ಬೆಂಗಳೂರು ಉತ್ತರ ದಲ್ಲಿ ಮತ್ತೆ ಚಿಗುರಿದ ಕಾಂಗ್ರೆಸ್

ಬೆಂಗಳೂರು

           ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ರಾಜ್ಯದಲ್ಲಿ ಅತಿ ಹೆಚ್ಚು ಮತದಾರರನ್ನು ಹೊಂದಿರುವ ಕ್ಷೇತ್ರ. ಕಳೆದ ಒಂದೂವರೆ ದಶಕದ ಹಿಂದೆ ಕಾಂಗ್ರೆಸ್‍ನ ಭದ್ರಕೋಟೆಯಾಗಿತ್ತು. ಕೇಂದ್ರ ಮಾಜಿ ಸಚಿವ ಜಾಫರ್ ಷರೀಫ್ ನಿಧನದ ನಂತರ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಹೇಳಿಕೊಳ್ಳುವಂತಹ ಕಾಂಗ್ರೆಸ್ ನಾಯಕರು ಇಲ್ಲ. 2004 ರಿಂದ ಸತತವಾಗಿ ಕ್ಷೇತ್ರವನ್ನು ಬಿಜೆಪಿ ಗೆದ್ದುಕೊಂಡು ಬರುತ್ತಿತ್ತು. 2013 ರ ವಿಧಾನಸಭಾ ಚುನಾವಣೆ ಬಳಿಕ ಬಿಜೆಪಿ ಕುಂಠಿತಗೊಳ್ಳುತ್ತಾ ಹೋಗಿದೆ. 2018 ರಲ್ಲಿ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಐವರು ಕೈ ಶಾಸಕರು ಇದ್ದಾರೆ. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತೆ ಚಿಗುರತೊಡಗಿದೆ.

          ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಮೇಲೆ ಕಾಂಗ್ರೆಸ್-ಜೆಡಿಎಸ್ ಎರಡೂ ಪಕ್ಷಗಳು ಕಣ್ಣಿಟ್ಟಿವೆ. ಕ್ಷೇತ್ರದಲ್ಲಿ 6 ಲಕ್ಷ ಒಕ್ಕಲಿಗ ಮತಗಳಲ್ಲದೆ, ಪರಿಶಿಷ್ಟ, ಕುರುಬ, ಅಲ್ಪಸಂಖ್ಯಾತ ಮತಗಳು ಸೇರಿ 6 ಲಕ್ಷ ಮತಗಳಿವೆ. ಸಾಂಪ್ರದಾಯಿಕವಾಗಿ ಕಾಂಗ್ರೆಸ್ ಮತಗಳಾಗಿದ್ದ ಇವುಗಳು 20004 ರಿಂದ 2014 ರವರೆಗೆ ಬಿಜೆಪಿಗೆ ಹೋಗಿದ್ದವು. ಇದೀಗ ಹಳೆಯ ಮತಗಳನ್ನು ಪಡೆಯಲು ಕಾಂಗ್ರೆಸ್ ಮುಂದಾಗಿದ್ದು, ಸೂಕ್ತ ಅಭ್ಯರ್ಥಿಯ ಆಯ್ಕೆಯಲ್ಲಿದೆ.

           ಒಕ್ಕಲಿಗ ಮತಗಳೇ ಹೆಚ್ಚಾಗಿರುವುದರಿಂದ ಜೆಡಿಎಸ್ ವರಿಷ್ಠ ಎಚ್.ಡಿ.ದೇವೆಗೌಡ ಕ್ಷೇತ್ರದಿಂದ ಸ್ಪರ್ಧಿಸುತ್ತಾರಂತೆ ಎನ್ನುವ ಮಾತುಗಳು ಕೇಳಿ ಬಂದಿದೆಯಾದರೂ, ಕ್ಷೇತ್ರವನ್ನು ಕಾಂಗ್ರೆಸ್‍ಗೆ ಉಳಿಸಿಕೊಳ್ಳಲು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮುಂದಾಗಿದ್ದಾರೆ. ಅಹಿಂದ ಅಸ್ತ್ರದ ಜೊತೆ ಒಕ್ಕಲಿಗ ಅಸ್ತ್ರವನ್ನು ಸಹ ಬಳಸಿಕೊಂಡು ಇವರು ತಂತ್ರ ರೂಪಿಸುತ್ತಿದ್ದಾರೆ. ಹೀಗಾಗಿ ತಮ್ಮ ಆಪ್ತ ಎಚ್.ಎಂ.ರೇವಣ್ಣಗೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಕೊಡಿಸಲು ಸಿದ್ದರಾಮಯ್ಯ ಕಸರತ್ತು ಆರಂಭಿಸಿದ್ದಾರೆ ಎನ್ನಲಾಗಿದೆ.

           ಎಚ್.ಎಂ.ರೇವಣ್ಣ ಸಹ ಸಚಿವಾಕಾಂಕ್ಷಿಯಾಗಿದ್ದು, ಮೇಲ್ಮನೆ ಕೋಟಾದಿಂದ ಸಚಿವ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದರು. ಈ ಮಧ್ಯೆ ಮಾಜಿ ಶಾಸಕ ಚೆಲುವರಾಯಸ್ವಾಮಿ ಕೂಡ ಆಕಾಂಕ್ಷಿಯಾಗಿದ್ದು, ಲಾಬಿನಡೆಸಿದ್ದಾರೆ. ಆದರೆ ದೇವೆಗೌಡರು ಚೆಲುವರಾಯಸ್ವಾಮಿಗೆ ಒಪ್ಪಿಗೆ ಸೂಚಿಸುವುದು ಬಹುತೇಕ ಕಡಿಮೆ. ಹೀಗಾಗಿ ಎಚ್.ಎಂ.ರೇವಣ್ಣ ಸ್ಪರ್ಧೆಗೆ ದೇವೆಗೌಡರ ಒಪ್ಪಿಗೆಯನ್ನು ಸಿದ್ದರಾಮಯ್ಯ ಕೇಳಲಿದ್ದಾರೆ. ಲೋಕಸಭಾ ಚುನಾವಣೆಗೆ ಮೈತ್ರಿ ಅಭ್ಯರ್ಥಿ ಆಯ್ಕೆ ತಂತ್ರಗಳನ್ನು ಸಿದ್ದರಾಮಯ್ಯ-ದೇವೆಗೌಡ ಇಬ್ಬರೂ ನಿರ್ಧರಿಸುತ್ತಿದ್ದು, ಬೆಂಗಳೂರು ಉತ್ತರ ಕ್ಷೇತ್ರ ಯಾರ ಪಾಲಾಗಲಿದೆ ಅನ್ನುವುದು ಕುತೂಹಲ ಮೂಡಿಸಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap