ಚಿತ್ರದುರ್ಗ:
ಸರ್ ಸಿ.ವಿ.ರಾಮನ್ ಯಾವುದೇ ಸೌಕರ್ಯಗಳು ಇಲ್ಲದ ಕಾಲದಲ್ಲಿ ಬಡತನದಲ್ಲಿ ಸಾಧನೆ ಮಾಡಿ ನೋಬೆಲ್ ಪ್ರಶಸ್ತಿ ಪಡೆದುಕೊಂಡರು. ದೇಶದ ಅಭಿವೃದ್ದಿ ಮತ್ತು ರಕ್ಷಣೆಗೆ ವಿಜ್ಞಾನ ಬೇಕೆ ಬೇಕು ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅಭಿಪ್ರಾಯ ಪಟ್ಟರು
ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಬೆಂಗಳೂರು, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಚಿತ್ರದುರ್ಗ ಇವುಗಳ ಸಂಯುಕ್ತಾಶ್ರಯದಲ್ಲಿ ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗಾಗಿ ಚಿನ್ಮಲಾದ್ರಿ ರಾಷ್ಟ್ರೀಯ ಪ್ರೌಢಶಾಲೆಯಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಇನ್ಸ್ಪೈರ್ ಅವಾರ್ಡ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ನಮ್ಮ ದೇಶ ಬಲಿಷ್ಟವಾಗುವುದು ಬೇರೆ ದೇಶಗಳಿಗೆ ಇಷ್ಟವಿಲ್ಲ. ಅಮೇರಿಕಾ ಅಧ್ಯಕ್ಷರಾಗಿದ್ದ ಬರಾಕ್ಒಬಮಾ ಭಾರತದ ವಿದ್ಯಾರ್ಥಿಗಳ ಜೊತೆ ಪೈಪೋಟಿ ಮಾಡುವಷ್ಟು ನಮ್ಮ ದೇಶದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಸದನದಲ್ಲಿ ಹೇಳಿದ್ದನ್ನು ಶಾಸಕರು ಈ ಸಂದರ್ಭದಲ್ಲಿ ನೆನಪಿಸಿಕೊಂಡರು.
ನಮ್ಮ ದೇಶದ ಮಕ್ಕಳು ಬಹಳ ಬುದ್ದಿವಂತರು. ಆದರೆ ಕೆಲವೊಮ್ಮೆ ಅವಕಾಶ ಸಿಗುವುದಿಲ್ಲ. ಇನ್ಸ್ಪೈರ್ ಅವಾರ್ಡ್ ದೂರದೃಷ್ಟಿಯುಳ್ಳ ಒಳ್ಳೆ ಕಾರ್ಯಕ್ರಮ ಎಂದು ಹೇಳಿದರು.
ಹಳ್ಳಿಯಿಂದ ದಿಲ್ಲಿ ಮಟ್ಟದವರೆಗೆ ಹೋಗುವ ಇನ್ಸ್ಪೈರ್ ಅವಾರ್ಡ್ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಲ್ಲಿರುವ ಸಾಧನೆಯನ್ನು ನೋಡಿ ತೀರ್ಪು ನೀಡಿ ಯಾವುದೇ ಕಾರಣಕ್ಕೂ ಶಿಫಾರಸ್ಸಿಗೆ ಮಣಿದು ಆಯ್ಕೆ ಮಾಡಿಬೇಡಿ. ದೇಶದ ರಾಷ್ಟ್ರಪತಿಯಾಗಿದ್ದ ಅಬ್ದುಲ್ ಕಲಾಂ ಹೆಸರಿನಲ್ಲಿ ಯುವ ವಿಜ್ಞಾನಿ ಪ್ರಶಸ್ತಿಗಳನ್ನು ನೀಡುತ್ತಿರುವುದು ಅತ್ಯುತ್ತಮವಾದುದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಮಾತನಾಡಿ,ವಿಜ್ಞಾನ -ತಂತ್ರಜ್ಞಾನದ ಮೇಲೆ ಎಲ್ಲರೂ ಅವಲಂಭಿತರಾಗಿರುವ ಇಂದಿನ ದಿನಮಾನಗಳಲ್ಲಿ ಮೂಢನಂಬಿಕೆಯನ್ನು ತೊಲಗಿಸಬೇಕಾದರೆ ವಿಜ್ಞಾನ ಅತಿ ಮುಖ್ಯವಾಗಿ ಬೇಕು ಎಂದು ಹೇಳಿದರು
ಶಿಕ್ಷಣದ ಜೊತೆಗೆ ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳಾದ ಪ್ರತಿಭಾ ಕಾರಂಜಿ, ಕ್ರೀಡೆ ಬೇಕು. ಸರಿಯಾದ ಸಮಯದಲ್ಲಿ ಮಾರ್ಗದರ್ಶನ ಮತ್ತು ಪ್ರೋತ್ಸಾಹ ಸಿಕ್ಕಾಗ ಮಾತ್ರ ಮಕ್ಕಳು ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಲು ಸಹಕಾರಿಯಾಗಲಿದೆ. ಯಾವುದೇ ಕಾರಣಕ್ಕೂ ಬಡತನ ಸಾಧನೆಗೆ ಅಡ್ಡಬರಬಾರದು. ವಿದ್ಯಾರ್ಥಿಗಳಿಗೆ ಪ್ರೋತ್ಸಾಹದ ಜೊತೆ ಹಣವು ಬೇಕು. ಟಿ.ವಿ.ಯಾವಾಗಾ ಪ್ರಪಂಚಕ್ಕೆ ಪ್ರವೇಶಿಸಿತೋ ಅಂದೆ ವಿಜ್ಞಾನ ಕೂಡ ಮನೆಯಲ್ಲಿ ಪ್ರವೇಶಿಸಿತು.
ಮಕ್ಕಳು ಮೊಬೈಲನ್ನು ಒಳ್ಳೆ ಕೆಲಸಕ್ಕೆ ಬಳಸಿಕೊಳ್ಳಿ. ಸುತ್ತಮುತ್ತಲಿನ ಸಮಸ್ಯೆಗಳು ಸಂಶೋಧನೆಗೆ ಸ್ಪೂರ್ತಿಯಾಗಬೇಕು. ಒಂದು ಕಾಲದಲ್ಲಿ ಯಾವುದಾದರೂ ಕಾರ್ಯಕ್ರಮಗಳಿಗೆ ಹೋದರೆ ತಳಿರು ತೋರಣಗಳು ಸ್ವಾಗತಿಸುತ್ತಿದ್ದವು. ಈಗ ಎಲ್ಲೆಡೆ ಪ್ಲಾಸ್ಟಿಕ್ ಮಯವಾಗಿರುವುದರಿಂದ ಚರಂಡಿಗಳೆಲ್ಲಾ ಕಟ್ಟಿಕೊಂಡು ದುರ್ನಾತ ಬೀರುತ್ತಿವೆ. ಹಾಗಾಗಿ ಪ್ಲಾಸ್ಟಿಕ್ಗೆ ಪರ್ಯಾಯವಾಗಿ ವಿಜ್ಞಾನಿಗಳು ಬೇರೆ ಯಾವುದನ್ನಾದರೂ ಕಂಡುಹಿಡಿಯಲಿ ಎಂದರು.
ಶಿಕ್ಷಕರ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದ ಪದನಿಮಿತ್ತ ಸಹನಿರ್ದೇಶಕರಾದ ಎಂ.ರೇವಣಸಿದ್ದಪ್ಪ ಮಾತನಾಡುತ್ತ ಕೆಲವೊಮ್ಮೆ ನೋಡಿ, ಕೇಳಿ, ಪ್ರಯೋಗಿಸಿ ಯಾವುದೇ ಒಂದು ವಿಷಯವನ್ನು ಕಲಿಯಬಹುದು. ಇನ್ಸ್ಪೈರ್ ಅವಾರ್ಡ್ ಕಾರ್ಯಕ್ರಮಕ್ಕೆ ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳಿಂದ ವಿದ್ಯಾರ್ಥಿಗಳು ಆಗಮಿಸಿದ್ದಾರೆಂದರೆ ಅದರ ಹಿಂದೆ ವಿಜ್ಞಾನ ಶಿಕ್ಷಕರುಗಳ ಪರಿಶ್ರಮವಿದೆ. ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಿದರೆ ಯುವ ವಿಜ್ಞಾನಿಗಳಾಗುವುದರಲ್ಲಿ ಅನುಮಾನವಿಲ್ಲ ಎಂದು ತಿಳಿಸಿದರು.
