ಪುಟ್‌ಪಾತ್ ಒತ್ತುವರಿ ತೆರವಿಗೆ ಕ್ರಮ

ತುಮಕೂರು

     ‘ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪಾದಚಾರಿಗಳಿಗೆ ಮೀಸಲಾದ ಪುಟ್‌ಪಾತ್ ಹಾಗೂ ಚರಂಡಿ ಜಾಗ ಒತ್ತುವರಿ ಆಗಿದ್ದರೆ, ಕಾನೂನಿನ ಪ್ರಕಾರ ಅದನ್ನು ತೆರವುಗೊಳಿಸಲು ಪಾಲಿಕೆ ಕ್ರಮ ಜರುಗಿಸುವುದು’ ಎಂದು ಪಾಲಿಕೆಯ ಮೂಲಗಳು ‘‘ಪ್ರಜಾಪ್ರಗತಿ’’ಗೆ ಸ್ಪಷ್ಟಪಡಿಸಿವೆ.

      ಇತ್ತೀಚೆಗಷ್ಟೇ ತುಮಕೂರು ನಗರದ ಕುಣಿಗಲ್ ರಸ್ತೆಯಲ್ಲಿ ಗಾಂಧಿನಗರಕ್ಕೆ ತಿರುವು ಪಡೆಯುವ ರಸ್ತೆಯ ಬದಿ ಪುಟ್‌ಪಾತ್ ಜಾಗದಲ್ಲಿ ಇದ್ದ ‘‘ಹಾಲಿನ ಬೂತ್’’ ಒಂದನ್ನು ಸಾರ್ವಜನಿಕರ ದೂರು ಹಾಗೂ ರಾಜಕೀಯ ಒತ್ತಡದ ಹಿನ್ನೆಲೆಯಲ್ಲಿ ಪಾಲಿಕೆಯು ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದ್ದು, ಈ ಹಿನ್ನೆಲೆಯಲ್ಲಿ ಇದೀಗ ಪುಟ್‌ಪಾತ್ ಒತ್ತುವರಿ ತೆರವು ವಿಚಾರ ಮತ್ತೆ ಚರ್ಚೆಗೆ ಬರತೊಡಗಿದೆ.

       ಪುಟ್‌ಪಾತ್ ಹಾಗೂ ಚರಂಡಿ ಜಾಗ ಹೊರತುಪಡಿಸಿ ವ್ಯಾಪಾರ ಮಾಡಲು ಪಾಲಿಕೆಯ ಅಭ್ಯಂತರವೇನೂ ಇರುವುದಿಲ್ಲ. ಆದರೆ ರಸ್ತೆ, ಪುಟ್‌ಪಾತ್, ಚರಂಡಿ ಜಾಗವನ್ನು ಒತ್ತುವರಿ ಮಾಡಿಕೊಂಡು ವ್ಯಾಪಾರ ಮಾಡುವಂತಿಲ್ಲ. ಇದರ ವಿರುದ್ಧ ಪಾಲಿಕೆಯಿಂದ ಕ್ರಮ ಜರುಗಿಸಲಾಗುವುದು’ ಎಂದು ಮೂಲಗಳು ಹೇಳಿವೆ.

ಈಗಾಗಲೇ ನೋಟೀಸ್ ಜಾರಿ

        ‘ನಗರದ ರೈಲ್ವೆ ನಿಲ್ದಾಣದ ಬಳಿ ಪ್ರವಾಸಿ ಮಂದಿರದ ಕಾಂಪೌಂಡ್‌ಗೆ ಹೊಂದಿಕೊಂಡಂತೆ ರಸ್ತೆ ಬದಿ ಇತ್ತೀಚೆಗೆ ದಿಢೀರನೆ ಅಂಗಡಿಯೊಂದನ್ನು ನಿರ್ಮಿಸಿದ್ದು, ಈ ಬಗ್ಗೆಯೂ ಸಾರ್ವಜನಿಕರಿಂದ ದೂರು ಬಂದಿದೆ. ಆ ಹಿನ್ನೆಲೆಯಲ್ಲಿ ಸಂಬಂಧಿಸಿದವರಿಗೆ ಪಾಲಿಕೆಯಿಂದ ನೋಟೀಸ್ ನೀಡಲಾಗಿದೆ. ಸದ್ಯದಲ್ಲೇ ಇದನ್ನು ಸಹ ತೆರವುಗೊಳಿಸಲಾಗುವುದು’ ಎಂದು ಮೂಲಗಳು ತಿಳಿಸಿವೆ.

       ಪುಟ್‌ಪಾತ್ ಒತ್ತುವರಿ ಸಮಸ್ಯೆ ಇರುವುದು ನಮ್ಮ ಗಮನಕ್ಕೆ ಬಂದಿದೆ. ನಾವು ಕ್ರಮ ಜರುಗಿಸುತ್ತೇವೆ. ಮೊದಲೇ ಸಂಬಂಧಿಸಿದವರು ಅದನ್ನು ತೆಗೆದುಕೊಳ್ಳುವುದು ಒಳ್ಳೆಯದು’ ಎಂದು ಹೇಳಿವೆ.

ಕಾರ್ಯಾಚರಣೆಗೆ ಡಿ.ಸಿ. ಸೂಚನೆ

         ಇತ್ತೀಚೆಗೆ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಸ್ವತಃ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಅವರು ನಗರಾದ್ಯಂತ ಪುಟ್‌ಪಾತ್ ಒತ್ತುವರಿಯನ್ನು ತೆರವುಗೊಳಿಸಲು ಕಾರ್ಯಾಚರಣೆ ಕೈಗೊಳ್ಳುವಂತೆ ಸಭೆಯಲ್ಲಿ ಹಾಜರಿದ್ದ ಪಾಲಿಕೆಯ ಎಕ್ಸಿಕ್ಯುಟೀವ್ ಇಂಜಿನಿಯರ್ ಅವರಿಗೆ ಸ್ಪಷ್ಟ ಸೂಚನೆ ನೀಡಿದ್ದುದನ್ನು ಇಲ್ಲಿ ಸ್ಮರಿಸಬಹುದು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link