ಹಾವೇರಿ
ಮಳೆ ಆರಂಭಕ್ಕೂ ಮುನ್ನವೇ ಡೆಂಗ್ಯೂ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳ ಕುರಿತಂತೆ ಆರೋಗ್ಯ, ಶಿಕ್ಷಣ, ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಆಡಳಿತಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸುವಂತೆ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ಕೆ.ಲೀಲಾವತಿ ಅವರು ಸೂಚಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ರಾಷ್ಟ್ರೀಯ ಡೆಂಗ್ಯೂ ನಿಯಂತ್ರಣ ಮುನ್ನೆಚ್ಚರಿಕೆ ಕುರಿತಂತೆ ಶುಕ್ರವಾರ ಅಂತರ ಇಲಾಖೆ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜೂನ್ ಮತ್ತು ಅಕ್ಟೋಬರ್ ಡೆಂಗ್ಯೂ ಹರಡುವಿಕೆಗೆ ಪ್ರಶಸ್ತ ಕಾಲವಾಗಿದೆ. ಶುದ್ಧ ನೀರಿನ ನಿಲ್ಲುವಿಕೆಯಿಂದ ಡೆಂಗ್ಯೂ ಜ್ವರಕ್ಕೆ ಕಾರಣವಾಗುವ ಈಡೀಸ್ ಈಜಿಪ್ತಿ ಸೊಳ್ಳೆಗಳು ಉತ್ಪತ್ತಿಯಾಗುತ್ತದೆ. ಈ ಸೊಳ್ಳೆಗಳ ನಿಯಂತ್ರಣಕ್ಕೆ ವಿವಿಧ ಇಲಾಖೆಗಳ ಪಾತ್ರ ಪ್ರಮುಖವಾಗಿವೆ ಎಂದು ಅವರು ತಿಳಿಸಿದರು.
ಡೆಂಗ್ಯೂ ಜ್ವರಕ್ಕೆ ಯಾವುದೇ ನಿರ್ಧಿಷ್ಟ ಔಷಧಿ ಅಥವಾ ಲಸಿಕೆ ಇರುವುದಿಲ್ಲ. ಮುನ್ನೆಚ್ಚರಿಕೆ ಕ್ರಮದಿಂದ ಡೆಂಗ್ಯೂ ನಿಯಂತ್ರಣ ಮಾಡಬಹುದು. ಯಾವುದೇ ಗಾಬರಿಗೆ ಒಳಗಾಗದೆ ಜ್ವರದ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಸಕಾಲಕ್ಕೆ ಚಿಕಿತ್ಸೆ ಪಡೆದುಕೊಳ್ಳಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಮಳೆಯ ನೀರು, ನಲ್ಲಿ ನೀರು ನಿಲ್ಲದಂತೆ ಕ್ರಮವಹಿಸಬೇಕು. ಸಂಗ್ರಹಿಸಿಟ್ಟ ಶುದ್ಧ ನೀರು ಪದೇ ಪದೇ ಬದಲಾಯಿಸಬೇಕು. ನಿಂತ ಶುದ್ಧ ನೀರಿನಲ್ಲಿ ಹಗಲು ವೇಳೆಯಲ್ಲಿ ಡೆಂಗ್ಯು ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಈ ಸೊಳ್ಳೆಗಳ ಸಂತಾನಹರಣವೇ ಡೆಂಗ್ಯೂ ನಿಯಂತ್ರಣಕ್ಕೆ ಮುಖ್ಯವಾಗುತ್ತದೆ. ಈ ಕುರಿತಂತೆ ಸಮುದಾಯದ ಜನರಿಗೆ ವ್ಯಾಪಕ ಅರಿವು ಮತ್ತು ಜಾಗೃತಿ ಮೂಡಿಸುವಂತೆ ಸಲಹೆ ನೀಡಿದರು.
ಶಾಲೆ ಮತ್ತು ಅಂಗನವಾಡಿ ಪ್ರದೇಶದ ಸುತ್ತಮುತ್ತ ಸೊಳ್ಳೆಮುಕ್ತ ವಾತಾವರಣ ಕಲ್ಪಿಸುವುದು, ಶಾಲಾ ಮಕ್ಕಳಿಗೆ ಮಳೆಗಾಲದ ಸಂದರ್ಭದಲ್ಲಿ ಮೈತುಂಬ ಉಡುಪು ಧರಿಸುವಂತೆ ಕ್ರಮವಹಿಸುವುದು, ಶಾಲಾ ಮಕ್ಕಳ ಮೂಲಕ ಪೋಷಕರಿಗೆ ಡೆಂಗ್ಯೂ ಮುನ್ನೆಚ್ಚರಿಕೆ ಕುರಿತಂತೆ ಜಾಗೃತಿ ಮೂಡಿಸಲು ಶಿಕ್ಷಕರು ಹಾಗೂ ಮುಖ್ಯೋಪಾದ್ಯಾಯರು ಕ್ರಮವಹಿಸಬೇಕು. ಈ ಕುರಿತಂತೆ ಶಿಕ್ಷಣ ಇಲಾಖಾ ಅಧಿಕಾರಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳು ಸಭೆ ಕರೆದು ಜಾಗೃತಿ ಮೂಡಿಸಲು ಸಿ.ಇ.ಓ. ಕೆ.ಲೀಲಾವತಿ ಅವರು ಸೂಚಿಸಿದರು.
ಕಲ್ಲು ಕೋರೆಗಳಲ್ಲಿ ಮಳೆಬಿದ್ದು ನೀರು ಸಂಗ್ರಹವಾಗಿ ಡೆಂಗ್ಯು ಉತ್ಪಾದನೆ ಹಾಗೂ ಹರಡುವಿಕೆಗೆ ಕಾರಣವಾಗುತ್ತದೆ. ಡೆಂಗ್ಯೂ ಮುಕ್ತ ಕೋರೆಗಳನ್ನಾಗಿ ಪರಿವರ್ತಿಸಲು ಹಾಗೂ ತಮ್ಮ ಕಲ್ಲು ಗಣಿಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರಿಗೆ ಸೊಳ್ಳೆಪರದೆ ವಿತರಣೆ ಸೇರಿದಂತೆ ಹಲವು ಮುಂಜಾಗ್ರತಾ ಕ್ರಮಕೈಗೊಳ್ಳಲು ಸೂಚಿಸುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಹಾಗೂ ಗ್ರಾಮ ಪಂಚಾಯತಿಗಳಲ್ಲಿ ಘನ ತ್ಯಾಜ್ಯವಸ್ತುಗಳಲ್ಲಿ ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿಮಾಡುವುದು, ಗಟಾರುಗಳಲ್ಲಿ ನೀರು ನಿಲ್ಲದಂತೆ ಕ್ರಮವಹಿಸುವುದು, ಸಿವಿಕ್ ಬೈಲಾವನ್ನು ಎಲ್ಲ ಕಟ್ಟಡ ನಿರ್ಮಾಣ ಪ್ರದೇಶಗಳಿಗೆ ಅನ್ವಯಿಸುವುದು, ನೀರಿನ ಪೈಪ್ಗಳನ್ನು ಸಕಾಲಕ್ಕೆ ದುರಸ್ತಿಗೊಳಿಸುವುದು, ಮಳೆ ನೀರು ರಸ್ತೆಯ ತಗ್ಗುಗಳಲ್ಲಿ ನಿಲ್ಲದಂತೆ ಕ್ರಮವಹಿಸುವುದು, ಸಕಾಲಕ್ಕೆ ನೀರಿನ ಸಂಗ್ರಹ ತೊಟ್ಟಿಗಳ ಸ್ವಚ್ಛಮಾಡುವುದು ಸೇರಿದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳ ಮೂಲಕ ಡೆಂಗ್ಯೂ ನಿಯಂತ್ರಣಕ್ಕೆ ಆದ್ಯತೆಯ ಮೇಲೆ ಕಾರ್ಯನಿರ್ವಹಿಸುವಂತೆ ಅವರು ಸೂಚಿಸಿದರು.
ಕೃಷಿ ಹೊಂಡಗಳಲ್ಲಿ ಲಾರ್ವಾ ಮೀನು ಬಿಡುವುದು ಹಾಗೂ ಲಾರ್ವಾ ಮೀನುಗಳ ಸಂಗ್ರಹಣೆ ಮತ್ತು ಸಂತಾನೋತ್ಪತ್ತಿಗೆ ಆದ್ಯತೆ ನೀಡುವಂತೆ ಕೃಷಿ ಮತ್ತು ಮೀನುಗಾರಿಕಾ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಆಸ್ಪತ್ರೆ ಒಳಗೊಂಡಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಒಳ ರೋಗಿಗಳಿಗೆ ಕಡ್ಡಾಯವಾಗಿ ಸೊಳ್ಳೆ ಪರೆದಗಳ ವಿತರಣೆ, ಶಾಲಾ-ಕಾಲೇಜುಗಳ ಶಿಕ್ಷಕರಿಗೆ, ಪಿಡಿಓ ಹಾಗೂ ಗ್ರಾಮ ಪಂಚಾಯತಿ ಸದಸ್ಯರುಗಳಿಗೆ ಡೆಂಗ್ಯೂ ಕುರಿತಂತೆ ನಿರಂತರ ಆರೋಗ್ಯ ಶಿಕ್ಷಣ ನೀಡುವುದು, ಲಾರ್ವಾ ಸಮೀಕ್ಷೆ ಹಾಗೂ ಸೊಳ್ಳೆ ಉತ್ಪತ್ತಿಗಳ ನಿರ್ಮೂಲನೆ ಕುರಿತಂತೆ ಮೇಲ್ವಿಚಾರಣೆಗೆ ತಾಲೂಕಾ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ನಿರುಪಯುಕ್ತ ಟಾಯರ್ ಹಾಗೂ ಎಳೆ ನೀರಿನ ಚಿಪ್ಪಿನಲ್ಲಿ ಮಳೆ ನೀರು ಸಂಗ್ರಹವಾಗಿ ಡೆಂಗ್ಯು ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುತ್ತವೆ. ಈ ಕುರಿತಂತೆ ಸೂಕ್ತ ನಿರ್ವಹಣೆಗೆ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ಕಂಟ್ರೋಲರ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರಿಗೆ ಸೂಕ್ತ ನಿರ್ದೇಶನ ನೀಡಿದರು.
