ಬೆಂಗಳೂರು
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಡಿ.ಕೆ. ಶಿವಕುಮಾರ್ ಅವರ ತಾಯಿ ಗೌರಮ್ಮ ಅವರನ್ನು ನಿವಾಸದಲ್ಲೇ ವಿಚಾರಣೆ ನಡೆಸುವಂತೆ ಜಾರಿ ನಿರ್ದೇಶನಾಲಯದ (ಇ.ಡಿ)ಅಧಿಕಾರಿಗಳಿಗೆ ಹೈಕೋರ್ಟ್ ಸೂಚನೆ ನೀಡಿದೆ.
ಜಾರಿ ನಿರ್ದೇಶನಾಲಯ ತಮಗೆ ಸಮನ್ಸ್ ಜಾರಿಗೊಳಿಸಿರುವುದನ್ನು ಪ್ರಶ್ನಿಸಿ ಗೌರಮ್ಮ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಜಿ.ನರೇಂದರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ಈ ಆದೇಶ ನೀಡಿದೆ. ಗೌರಮ್ಮ ಅವರನ್ನು ಕನಕಪುರದ ಸ್ವಗೃಹದಲ್ಲೇ ವಿಚಾರಣೆ ನಡೆಸಬೇಕು. ವಿಚಾರಣೆಯನ್ನು ಕನ್ನಡದಲ್ಲೆ ನಡೆಸುವುದರ ಜೊತೆಗೆ, ವಿಚಾರಣೆಯ ಧ್ವನಿ ಮುದ್ರಣ ಮಾಡುವಂತೆ ನ್ಯಾಯಪೀಠ ಸೂಚನೆ ನೀಡಿದೆ.
ಜೊತೆಗೆ, ವಿಚಾರಣೆ ವೇಳೆ ಇ.ಡಿ.ಅಧಿಕಾರಿಗಳಿಗೆ ಸೂಕ್ತ ಭದ್ರತೆ ನೀಡುವಂತೆ ರಾಮನಗರ ಪೊಲೀಸ್ ವರಿಷ್ಠಾಧಿಕಾರಿಗೆ ನ್ಯಾಯಪೀಠ ನಿರ್ದೇಶಿಸಿದ್ದು, ವಿಚಾರಣೆಗೆ ಅಡ್ಡಿಪಡಿಸದಂತೆ ಗೌರಮ್ಮ ಅವರಿಗೂ ಎಚ್ಚರಿಕೆ ನೀಡಿದೆ.
ತಮಗೆ 85 ವರ್ಷವಾಗಿದ್ದು ತಾವು ವಿಚಾರಣೆಗೆ ಹಾಜರಾಗಲು ಸಾಧ್ಯವಾಗುವುದಿಲ್ಲ. ಬದಲಗಿಎ ತಮ್ಮ ಪರವಾಗಿ ಪ್ರತಿನಿಧಿ ಕಳುಹಿಸಲು ಇಲ್ಲವೇ ಸ್ವಗೃಹದಲ್ಲಿ ವಿಚಾರಣೆಗೆ ಅನುಮತಿ ನೀಡುವಂತೆ ಗೌರಮ್ಮ ರಿಟ್ ಅರ್ಜಿಯಲ್ಲಿ ಕೋರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
