ದಾವಣಗೆರೆ:
ತನಿಖೆಯ ಸಂದರ್ಭದಲ್ಲಿ ಹಾಗೂ ಸಾಕ್ಷಿ ಮಂಡನೆಯಲ್ಲಿ ಆಗುತ್ತಿರುವ ಲೋಪ ಸರಿಪಡಿಸಿಕೊಂಡು, ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿ, ಆದಷ್ಟು ಬೇಗ ನ್ಯಾಯದಾನ ಮಾಡಲು ಅನುವು ಮಾಡಿಕೊಡುವ ಮೂಲಕ ಜನತೆಯ ವಿಶ್ವಾಸಗಳಿಸಬೇಕೆಂದು 2ನೇ ಹೆಚ್ಚುವರಿ ಸತ್ರ ನ್ಯಾಯಾಧೀಶರಾದ ಎಸ್.ನಾಗಶ್ರೀ ಪೊಲೀಸರಿಗೆ ಕಿವಿಮಾತು ಹೇಳಿದರು.
ನಗರದ ಜಿಲ್ಲಾ ಪೊಲೀಸ್ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಪೂರ್ವ ವಲಯ ಜಿಲ್ಲೆಗಳ ವಲಯ ಮಟ್ಟದ ಪೊಲೀಸ್ ಕರ್ತವ್ಯ ಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ನ್ಯಾಯಾಲಯ ಹಾಗೂ ಪೊಲೀಸ್ ಇಲಾಖೆಯ ಮೇಲೆ ವಿಶ್ವಾಸ ಮತ್ತು ನಂಬಿಕೆ ಇಟ್ಟು, ನ್ಯಾಯ ಸಿಗಬಹುದೆಂಬ ಕಾರಣಕ್ಕೆ ಬರುತ್ತಾರೆ. ಹೀಗಾಗಿ ಪೊಲೀಸರು ತನಿಖೆ ಮತ್ತು ಸಾಕ್ಷಿ ಮಂಡನೆ ಸಂದರ್ಭದಲ್ಲಿ ಇಘ ಆಗುತ್ತಿರುವ ಲೋಪ-ದೋಷಗಳನ್ನು ಸರಿ ಮಾಡಿಕೊಂಡು ಅತ್ಯುತ್ತಮವಾಗಿ ಕೆಲಸ ನಿರ್ವಹಿಸುವ ಮೂಲಕ ಜನತೆಯ ವಿಶ್ವಾಸ ಗಳಿಸಬೇಕೆಂದು ಸಲಹೆ ನೀಡಿದರು.
ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಪತ್ತೆ ಹಚ್ಚುವಾಗ ಪೊಲೀಸರು ತೋರುವ ಆಸಕ್ತಿಯನ್ನು ತನಿಖೆ ಹಾಗೂ ಸಾಕ್ಷಿ ಮಂಡನೆಯ ವೇಳೆಯಲ್ಲಿ ತೋರಿಸದೇ, ನ್ಯಾಯಾಲಯಕ್ಕೆ ಚಾರ್ಜ್‍ಶೀಟ್ ಸಲ್ಲಿಸಿ ಸುಮ್ಮನಾಗಿ ಬಿಡುತ್ತಾರೆ. ಅಲ್ಲದೆ, ಅದೆಷ್ಟೋ ಪ್ರಕರಣಗಳಲ್ಲಿ ಪೊಲೀಸರಿಗೆ ತನಿಖೆಯ ಸಂದರ್ಭದಲ್ಲಿ ಸಿಗುವ ಸಾಕ್ಷಿಗಳು ನಂತರದಲ್ಲಿ ಏಕೆ ಸಿಗುವುದಿಲ್ಲ? ಎಂದು ಪ್ರಶ್ನಿಸಿದ ಅವರು, ಸಾಕ್ಷಿಗಳಿಗೆ ನೀಡುವ ಸಮನ್ಸ್ – ವಾರಂಟ್‍ಗಳನ್ನು ಸಮರ್ಪಕವಾಗಿ ಜಾರಿ ಗೊಳಿಸುತ್ತಿಲ್ಲ. ಒಂದೇ ಕಾರಣ ನೀಡಿ ಪದೇ ಪದೇ ವಾರಂಟ್ ಜಾರಿ ಮಾಡದೇ ಇರುವುದು ನ್ಯಾಯಾಲಯದಲ್ಲಿ ಕಂಡು ಬರುತ್ತಿದೆ. ಆದ್ದರಿಂದ ಈ ಎಲ್ಲಾ ಲೋಪಗಳನ್ನು ಸರಿಪಡಿಸಿಕೊಂಡು ಕೆಲಸ ಮಾಡಿದರೆ, ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದರು.
