ಚುನಾವಣಾ ಅಕ್ರಮಗಳ ಮಾಹಿತಿ ನೀಡಲು ಸಿವಿಜಲ್ ಬಳಸಿ : ಕೃಷ್ಣ ಬಾಜಪೇಯಿ

ಹಾವೇರಿ

      ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ನೀತಿ ಸಂಹಿತೆಯ ಉಲ್ಲಂಘನೆಯ ಚಟುವಟಿಕೆಗಳು ಹಾಗೂ ಚುನಾವಣಾ ಅಕ್ರಮಗಳ ಮೇಲೆ ಹದ್ದಿನ ಕಣ್ಣಿಡಲು ಭಾರತ ಚುನಾವಣಾ ಆಯೋಗ ಮೊದಲ ಬಾರಿಗೆ ಸಿಟಿಜನ್ ಮೊಬೈಲ್ ಆ್ಯಪ್ ಸಿವಿಜಲ್ ಪರಿಚಯಿಸಿದೆ. ಸಾರ್ವಜನಿಕರು ಚುನಾವಣಾ ಅಕ್ರಮಗಳು ಕಂಡುಬಂದರೆ ಸಿವಿಜಲ್ ಆ್ಯಪ್ ಬಳಸಿ ಅಕ್ರಮಗಳ ಫೋಟೋ ಅಥವಾ ಎರಡು ನಿಮಿಷದ ವಿಡಿಯೋ ತುಣುಕುಗಳನ್ನು ಈ ಆ್ಯಪ್ ಮೂಲಕ ಕಳುಹಿಸಿದರೆ ತಕ್ಷಣವೇ ಅಧಿಕಾರಿಗಳ ತಂಡ ಅಕ್ರಮ ನಡೆಯುವ ಸ್ಥಳಗಳಿಗೆ ಭೇಟಿ ನೀಡಿ ಕ್ರಮ ಕೈಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೃಷ್ಣ ಬಾಜಪೇಯಿ ಅವರು ತಿಳಿಸಿದರು.ವಾರ್ತಾ ಭವನದಲ್ಲಿ ಸೋಮವಾರ ಸಿವಿಜಲ್ ಆ್ಯಪ್ ಬಳಕೆ ಕುರಿತಂತೆ ಸ್ವೀಪ್ ಸಮಿತಿಯ ಮುದ್ರಿಸಿರುವ ಕರಪತ್ರಗಳನ್ನು ಬಿಡುಗಡೆಗೊಳಿಸಿ ಅವರು ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದರು.

        ಭಾರತ ಚುನಾವಣಾ ಆಯೋಗ ಚುನಾವಣಾ ಅಕ್ರಮಗಳ ಮೇಲೆ ಹದ್ದಿನ ಕಣ್ಣಿಡಲು ಈ ಆ್ಯಪ್ ಬಿಡುಗಡೆಗೊಳಿಸಿದೆ. ತಮ್ಮ ಆಂಡ್ರೈಡ್ ಮೊಬೈಲ್‍ನ ಗೂಗಲ್ ಸ್ಟೋರಿನಲ್ಲಿ ಹೋಗಿ ಈ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಬಹುದು. ಯಾವುದೇ ನಾಗರಿಕರು ಸುಲಭವಾಗಿ ಈ ಆ್ಯಪ್ ಬಳಸಿಕೊಳ್ಳಬಹುದು. ತಮ್ಮ ಸಮೀಪದಲ್ಲಿ ನಡೆಯುವ ಚುನಾವಣೆಯ ಯಾವುದೇ ಅಕ್ರಮಗಳ ಬಗ್ಗೆ ಫೋಟೋ ಅಥವಾ ಕಿರು ವಿಡಿಯೋವನ್ನು ಭೌಗೋಳಿಕ ಮಾಹಿತಿಯೊಂದಿಗೆ ಆಪ್‍ಲೋಡ ಮಾಡಿದರೆ ಸಮೀಪದಲ್ಲಿ ಕಾರ್ಯನಿರ್ವಹಿಸುವ ವಿಡಿಯೋ ವಿವಿಂಗ್ ಟೀಮ್ ಅಥವಾ ಫ್ಲೈಯಿಂಗ್ ಸ್ಕ್ವಾಡ್ ಅಥವಾ ಸೆಕ್ಟರ್ ಅಧಿಕಾರಿಗಳ ತಂಡ ತಕ್ಷಣವೇ ಸ್ಥಳಕ್ಕೆ ಆಗಮಿಸಿ ಈ ಕುರಿತಂತೆ ಕ್ರಮ ವಹಿಸಲಿದೆ ಎಂದು ತಿಳಿಸಿದರು.

