ಕೈ ತಪ್ಪಿದ ಬಿಜೆಪಿ ಟಿಕೆಟ್‌ : ಕೈ ಹಿಡಿತಾರ ಡಿವಿಎಸ್‌ …..!

ಬೆಂಗಳೂರು:

    ಬಿಜೆಪಿ ಹಾಲಿ ಸಂಸದ ಮತ್ತು ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದಗೌಡ ಅವರು ಕಾಂಗ್ರೆಸ್ ಟಿಕೆಟ್‌ನಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬ ಗುಸುಗುಸು ರಾಜಕೀಯ ಕಾರಿಡಾರ್‌ಗಳಲ್ಲಿ ಕೇಳಿ ಬರುತ್ತಿದೆ, ಆದರೆ ಈ ವಿಚಾರವಾಗಿ, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನಡುವೆ ಭಿನ್ನಾಭಿಪ್ರಾಯ ಮೂಡಿದೆ.

    ಸದಾನಂದಗೌಡರನ್ನು ಕಾಂಗ್ರೆಸ್ ಟಿಕೆಟ್‌ನಲ್ಲಿ ಕಣಕ್ಕಿಳಿಸಲು ಸಿಎಂ ವಿರೋಧ ವ್ಯಕ್ತಪಡಿಸಿದ್ದರೆ, ಶಿವಕುಮಾರ್ ಅವರು ಅಸಮಾಧಾನಿತ ಗೌಡರನ್ನು ಸಂಪರ್ಕಿಸಿ ಮೈಸೂರು-ಕೊಡಗು ಕ್ಷೇತ್ರದಿಂದ ಸ್ಪರ್ಧಿಸಲು ಪಕ್ಷದ ಟಿಕೆಟ್ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.

    ಸದಾನಂದಗೌಡರು ಕಳೆದ ನವೆಂಬರ್‌ನಲ್ಲಿ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದರು. ಆದರೆ, ತಮ್ಮ ಬೆಂಬಲಿಗರಿಂದ ಒತ್ತಡವಿದೆ ಎಂದ ಅವರು, ತಮ್ಮ ಕ್ಷೇತ್ರವಾದ ಬೆಂಗಳೂರು ಉತ್ತರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಇಚ್ಛೆಯನ್ನು ವ್ಯಕ್ತಪಡಿಸಿದರು. ಆದರೆ, ಬಿಜೆಪಿ ವರಿಷ್ಠರು ಬೆಂಗಳೂರು ಉತ್ತರದಿಂದ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ನೀಡಿದೆ. 

    ರಾಜಕೀಯದಲ್ಲಿ ತಮ್ಮ ಪಕ್ಷ ಟಿಕೆಟ್ ನಿರಾಕರಿಸಿದರೆ ಬೇರೆ ಪಕ್ಷಕ್ಕೆ ಹೋಗುವುದು ಸಾಮಾನ್ಯ ಎಂದು ಶಿವಕುಮಾರ್ ಹೇಳಿದರು. ಇದೇ ವೇಳೆ ಗೌಡರನ್ನು ಪಕ್ಷದಿಂದ ಕಣಕ್ಕಿಳಿಸಲು ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರ ವಿರೋಧವೂ ಇದೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಎಪಿಸೋಡ್ ಮರುಕಳಿಸುವ ಭಯ ಸಿದ್ದರಾಮಯ್ಯಗೆ ಇದೆ. ಹೀಗಾಗಿ ಅವರಿಗೆ ಟಿಕೆಟ್ ನೀಡಲು ಸಿಎಂ ಸಿದ್ದರಾಮಯ್ಯ ವಿರೋಧಿಸಿದ್ದಾರೆ ಎಂದು ಹೇಳಲಾಗುತ್ತಿದೆ.

    2023 ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಟಿಕೆಟ್ ನಿರಾಕರಿಸಿದ ನಂತರ ಬಿಜೆಪಿ ತೊರೆದ ಶೆಟ್ಟರ್ ಕಾಂಗ್ರೆಸ್ ಸೇರಿ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು. ಶೆಟ್ಟರ್ ಇತ್ತೀಚೆಗೆ ಬಿಜೆಪಿಗೆ ಮರಳಿದ್ದು ಕಾಂಗ್ರೆಸ್‌ಗೆ ಮುಜುಗರ ಉಂಟು ಮಾಡಿತ್ತು.

    ಮಂಗಳವಾರ ಪತ್ರಿಕಾಗೋಷ್ಠಿಯನ್ನು ರದ್ದುಪಡಿಸಿದ ಗೌಡರು ಬುಧವಾರ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡುವುದಾಗಿ ತಿಳಿಸಿದ್ದಾರೆ. ಹಿರಿಯ ಒಕ್ಕಲಿಗ ನಾಯಕರನ್ನು ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಸಂಪರ್ಕಿಸಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಮಂಗಳವಾರ ಸದಾನಂದಗೌಡರು ಒಕ್ಕಲಿಗ ಸಂಘದ ಪದಾಧಿಕಾರಿಗಳನ್ನು ಭೇಟಿ ಮಾಡಿದರು. ಒಕ್ಕಲಿಗರನ್ನು ಬದಿಗೊತ್ತಿದ ಬಿಜೆಪಿ ವಿರುದ್ಧ ಸಂಘದ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. 

   ಮಂಗಳವಾರ ದೆಹಲಿಯ ಬಿಜೆಪಿ ಮುಖಂಡರು ಗೌಡರನ್ನು ಸಂಪರ್ಕಿಸಿ ಸಮಾಧಾನಪಡಿಸಲು ಯತ್ನಿಸಿದ್ದಾರೆ. ಇದೀಗ ಮತ್ತೊಬ್ಬ ಒಕ್ಕಲಿಗ ನಾಯಕ ಬಚ್ಚೇಗೌಡ ಪ್ರತಿನಿಧಿಸುತ್ತಿರುವ ಚಿಕ್ಕಬಳ್ಳಾಪುರದಿಂದ ಪಕ್ಷ ಅವರನ್ನು ಕಣಕ್ಕಿಳಿಸಲಿದೆ ಎಂದು ಹೇಳಿದ್ದರು ಎನ್ನಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap