ಹಗರಿಬೊಮ್ಮನಹಳ್ಳಿ:
ತಾಲೂಕಿನ ನಂದಿಪುರ ಗ್ರಾಮವು ತಾಲೂಕಿಗೆ ಸೇರಿದ್ದರೂ ಆ ಗ್ರಾಮವು ಹಡಗಲಿ ಮತ್ತು ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ನಡುವೆ ಇದ್ದು, ಈ ಗ್ರಾಮವನ್ನು ಶಾಸಕರು ಸೇರಿದಂತೆ ಜನಪ್ರತಿನಿಧಿಗಳು ಸಂಪೂರ್ಣ ನಿರ್ಲಕ್ಷ್ಯ ವಹಿಸಿರುವುದು ಗ್ರಾಮಸ್ಥರನ್ನು ಕೆರಳಿಸಿದೆ. ಇದರಿಂದ ಬೇಸರಗೊಂಡ ಗ್ರಾಮಸ್ಥರು ಒಗ್ಗಟ್ಟಿನಿಂದ ಮುಂಬರುವ ಲೋಕಸಭಾ ಚುನಾವಣೆಯನ್ನು ಬಹಿಷ್ಕಾರಿಸುವುದಾಗಿ ನಿರ್ಧಾರವನ್ನು ತೆಗೆದುಕೊಂಡ ಪ್ರಸಂಗ ಜರುಗಿತು.
ಗ್ರಾಮದ ಆಂಜನೇಯ ದೇಗುಲದಲ್ಲಿ ಬುಧವಾರ ಗ್ರಾಮಸ್ಥರ ಸಭೆಯನ್ನು ಕರೆದು, ಗ್ರಾ.ಪಂ.ಸದಸ್ಯ ಬಿ.ದೇವರೆಡ್ಡಿ ಮಾತನಾಡಿ, ಕಳೆದ ಎರಡು ವರ್ಷಗಳಿಂದ ನಂದಿಪುರ ಗ್ರಾಮವನ್ನು, ಆಯ್ಕೆಯಾದ ಎಲ್ಲ ಜನಪ್ರತಿನಿಧಿಗಳು ಕಡೆಗಣಿಸಿದ್ದಾರೆ. ಗ್ರಾಮದಲ್ಲಿ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗಿದೆ.
ಅಂತರ ಜಲ ಸಮಸ್ಯೆಯನ್ನು ನೀಗಿಸಲು ಮತ್ತು ನೀರಾವರಿಗಾಗಿ ಇದ್ದ ನಂದಿದುರ್ಗಾ ಏತ ನೀರಾವರಿ ಯೋಜನೆಯನ್ನು ಜಾರಿ ಮಾಡುವಲ್ಲಿ, ಆ ಬಗ್ಗೆ ಧ್ವನಿ ಎತ್ತುವಲ್ಲಿ ಎಲ್ಲ ಜನಪ್ರತಿನಿಧಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ಇದರಿಂದ ಗ್ರಾಮದ ಜನತೆಗೆ ಹಾಗೂ ಜಾನುವಾರುಗಳಿಗೆ ನೀರಿನ ಸಮಸ್ಯೆ ಹೆಚ್ಚಾಗಿದೆ. ಅಲ್ಲದೇ ಗ್ರಾಮಕ್ಕೆ ಸಂಪರ್ಕ ಇರುವ ರಸ್ತೆಗಳು, ಚರಂಡಿ ನಿರ್ಮಾಣವಾಗಿಲ್ಲ. ಬೀದಿ ದೀಪಗಳು ಸರಿಯಾಗಿಲ್ಲ, ಅನೇಕ ಸಮಸ್ಯೆಗಳು ಗ್ರಾಮದಲ್ಲಿ ಜ್ವಲಂತ ಸಮಸ್ಯೆಯಾಗಿವೆ. ಇವುಗಳನ್ನು ಸರಿ ಮಾಡುವ ತನಕ ನಾವು ಯಾವುದೇ ಚುನಾವಣೆಯಲ್ಲಿ ಮತದಾನ ಮಾಡುವುದು ಬೇಡ ಎಂದರು.
ಗ್ರಾಮದಲ್ಲಿ 875 ಒಟ್ಟು ಮತದಾರರು ಇದ್ದಾರೆ. ಎಲ್ಲರು ನಮ್ಮ ಗ್ರಾಮದ ಅಭಿವೃದ್ದಿ ಆಗುತನಕ ಮತದಾನ ಬಹಿಷ್ಕಾರ ಮಾಡುವುದಾಗಿ ಒಮ್ಮತದಿಂದ ತೀರ್ಮಾನ ಕೈಗೊಂಡರು. ಅಲ್ಲದೆ, ಗುರುವಾರ ತಾಲೂಕು ಕಚೇರಿಗೆ ತೆರಳಿ ತಹಶೀಲ್ದಾರ, ಸಹಾಯಕ ಚುನಾವಣೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಗ್ರಾ.ಪಂ.ಮಾಜಿ ಅಧ್ಯಕ್ಷ ಯಮುನಪ್ಪ, ಗ್ರಾಮದ ಮುಖಂಡರಾದ ಬಿ.ಚಿದಾನಂದಪ್ಪ, ಟಿ.ಕರೀಂ ಸಾಹೇಬ್, ಕೆ.ಬಸವರಡ್ಡಿ, ಅಲ್ಲಭಕ್ಷಿ, ಸಲೀಂ ಭೀ, ಯು.ಹನುಮಂತಪ್ಪ, ಕೊಟ್ರರಡ್ಡಿ, ಬಿ.ಬಸಪ್ಪ ಸೇರಿದಂತೆ ಅನೇಕರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