        1950: ಚುನಾವಣಾ ಸಂಬಂಧಿಸಿದಂತೆ ಮಾಹಿತಿ ಹಾಗೂ ದೂರುಗಳಿಗಾಗಿ 1950 ಸಂಖ್ಯೆಯ ಸಹಾಯವಾಣಿಯನ್ನು ಸಾರ್ವಜನಿಕರು ಬಳಸಬಹುದು. ಈ ಸಂಖ್ಯೆಗೆ ಕರೆಮಾಡಿ ಮತನಾಡಿದರೆ ಸಾರ್ವಜನಿಕ ದೂರುಗಳಿಗೆ ತಕ್ಷಣ ಸ್ಪಂದಿಸಲಾಗುವುದು. ಪ್ರತಿ ಕರೆಯೂ ಮುದ್ರಿತ(ರೆಕಾರ್ಡ್)ವಾಗುತ್ತದೆ. ಇದಲ್ಲದೆ ಲಿಖಿತವಾಗಿಯೂ ದೂರು ಸಲ್ಲಿಸಬಹುದು ಎಂದು ತಿಳಿಸಿದರು.

       11 ದೂರು: ಸಿವಿಜಲ್ ಆಪ್‍ನಲ್ಲಿ ಈವರೆಗೆ 11 ದೂರುಗಳು ದಾಖಲಾಗಿವೆ. ಚುನಾವಣೆಗೆ ಸಂಬಂಧಿಸಿದಂತೆ ಮೂರು ದೂರುಗಳನ್ನು ಮಾತ್ರ ಪರಿಗಣಿಸಿದೆ ಹಾಗೂ ವಿಲೇವಾರಿಗೊಳಿಸಿದೆ ಎಂದು ತಿಳಿಸಿದರು.ಚುನಾವಣಾ ಅಕ್ರಮಗಳ ಬಗ್ಗೆ ಸಿವಿಜಲ್ ಅಥವಾ ದೂರವಾಣಿ ಮೂಲಕ ಕರೆ ಮಾಡಿ ಮಾಹಿತಿ ನೀಡಿದವರ ಹೆಸರನ್ನು ಗೌಪ್ಯ ಇಡಲಾಗುವುದು. ಯಾವುದೇ ಭಯ ಮತ್ತು ಆತಂಕವಿಲ್ಲದೆ ಸಾರ್ವಜನಿಕರು ಚುನಾವಣಾ ಅಕ್ರಮಗಳ ಮಾಹಿತಿ ನೀಡಲು ಮಾಧ್ಯಮಗಳ ಮೂಲಕ ಮನವಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದರು.
ಚುನಾವಣಾ ಆ್ಯಪ್: ಸಾರ್ವಜನಿಕರು ಮೊಬೈಲ್‍ನಲ್ಲಿ ಚುನಾವಣೆ ಸಮಗ್ರ ಮಾಹಿತಿ ಪಡೆಯಲು ಆ್ಯಪ್‍ನ್ನು ಪರಿಚಯಿಸಿದೆ.

