ತೆಂಗು-ರಾಗಿಗೆ ಬೆಂಬಲ ಬೆಲೆ ಬೇಕೇ ಬೇಕು…!

ತುಮಕೂರು

     ಮಾರ್ಚ್ 2020ರ ಬಜೆಟ್‍ನಲ್ಲಿ ಜಿಲ್ಲೆಗೆ ಹೆಚ್ಚಿನ ಆದ್ಯತೆ ನೀಡಿ ರೈತರು ಹಾಗೂ ಕೃಷಿಕರಿಗೆ ಬಜೆಟ್ ಸಹಾಯಕಾರಿಯಾಗಬೇಕು. ತೆಂಗು, ಮತ್ತು ರಾಗಿಗೆ ಬೆಂಬಲ ಬೆಲೆ ನೀಡಲೇ ಬೇಕು. ತುಮಕೂರು ಜಿಲ್ಲೆಯ ನೀರಾವರಿ ಮತ್ತು ಕೃಷಿ ಅಭಿವೃದ್ದಿಗೆ ಹೆಚ್ಚಿನ ಆದ್ಯತೆಯನ್ನು ಕೊಡಬೇಕು ಎಂದು ಭಾರತೀಯ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಕೋಡಿಹಳ್ಳಿ ಜಗದೀಶ್ ತಿಳಿಸಿದರು.

      ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ರೈತರಿಗೆ ನೀಡುತ್ತಿರುವ ಸಹಾಯಧನವನ್ನು ಹಿಂದಿನ ಸರ್ಕಾರದಲ್ಲಿ ರೈತರ ಖಾತೆಗೆ ವರ್ಗಾವನೆ ಮಾಡಿ ರೈತರ ಖಾತೆಯಿಂದ ಉಪಕರಣಗಳ ಟೆಂಡರ್‍ದಾರರಿಗೆ ಹೋಗುತ್ತಿರುವುದನ್ನು ತಪ್ಪಿಸಿ. ರೈತರಿಗೆ ನೀಡುತ್ತಿರುವ ಉಪಕರಣಗಳು ಕಳಪೆ ಗುಣಮಟ್ಟದ್ದಾಗಿದ್ದು ಅಲ್ಲದೆ ಟೆಂಡರ್‍ನಲ್ಲಿ ಆಗಿರುವಂತಹ ಉಪಕರಣಗಳನ್ನು ನೀಡದೆ ಸ್ಥಳೀಯವಾಗಿ ತಯಾರು ಮಾಡಿರುವ ಕಳಪೆ ಯಂತ್ರೋಪಕರಣಗಳನ್ನು ನೀಡಲಾಗುತ್ತಿದೆ. ಇಲಾಖೆ ಅಧಿಕಾರಿಗಳು ಯಂತ್ರೋಪಕರಣಗಳ ತಪಾಸಣೆ ನಡೆಸಬೇಕು ಎಂದರು.

     ತುಮಕೂರು ಜಿಲ್ಲೆಗೆ ನೀರು ಒದಗಿಸಬೇಕಾದ ಹೇಮಾವತಿ ಹೆಚ್ಚುವರಿ ಸಾಮಥ್ರ್ಯಕ್ಕೆ ವಿಸ್ತರಿಸಿ, ಭದ್ರಾ ಮೇಲ್ದಂಡೆ ಮತ್ತು ಎತ್ತಿನಹೊಳೆ ಯೋಜನೆಗಳನ್ನು ತುರ್ತಾಗಿ ಕಾಮಗಾರಿಯನ್ನು ಮುಗಿಸುವಂತೆ ಹಾಗೂ ಕೂಡಲೇ ಅನುಷ್ಟಾನಗೊಳಿಸಬೇಕೆಂದು ಎಲ್ಲಾ ನಗರದ ಸ್ಥಳೀಯ ಸಂಸ್ಥೆಗಳು ಮತ್ತು ಎಲ್ಲಾ ಗ್ರಾಮಗಳಿಗೆ ವಾಟರ್ ಗ್ರಿಡ್ ಪೈಪ್ ಲೈನ್ ಮೂಲಕ ಕುಡಿಯುವ ನೀರು ಒದಗಿಸುವ ಪೈಲೆಟಪ್ರಾಜೆಕ್ಟ್ ಅನ್ನು ಸಿದ್ಧಪಡಿಸಿ, ಎಲ್ಲ ಕೆರೆಗಳಿಗೂ ನೀರು ಹರಿಸಬೇಕು. ಕೈಗಾರಿಕೆಗಳಿಗೆ ಕೊಳಚೆ ನೀರು ಸಂಸ್ಕರಿಸಿ ನೀಡಬೇಕು. ಯಾವುದೇ ಕಾರಣಕ್ಕೂ ಕೈಗಾರಿಕಾ ಪ್ರದೇಶಗಳಿಗೆ ಹೇಮಾವತಿ, ಎತ್ತಿನಹೊಳೆ ನೀರು ಹಂಚಿಕೆ ಮಾಡಬಾರದು ಎಂದರು.

