ಭಾರಿ ಮಳೆಗೆ ಬೆಳೆ ನಾಶ..!

ಹಾನಗಲ್ಲ :

     ತಾಲೂಕಿನ ಪೂರ್ವ ಭಾಗದ ವರ್ದಿ, ನರೇಗಲ್, ಕೂಡಲ, ಹರವಿ, ಮಾರನಬೀಡ, ಬಿಂಗಾಪುರ ಗ್ರಾಮಗಳ ಕೃಷಿ ಭೂಮಿಯಲ್ಲಿ ಬೆಳೆಯಲಾದ ಶೇಂಗಾ, ಸೋಯಾಅವರೆ, ಗೋವಿನಜೋಳ ಮತ್ತು ಹತ್ತಿ ಫಸಲುಗಳು ಸತತ ಮಳೆಯಿಂದಾಗಿ ಸಂಪೂರ್ಣ ನಾಶ ಹೊಂದಿದ್ದು, ರೈತರನ್ನು ಚಿಂತೆಗೀಡುಮಾಡಿದೆ.

    ಕಡಿಮೆ ಮಳೆ ಬೀಳುವ ಪ್ರದೇಶವಾಗಿರುವ ತಾಲೂಕಿನ ಪೂರ್ವ ಭಾಗದ ವರ್ದಿ, ನರೇಗಲ್, ಕೂಡಲ, ಹರವಿ, ಮಾರನಬೀಡ, ಬಿಂಗಾಪುರ ಗ್ರಾಮಗಳಲ್ಲಿ ಗೋವಿನಜೋಳ, ಸೋಯಾಬಿನ್, ಶೇಂಗಾ ಬೆಳೆಗಳನ್ನೇ ಹೆಚ್ಚಾಗಿ ಬಿತ್ತನೆ ಮಾಡುವ ಕ್ಷೇತ್ರಗಳಾಗಿವೆ. ಆದರೆ ಮೇಲಿಂದ ಮೇಲೆ ಬೀಳುತ್ತಿರುವ ಮಳೆ ಕೈಗೆ ಬಂದಿರುವ ಫಸಲನ್ನು ಕಸಿದುಕೊಳ್ಳುವಂತಾಗಿದೆ.

    ಮಾರನಬೀಡ ಗ್ರಾಮವೊಂದರಲ್ಲಿಯೇ 2000ಕ್ಕೂ ಅಧಿಕ ಕೃಷಿ ಭೂಮಿಯಿದೆ. ಇದರಲ್ಲಿ 450 ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದ್ದ ಶೇಂಗಾ ಹಾಗೂ ಸೋಯಾಅವರೆ ಬೆಳೆ ಹಳ್ಳದ ನೀರಿನಿಂದ ಆವೃತಗೊಂಡು ನಾಶಹೊಂದಿದೆ. ಈ ಕೃಷಿಭೂಮಿಗೆ ನೀರಲಗಿ ಕೆರೆಯಿಂದ ಹಾಗೂ ಮಾರನಬೀಡದ ದೊಡ್ಡಕೆರೆಯಿಂದ ಹೆಚ್ಚಾದ ಕೋಡಿ ನೀರು ವಡಕಿನಹಳ್ಳದ ಮೂಲಕ ಹರಿದು ಬಂದು ಹೊಲಗಳಲ್ಲಿ ಹರಡಿಕೊಳ್ಳುತ್ತದೆ.

    ಕಳೆದ ಆಗಷ್ಟ ತಿಂಗಳಿನಿಂದಲೂ ಈ ಹಳ್ಳದ ನೀರು ನಿರಂತರವಾಗಿ ಹರಿಯುತ್ತಿದ್ದುದರಿಂದ ಇಲ್ಲಿ ಬೆಳೆದಿದ್ದ ಫಸಲುಗಳನ್ನು ಕೀಳಲೂ ಸಾಧ್ಯವಾಗುತ್ತಿಲ್ಲ. ಹೀಗಾಗಿ ಹೊಲಗಳಲ್ಲಿಯೇ ಶೇಂಗಾ ಮತ್ತು ಸೋಯಾಬಿನ್ ಕೊಳೆಯುತ್ತಿದೆ. ಹೊಲದಲ್ಲಿ ನಿಂತಿರುವ ನೀರನ್ನು ಹೊರಹಾಕಲು ರೈತರು ಕಿರುಕಾಲುವೆ ಮಾಡಿಕೊಂಡಿದ್ದರೂ ಜೌಳು ತಪ್ಪುತ್ತಿಲ್ಲ. ಇದೂ ಕೂಡ ಬೆಳೆಹಾನಿಗೆ ಕಾರಣವಾಗಿದೆ.

