ಹೊಳಲ್ಕೆರೆ:
ತಾಲ್ಲುಕು ಕೇಂದ್ರ ಹೊಳಲ್ಕೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಮತ್ತು ಚಿಕ್ಕಜಾಜೂರು ಕೃಷಿ ಉತ್ಪನ್ನ ಮಾರುಕಟ್ಟೆ ಸರ್ಕಾರದ ಲೆಕ್ಕದಲ್ಲಿದ್ದು ಈ ಎರಡು ಮಾರುಕಟ್ಟೆಗಳು ಲೆಕ್ಕುಂಟು ಆಟಕ್ಕಿಲ್ದಂತಾಗಿದೆ.ಚಿಕ್ಕಜಾಜೂರು ಉಪಮಾರುಕಟ್ಟೆ ಸ್ಥಾಪನೆಯಾಗಿ 30 ವರ್ಷಗಳು ಮುಗಿದರು ಇಲ್ಲಿ ಯಾವ ರೈತರು ಒಂದು ಚೀಲ ತಾವು ಬೆಳೆದ ಕೃಷಿ ಉತ್ಪನ್ನಗಳ್ನು ಮಾರಾಟ ಮಾಡಲು ಆ ಮಾರುಕಟ್ಟೆಗೆ ಹೋಗುತ್ತಿಲ್ಲ. ರೈತರು ಬೆಳೆದ ಬೆಳೆಗಳನ್ನು ಕೊಳ್ಳುವ ವರ್ತಕರು ಇಲ್ಲ. ಈ ಮಾರುಕಟ್ಟೆ ನೋಡಲಿಕ್ಕೆ ಒಂದು ವಸ್ತುಪ್ರದರ್ಶನದಂತೆ ಕಾಣುತ್ತಿದೆ.
ಹೊಳಲ್ಕೆರೆ ದಾವಣಗೆರೆ ರಾಜ್ಯ ಹೆದ್ದಾರಿಯ ಪಕ್ಕದಲ್ಲಿ 3 ಎಕರೆ ವಿಸ್ತೀರ್ಣದಲ್ಲಿ ಇರುವ ಚಿಕ್ಕಜಾಜೂರು ಮಾರುಕಟ್ಟೆಯಲ್ಲಿ ಒಂದು ರೂಪಾಯಿ ವ್ಯವಹಾರ ನಡೆಯುತ್ತಿಲ್ಲ. ಆದರೆ ಪ್ರತಿ ವರ್ಷ ಲಕ್ಷಾಂತರ ರೂಗಳ ಕಟ್ಟಡಗಳ ಅಭಿವೃಧ್ದಿ ಮಾತ್ರ ನಿರಂತರವಾಗಿ ನಡೆಯುತ್ತಲೆ ಇದೆ.
ಹೊಳಲ್ಕೆರೆ ತಾಲ್ಲುಕಿನಲ್ಲಿ ರೈತರು ರಾಗಿ, ಜೋಳ, ಹತ್ತಿ, ಸೇಂಗ, ಎಳ್ಳು, ಹೆಸರು, ಈರುಳ್ಳಿ, ಮೆಣಸಿನಕಾಯಿ, ಸೂರ್ಯಕಾಂತಿ, ಹಳಸಂದಿ, ಜೊತೆಗೆ ತೋಟದ ಬೆಳೆಗಳಾದ ತೆಂಗು, ಅಡಿಕೆ, ಬಾಳೆ ಬೆಳೆಗಳನ್ನು ಯತ್ತೇಚ್ಚವಾಗಿ ಬೆಳೆಯುತ್ತಾರೆ. ಆದರೆ ಇವುಗಳನ್ನು ಮಾರಾಟ ಮಾಡಲು ಈ ಮಾರುಕಟ್ಟೆಯಲ್ಲಿ ಯಾವುದೇ ವ್ಯವಸ್ಥೆಗಳೆ ಇಲ್ಲ.
ಈ ಉಪಮಾರುಕಟ್ಟೆಯಲ್ಲಿ ದೊಡ್ಡ ದೊಡ್ಡ ಗೋದಾಮುಗಳು, ಹರಾಜು ಕಟ್ಟೆಗಳನ್ನು ಮಾತ್ರ ನಿರ್ಮಾಣ ಮಾಡಲಾಗಿದೆ. ಇಲ್ಲಿ ವಾರಕ್ಕೆ ಒಂದು ದಿನವಾದರು ವಹಿವಾಟು ನಡೆಯುತ್ತಿಲ್ಲ. ಹೆಸರಿಗೆ ಮಾತ್ರ ಮಾರುಕಟ್ಟೆ ಎಂಬ ನಾಮಫಲಕ ಮಾತ್ರ ಕಣ್ಣಿಗೆ ರಾರಾಜಿಸುತ್ತಿದೆ .ತಾಲ್ಲುಕಿನಲ್ಲಿ ರೈತರು ತಾವು ಬೆಳೆದ ಎಲ್ಲಾ ಕೃಷಿ ಉತ್ಪನ್ನಗಳನ್ನು ದೂರದ ಬೆಂಗಳೂರು, ಮೈಸೂರು, ಶಿವಮೊಗ್ಗ, ಚನ್ನಗಿರಿ, ಭೀಮಸಮುದ್ರ, ಬ್ಯಾಡಗಿ, ಚಳ್ಳಕೆರೆ, ಚಿತ್ರದುರ್ಗ ಮುಂತಾದ ಕಡೆಯ ಮಾರುಕಟ್ಟೆಗಳಿಗೆ ರೈತರು ದುಬಾರಿ ಸರಕು ಸಾಗಾಣಿ ವಾಹನಗಳಿಗೆ ಹಣ ನೀಡಿ ತೆಗೆದುಕೊಂಡು ಹೋಗುತ್ತಿರುವುದು ಮಾತ್ರ ತಪ್ಪಿಲ್ಲ.
ರೈತರು ತಾವು ಬೆಳೆದ ಬೆಳೆಗಳನ್ನು ಮಾರಾಟ ಮಾಡಲು ತಮ್ಮ ಸ್ಥಳಗಳಲ್ಲಿ ಸಾಧ್ಯವಾಗುತ್ತಿಲ್ಲ. ಸರ್ಕಾರ ರೈತರಿಗೆ ಅನುಕೂಲ ಮಾಡುವ ಹಿತದೃಷ್ಟಿಯಿಂದ ಪ್ರತಿ ತಾಲ್ಲುಕು ಕೇಂದ್ರದಲ್ಲಿ ವ್ಯವಸ್ಥಿತ ಮಾರುಕಟ್ಟೆಗಳನ್ನು ಸ್ಥಾಪನೆ ಮಾಡಿದೆ. ಆದರೆ ತಾಲ್ಲುಕಿನ ಚಿಕ್ಕಜಾಜೂರು ಮತ್ತು ಹೊಳಲ್ಕೆರೆ ಮಾರುಕಟ್ಟೆಯಲ್ಲಿ ಯಾವೊಬ್ಬ ಖರೀದಿದಾರನು ಮುಂದೆ ಬರುತ್ತಿಲ್ಲ. ಹಾಗಂತ ವ್ಯಾಪಾರಸ್ಥರು ರೈತರ ಬೆಳೆಗಳನ್ನು ದಿನ ನಿತ್ಯ ರೈತನ ಮನೆ ಬಾಗಿಲಿಗೆ ಹೋಗಿ ಅವರಿಗೆ ಇಷ್ಟ ಬಂದಷ್ಟು ಬೆಲೆಯನ್ನು ನೀಡಿ ಖರೀದಿ ಮಾಡುತ್ತಾರೆ. ಇದರಿಂದ ರೈತರಿಗೆ ತಾವು ಬೆಳೆದ ಬೆಳೆಗಳ ಬೆಲೆ ಎಷ್ಟು ಎಂಬುದೇ ಗೊತ್ತಾಗುತ್ತಿಲ್ಲ. ಜೊತೆಗೆ ತೂಕದಲ್ಲು ಮೋಸ ಈ ರೀತಿ ಮೋಸ ಮಾಡುತ್ತಾ ನಿರಂತರವಾಗಿ ಅನ್ನದಾತನ ಶೋಷಣೆ ಮುಂದುವರಿಯುತ್ತಿದೆ.
ಈ ಉಪಮಾರುಕಟ್ಟೆ ಪ್ರಾಂಗಣದ ತುಂಬಾ ಗಿಡಗಂಟೆಗಳು ಬೆಳೆದು ಹೆಮ್ಮರವಾಗಿವೆ. ಒಳಗಡೆ ಹೋಗಲು ಭಯವಾಗುತ್ತದೆ. ಅದರಲ್ಲಿ ಯಾವ ವಿಷಜಂತುಗಳು ವಾಸಮಾಡುತ್ತಿವೆ ಎಂಬ ಬಗ್ಗೆಜನರಿಗೆ ಭಯ ಉಂಟಾಗಿದೆ.ಮಾರುಕಟ್ಟೆ ನಿಯಂತ್ರಣ, ಆಡಳಿತ ಮಂಡಳಿಗಳು ಪ್ರತಿ 5 ವರ್ಷಕ್ಕೊಮ್ಮೆ ಬದಲಾವಣೆ ಆಗುತ್ತಿರುವುದು ತಪ್ಪಿಲ್ಲ. ಆಡಳಿತ ಅಧಿಕಾರಕ್ಕಗಿ ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಜಿದ್ದಾಜಿದ್ದಿನಿಂದ ಸ್ಪರ್ಧೆ ಮಾಡುವುದು ಮಾತ್ರ ನಿರಂತರವಾಗಿದೆ.
ಚುನಾವಣೆಯಲ್ಲಿ ರೈತರ ಪ್ರತಿನಿಧಿಗಳಾಗಿ ಆಯ್ಕೆಯಾದವರು ಈ ಮಾರುಕಟ್ಟೆಗಳ ರೂಪರೇಷೆ ರೈತರಿಗೆ ಅನುಕೂಲಗಳ ಬಗ್ಗೆ ಆಲೋಚನೆ ಮಾಡುವುದರಲ್ಲಿ ವಿಫಲರಾಗಿದ್ದಾರೆ. ಆಡಳಿತ ಸಮಿತಿ ಮಾತ್ರ ಅಸ್ತಿತ್ವದಲ್ಲಿದೆ. ಅಭಿವೃದ್ದಿಯ ಕಡೆ ಅವರ ಗಮನ ಕೇವಲ ಕಟ್ಟಡಗಳು ನಿರ್ಮಾಣದ ಕಡೆ ಮಾತ್ರ ಇದೆ. ಈ ಮಾರುಕಟ್ಟೆಗಳ ಸ್ಥಿತಿಗಳ ಬಗ್ಗೆ ರಾಜ್ಯ ಮಟ್ಟದ ಜಿಲ್ಲಾಮಟ್ಟದ ಮಾರುಕಟ್ಟೆ ಅಧಿಕಾರಿಗಳು ಸಹ ಇವುಗಳ ಅಭಿವೃಧ್ದಿ ಕಡೆಗೆ ರೈತರ ಹಿತದೃಷ್ಟಿಕಡೆಗೆ ಕಿಂಚೆತ್ತು ಗಮನ ನೀಡುತ್ತಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