ಪೋಕ್ಸೋಪ್ರಕರಣಗಳಲ್ಲಿ ವರ್ಷದಲ್ಲೇ ತೀರ್ಪು ನೀಡಬೇಕೆಂದು ಸುಪ್ರೀಂ ಕೋರ್ಟ್ ನಿರ್ದೇಶ ನೀಡಿದೆ. ಈ ಪ್ರಕರಣಗಳಲ್ಲಿ ಡಿಎನ್‍ಎ ಸಾಕ್ಷಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ, ಡಿಎನ್‍ಎ ಪರೀಕ್ಷೆ ವರದಿ ವಿಳಂಬವಾಗುತ್ತಿದೆ. ವಿಧಿ ವಿಜ್ಞಾನ ವರದಿ ಕೆಲವೊಮ್ಮೆ 6 ತಿಂಗಳಿಂದ ವರ್ಷದವರೆಗೆ ವಿಳಂಬವಾಗುತ್ತದೆ. ಹೀಗಾಗಿ ಕಾಲಮಿತಿಯಲ್ಲಿ ನ್ಯಾಯದಾನ ಮಾಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಆದಷ್ಟು ಬೇಗನೆ ವರದಿ ನೀಡಲು ವಿಧಿ ವಿಜ್ಞಾನ ಪ್ರಯೋಗಾಲಯದವರು ಕ್ರಮ ವಹಿಸಬೇಕೆಂದು ಸೂಚಿಸಿದರು.
ನ್ಯಾಯಾಲಯಗಳಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸುವಲ್ಲಿ ಪೊಲೀಸರು, ವೈದ್ಯರು-ವಿಧಿ ವಿಜ್ಞಾನ ಪರಿಣಿತರು, ಪಬ್ಲಿಕ್ ಪ್ರಾಸಿಕ್ಯೂಟರ್ ಹಾಗೂ ನ್ಯಾಯಮೂರ್ತಿಗಳ ಪಾತ್ರ ಬಹು ಮುಖ್ಯವಾಗಿದೆ. ಪ್ರಸ್ತುತ ಅಪರಾದದ ಸ್ವರೂಪ ಬದಲಾಗುತ್ತಿದೆ. ಸೈಬರ್ ಅಪರಾಧಗಳ ಬಗ್ಗೆ ಪೊಲೀಸರು ಹೆಚ್ಚಿನ ಜಾಗೃತ ಹೊಂದಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಹೆಚ್ಚುವರಿ ಎಸ್‍ಪಿ ಟಿ.ಜೆ.ಉದೇಶ್ ಮಾತನಾಡಿ, ಪೊಲೀಸ್ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳಲ್ಲಿ ಕೌಶಲ್ಯ ವೃದ್ಧಿಸುವುದು ಈ ಕರ್ತವ್ಯ ಕೂಟದ ಉದ್ದೇಶವಾಗಿದೆ. ಚಾರ್ಜ್‍ಶೀಟ್ ಸಲ್ಲಿಸಿದ ಬಳಿಕ ನನ್ನನ್ನು ಸೇರಿದಂತೆ ಯಾರೂ ಸಹ ಒಂದು ಪ್ರಕರಣದ ಬಗ್ಗೆಯೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಚರ್ಚಿಸಿರುವುದನ್ನು ನೋಡಿಯೆ ಇಲ್ಲ. ಇನ್ನೂ ಮುಂದಾದರೂ ಚರ್ಚೆ ನಡೆಯಬೇಕು. ಪ್ರಸ್ತುತ ಶಿಕ್ಷೆಯ ಪ್ರಮಾಣ ಕೇವಲ ಶೇ.3 ರಿಂದ 4 ರಷ್ಟಿದ್ದು, ಆರೋಪಿ ಪತ್ತೆ ಹಚ್ಚುವಲ್ಲಿ ಶ್ರಮ ವಹಿಸುವಂತೆ ತನಿಖೆಯಲ್ಲೂ ಶ್ರಮ ವಹಿಸಬೇಕೆಂದು ಸಲಹೆ ನೀಡಿದರು.