     ಕೃಷಿ ವಲಯದ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಪರಿವರ್ತಿಸುವುದಕ್ಕೆ ಕಡಿವಾಣ ಹಾಕುವ ಕಾಯ್ದೆಯನ್ನು ರೂಪಿಸಬೇಕು. ಜಿಲ್ಲೆಯ ವಸಂತ ನರಸಾಪುರ ಕೈಗಾರಿಕಾ ಪ್ರದೇಶ ಸುಮಾರು 13,000 ಎಕರೆಯನ್ನು ಭೂ ಸ್ವಾಧೀನ ಪಡಿಸಿಕೊಂಡಿದ್ದ ಇದರಲ್ಲಿ ಕೇವಲ 15ರಷ್ಟು ಮಾತ್ರ ಕೈಗಾರಿಕೆಗಳು ಅಭಿವೃದ್ಧಿ ಹೊಂದಿದ್ದು 2009ರಲ್ಲಿ ಸ್ವಾಧೀನ ಪಡಿಸಿಕೊಂಡಿರುವ ಭೂಮಿಯನ್ನು 2020 ಆದರೂ ಕೂಡ ಅಭಿವೃದ್ಧಿಪಡಿಸದೆ ಉಳಿಸಿಕೊಳ್ಳಲಾಗಿದೆ. ಈ ಭೂಮಿಯನ್ನು ರೈತರಿಗೆ ವಾಪಸ್ ನೀಡಬೇಕು. ಭೂಮಿಯನ್ನು ಮೂಲ ಖಾತೆದಾರರಿಗೆ ಹಿಂತಿರುಗಿಸಬೇಕು ಎಂದು ಆಗ್ರಹಿಸಿದರು.

     ಭಾರತೀಯ ಕೃಷಿಕ ಸಮಾಜದ ಗೌರವಾಧ್ಯಕ್ಷ ಪುಟ್ಟರಾಜು ಬ್ರಹ್ಮಸಂದ್ರ ಮಾತನಾಡಿ, ರೈತರಿಗೆ ಕಳಪೆ ಗುಣಮಟ್ಟದ ಬಿತ್ತನೆ ಬೀಜ ರಸಗೊಬ್ಬರ ತರಕಾರಿ ಬೀಜಗಳು, ಕೀಟನಾಶಕ ಔಷಧ ಸರಬರಾಜು ಮಾಡುತ್ತಿದ್ದು, ಅಂತಹ ಕಂಪನಿಗಳ ಬಗ್ಗೆ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು. ಕೃಷಿ ಮತ್ತು ತೋಟಗಾರಿಕಾ ಇಲಾಖೆಗಳಲ್ಲಿ ರೈತರುಗಳಿಗೆ ಬೀಜ ಗೊಬ್ಬರ ಯಂತ್ರೋಪಕರಣ ಗಳನ್ನು ಮೋಸ ಮಾಡುತ್ತಿದ್ದು, ಜಾಗೃತ ದಳಕ್ಕೆ ಹೆಚ್ಚಿನ ಸಿಬ್ಬಂದಿ ಹಾಗೂ ಹೆಚ್ಚಿನ ಶಕ್ತಿ ನೀಡಬೇಕು ಎಂದರು.

    ಜಿಲ್ಲೆಯಲ್ಲಿ ಲಕ್ಷಾಂತರ ತೆಂಗಿನ ಮರಗಳಿದ್ದು, ಪ್ರತಿ ಕ್ಷಿಂಟಾಲ್ ಕೊಬ್ಬರಿಗೆ ಕನಿಷ್ಟ 25 ಸಾವಿರ ಬೆಂಬಲ ಬೆಲೆ ನಿಗದಿ ಮಾಡಲು ಕೇಂದ್ರಕ್ಕೆ ಒತ್ತಾಯ ಹೇರಬೇಕು. ಇದರೊಂದಿಗೆ ಖರೀದಿ ಕೇಂದ್ರಗಳನ್ನು ಸ್ಥಾಪಿಸಲು ಸೂಕ್ತ ಹಣಕಾಸು ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ತೆಂಗು ಬೆಳೆಗಾರರ ರಕ್ಷಣೆಗೆ ಸರ್ಕಾರ ಮುಂದಾಗಬೇಕು. ಅಲ್ಲದೆ ಕೊಬ್ಬರಿ ಗೋಡನ್‍ಗೆ ಎಕರೆವಾರು ಇಂತಿಷ್ಟು ಸಹಾಯಧನ ನೀಡಬೇಕು ಎಂದರು.

