ಬೆಂಗಳೂರು
ಇಂದು ದೆಹಲಿಗೆ ಹೋಗಬೇಕಿದ್ದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಪ್ರಯಾಣವನ್ನು ದಿಢೀರ್ ರದ್ದುಗೊಳಿಸಿದ್ದು ಈ ಬೆಳವಣಿಗೆ ನಾನಾ ಊಹಾಪೋಹಗಳಿಗೆ ಕಾರಣವಾಗಿದೆ.ಅಂದ ಹಾಗೆ ದೆಹಲಿಯಲ್ಲಿ ಮಂಗಳವಾರ ಇವಿಎಂ ವಿಚಾರದಲ್ಲಿ ವಿರೋಧ ಪಕ್ಷಗಳು ನಡೆಸಲಿರುವ ಸಭೆಯಲ್ಲಿ ಸಿಎಂ ಭಾಗವಹಿಸುವುದಿಲ್ಲ. ಮುಖ್ಯಮಂತ್ರಿಗಳ ಇಂದಿನ ದೆಹಲಿ ಭೇಟಿ ರದ್ದಾಗಿದೆ ಎಂದು ಮುಖ್ಯಮಂತ್ರಿ ಕಾರ್ಯಾಲಯ ತಿಳಿಸಿದೆ.
ನಿಗದಿತ ಕಾರ್ಯಕ್ರಮದ ಪ್ರಕಾರ, ಸಿಎಂ ಕುಮಾರಸ್ವಾಮಿ ಅವರು ಮಂಗಳವಾರ ಬೆಳಗ್ಗೆ 11 ಗಂಟೆಗೆ ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಬೇಕಿತ್ತು.ಹಾಗೆಯೇ ಸಂಜೆ ವೇಳಗೆ ಅವರು ಬೆಂಗಳೂರಿಗೆ ವಾಪಸಾಗಬೇಕಿತ್ತು.ಸಿಎಂ ಕುಮಾರಸ್ವಾಮಿ ಅವರು ಕೂಡ ಇವಿಎಂ ಗಳ ಬಗ್ಗೆ ಈಗಾಗಲೇ ಅನುಮಾನ ವ್ಯಕ್ತಪಡಿಸಿದ್ದಾರೆ. ತಮ್ಮ ಸರಣಿ ಟ್ವೀಟ್‍ಗಳ ಮೂಲಕ ಮತಗಟ್ಟೆ ಸಮೀಕ್ಷೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜೆಡಿಎಸ್ ಶಾಸಕರ ಭೇಟಿ : ರೇಸ್ ಕೋರ್ಸ್ ರಸ್ತೆಯಲ್ಲಿರುವ ಶಕ್ತಿ ಭವನದಲ್ಲಿ ಸಚಿವರು, ಶಾಸಕರು ಹಾಗೂ ಅಧಿಕಾರಿಗಳನ್ನು ಸಿಎಂ ಕುಮಾರಸ್ವಾಮಿ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.ಹಾಲು ಒಕ್ಕೂಟಗಳ ಅಧ್ಯಕ್ಷರು ಹಾಗೂ ಕೆಎಂಎಫ್ ಅಧ್ಯಕ್ಷರನ್ನು ಆಯ್ಕೆ ಮಾಡುವ ಸಂಬಂಧ ಸಿಎಂ ಚರ್ಚಿ ಮಾಡಿದ್ದಾರೆ.
ಈ ಮಧ್ಯೆ ಮಾಜಿ ಪ್ರಧಾನಿ,ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡರ ಜತೆ ಅವರು ಸುಧೀರ್ಘ ಸಮಾಲೋಚನೆ ನಡೆಸಿದ್ದು,ಅವರ ಸೂಚನೆಯ ಮೇರೆಗೇ ಅವರು ದೆಹಲಿಯ ಕಾರ್ಯಕ್ರಮವನ್ನು ಮುಂದೂಡಿದ್ದಾರೆ ಎನ್ನಲಾಗಿದ್ದು ಈ ಅಂಶವೇ ನಾನಾ ಊಹಾಪೋಹಗಳಿಗೆ ಕಾರಣವಾಗಿರುವುದು ನಿಜ.