ಹೊನ್ನವಳ್ಳಿ 

ತಿಪಟೂರು ತಾಲ್ಲೂಕಿನ ಹೊನ್ನವಳ್ಳಿ ಗ್ರಾಮ ಪಂಚಾಯಿತಿ ಹೆಸರಿಗಟಷ್ಟೇ ಕೇಂದ್ರ ಬಿಂದು. ಆದರೆ ಸ್ವಚ್ಛತೆ ಮತ್ತು ಅಭಿವೃದ್ಧಿಯಲ್ಲಿ ಹಿನ್ನಡೆ ಸಾಧಿಸುವಲ್ಲಿ ಪ್ರಥಮ ಪಂಚಾಯಿತಿ ಎನಿಸಿಕೊಂಡಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.ಇಡೀ ಕರ್ನಾಟಕವೇ ಚಿತ್ತಾ ಮಳೆಗೆ ತತ್ತರಿಸಿದ್ದು, ಅದರಲ್ಲಿ ತಿಪಟೂರಿನ ಹೊನ್ನವಳ್ಳಿಯೂ ಸೇರಿದೆ.
ಈ ಹೋಬಳಿಯಲ್ಲಿ ಹಾಲಿನ ಡೈರಿಗೆ ಹೋಗಲು ಇರುವ ಪ್ರಮುಖ ರಸ್ತೆಯು ಹಿಂಗಾರು ಮಳೆಯ ವೇಳೆಯಲ್ಲಿ ಹದೆಗೆಟ್ಟಿದ್ದು, ಇಂದಿನವರೆಗೂ ಅದನ್ನು ಸರಿಪಡಿಸುವ ಗೋಜಿಗೆ ಯಾವುದೇ ಅಧಿಕಾರಿಗಳು ಹೋಗದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಮತ್ತಷ್ಟು ಕಾರಣವಾಗಿದೆ.
ಇತ್ತೀಚೆಗೆ ಸುರಿದ ಮಳೆಗೆ ಇರುವ ರಸ್ತೆ ಕೆಸರುಗದ್ದೆಯಂತಾಗಿದ್ದು, ಇಲ್ಲಿ ಓಡಾಡುವುದು ಕಷ್ಟಕರವಾಗಿದೆ. ಗುರುವಾರ ಬೆಳಗ್ಗೆ ಓರ್ವ ವೃದ್ಧ ಟಿವಿಎಸ್ ಮೊಪೆಡ್‍ನಲ್ಲಿ ಈ ರಸ್ತೆಯಲ್ಲಿ ಬಂದು ಕೆಳಬಿದ್ದು, ಮೈಯೆಲ್ಲಾ ಕೆಸರು ಮಾಡಿಕೊಂಡು ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನು ಬೈದುಕೊಳ್ಳುತ್ತಾ, ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕಿದ್ದಾರೆ.
ಜನಪ್ರತಿನಿಧಿಗಳು ಸಾರ್ವಜನಿಕರನ್ನು ಕೇವಲ ಮತ ಹಾಕುವಾಗ ಮಾತ್ರ ನೆನಪಿಸಿಕೊಳ್ಳುತ್ತಾರೆ. ಉಳಿದ ಸಮಯದಲ್ಲಿ ಮತದಾರರನ್ನು ಕಡೆಗಣನೆ ಮಾಡುತ್ತಾರೆ. ಅಲ್ಲದೆ ಕೆಲವರು ಜನಪ್ರತಿನಗಳ ಬಳಿ ಹಣ, ಹೆಂಡ ಆಮಿಷಕ್ಕೆ ಬಲಿಯಾಗಿ ಅವರನ್ನು ಗೆಲ್ಲಿಸುವುದರಿಂದ ಉಳಿದ ಎಲ್ಲರೂ ಪರದಾಡಬೇಕಿದೆ. ಗ್ರಾಮ ಪಂಚಾಯಿತಿಯವರು ಏನು ಮಾಡುತ್ತಿದ್ದಾರೆ? ತಾಲ್ಲೂಕು ಅಧಿಕಾರಿಗಳು ಏನು ಮಾಡುತ್ತಿದ್ದಾರೆ? ಈಲ್ಲಾ ಪಂಚಾಯಿತಿ ಸದಸ್ಯರು ಎಲ್ಲಿ ಇದ್ದಾರೆ ಎಂದೆಲ್ಲಾ ಕೂಗಾಡುತ್ತಾ ವೃದ್ಧ ಮುಂದಕ್ಕೆ ತೆರಳಿರುವ ದೃಶ್ಯಗಳು ಕಂಡು ಬಂದಿವೆ.