     ರೈತರ ಉತ್ಪನ್ನಗಳ ಬೆಲೆ ನಿರಂತರವಾಗಿ ಕುಸಿಯುತ್ತಿರುವುದರಿಂದ ಬಜೆಟ್‍ನಲ್ಲಿ ಕನಿಷ್ಟ 20 ಸಾವಿರ ಕೋಟಿ ಹಣ ಮೀಸಲಿಡಬೇಕು ಮತ್ತು ಕೃಷಿಗೆ ಸಂಬಂಧಿಸಿದಂತೆ ಸರ್ಕಾರಗಳ ನೀತಿಗಳು ಹಾಗೂ ಯೋಜನೆಗಳಲ್ಲಿ ಕೆಲವು ಬದಲಾವಣೆ ಆಗಬೇಕಿದೆ. ಕೃಷಿ ಪದ್ದತಿಯಲ್ಲಿ ವಿಶ್ವ ವಿದ್ಯಾನಿಯಗಳಲ್ಲಿ ಡಿಪ್ಲೊಮಾ ಕೋರ್ಸ್‍ಗಳನ್ನು ತೆರೆಯಲು 60 ವರ್ಷ ವಯಸ್ಸು ತುಂಬಿದ ಕೃಷಿಕರಿಗೆ ಅತ್ಯಾಧುನಿಕ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಆರೋಗ್ಯ ಸೇವೆ, ಮಾಸಿಕ 5 ಸಾವಿರ ಪಿಂಚಣಿ ನೀಡುವ ಯೋಜನೆ ಜಾರಿಗೊಳಿಸಬೇಕು ಎಂದರು.

     ಪತ್ರಿಕಾಗೋಷ್ಟಿಯಲ್ಲಿ ಕಾರ್ಯದರ್ಶಿ ಪಾಂಡುರಂಗ ಕೆ, ಜಿಲ್ಲಾ ಉಪಾಧ್ಯಕ್ಷ ರಾಜಣ್ಣ ಬಿ.ಕೆ, ಬಿ.ಎಂ ಶ್ರೀನಿವಾಸ್, ವಿಶ್ವಮೂರ್ತಿ, ಬಿ.ಎಂ ಆನಂದ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

     ರಾಜ್ಯದ ರೈತರಿಗೆ ಈ ಹಿಂದೆ ಬಿಜೆಪಿ ಸರ್ಕಾರವೂ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳು ಚುನಾವಣಾ ಸಮಯದಲ್ಲಿ ಸಂಪೂರ್ಣ ಸಾಲಮನ್ನಾ ಮಾಡುತ್ತೇವೆಂದು ಹೇಳಿದ್ದು, ಹಿಂದಿನ ಮೈತ್ರಿ ಸರ್ಕಾರ ಬೆಳೆ ಸಾಲವನ್ನು ಮಾತ್ರ ಮನ್ನಾ ಮಾಡಿದ್ದು ಅದರಲ್ಲಿಯೂ ಕೆಲವು ರೈತರುಗಳಿಗೆ ಸಾಲ ಮನ್ನಾ ಆಗಿದೆ. ಹಲವಾರು ರೈತರುಗಳಿಗೆ ಬಡ್ಡಿ ಮತ್ತು ಸುಸ್ತಿ ಬಡ್ಡಿ ಸೇರಿ ಅಸಲಿನ ದುಪ್ಪಟ್ಟು ಹಣ ಸಂದಾಯ ಮಾಡುವಂತೆ ಬ್ಯಾಂಕ್ ಅಧಿಕಾರಿಗಳು ರೈತರಿಗೆ ಒತ್ತಾಯ ಹಾಕುತ್ತಿದ್ದಾರೆ. ಇದರಿಂದ ಪಡೆದ ಸಾಲಗಳನ್ನು ತೀರಿಸಲಾಗದೆ ರೈತ ಆತ್ಮಹತ್ಯೆಗೆ ತುತ್ತಾಗುತ್ತಾನೆ. ಆದ್ದರಿಂದ ಇದನ್ನು ತಪ್ಪಿಸಲು ಸಲುವಾಗಿ ಈ ಹಿಂದಿನ ಸರ್ಕಾರಗಳು ಕೇವಲ ಬೆಳೆ ಸಾಲವನ್ನಷ್ಟೇ ಮನ್ನಾ ಮಾಡಿದ್ದು ಮಧ್ಯಮ ಮತ್ತು ದೀರ್ಘಾವಧಿ ಸಾಲಗಳನ್ನು ಈಗಿನ ಬಜೆಟ್‍ನಲ್ಲಿ ಮನ್ನಾ ಮಾಡಬೇಕು.

-ಪುಟ್ಟರಾಜು, ಭಾ.ಕೃ.ಸ ಗೌರವಾಧ್ಯಕ್ಷ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap