ತುಮಕೂರು
ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ(ಪಿಎಂ ಕಿಸಾನ್) ಯೋಜನೆಯನ್ನು ಅನುಷ್ಠಾನಗೊಳಿಸಲು ಸಂಬಂಧಿಸಿದ ಇಲಾಖೆಗಳ ಎಲ್ಲ ಅಧಿಕಾರಿ/ಸಿಬ್ಬಂದಿಗಳು 12 ದಿನ(ಜೂನ್ 29)ಗಳೊಳಗಾಗಿ ತಪ್ಪದೇ ರೈತರ ನೋಂದಣಿ ಕಾರ್ಯವನ್ನು ಪೂರ್ಣಗೊಳಿಸಬೇಕೆಂದು ಜಿಲ್ಲಾಧಿಕಾರಿ ಡಾ|| ಕೆ. ರಾಕೇಶ್ ಕುಮಾರ್ ಕಟ್ಟುನಿಟ್ಟಿನ ಸೂಚನೆ ನೀಡಿದರು.
ವಾರ್ಷಿಕ 6000 ರೂ.ಗಳ ಪ್ರೋತ್ಸಾಹಧನ:
ಜಿಲ್ಲಾಧಿಕಾರಿಗಳ ಕಚೇರಿಯ ಎನ್‍ಐಸಿ ಕೇಂದ್ರದಲ್ಲಿಂದು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವೀಡಿಯೋ ಸಂವಾದ ನಡೆಸಿ ಮಾತನಾಡಿದ ಅವರು ಪಿಎಂ ಕಿಸಾನ್ ಯೋಜನೆಯು ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾಗಿದ್ದು, ಈ ಯೋಜನೆಯಡಿ ಭೂ ಒಡೆತನ ಹೊಂದಿರುವ ಎಲ್ಲ ವರ್ಗದ ಅರ್ಹ ರೈತ ಕುಟುಂಬಕ್ಕೆ ಪ್ರತೀ ನಾಲ್ಕು ತಿಂಗಳಿಗೊಮ್ಮೆ 3 ಸಮಾನ ಕಂತುಗಳಲ್ಲಿ 2,000 ರೂ.ಗಳಂತೆ ಒಟ್ಟು ವಾರ್ಷಿಕ 6,000 ರೂ.ಗಳನ್ನು ನೀಡಲಾಗುವುದು.
ಮೊದಲ ಕಂತಿನ 2,000 ರೂ.ಗಳ ಪ್ರೋತ್ಸಾಹ ಧನ ಸೌಲಭ್ಯ ಪಡೆಯಲಿಚ್ಛಿಸುವವರು ನಿಗಧಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಸರ್ಕಾರಿ ಸ್ವಾಮ್ಯದ ಬಾಪೂಜಿ ಸೇವಾ ಕೇಂದ್ರ, ಹೋಬಳಿ ಮಟ್ಟದಲ್ಲಿ ರೈತ ಸಂಪರ್ಕ ಕೇಂದ್ರ, ಅಟಲ್‍ಜಿ ಜನಸ್ನೇಹಿ ಕೇಂದ್ರ, ನಾಡ ಕಚೇರಿಗಳಿಗೆ ಜೂನ್ 29ರೊಳಗಾಗಿ ಸಲ್ಲಿಸಬಹುದು. ನಿಗಧಿತ ದಿನಾಂಕದ ನಂತರ ಅರ್ಜಿ ಸಲ್ಲಿಸಿದವರಿಗೆ ಮೊದಲನೇ ಕಂತಿನ ಹಣ ತಪ್ಪಿ ಹೋಗಿ ಉಳಿದ 4,000 ರೂ.ಗಳ ಪ್ರೋತ್ಸಾಹ ಧನ ಮಾತ್ರ ದೊರೆಯುತ್ತದೆ ಎಂದು ತಿಳಿಸಿದರಲ್ಲದೆ ಯೋಜನೆಯ ಸೌಲಭ್ಯಕ್ಕಾಗಿ ಯಾವುದೇ ಮಧ್ಯವರ್ತಿಗಳನ್ನು ಸಂಪರ್ಕಿದಂತೆ ಅಧಿಕಾರಿಗಳು ರೈತರಿಗೆ ಅರಿವು ಮೂಡಿಸಬೇಕೆಂದರು.
ರೈತರು ಯೋಜನೆಯಿಂದ ಕೈತಪ್ಪಬಾರದು:
ಪಿಎಂ ಕಿಸಾನ್ ಯೋಜನೆಯಿಂದ ಜಿಲ್ಲೆಯ ಯಾವೊಬ್ಬ ರೈತರೂ ಕೈತಪ್ಪಿ ಹೋಗಬಾರದು. ಯೋಜನೆಯ ಯಶಸ್ವೀ ಅನುಷ್ಠಾನಕ್ಕೆ ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಗಳು; ತಾಲೂಕು ಕಚೇರಿ; ಗ್ರಾಮ ಪಂಚಾಯತಿ; ಮತ್ತಿತರ ಸಂಬಂಧಿಸಿದ ಇಲಾಖೆಗಳ ಅಧಿಕಾರಿ/ಸಿಬ್ಬಂದಿಗಳು ಸಾಮರಸ್ಯದಿಂದ ಕಾರ್ಯನಿರ್ವಹಿಸಬೇಕು.
ಯೋಜನೆಯ ಸೌಲಭ್ಯದಿಂದ ರೈತರು ತಪ್ಪಿಹೋದಲ್ಲಿ ಸಂಬಂಧಿಸಿದ ಅಧಿಕಾರಿ/ಸಿಬ್ಬಂದಿಗಳನ್ನೆ ನೇರ ಹೊಣೆಗಾರರನ್ನಾಗಿ ಮಾಡಿ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದೆಂದು ನಿರ್ದೇಶನ ನೀಡಿದರು.
ಎಲ್ಲ ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ, ತಹಶೀಲ್ದಾರ್, ಕೃಷಿ ಅಧಿಕಾರಿಗಳು ಕೂಡಲೇ ತಮ್ಮ ವ್ಯಾಪ್ತಿಗೆ ಬರುವ ಗ್ರಾಮಗಳನ್ನು ಪಟ್ಟಿ ಮಾಡಿ ಸಿಬ್ಬಂದಿಗಳಿಗೆ ಹಂಚಿಕೆ ಮಾಡಬೇಕು. ಸಿಬ್ಬಂದಿಗಳು ತಮಗೆ ನಿಯೋಜಿಸಿರುವ ಗ್ರಾಮಗಳ ಪ್ರತೀ ಮನೆಗಳಿಗೆ ಭೇಟಿ ನೀಡಿ ಅರ್ಹ ರೈತ ಕುಟುಂಬಗಳಿಂದ 12 ದಿನಗಳೊಳಗಾಗಿ ಸ್ವಯಂ ಘೋಷಿತ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಸರ್ವೇ ನಂಬರ್, ಮತ್ತಿತರ ದಾಖಲೆಗಳ ಮಾಹಿತಿ ಪಡೆದು ನೋಂದಾಯಿಸಿಕೊಳ್ಳಬೇಕು. ನೋಂದಣಿ ಸಂದರ್ಭದಲ್ಲಿ ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಯಲ್ಲಿರುವ ಫಲಾನುಭವಿಯ ಹೆಸರು ಒಂದಕ್ಕೊಂದು ಹೊಂದಾಣಿಕೆಯಾಗಿದೆಯೇ ಎಂದು ಪರಿಶೀಲಿಸಬೇಕು. ಹೆಸರು ಹೊಂದಾಣಿಕೆಯಾಗದಿದ್ದಲ್ಲಿ ಯೋಜನೆಯ ಲಾಭ ತಪ್ಪಿಹೋಗುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಸಬೂಬು ಹೇಳದೆ ನೋಂದಣಿ ಕಾರ್ಯ ಪೂರ್ಣಗೊಳಿಸಿ:
