ತಿಪಟೂರು :
ಸಹಕಾರಿ ತತ್ವ ಬಹಳ ಹಿಂದಿನಿಂದಲೂ ಜನಪ್ರಿಯ ಗಳಿಸಿವೆ. ಜಾತಿ ರಹಿತ, ಶೋಷಣೆ ಮುಕ್ತ, ಸಮಾನತೆಯ ಸಮಾಜ ನಿರ್ಮಾಣದಲ್ಲಿ ಸಹಕಾರಿ ಕ್ಷೇತ್ರದ ಕೊಡುಗೆ ಅಪಾರ. ಸಹಕಾರಿ ಸಂಸ್ಥೆಯು ಬಡವರಿಗೆ ದಾರಿ ದೀಪವಾಗಿ ಮಾಪಾಡಾಗಲಿ ಎಂದು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಯೋಜನಾಧಿಕಾರಿ ಶಾಂತಾನಾಯಕ್ ಅಭಿಪ್ರಾಯಪಟ್ಟರು.
ನಗರದ ಸೀತಾರಾಮಯ್ಯ ಶತಮಾನೋತ್ಸವ ಭವನದಲ್ಲಿ ಶ್ರೀ ಸೃಜನಶೀಲ ಪತ್ತಿನ ಸಹಕಾರ ಸಂಘ ಹಾಗೂ ಶ್ರೀ ಪ್ರಗತಿಶೀಲ ಗೃಹ ನಿರ್ಮಾಣ ಸಹಕಾರ ಸಂಘಗಳ 13ನೇ ವರ್ಷದ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರ ಸಂಘಗಳು ಜನಸಾಮಾನ್ಯರ ಆರ್ಥಿಕತೆಯನ್ನು ಅಭಿವೃದ್ಧಿಗೊಳಿಸಲು ಸಹಕಾರಿಯಾಗಿದ್ದು ಕರ್ನಾಟಕವನ್ನು ಬಡತನ ಮುಕ್ತವನ್ನಾಗಿಸುವ ಗುರಿಯನ್ನು ಸಾಧಿಸಬೇಕಾಗಿದೆ.
ಸೃಜನಶೀಲ ಪತ್ತಿನ ಸಹಕಾರ ಸಂಘದಲ್ಲಿ ಹೆಚ್ಚಿನ ಮಹಿಳಾ ನಿರ್ದೇಶಕರು, ಷೇರುದಾರರಿದ್ದು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಸಂತಸದ ಸಂಗತಿಯಾಗಿದೆ . ಹಿಂದೆ ಹಲವಾರು ಸಂಘ ಸಂಸ್ಥೆಗಳು ಕಾರ್ಯನಿರ್ವಹಿಸಿವೆ . ಆದರೆ ಈ ಸಂಘ ಕಾಯಕವೇ ಕೈಲಾಸ ಎಂದು ಬಡವರ್ಗದ ಜನರನ್ನು ಮುಖ್ಯವಾಹಿನಿಗೆ ತರುವಂತಹ ಉತ್ತಮ ಕಾರ್ಯವನ್ನು ಮಾಡುತ್ತಿದೆ.
ಸದ್ಯದಲ್ಲಿಯೇ ಈ ಸಂಸ್ಥೆಯು ಬ್ಯಾಂಕ್ ಆಗಿ ಪರಿವರ್ತನೆಯಾಗಲಿ. ಸಮಾಜದಲ್ಲಿ ಮಾನವ ಸಂಘ ಜೀವಿಯಾಗಿದ್ದು ಆತನಿಗೆ ಕಷ್ಟದ ಸಮಯದಲ್ಲಿ ಹಣದ ಅವಶ್ಯಕತೆ ಇರುತ್ತದೆ. ಆಗ ಇತರ ಬ್ಯಾಂಕ್‍ಗಳನ್ನು ಅವಲಂಭಿಸದೇ ಸಹಕಾರಿ ಸಂಘದ ಮೂಲಕ ಸುಲಭವಾಗಿ ಹಣದ ಸಹಕಾರ ದೊರೆಯಲಿದೆ. ಜೊತೆಗೆ ಸದಸ್ಯರುಗಳು ಉತ್ತಮ ಸಹಕಾರ ನೀಡಿದರೆ ಉತ್ತಮ ಕಾರ್ಯನಿರ್ವಹಣೆ ಸಾಧ್ಯವಾಗಲಿದೆ ಎಂದು ತಿಳಿಸಿದರು.
ವಕೀಲೆ ಲಕ್ಷ್ಮೀ ಮಾತನಾಡಿ ಇಂದು ಮಹಿಳೆಯರಿಗೆ ಪುರುಷರಷ್ಟೇ ಎಲ್ಲಾ ಕ್ಷೇತ್ರಗಳಲ್ಲಿಯೂ ಸಮಾನತೆ ದೊರೆಯುತ್ತಿದ್ದು ಅದನ್ನು ಕೆಲ ಸಂದರ್ಭದಲ್ಲಿ ಕೇಳಿ ಪಡೆದುಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ಪ್ರತಿಯೊಬ್ಬ ಯಶಸ್ವಿ ಮಹಿಳೆಯ ಹಿಂದ ಒಬ್ಬ ಪುರುಷನಿರುತ್ತಾನೆ ಎನ್ನುವುದು ಮರೆಯದ ಸಂಗತಿಯಾಗಿದೆ. ಎಲ್ಲಿ ನಾರಿಯರನ್ನು, ಮಹಿಳೆಯರನ್ನು ಪೂಜಿಸುತ್ತಾರೇ ಅಲ್ಲಿ ದೇವರು ನೆಲೆಸಿರುತ್ತಾನೆ.