ಚಿತ್ರದುರ್ಗ ಡಯಟ್ನ ಹಿರಿಯ ಉಪನ್ಯಾಸಕರು ಹಾಗೂ ಇನ್ಸ್ಪೈರ್ ಅವಾರ್ಡ್ ಕಾರ್ಯಕ್ರಮದ ನೋಡಲ್ ಅಧಿಕಾರಿ ಭರಮಪ್ಪ ಮೈಸೂರು ಪ್ರಾಸ್ತಾವಿಕವಾಗಿ ಮಾತನಾಡಿ ಮನುಷ್ಯ ಸದಾ ಹೊಸತನವನ್ನು ಬಯಸುತ್ತಿರುವುದರಿಂದ ಸಂಶೋಧನೆ ಬೇಕು. ಅದಕ್ಕಾಗಿ ಕೇಂದ್ರದ ತಂತ್ರಜ್ಞಾನ ವಿಜ್ಞಾನ ಇಲಾಖೆ ಈ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.
ಆರರಿಂದ ಹತ್ತನೆ ತರಗತಿಯ ಒಂದು ಲಕ್ಷ ವಿದ್ಯಾರ್ಥಿಗಳು ಭಾರತದಲ್ಲಿ ಇನ್ಸ್ಪೈರ್ ಅವಾರ್ಡ್ಗೆ ನೊಂದಣಿ ಮಾಡಿಸಿಕೊಂಡಿದ್ದಾರೆ . 40222 ವಿದ್ಯಾರ್ಥಿಗಳು ಕರ್ನಾಟಕ ರಾಜ್ಯದಲ್ಲಿ ಆನ್ಲೈನ್ ಮೂಲಕ ನೊಂದಣಿ ಮಾಡಿಸಿಕೊಂಡಿದ್ದಾರೆ. 352 ಶಾಲೆಯ 1500 ಮಕ್ಕಳು ಜಿಲ್ಲೆಯಲ್ಲಿ ನೊಂದಾಯಿಸಿದ್ದು, ಚಿತ್ರದುರ್ಗ ಜಿಲ್ಲೆಯಿಂದ 146 ಮಕ್ಕಳು ಆಯ್ಕೆಯಾಗಿದ್ದು, ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ ಕೇಂದ್ರ ಸರ್ಕಾರ ಹತ್ತು ಸಾವಿರ ರೂ.ಗಳ ಜಮಾ ಮಾಡಿದೆ ಎಂದು ವಿವರಿಸಿದರು.
ದಾವಣಗೆರೆ ಜಿಲ್ಲೆಯಿಂದ 1232 ಮಕ್ಕಳು ನೊಂದಣಿ ಮಾಡಿಸಿದ್ದು, 169 ಮಕ್ಕಳು ಆಯ್ಕೆಯಾಗಿದ್ದಾರೆ. ಒಟ್ಟು 318 ಮಾದರಿಗಳನ್ನು ಪ್ರದರ್ಶಿಸಲಾಗಿದೆ. ಒಂಬತ್ತು ವರ್ಷದ ಮಕ್ಕಳಿಂದ ಹಿಡಿದು ಹತ್ತನೆ ತರಗತಿವರೆಗಿನ ಮಕ್ಕಳಲ್ಲಿ ಮೂಲ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸುವುದು ಇನ್ಸ್ಪೈರ್ ಅವಾರ್ಡ್ನ ಉದ್ದೇಶ ಎಂದು ತಿಳಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಅಂಥೋಣಿ, ಎಂ.ಹೆಚ್.ಆರ್.ಡಿ.ಯ ಯುವ ಅಗರ್ವಾಲ್, ಡಯಟ್ ಪ್ರಾಂಶುಪಾಲ ಕೋದಂಡರಾಮ, ಎ.ಕೆ.ಕೆಂಗಪ್ಪ, ತಿಪ್ಪೇಸ್ವಾಮಿ, ವಿದ್ಯಾಧಿಕಾರಿ ಪಿ.ರಾಮಯ್ಯ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವೆಂಕಟೇಶ್ರೆಡ್ಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಾನಂದ, ಕೃಷ್ಣಪ್ಪ, ಮಹಂತೇಶ್, ಹನುಮಂತಪ್ಪ ವೇದಿಕೆಯಲ್ಲಿದ್ದರು.
ಶೋಭಾರಾಣಿ ಪ್ರಾರ್ಥಿಸಿದರು. ಡಯಟ್ನ ಹಿರಿಯ ಉಪನ್ಯಾಸಕ ರಮೇಶ್ ಸ್ವಾಗತಿಸಿದರು. ಹನುಮಂತರಾಯಪ್ಪ ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