ಫಾರೆನ್ಸಿಕ್ ವಿಜ್ಞಾನ ವಿಭಾಗದ ಉಪ ನಿರ್ದೇಶಕಿ ಛಾಯಾಕುಮಾರಿ ಮಾತನಾಡಿ, ಪೂರ್ವ ವಲಯದ 4 ಜಿಲ್ಲೆಯ ಜೊತೆಗೆ ಬೆಂಗಳೂರು ವಿಭಾಗದ ನಾಲ್ಕು ಜಿಲ್ಲೆಗಳ ಪ್ರಕರಣಗಳಿಗೆ ನಾವು ವರದಿ ನೀಡಬೇಕಾಗಿದೆ. ಅಲ್ಲದೆ, ಸಿಬ್ಬಂದಿ ಕೊರತೆ ಸಹ ಇದೆ. ಈ ಎಲ್ಲಾ ಕಾರಣಗಳಿಂದ ಸ್ವಲ್ಪ ವಿಳಂಬವಾಗುತ್ತಿದೆ ಎಂದರು.
ಪ್ರಾಸ್ತಾವಿಕ ಮಾತನಾಡಿದ ಗ್ರಾಮಾಂತರ ಉಪ ವಿಭಾಗದ ಡಿವೈಎಸ್‍ಪಿ ಮಂಜುನಾಥ್ ಗಂಗಲ್, ಪ್ರತಿ ವರ್ಷ ಒಂದೊಂದು ರಾಜ್ಯದಲ್ಲಿ ಅಖಿಲ ಭಾರತ ಮಟ್ಟದ ಪೊಲೀಸ್ ಕರ್ತವ್ಯ ಕೂಟವನ್ನು ನಡೆಸಲಾಗುತ್ತಿದ್ದು, ಈ ಬಾರಿ ಉತ್ತರ ಪ್ರದೇಶದ ಲಕ್ನೋದಲ್ಲಿ ಆಚರಿಸಲಾಗುತ್ತಿದೆ. 2 ವರ್ಷದ ಹಿಂದೆ ನಮ್ಮ ರಾಜ್ಯದ ಮೈಸೂರಿನಲ್ಲಿ ಈ ಕೂಟ ಏರ್ಪಡಿಸಲಾಗಿತ್ತು. ಆಗ ದಾವಣಗೆರೆ ಜಿಲ್ಲೆಗೆ 4 ಪದಕಗಳು ಲಭಿಸಿದ್ದವು. ಈ ಕೂಟದಲ್ಲಿ ವಿವಿಧ ವಿಭಾಗಗಳಲ್ಲಿ ಸ್ಪರ್ಧೆಗಳು ಇರುತ್ತವೆ. ಪೊಲೀಸ್ ವಿಡಿಯೋಗ್ರಫಿ, ಫೋಟೋಗ್ರಫಿ, ಡಾಗ್ ಸ್ಕ್ವಾಡ್ ಸೇರಿದಂತೆ ಫಾರೆನ್ಸಿಕ್ ಸೈನ್ಸ್ ಲಿಖಿತ ಪರೀಕ್ಷೆ, ಅಬ್ಸರ್ವೇಷನ್ ಟೆಸ್ಟ್, ಕಂಪ್ಯೂಟರ್ ಅರಿವು ಪರೀಕ್ಷೆ, ಕ್ರಿಮಿನಲ್ ಕಾನೂನು ಲಿಖಿತ ಪರೀಕ್ಷೆ, ಪೋಟ್ರೆಟ್ ಪಾರ್ಲೆ, ಕಂಪ್ಯೂಟರ್ ಆಫೀಸ್ ಆಟೋಮೆಷನ್, ಫಿಂಗರ್‍ಪ್ರಿಂಟ್ ಪ್ರಾಯೋಗಿಕ ಪರೀಕ್ಷೆ, ಮೆಡಿಕೋ ಲೀಗಲ್ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ನಾಲ್ಕು ಜಿಲ್ಲೆಗಳ ನೋಡಲ್ ಅಧಿಕಾರಿಗಳು, ಲಿಂಗೇಗೌಡ, ಡಾ.ವಿನೋದ್, ಮಮತ, ರಮ್ಯಶ್ರೀ ಸೇರಿದಂತೆ ಬೆಂಗಳೂರಿನಿಂದ ಆಗಮಿಸಿದ ವಿವಿಧ ತಂಡಗಳು ಪಾಲ್ಗೊಂಡಿದ್ದರು. ನಗರ ವಿಭಾಗದ ಡಿವೈಎಸ್‍ಪಿ ಎಸ್.ಎಂ.ನಾಗರಾಜ್ ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