ಜಿಲ್ಲಾ ರೋಗವಾಹನ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಸುಹಿಲ್ ಹರವಿ ಅವರು ಸಭೆಗೆ ಮಾಹಿತಿ ನೀಡಿ, ಜಿಲ್ಲೆಯಲ್ಲಿ ಕಳೆದ ವರ್ಷ 211 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದ್ದವು. ಪ್ರಸಕ್ತ 2019ರ ಜನವರಿ ಯಿಂದ ಎಪ್ರಿಲ್ವರೆಗೆ 22 ಪ್ರಕರಣಗಳು ಪತ್ತೆಯಾಗಿವೆ. ಡೆಂಗ್ಯೂನಿಂದ ಕಳೆದ ಎರಡು ವರ್ಷದಿಂದ ಯಾವುದೇ ಮರಣ ಸಂಭವಿಸಿಲ್ಲ. ಮುನ್ನೆಚ್ಚರಿಕೆ ಕ್ರಮಗಳೇ ಡೆಂಗ್ಯೂ ನಿಯಂತ್ರಣಕ್ಕೆ ಒಳ್ಳೆಯ ಔಷಧಿ.
ಡೆಂಗ್ಯೂ ವೈರಸ್ನಿಂದ ಜ್ವರ ಹರಡುತ್ತದೆ. ನಾಲ್ಕು ಬಗೆಯ ವೈರಸ್ಗಳು ಡೆಂಗ್ಯೂಗೆ ಕಾರಣವಾಗಿವೆ. ಈಡೀಸ್ ಈಜಿಪ್ತಿ ಸೊಳ್ಳೆ ಕಚ್ಚುವುದರಿಂದ ಈ ರೋಗ ಹರಡುತ್ತದೆ. ರೋಗವಾಹಕವಾದ ಈ ಸೊಳ್ಳೆಗಳ ನಿಯಂತ್ರಣಕ್ಕೆ ಎಲ್ಲ ಇಲಾಖೆಗಳು ಮುನ್ನೆಚ್ಚರಿಕೆ ವಹಿಸಬೇಕು. ಜೂನ್ನಿಂದ ಅಕ್ಟೋಬರ್ವರೆಗೆ ಈ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ ಎಂದು ವಿವರಿಸಿದರು.
ವಿಪರಿತ ಜ್ವರ, ದೇಹದ ಮೇಲೆ ಸಣ್ಣ ಸಣ್ಣ ಗಂದೆಗಳು, ಕಣ್ಣುಗಳ ಹಿಂಭಾಗ, ಮಾಂಸಖಂಡ ಹಾಗೂ ಕೀಲುಗಳಲ್ಲಿ ವಿಪರಿತ ನೋವು, ತಲೆನೋವು, ಬಾಗಿ, ಮೂಗು, ವಸಡುಗಳಿಂದ ರಕ್ತಸ್ರಾವ ಡೆಂಗ್ಯುವಿನ ಲಕ್ಷಣವಾಗಿವೆ. ರಕ್ತ ಪರೀಕ್ಷೆ ಮಾಡಿಸುವುದರ ಮೂಲಕ ಈ ರೋಗ ಪತ್ತೆಮಾಡಬಹುದು ಎಂದು ವಿವರಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಘವೇಂದ್ರಸ್ವಾಮಿ ಹಾಗೂ ವಿವಿಧ ತಾಲೂಕು ಆರೋಗ್ಯಾಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು, ಶಿಕ್ಷಣ, ಭೂ ಮತ್ತು ಗಣಿ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