    ಇನ್ನು ಕೆಲವು ರೈತರು ಶೇಂಗಾ ಕೀಳಲಾರಂಭಿಸಿದ್ದಾರೆ. ಬಿಟ್ಟೂ ಬಿಡದ ಮಳೆಯಿಂದಾಗಿ ಒಣಗದ ಶೇಂಗಾ ಮನೆಗೆ ತರುವ ಸ್ಥಿತಿಯಿಲ್ಲವಾಗಿದೆ. ಹೊಲದಲ್ಲಿರುವ ಶೇಂಗಾ ಅಲ್ಲಿಯೇ ಮೊಳಕೆಯೊಡೆಯಲಾರಂಭಿಸಿದೆ. ಸುಮಾರು 200 ಎಕರೆ ಪ್ರದೇಶದಲ್ಲಿ ಸೋಯಾಅವರೆ ಬೆಳೆಯಲಾಗಿದ್ದು ನೀರು ನಿಂತಿರುವುದರಿಂದ ಅವೆಲ್ಲವೂ ಮಣ್ಣುಪಾಲಾಗುತ್ತಿವೆ. ಇನ್ನು ನೂರಾರು ಎಕರೆ ಪ್ರದೇಶದಲ್ಲಿ ಬೆಳೆದು ನಿಂತಿರುವ ಗೋವಿನಜೋಳ ನೆಲಕ್ಕುರುಳಿವೆ. ನಿಂತಿರುವ ಗಿಡಗಳ ತೆನೆಗಳಲ್ಲಿ ನೀರಿಳಿದು ಬೂಸ್ಟ ಬರಲಾರಂಭಿಸಿವೆ. ಇದೇ ರೀತಿ ಸತತ ಮಳೆ ಸುರಿದರೆ ತೆನೆಯಲ್ಲಿಯೇ ಮೊಳಕೆಯೊಡೆಯಲಿವೆ.

     ಇದೀಗ ಹತ್ತಿ ಕಾಯಿಗಳು ಒಡೆಯುತ್ತಿದ್ದು, ಮಳೆಯಿಂದಾಗಿ ಕಪ್ಪಾಗುತ್ತಿವೆ. ಇಷ್ಟಾದರೂ ಇಲ್ಲಿಯವರೆಗೂ ಕೃಷಿ-ಕಂದಾಯ ಇಲಾಖೆಗಳ ಅಧಿಕಾರಿಗಳಾರೂ ಹೊಲಗಳಿಗೆ ಭೇಟಿ ನೀಡಿ ಬೆಳೆಹಾನಿಯನ್ನೂ ಪರಿಶೀಲಿಸಿಲ್ಲ. ಸಂಕಷ್ಟಕ್ಕೊಳಗಾಗಿರುವ ರೈತರ ಹೊಲಗಳಿಗೆ ತಕ್ಷಣ ಭೇಟಿ ನೀಡಿ ಬೆಳೆ ಸಮೀಕ್ಷೆ ಕೈಗೊಳ್ಳಬೇಕು. ಸೂಕ್ತ ಪರಿಹಾರಕ್ಕೆ ವರದಿ ಸಲ್ಲಿಸಬೇಕು ಎಂದು ರೈತ ಸಂಘದ ಮಾರನಬೀಡ ಗ್ರಾಮ ಘಟಕದ ಅಧ್ಯಕ್ಷ ರವಿ ನೆರ್ಕಿಮನಿ ಹಾಗೂ ಉಪಾಧ್ಯಕ್ಷ ಅಶೋಕ ಸಂಶಿ ಹಾಗೂ ಬೆಳೆ ಹಾನಿಯನುಭವಿಸಿದ ರೈತರಾದ ಚನಬಸಪ್ಪ ಸಂಶಿ, ಜಗದೀಶ ಬಿ.ಸಂಶಿ, ಸಂಜೀವ ಮಣಕಟ್ಟಿ, ಪ್ರಮೋದಗೌಡ ಪಾಟೀಲ, ಬಸವಂತಪ್ಪ ಕಾಶಂಬಿ, ಜಗದೀಶ ನಾಗಪ್ಪ ಸಂಶಿ, ಮಾರುತಿ ಸಂಶಿ, ಚಂದ್ರಪ್ಪ ನೆರ್ಕಿಮನಿ ಆಗ್ರಹಿಸಿದ್ದಾರೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link