        ಇದರಲ್ಲಿ ಚುನಾವಣಾ ಸಮಗ್ರ ಮಾಹಿತಿಯನ್ನು ಸಾರ್ವಜನಿಕರು ಪಡೆಯಬಹುದಾಗಿದೆ. ದಿವ್ಯಾಂಗರಿಗೆ ಉಚಿತ ಸಾರಿಗೆ, ಚುನಾವಣಾ ವೇಳಾಪಟ್ಟಿ, ಅಧಿಕಾರಿಗಳ ವಿವರ, ಜಿ.ಐ.ಎಸ್. ಅಭ್ಯರ್ಥಿಗಳ ಮಾಹಿತಿ, ಮತದಾನ ಕೇಂದ್ರದ ವಿವರ, ದಿವ್ಯಾಂಗರಿಗೆ ಮತದಾನಕ್ಕೆ ವ್ಹೀಲ್‍ಚೇರ್ ಕಾಯ್ದಿರಿಸುವುದು ಹಾಗೂ ಯಾವುದೇ ಮತದಾರ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು, ಗುರುತಿನ ಚೀಟಿನ ವಿವರ ಹುಡುಕಲು ಈ ಆ್ಯಪ್ ಅನುಕೂಲಕರ. ಗೂಗಲ್ ಅಥವಾ ಆಪ್ ಸ್ಟೋರ್‍ನಲ್ಲಿ ಈ ಆ್ಯಪ್‍ನ್ನು ಡೌನ್‍ಲೋಡ್‍ಮಾಡಿಕೊಂಡು ಬಳಸಿಕೊಳ್ಳಬಹುದು ಎಂದು ವಿವರಿಸಿದರು.

       ಶೇ.1ರಷ್ಟು ಮತ ಹೆಚ್ಚಳ : ಮತದಾರರ ನೋಂದಣಿ ಹಾಗೂ ಮತ ಜಾಗೃತಿಗಾಗಿ ಜಿಲ್ಲಾ ಸ್ವೀಪ್ ಸಮಿತಿ ವ್ಯಾಪಕ ಚಟುವಟಿಕೆಗಳನ್ನು ಹಮ್ಮಿಕೊಂಡಿದೆ. ಮತದಾರರ ನೋಂದಣಿ ಜಾಗೃತಿಯ ಫಲವಾಗಿ ಜಿಲ್ಲೆಯಲ್ಲಿ ಶೇ.1ರಷ್ಟು ಯುವ ಮತದಾರರ ನೋಂದಣಿ ಹೆಚ್ಚಾಗಿದೆ. ಆರರಿಂದ ಏಳುಸಾವಿರ ಮತದಾರರು ಹೊಸದಾಗಿ ನೋಂದಾಯಿಸಿಕೊಂಡಿದ್ದಾರೆ. ನಾಮಪತ್ರ ಸಲ್ಲಿಕೆಯ ಕೊನೆಯ ದಿನಾಂಕದವರೆಗೂ ಮತದಾರರ ಪಟ್ಟಿಗೆ ಹೆಸರು ಸೇರಿಸಿಕೊಳ್ಳಲು ಅವಕಾಶವಿದೆ ಎಂದು ತಿಳಿಸಿದರು.

      ಇನ್ನೂ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಿಕೊಳ್ಳದ ಯುವ ಮತದಾರರು ಸಮೀಪದ ಮತಗಟ್ಟೆ ಅಧಿಕಾರಿಗಳು, ಗ್ರಾಮ ಪಂಚಾಯತಿ ಕಚೇರಿಗಳು, ತಾಲೂಕಾ ಕಚೇರಿ ಅಥವಾ ಜಿಲ್ಲಾ ಚುನಾವಣಾ ಕಚೇರಿಗೆ ಭೇಟಿ ನಿಗಧಿತ ಅರ್ಜಿ ನಮೂನೆ 6ನ್ನು ಭರ್ತಿಮಾಡಿ ಹೆಸರು ಸೇರಿಸಿಕೊಳ್ಳಲು ಅವಕಾಶವಿದೆ ಎಂದು ಹೇಳಿದರು.ಮತದಾರರ ಜಾಗೃತಿಗಾಗಿ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳಲಾಗುತ್ತಿದೆ. ಎರಡನೆಯ ಹಂತದಲ್ಲಿ ಸಾಮಾಜಿಕ ಜಾಲ ತಾಣಗಳನ್ನು ಪರಿಣಾಮಕಾರಿಯಾಗಿ ಸ್ವೀಪ್ ಚಟುವಟಿಕೆಗಾಗಿ ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link