ಹೆಣ್ಣ ಅಬಲೆಯಲ್ಲ ಸಬಲೆ ಎಂದು ಅನೇಕ ಬಾರಿ ತೋರಿಸಿಕೊಟ್ಟಿದಾರೆ. ಗ್ರಾಮೀಣ ಭಾಗಗಳಲ್ಲಿ ಸ್ವಸಹಾಯ ಗುಂಪುಗಳು ಸ್ಥಾಪನೆಯಾಗಿ ಪ್ರತಿಯೊಬ್ಬ ಮಹಿಳೆಯರ ಆರ್ಥಿಕ ಪರಿಸ್ಥಿತಿ ಸಧೃಡವಾಗಿದೆ. ಪ್ರತಿಯೊಂದು ಮನೆಗಳನ್ನು ತಾನೇ ಮುನ್ನಡೆಸುವಂತಹ ಧೈರ್ಯ, ಛಲಗಾರಿಕೆ ಮೂಡುವಂತಾಗಿದೆ. ಪ್ರತಿಯೊಬ್ಬರೂ ಉಳಿತಾಯದ ಮಹತ್ವವನ್ನು ಅರಿತು ಉಳಿತಾಯದಲ್ಲಿ ಮುಂಚೂಣಿಯಲ್ಲಿ ನಿಲ್ಲಬೇಕಿದೆ ಎಂದರು.
ಶ್ರೀ ಸೃಜನಶೀಲ ಪತ್ತಿನ ಸಹಕಾರ ಸಂಘ ಹಾಗೂ ಶ್ರೀ ಪ್ರಗತಿಶೀಲ ಗೃಹ ನಿರ್ಮಾಣ ಸಹಕಾರ ಸಂಘಗಳ ಅಧ್ಯಕ್ಷ ಎಸ್.ಜಯಣ್ಣ ಮಾತನಾಡಿ ಸಹಕಾರಿ ಸಂಘದ ಮುಖಾಂತರ ಎಲ್ಲರನ್ನು ಆರ್ಥಿಕವಾಗಿ ಸಧೃಡಗೊಳಿಸಲುವ ಸಲುವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಂಘದಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿಯನ್ನು ನೀಡಿದ್ದೇವೆ. ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದರೂ ಎಲ್ಲೂ ಒಟ್ಟಾಗಿ ಚರ್ಚಿಸಿ ನಿರ್ಧಾರ ತೆಗೆದದುಕೊಳ್ಳುತ್ತೇವೆ. ಪ್ರತಿಯೊಬ್ಬ ಸದಸ್ಯರುಗಳು ಆರ್ಥಿಕವಾಗಿ ಸಬಲರಾಗಬೇಕೆಂಬ ಉದ್ದೇಶದಿಂದಲೇ ಅನೇಕ ಸೇವೆಗಳನ್ನು ಪ್ರಾರಂಭಿಸಲು ಚಿಂತಿಸಿದ್ದು ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.
ವಕೀಲ ಬಿ.ಡಿ.ಜಗದೀಶ್, ಜಿತೇಂದ್ರ, ಶೋಭಾದೇವಿ, ಜ್ಞಾನಜ್ಯೋತಿ ಆರ್ಥಿಕ ಸಾಕ್ಷರತಾ ಕೇಂದ್ರದ ಪಿ.ರೇಖಾ , ಕೆ.ಎಸ್.ಸದಾಶಿವಯ್ಯ , ಹೊನ್ನವಳ್ಳಿ ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ಶಿವಕುಮಾರ್, ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷ ಪೂರ್ಣಿಮಾ ಬಸವರಾಜು, ಹೇಮಾ ಕಿಟ್ಟಿ, ಸಂಘದ ಉಪಾಧ್ಯಕ್ಷ ಕಲ್ಲಹಳ್ಳಿ ಜಯಲಕ್ಷ್ಮೀ, ನಿರ್ದೇಶಕರುಗಳಾದ ಬಸವರಾಜು ಹಳೇಮನೆ, ಎಂ.ಜಿ.ಮೀನಾ, ಆಲದಹಳ್ಳಿ ವಿಶ್ವೇಶ್ವರಯ್ಯ, ಲೋಕೇಶ್ ಕೊಪ್ಪ, ವಿಶಾಲಾಕ್ಷಮ್ಮ, ಶಿವಶಂಕರ್, ರಂಗಪ್ಪ, ಅಂಬಿಕಮ್ಮ, ಎಸ್.ಕುಮಾರಸ್ವಾಮಿ, ಕಾರ್ಯನಿರ್ವಾಹಕರುಗಳಾದ ಎಂ.ಭಾಗ್ಯ, ಹೆಚ್.ಜ್ಯೋತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
