ಬಳ್ಳಾರಿ:
ನಗರದ ವಿಮ್ಸ್ ಆಸ್ಪತ್ರೆಯ ಶವಾಗಾರದಲ್ಲಿನ ಶೀಥಲೀಕರಣ ಘಟಕಗಳು ಕೆಟ್ಟು ನಿಂತಿದ್ದು, ದುರಸ್ತಿಯಾಗದ ಹಿನ್ನೆಲೆಯಲ್ಲಿ ಶವಗಳನ್ನು ಕೊಠಡಿಯೊಳಗೆ ಬಯಲಲ್ಲೇ ಇಡಲಾಗುತ್ತಿದ್ದು, ಶವಗಳ ಸಂಬಂಧಿಕರಲ್ಲಿ ಆತಂಕ ಮೂಡಿಸಿದೆ.
ವಿಮ್ಸ್ ಆಸ್ಪತ್ರೆಯ ಶವಾಗಾರದಲ್ಲಿ 8 ಶವಗಳನ್ನು ಕೆಡದಂತೆ ಇಡುವ ಫ್ರೀಜರ್‍ಗಳು ಇದ್ದವು. ಅವು ಕೆಟ್ಟು ಹೋಗಿರುವುದರಿಂದ ನಿನ್ನೆ ದುರಸ್ಥಿಗಾಗಿ ಬೆಂಗಳೂರಿಗೆ ತೆಗೆದುಕೊಂಡು ಹೋಗಿದ್ದು ದುರಸ್ಥಿಯಾಗಿ ಬರಲು 15 ರಿಂದ 20ದಿನ ಬೇಕಾಗಲಿದೆ. ಇತ್ತ ಫ್ರಿಜ್‍ಗಳಿಲ್ಲದ ಕಾರಣ ನಿನ್ನೆಯಿಂದ ಶವಗಳನ್ನು ಸ್ಪ್ರಚರ್ ನಲ್ಲಿ ಹಾಗೆ ಕೊಠಡಿಯ ಬಯಲಲ್ಲಿ ಇಡಲಾಗಿದೆ. ಶವವೊಂದರ ವಾರಸುದಾರರು ತಮ್ಮ ಶವ ಕೆಡಬಾರದೆಂದು ಖಾಸಗಿಯಾಗಿ ಫ್ರೀಜರ್ ತಂದು ಇಟ್ಟುಕೊಂಡಿದ್ದಾರೆ. ಉಳಿದವು ಹಾಗೇ ಇವೆ. ಶವ 24 ತಾಸುಗಳ ನಂತರ ಕೊಳೆಯ ತೊಡಗುತ್ತದೆ. ಇದರಿಂದ ದುರ್ನಾತ ಬೀರುವ ಪರಿಸ್ಥಿತಿ ಬಂದಿದೆ.
ಈಗ ಕೊರೊನಾ ಇರುವ ಹಿನ್ನಲೆಯಲ್ಲಿ ಕೆಲವೊಂದು ಶವಗಳನ್ನು ಗಂಟಲ ದ್ರವ ಪರೀಕ್ಷೆ ವರದಿ ಬರುವ ವರೆಗೆ 2-3 ದಿನಗಳ ಕಾಲ ಇಡಬೇಕಾಗುತ್ತದೆ. ಜೊತೆಗೆ ಅನಾಥ ಶವಗಳು ಇವೆ. ಇಂತಹ ದುಃಸ್ಥಿತಿ ಬಗ್ಗೆ ಶವಗಳ ಸಂಬಂಧಿಕರು ವಿಮ್ಸ್ ಅಧಿಕಾರಿಗಳಿಗೆ ಹಿಡಿಶಾಪ ಹಾಕತೊಡಗಿದ್ದಾರೆ. ವಿಮ್ಸ್ ಅಭಿವೃದ್ಧಿಗೆ ಕೋಟ್ಯಾಂತರ ರೂ. ವೆಚ್ಚ ಮಾಡುವ ಸರ್ಕಾರ ಶವಾಗಾರದಲ್ಲಿ ಫ್ರೀಜರ್‍ಗಳನ್ನು ಅವಶ್ಯವಾಗಿ ಇಡಲು ವ್ಯವಸ್ಥೆ ಮಾಡದೇ ಇರುವುದು ದುರಂತವೇ ಸರಿ.
ಈ ಬಗ್ಗೆ ವಿಮ್ಸ್ ನಿರ್ದೇಶಕ ಡಾ.ಬಿ.ದೇವಾನಂದ ಅವರನ್ನು ವಿಚಾರಿಸಿದಾಗ ಒಮ್ಮೆಲೇ ಎರಡು ಯಂತ್ರಗಳು ಕೆಟ್ಟಿದ್ದರಿಂದ ಈ ಪರಿಸ್ಥಿತಿ ಬಂದಿದೆ. ಶವಾಗಾರದ ಕೋಣೆಯಲ್ಲಿ ಹವಾನಿಯಂತ್ರಣದ ಯಂತ್ರಗಳನ್ನು ತಾತ್ಕಾಲಿಕವಾಗಿ ತಂದು ಕೊಳೆಯದಂತೆ ನೋಡಿಕೊಳ್ಳುವುದಾಗಿ ಹೇಳಿದರು. ಆದರೆ ಈ ವರೆಗೂ ಈ ಕಾರ್ಯ ಆಗಿಲ್ಲ. ಈ ಯೋಜನೆ ಮೊದಲೇ ಮಾಡಿ ನಿನ್ನೆಯಿಂದಲೇ ತಾತ್ಕಾಲಿಕ ವ್ಯವಸ್ಥೆ ಮಾಬೇಕಿತ್ತು. ಎಂಬುದು ಜನರ ಅನಿಸಿಕೆಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