ತಾಲೂಕು ಮಟ್ಟದ ಅಧಿಕಾರಿಗಳು ರೈತರ ನೋಂದಣಿ ಕಾರ್ಯಕ್ಕೆ ಪಿಡಿಓಗಳು, ಬಿಲ್ ಕಲೆಕ್ಟರ್, ನೀರುಗಂಟಿ, ಕೃಷಿ ಸಹಾಯಕರು, ತೋಟಗಾರಿಕೆ ಸಹಾಯಕರನ್ನಲ್ಲದೆ ಕಚೇರಿ ಸಿಬ್ಬಂದಿಗಳನ್ನೂ ಸಹ ನಿಯೋಜಿಸಿ ತ್ವರಿತವಾಗಿ ಪೂರ್ಣಗೊಳಿಸಬೇಕು. ನಿಯೋಜಿತ ಅಧಿಕಾರಿ/ಸಿಬ್ಬಂದಿಗಳು ಸಿಬ್ಬಂದಿ ಕೊರತೆ, ಸಮಯದ ಅಭಾವ, ಮತ್ತಿತರ ಸಬೂಬುಗಳನ್ನು ಹೇಳದೆ ತಮ್ಮ ಎಲ್ಲ ಕೆಲಸಗಳನ್ನು ಬದಿಗೊತ್ತಿ ಕಡ್ಡಾಯವಾಗಿ ಪಿಎಂ ಕಿಸಾನ್ ಯೋಜನೆಗೆ ರೈತರನ್ನು ನೋಂದಾಯಿಸಿಕೊಳ್ಳುವ ಕಾರ್ಯವನ್ನೇ ಮಾಡಬೇಕು ಎಂದರು.
ರೈತರು ಬಾಪೂಜಿ ಸೇವಾ ಕೇಂದ್ರ, ಹೋಬಳಿ ಮಟ್ಟದಲ್ಲಿ ರೈತ ಸಂಪರ್ಕ ಕೇಂದ್ರ, ಅಟಲ್‍ಜಿ ಜನಸ್ನೇಹಿ ಕೇಂದ್ರ, ನಾಡ ಕಚೇರಿಗೆ ಖುದ್ದಾಗಿ ಹಾಜರಾಗಿ ತಮ್ಮ ಸ್ವಯಂ ಘೋಷಿತ ಪ್ರಮಾಣಪತ್ರ ಹಾಗೂ ಮತ್ತಿತರ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಯೋಜನೆಗೆ ನೋಂದಾಯಿಸಿಕೊಳ್ಳಲು ಅವಕಾಶವಿದೆ ಎಂದು ತಿಳಿಸಿದರು.
ನೋಂದಣಿಗೆ ಅರ್ಹರಲ್ಲದವರು:
ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಯಾವುದೇ ಭೂಮಿ ಹೊಂದಿರುವ ಸಂಘ ಅಥವಾ ಸಂಸ್ಥೆಗಳು; ಮಾಜಿ ಮತ್ತು ಹಾಲಿ ಸಾಂವಿಧಾನಿಕ ಹುದ್ದೆಗಳನ್ನು ಹೊಂದಿರುವವರು; ಮಾಜಿ ಮತ್ತು ಹಾಲಿ ಸಚಿವರು/ರಾಜ್ಯ ಸಚಿವರು/ಲೋಕಸಭಾ ಸದಸ್ಯರು/ರಾಜ್ಯ ಸಭಾ ಸದಸ್ಯರು/ರಾಜ್ಯ ವಿಧಾನ ಸಭಾ ಸದಸ್ಯರು/ವಿಧಾನ ಪರಿಷತ್ತಿನ ಸದಸ್ಯರು/ನಗರಸಭೆ ಅಧ್ಯಕ್ಷರು/ಪುರ ಸಭೆ ಅಧ್ಯಕ್ಷರು/ ಜಿಲ್ಲಾ ಪಂಚಾಯತಿ ಅಧ್ಯಕ್ಷರು; ನಿವೃತ್ತ ಹಾಗೂ ಹಾಲಿ ಸೇವೆಯಲ್ಲಿರುವ ರಾಜ್ಯ/ಕೇಂದ್ರ ಸರ್ಕಾರಗಳ ಖಾಯಂ ನೌಕರರು; ಸಚಿವಾಲಯ ಕಚೇರಿ, ಇಲಾಖೆ, ಕ್ಷೇತ್ರ ಕಚೇರಿ, ಕೇಂದ್ರ/ರಾಜ್ಯ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು/ ಅಂಗ ಸಂಸ್ಥೆಗಳು/ ಸ್ವಾಯತ್ತ ಸಂಸ್ಥೆಗಳ ಅಧಿಕಾರಿಗಳು ಹಾಗೂ ನೌಕರರು/ಸ್ಥಳೀಯ ಸಂಸ್ಥೆಗಳ ಖಾಯಂ ನೌಕರರು(ಗ್ರುಪ್ ಡಿ/4ನೇ ವರ್ಗ/ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹೊರತುಪಡಿಸಿ); 10,000 ರೂ. ಅಥವಾ ಹೆಚ್ಚಿನ ಮೊತ್ತ ಪಡೆಯುತ್ತಿರುವ ವಯೋ ನಿವೃತ್ತ/ನಿವೃತ್ತ ಪಿಂಚಣಿದಾರರು(ಗ್ರುಪ್ ಡಿ/4ನೇ ವರ್ಗ/ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹೊರತುಪಡಿಸಿ);
ಕಳೆದ ಸಾಲಿನ ಆದಾಯ ತೆರಿಗೆ ಪಾವತಿದಾರರು; ವೈದ್ಯ, ಅಭಿಯಂತರ, ವಕೀಲ, ಲೆಕ್ಕ ಪರಿಶೋಧಕರು, ವಾಸ್ತುಶಿಲ್ಪದಂತಹ ವೃತ್ತಿಪರರು, ವೃತ್ತಿಪರ ಸಂಸ್ಥೆಯಲ್ಲಿ ನೋಂದಾಯಿಸಿಕೊಂಡು ವೃತ್ತಿ ಕೈಗೊಳ್ಳುತ್ತಿರುವವರ ರೈತ ಕುಟುಂಬಗಳು ಈ ಯೋಜನೆಯ ಫಲಾನುಭವಿಯಾಗಲು ಅರ್ಹರಿರುವುದಿಲ್ಲ ಎಂದು ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ ಮಾತನಾಡಿ ಅಧಿಕಾರಿಗಳು ನೋಂದಣಿ ಕಾರ್ಯಕ್ಕೆ ಸ್ಥಳೀಯ ಸ್ವ-ಸಹಾಯ ಗುಂಪು ಹಾಗೂ ರೈತರ ಸಂಘಗಳ ನೆರವು ಪಡೆದರೆ ನೋಂದಣಿ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಬಹುದೆಂದರಲ್ಲದೆ ಯೋಜನೆ ಕುರಿತು ಗ್ರಾಮಗಳಲ್ಲಿ ಟಾಂ-ಟಾಂ ಹೊಡೆಸುವ ಮೂಲಕ ರೈತರಿಗೆ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್ ಮಾತನಾಡಿ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಿಬ್ಬಂದಿಗಳಿಗೆ ಅಗತ್ಯ ತರಬೇತಿ ನೀಡಿದರಲ್ಲದೆ ತಾಂತ್ರಿಕ ಸಮಸ್ಯೆಗಳಿದ್ದಲ್ಲಿ ಕೂಡಲೇ ಬಗೆಹರಿಸಿಕೊಳ್ಳಬೇಕೆಂದು ಸೂಚನೆ ನೀಡಿದರು.
ಕೃಷಿ ಜಂಟಿ ನಿರ್ದೇಶಕ ಜಯಸ್ವಾಮಿ ಮಾತನಾಡಿ ಜಿಲ್ಲೆಯಲ್ಲಿರುವ 515000 ರೈತರ ಪೈಕಿ ಈಗಾಗಲೇ 81000 ರೈತರು ನೋಂದಣಿಯಾಗಿದ್ದು, 20029 ರೈತರ ಖಾತೆಗೆ ಪ್ರೋತ್ಸಾಹ ಧನ ವರ್ಗಾವಣೆಯಾಗಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಜ್ಯೋತಿಗಣೇಶ್, ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
