಜವಾಬ್ದಾರಿ ಮಹಿಳೆಯರ ಮೇಲಿದೆ ಎಂದರು,
ಕಾರ್ಯಕ್ರಮದಲ್ಲಿ ಜಿಲ್ಲಾ ಲಸಿಕಾ ನಿರ್ವಾಹಕ ಎಮ್.ವೀರೇಶ್, ಕೆ.ಎಲ್. ವನಜಾಕ್ಷಮ್ಮ, ಜಿ.ಸುಧ, ಬಿ.ಸಿ.ಮಂಜುಳಾ, ಶಾರದಮ್ಮ ಶಂಕರಾನಾಯ್ಕ್ ಹೆಚ್. ಆರೋಗ್ಯ ಸಹಾಯಕರು, ಎಸ್.ನಂದಿನಿ, ಪಿ.ತಿಪ್ಪೇಸ್ವಾಮಿ, ಎಸ್.ಅರುಣ್, ಆಶ್ವಿನಿ ಅಲ್ಲದೆ ಅರ್ಹದಂಪತಿಗಳು ಕುಟುಂಬಗಳ ಹಿರಿಯರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
