ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಜಾಗೃತಿ ಹೆಚ್ಚಾಗಲಿ

ಚಿತ್ರದುರ್ಗ:
     ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು ಎಂದು ವಿಧಾನಪರಿಷತ್ ಸದಸ್ಯೆ ಜಯಮ್ಮ ಬಾಲರಾಜ್ ಅವರು ಹೇಳಿದರು.
 
    ನಗರದ ಬಾಲಕಿಯರ ಸರ್ಕಾರಿ ಪ.ಪೂ. ಕಾಲೇಜು ಆವರಣದಲ್ಲಿ ಆರೋಗ್ಯ ಇಲಾಖೆ ವತಿಯಿಂದ ಏರ್ಪಡಿಸಲಾದ ಜಂತುಹುಳು ನಿವಾರಕ ಔಷಧಿ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸ್ವಚ್ಛತೆಯ ಕೊರತೆಯಿಂದ ಮಕ್ಕಳಿಗೆ ಜಂತು ಹುಳುವಿನ ತೊಂದರೆ ಬರುತ್ತದೆ.  ಮಕ್ಕಳು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು.
    ಆರೋಗ್ಯ ಇಲಾಖೆಯಿಂದ ಸಾರ್ವಜನಿಕರ ಆರೋಗ್ಯ ವೃದ್ಧಿಗಾಗಿ ಹಮ್ಮಿಕೊಳ್ಳುವ ಇಂತಹ ಕಾರ್ಯಕ್ರಮಗಳಿಗೆ ಎಲ್ಲ ಜನಪ್ರತಿನಿಧಿಗಳು ಸ್ವಯಂ ಪ್ರೇರಣೆಯಿಂದ ಪಾಲ್ಗೊಳ್ಳಬೇಕು.  ಜಿಲ್ಲೆಯಲ್ಲಿ ಈಗ ಹಮ್ಮಿಕೊಳ್ಳಲಾಗಿರುವ ಜಂತುಹುಳು ನಿವಾರಕ ಔಷಧಿ ವಿತರಣೆ ಕಾರ್ಯಕ್ರಮ ಅಚ್ಚುಕಟ್ಟಾಗಿ ಜರುಗಲು ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ವಿಧಾನಪರಿಷತ್ ಸದಸ್ಯೆ ಜಯಮ್ಮ ಬಾಲರಾಜ್ ಹೇಳಿದರು.
 
   ಮಕ್ಕಳಿಗೆ ಜಂತುಹುಳು ನಿವಾರಕ ಅಲ್ಬೆಂಡಜೋಲ್ ಮಾತ್ರೆಯನ್ನು ವಿದ್ಯಾರ್ಥಿಗಳಿಗೆ ಸೇವನೆಗೆ ನೀಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಮಾತನಾಡಿ, ಮಕ್ಕಳು ವೈಯಕ್ತಿಕ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು.  ಮಕ್ಕಳು ಊಟ ಮಾಡುವ ಸಂದರ್ಭದಲ್ಲಿ ತರಕಾರಿಯನ್ನು ಸೇವಿಸದೆ ಹಾಗೆಯೇ ಉಳಿಸುವುದು ಸಾಮಾನ್ಯ.  ಆದರೆ ತರಕಾರಿಯಲ್ಲಿ ಪೌಷ್ಠಿಕಾಂಶಗಳು ಹೆಚ್ಚಾಗಿದ್ದು, ತರಕಾರಿಯನ್ನು ಬಿಸಾಡದೆ, ಸೇವಿಸಬೇಕು.
    ಇದು ರಕ್ತಹೀನತೆಯನ್ನು ತಡೆಗಟ್ಟಲು ಉತ್ತಮ ಮಾರ್ಗ.  ಜಿಲ್ಲೆಯಲ್ಲಿ ವೈಯಕ್ತಿಕ ಸ್ವಚ್ಛತೆ ವಿಷಯದಲ್ಲಿ ಜನರಲ್ಲಿ ಹೆಚ್ಚು ಜಾಗೃತಗೊಳಿಸಲು ಬರುವ ದಿನಗಳಲ್ಲಿ ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಹೆಚ್ಚಿನ ಹೊಣೆ ನೀಡಲಾಗುವುದು ಎಂದರು.
 
   ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ. ಸತ್ಯಭಾಮ ಮಾತನಾಡಿ, ಜಂತುಹುಳುವಿನ ಬಾಧೆಗೆ ಒಳಗಾದ ಮಕ್ಕಳಲ್ಲಿ ಕಲಿಕಾ ಸಾಮಥ್ರ್ಯ ಕುಸಿಯುವುದಲ್ಲದೆ, ಏಕಾಗ್ರತೆಯ ಕೊರತೆ ಕಾಡುತ್ತದೆ.  ಮಕ್ಕಳು ಊಟ ಮಾಡುವ ಮುನ್ನ ಸ್ವಚ್ಛವಾಗಿ ಕೈ ತೊಳೆದುಕೊಳ್ಳುವುದನ್ನು ಶಾಲೆಗಳಲ್ಲಿ ಶಿಕ್ಷಕರು ತಿಳಿಸಬೇಕು ಎಂದರು.
 
    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪಾಲಾಕ್ಷ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಜಂತುಹುಳು ನಿವಾರಣಾ ಕಾರ್ಯಕ್ರಮದಡಿ ಜಿಲ್ಲೆಯ ಎಲ್ಲ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳು, ಅಂಗನವಾಡಿ, ಕಾಲೇಜುಗಳಲ್ಲಿನ 01 ರಿಂದ 19 ವರ್ಷ ವಯೋಮಾನದೊಳಗಿನ ಮಕ್ಕಳಿಗೆ ಜಂತುಹುಳು ನಿವಾರಕ ಅಲ್ಬೆಂಡಾಜೋಲ್ ಮಾತ್ರೆಯನ್ನು ನೀಡಲಾಗುತ್ತಿದೆ.  ಜಿಲ್ಲೆಯಲ್ಲಿ 1 ರಿಂದ 2 ವರ್ಷದೊಳಗಿನ ಒಟ್ಟು 30994 ಮಕ್ಕಳು ಹಾಗೂ 2 ರಿಂದ 19 ವರ್ಷದೊಳಗಿನ 406778 ಮಕ್ಕಳು ಸೇರಿದಂತೆ ಒಟ್ಟು 437772 ಮಕ್ಕಳಿಗೆ ಜಂತುಹುಳು ನಿವಾರಣಾ ಮಾತ್ರೆ ನೀಡುವ ಗುರಿ ಹೊಂದಲಾಗಿದೆ.  ಸೆ. 25 ರಂದು ಕಾರಣಾಂತರಗಳಿಂದ ಯಾವುದಾದರೂ ಮಕ್ಕಳು ಮಾತ್ರೆ ಸೇವನೆಯಿಂದ ವಂಚಿತರಾಗಿದ್ದಲ್ಲಿ, ಅಂತಹ ಮಕ್ಕಳಿಗೆ ಸೆ. 30 ರಂದು ಮಾತ್ರೆ ನೀಡಲಾಗುವುದು ಎಂದರು.
 
    ಕಾರ್ಯಕ್ರಮದಲ್ಲಿ ಬಾಲಕಿಯರ ಸರ್ಕಾರಿ ಪ.ಪೂ. ಕಾಲೇಜು ಉಪಪ್ರಾಂಶುಪಾಲ ವಿಜಯಕುಮಾರ್, ಜಿಲ್ಲಾ ಕ್ಷಯರೊಗ ನಿಯಂತ್ರಣಾಧಿಕಾರಿ ಡಾ. ರಂಗನಾಥ್, ಡಾ. ಪಿ.ಸಿ. ಕುಮಾರಸ್ವಾಮಿ, ಡಾ. ಬಿ.ವಿ. ಗಿರೀಶ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಮಂಜುನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap