ತುಮಕೂರು
ನನ್ನ ಮಗ ಫಾರಿನ್‍ನಲ್ಲಿ ಕಲಿಯುತ್ತಿದ್ದಾನೆ, ನಮ್ಮ ಸಂಬಂಧಿಕರು ವಿದೇಶದಲ್ಲಿ ಉದ್ಯೋಗಿಗಳಾಗಿದ್ದಾರೆ ಎಂದೆಲ್ಲಾ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ ಜನ ಇಂದು ನಾನಿಲ್ಲೇ ಇದ್ದೇನೆ ಎಂದು ಹೇಳಿಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿದೆ. ಕೇವಲ ಒಂದೆರಡು ತಿಂಗಳ ಅವಧಿಯಲ್ಲಿಯೆ ಫಾರಿನ್‍ನಲ್ಲಿದ್ದವರು ದಡಬಡಾಯಿಸಿ ತಮ್ಮ ಊರು ತಲುಪಿದ್ದಾರೆ. ಮತ್ತೆ ಕೆಲವರು ಬರಲಾಗದೆ ಒದ್ದಾಡುತ್ತಿದ್ದಾರೆ.
ಇದೆಂತಹ ವಿಪರ್ಯಾಸ !
ಪ್ರೆಸ್ಟೀಜ್ ಲೆಕ್ಕಾಚಾರಗಳು ತಲೆಕೆಳಗಾಗುತ್ತಿವೆ. ಬದುಕಿದರೆ ಸಾಕು ಎಂಬ ದಯನೀಯ ಸ್ಥಿತಿ ಬಂದೊದಗಿದೆ. ಅದೆಲ್ಲಿತ್ತೋ ಕರೊನಾ ಎಂಬ ಮಾರಕ ವೈರಾಣು, ಬಡವ-ಬಲ್ಲಿದ ಎಂಬ ಭೇದವಿಲ್ಲದೆ ಎಲ್ಲರನ್ನೂ ಸುತ್ತುವರಿಯುತ್ತಿದ್ದು, ಅತ್ಯಂತ ಆತಂಕದ ವಾತಾವರಣ ನಿರ್ಮಾಣ ಮಾಡಿದೆ. ವಿಶೇಷವೆಂದರೆ ಯಾರೆಲ್ಲ ಹೊರ ರಾಷ್ಟ್ರಗಳಲ್ಲಿ ಇದ್ದರೊ ಅಂತಹವರಿಗೆ ಈ ವೈರಾಣು ತಗಲುತ್ತಿದ್ದು, ಅಲ್ಲಿಂದ ಬಂದವರಿಂದಲೆ ರೋಗಾಣು ಹರಡುತ್ತಿರುವುದರಿಂದ ಇಲ್ಲಿರುವ ಸ್ಥಳೀಯರೆಲ್ಲರೂ ಫಾರಿನ್‍ನಿಂದ ಬಂದವರನ್ನು ಅನುಮಾನಿಸಿ ನೋಡುವ ಪರಿಸ್ಥಿತಿ ಬಂದೊದಗಿದೆ.
ಅಷ್ಟೆ ಅಲ್ಲ, ಅವರನ್ನು ಹತ್ತಿರಕ್ಕೂ ಸುಳಿಯದಂತೆ ನೋಡಿಕೊಳ್ಳುತ್ತಿದ್ದಾರೆ. ಎಷ್ಟೇ ಪರಿಚಿತರು ಇರಲಿ, ಹೊರ ರಾಷ್ಟ್ರಗಳಿಂದ ಬಂದಿದ್ದಾರೆಂದರೆ ಅವರ ಬಗ್ಗೆ ಹುಷಾರ್ ಎನ್ನುವಂತಹ ಎಚ್ಚರಿಕೆ ರವಾನೆಯಾಗುತ್ತಿದೆ. ಇದರಲ್ಲಿ ಸತ್ಯವೂ ಅಡಗಿದೆ. ಚೀನಾದಿಂದ ಆರಂಭವಾದ ಕರೋನಾ ವೈರಸ್ ಇಂದು ವಿಶ್ವದಗಲ ಹರಡಿಕೊಂಡಿದೆ. ಎಲ್ಲ ರಾಷ್ಟ್ರಗಳನ್ನೂ ತನ್ನ ಕಬಂಧ ಬಾಹುವಿನಡಿಯಲ್ಲಿ ಸೆಳೆದುಕೊಳ್ಳುತ್ತಿರುವ ಕಾರಣ ಸ್ಥಳೀಯರೆಲ್ಲ ವಿದೇಶಿಗರನ್ನು ಕೆಕ್ಕರಿಸಿ ನೋಡುವಂತಹ ಪರಿಸ್ಥಿತಿ ಎದುರಾಗಿದೆ.
ತಮ್ಮ ಮನೆಯ ನೆರೆಹೊರೆಯಲ್ಲಿ ಯಾರಾದರೂ ವಿದೇಶಗಳಿಂದ ಬಂದಿದ್ದಾರೆಂದರೆ, ಬಡಾವಣೆಯಲ್ಲಿ ಹೊಸಬರು ಆಗಮಿಸಿದ್ದಾರೆಂದರೆ, ಸುತ್ತಮುತ್ತಲಿನ ಜನರಲ್ಲಿ ಗುಸುಗುಸು ಆರಂಭವಾಗುತ್ತಿದೆ. ಅದೆಷ್ಟೋ ಕಡೆಗಳಲ್ಲಿ ಆಗ ತಾನೆ ವಿದೇಶದಿಂದ ಬಂದವರನ್ನು ಸೇರಿಸದೆ ಓಡಿಸಿರುವ ಉದಾಹರಣೆಗಳೂ ಇವೆ. ಆದರೆ ಇದೆಲ್ಲಕ್ಕೂ ಪರಿಹಾರವಿದೆ. ವಿದೇಶದಿಂದ ಬಂದ ಎಲ್ಲರಿಗೂ ವೈರಾಣು ಇರಲಿಕ್ಕೆ ಸಾಧ್ಯವಿಲ್ಲ. ಅಲ್ಲಿಂದ ಬರುವ ಪ್ರಯಾಣಿಕರನ್ನು ಪರೀಕ್ಷಿಸಿದ ನಂತರವೆ ಹೊರಗೆ ಕಳುಹಿಸಲಾಗುತ್ತಿದೆ. ಆದರೂ ಯಾರೆ ಆಗಲಿ ಹೊರಗಿನಿಂದ ಬರುವವರು ಸೂಕ್ತ ನಿಗಾ ವಹಿಸಬೇಕಾದ ಅಗತ್ಯವಂತೂ ಇದ್ದೆ ಇದೆ. ಸಂಬಂಧಿಸಿದ ವ್ಯಾಪ್ತಿಯ ಆರೋಗ್ಯ ಇಲಾಖೆಯಲ್ಲಿ ತಪಾಸಣೆ ಮಾಡಿಸಿಕೊಳ್ಳುವ ನೈತಿಕ ಹೊಣೆಗಾರಿಕೆಯನ್ನು ಮರೆಯಬಾರದು.
ಪಟ್ಟಣಗಳಲ್ಲಿ ಒಂದು ರೀತಿಯಾದರೆ ಗ್ರಾಮೀಣ ಪ್ರದೇಶಗಳಲ್ಲಿ ಮತ್ತೊಂದು ರೀತಿಯ ಸನ್ನಿವೇಶ ಎದುರಾಗಿದೆ. ಹಳ್ಳಿಗಳನ್ನು ಬಿಟ್ಟು ಪಟ್ಟಣ ಸೇರಿದ ಅನೇಕರು ಇಂದು ಹಳ್ಳಿಗಳತ್ತ ಮುಖ ಮಾಡುತ್ತಿದ್ದಾರೆ. ಒಂದು ಕಾಲಕ್ಕೆ ಹಳ್ಳಿಯನ್ನು ಅಸಹ್ಯಪಟ್ಟುಕೊಂಡವರು ಈಗ ಅದೇ ಹಳ್ಳಿಗೆ ತೆರಳುತ್ತಿದ್ದಾರೆ. ಹಬ್ಬ ಹರಿದಿನಗಳಲ್ಲಿ ಮಾತ್ರವೆ ಒಂದೆರಡು ದಿನ ಹೋಗಿ ಬರುವ ಪರಿಪಾಠ ಇಟ್ಟುಕೊಂಡವರು, ಈಗ ವಾರಗಟ್ಟಲೆ ಕಾಲ ಕಳೆಯಲು ಮನಸ್ಸು ಮಾಡುತ್ತಿದ್ದಾರೆ. ಅಪ್ಪಿತಪ್ಪಿಯೂ ಮಕ್ಕಳನ್ನು ಹಳ್ಳಿಯ ಜನರೊಂದಿಗೆ ಬೆರೆಯಲು ಬಿಡದವರು, ಇಂದು ಮಕ್ಕಳೊಂದಿಗೆ ಗ್ರಾಮ ಪ್ರವೇಶ ಮಾಡಿದ್ದಾರೆ.
ಈಗ ಹಳ್ಳಿಗರು ಇಂತಹವರನ್ನು ಅನುಮಾನಿಸಿ ನೋಡುವ ಕಾಲ ಎದುರಾಗಿದೆ. ಪಟ್ಟಣಗಳಲ್ಲಿರುವವರಿಗೆ ವಿದೇಶದಿಂದ ಆಗಮಿಸುವವರ ಭೀತಿ ಎದುರಾದರೆ, ಹಳ್ಳಿಗಳಲ್ಲಿ ಇರುವವರಿಗೆ ಪಟ್ಟಣಗಳಿಂದ ಬರುವವರ ಭೀತಿ ಉಂಟಾಗುತ್ತಿದೆ. ಇದೆಂಥ ಕಾಲವಯ್ಯಾ ಎಂಬಂತಹ ಸ್ಥಿತಿ ಇದು.
ಕಳೆದ ವಾರ ಹಿರಿಯೂರು ತಾಲ್ಲೂಕಿನ ಗ್ರಾಮವೊಂದಕ್ಕೆ ವಿದೇಶದಿಂದ ಓರ್ವ ವ್ಯಕ್ತಿ ಬಂದಿದ್ದಾರೆ. ಸ್ಥಳೀಯರು ಅವರ ಬರುವಿಕೆಯನ್ನು ವಿರೋಧಿಸಿದ್ದಾರೆ. ಕೊನೆಗೂ ಗ್ರಾಮದೊಳಗೆ ಅವರನ್ನು ಬಿಟ್ಟುಕೊಂಡಿಲ್ಲ. ಅನಿವಾರ್ಯವಾಗಿ ಅವರು ಬೆಂಗಳೂರು ಸೇರಿದ್ದಾರೆ. ನಮಗೆ ಯಾವುದೆ ರೋಗವಿಲ್ಲ, ಅಂತಹ ಲಕ್ಷಣಗಳೂ ನಮ್ಮಲ್ಲಿಲ್ಲ ಎಂದು ಹೇಳಿಕೊಂಡರೂ ಕೇಳುವಂತಹ ಪರಿಸ್ಥಿತಿ ಇರಲಿಲ್ಲ. ಇಂತಹ ಪ್ರಸಂಗಗಳು ಅಲ್ಲಲ್ಲಿ ಕಂಡುಬರುತ್ತಿವೆ.
ಕರೋನಾ ವೈರಸ್ ಒಂದು ಸಾಂಕ್ರಾಮಿಕ ರೋಗವಾಗಿದ್ದು, ಇದು ಗಾಳಿಯಲ್ಲಿ ಹರಡುವುದಿಲ್ಲ. ಬದಲಿಗೆ ಮನುಷ್ಯರ ಸ್ಪರ್ಶದಿಂದ ಹರಡುತ್ತದೆ ಹಾಗೂ ಸೋಂಕಿತ ವ್ಯಕ್ತಿ ಮುಟ್ಟಿದ ವಸ್ತುಗಳನ್ನು ಮತ್ತೊಬ್ಬರು ಮುಟ್ಟಿದರೆ ಅದರಿಂದಲೂ ಸೋಂಕು ಹರಡುತ್ತದೆ ಎಂಬುದು ವ್ಯಾಪಕವಾಗುತ್ತಿದ್ದಂತೆಯೆ ಈಗ ಜನತೆಯಲ್ಲಿ ಜಾಗೃತಿ ಹೆಚ್ಚುತ್ತಿದೆ. ಸಮೂಹ ಸಂಪರ್ಕದಿಂದ ದೂರವೆ ಉಳಿಯುತ್ತಿದ್ದಾರೆ. ಹ್ಯಾಂಡ್ ಶೇಕ್ ಸಂಸ್ಕತಿಯನ್ನು ಸ್ವಲ್ಪ ದಿನಗಳ ಕಾಲ ಮುಂದೂಡುತ್ತಿದ್ದಾರೆ. ಇವೆಲ್ಲವೂ ಇತ್ತೀಚಿನ ಕೆಲವು ಬದಲಾವಣೆಗಳು. ಅನಿವಾರ್ಯ ಮತ್ತು ಅಗತ್ಯ ಕೂಡ.
ತಮ್ಮ ಮಕ್ಕಳನ್ನು ವಿದೇಶಗಳಿಗೆ ಕಳುಹಿಸಿರುವ ಪೋಷಕರು ಇಂದು ಹೆಚ್ಚು ಆತಂಕದಲ್ಲಿದ್ದಾರೆ. ಅಲ್ಲಿರುವ ಮಕ್ಕಳು ಇಲ್ಲಿಗೆ ಬಂದಿದ್ದರೆ ಅವರೂ ತಪಾಸಣೆ ಮಾಡಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಜೊತೆಗೆ ಅವರು ಸೋಂಕಿತ ವ್ಯಕ್ತಿಯ ಸಂಪರ್ಕ ಹೊಂದಿ ಬಂದಿದ್ದಾರೆಯೆ ಎಂಬ ಅನುಮಾನಗಳು ಇದ್ದೆ ಇವೆ. ಮತ್ತೊಂದು ಕಡೆ ಅದೆಷ್ಟೊ ಮಂದಿ ಇಂದಿಗೂ ಹೊರರಾಷ್ಟ್ರಗಳಲ್ಲಿಯೆ ಉಳಿದು ಬಿಟ್ಟಿದ್ದಾರೆ. ಕಾರಣಾಂತರಗಳಿಂದ ಇಲ್ಲಿಗೆ ತಲುಪಲು ಸಾಧ್ಯವಾಗಿಲ್ಲ. ಕೆಲವರು ಫೇಸ್‍ಬುಕ್ ಮೂಲಕ, ಸಾಮಾಜಿಕ ಜಾಲತಾಣಗಳ ಮೂಲಕ ನಮ್ಮನ್ನು ರಕ್ಷಿಸಿ ತಾಯ್ನಾಡಿಗೆ ಕರೆದುಕೊಂಡು ಹೋಗಿ ಎಂದು ಹೇಳಿಕೊಳ್ಳುತ್ತಿದ್ದಾರೆ.
ಚೀನಾದಲ್ಲಿ ಕಲಿಯುತ್ತಿರುವ ತುಮಕೂರಿನ ವಿದ್ಯಾರ್ಥಿಯೊಬ್ಬ ಇಲ್ಲಿಗೆ ಆಗಮಿಸದೆ ಚೀನಾದಲ್ಲಿಯೆ ಉಳಿದುಕೊಂಡಿದ್ದಾರೆ. ಎಂಪ್ರೆಸ್ ಕಾಲೇಜಿನ ಉಪನ್ಯಾಸಕ ರಿಜ್ವಾನ್ ಪಾಷ ಅವರ ಪುತ್ರ ಚೀನಾದಲ್ಲಿ ಕಲಿಯುತ್ತಿದ್ದು, ನಾನು ತುಮಕೂರಿಗೆ ಬಂದು ಬಿಟ್ಟರೆ ಒಂದು ವೇಳೆ ನನ್ನಿಂದ ಸೋಂಕು ಹರಡಬಾರದು ಎಂಬ ಎಚ್ಚರಿಕೆಯಿಂದ ಇಲ್ಲಿಯೆ ಉಳಿದಿದ್ದೇನೆ ಎಂದು ಜಾಲತಾಣದಲ್ಲಿ ಸಂದೇಶ ಕಳುಹಿಸಿರುವ ವಿದ್ಯಾರ್ಥಿ ಕರೋನಾದಿಂದ ರಕ್ಷಣೆ ಹೇಗೆ ಎಂಬ ಬಗ್ಗೆಯೂ ಮಾಹಿತಿ ಹರಿಯಬಿಟ್ಟಿದ್ದಾನೆ. ಇದು ಆ ದೇಶದಲ್ಲಿಯೂ ವೈರಲ್ ಆಗಿದ್ದು ಬಹಳಷ್ಟು ಜನ ಇಷ್ಟಪಟ್ಟಿದ್ದಾರೆ.
ಹೀಗೆ ಅಲ್ಲಿಯೆ ಇದ್ದುಕೊಂಡು ಧೈರ್ಯದಿಂದ ಬದುಕುತ್ತಿರುವವರನ್ನು ಮೆಚ್ಚಬೇಕು. ಮುಂಜಾಗ್ರತಾ ಕ್ರಮಗಳ ಬಗ್ಗೆ ಎಚ್ಚರಿಸಬೇಕು. ಆದರೆ ಇಲ್ಲಿಗೆ ಬರಲು ಸಾಧ್ಯವಾಗದೆ ಪರಿತಪಿಸುತ್ತಿರುವವರ ಹಾಗೂ ಅವರ ಪೋಷಕರ ಆತಂಕವನ್ನು ದೂರ ಮಾಡಬೇಕು. ಈಗಿನ ಪರಿಸ್ಥಿತಿಯಲ್ಲಿ ಎಲ್ಲವನ್ನೂ ಸರ್ಕಾರ ನಿಭಾಯಿಸುತ್ತದೆ ಎಂದು ಹೇಳುವ ಬದಲು ಪ್ರತಿಯೊಬ್ಬರಲ್ಲಿಯೂ ಧೈರ್ಯ ತುಂಬುವ ಮತ್ತು ತುಂಬಿಕೊಳ್ಳುವ ಆತ್ಮವಿಶ್ವಾಸವೂ ಅತ್ಯಂತ ಅಗತ್ಯ.
ಈ ನಡುವೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದು, ಇದೂ ಸಹ ಸಾರ್ವಜನಿಕರ ದೃಷ್ಟಿಯಿಂದ ಅಪಾಯ ತರುವಂತಹ ಸಂದೇಶಗಳು. ಈಗಾಗಲೆ ತುಮಕೂರಿನಲ್ಲಿ ವಾಟ್ಸ್‍ಪ್ ಮೂಲಕ ಸುಳ್ಳು ಸುದ್ದಿ ಹರಡಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಹೀಗಾಗಿ ಅನವಶ್ಯಕವಾಗಿ ಸುದ್ದಿಗಳನ್ನು ಹರಡುವವರ ಮೇಲೆಯೂ ನಿಗಾ ಇರಿಸಬೇಕು. ಕರೋನಾ ಒಂದು ಸಾಂಕ್ರಾಮಿಕ ಮಾರಕ ರೋಗ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅದರಿಂದ ರಕ್ಷಣೆ ಪಡೆಯುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
