ಕುತೂಹಲ ಕೆರಳಿಸಿದ ಸಂತೋಷ್ ಅನರ್ಹರ ಭೇಟಿ.!

ಬೆಂಗಳೂರು

     ದೋಸ್ತಿ ಸರ್ಕಾರದ ಪತನಕ್ಕೆ ಮುನ್ನುಡಿ ಬರೆದಿದ್ದ ಮೂವರು ಅನರ್ಹ ಶಾಸಕರು ಇಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಸಹಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದು ಭಾರೀ ಕುತೂಹಲ ಉಂಟು ಮಾಡಿದೆ. ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ಬೆಳಗ್ಗೆ ಅನರ್ಹ ಶಾಸಕರಾದ ಮುನಿರತ್ನ, ಎಸ್.ಟಿ.ಸೋಮಶೇಖರ್ ಮತ್ತು ಗೋಪಾಲಯ್ಯ ಅವರೊಂದಿಗೆ ರಹಸ್ಯವಾಗಿ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.

     ಕಳೆದ ಒಂದು ವಾರದ ಹಿಂದೆ ಅನರ್ಹ ಶಾಸಕರು, ಬಿಜೆಪಿ ಅಧ್ಯಕ್ಷ ನಳೀನ್‍ಕುಮಾರ್‍ಕಟೀಲ್ ಅವರನ್ನು ಭೇಟಿ ಮಾಡಿದ್ದರು. ಇದರ ನಡುವೆ ಇಂದು ದಿಢೀರನೇ ಸಂತೋಷ್ ಅವರನ್ನು ಭೇಟಿಯಾಗಿರುವುದು ಹಲವು ಸಂಶಯಗಳನ್ನು ಹುಟ್ಟುಹಾಕಿದೆ. ಮಾತುಕತೆಯ ವಿವರಗಳು ಪೂರ್ಣವಾಗಿ ಲಭ್ಯವಾಗಿಲ್ಲವಾದರೂ ಡಿ.5ರಂದು ನಡೆಯಲಿರುವ ಉಪಚುನಾವಣೆಯಲ್ಲಿ ಸ್ಪರ್ಧೆ ಹಾಗೂ ಕ್ಷೇತ್ರದಲ್ಲಿ ಪಕ್ಷವನ್ನು ಸಂಘಟನೆ ಮಾಡುವ ಬಗ್ಗೆ ಸಂತೋಷ್ ಜೊತೆ ಚರ್ಚೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

     ಸಾಮಾನ್ಯವಾಗಿ ಸಂತೋಷ್ ಅಷ್ಟು ಸುಲಭವಾಗಿ ಯಾವುದೇ ರಾಜಕೀಯ ವ್ಯಕ್ತಿಗಳನ್ನು ಭೇಟಿಯಾಗಿ ಮಾತುಕತೆ ನಡೆಸುವುದು ತೀರ ಅಪರೂಪ. ಅಂತದ್ದರಲ್ಲಿ ಅನರ್ಹ ಶಾಸಕರ ಜೊತೆ ಸುಮಾರು 20 ನಿಮಿಷಕ್ಕೂ ಹೆಚ್ಚು ಕಾಲ ಉಭಯ ಕುಶಲೋಪರಿ ನಡೆಸಿರುವುದು ಕುತೂಹಲ ಮೂಡಿಸಿದೆ.

     ಒಂದೆಡೆ ಅನರ್ಹ ಶಾಸಕರಿಗೆ ಟಿಕೆಟ್ ನೀಡುವ ಬಗ್ಗೆ ಪಕ್ಷದ ವಲಯದಲ್ಲೇ ಪರ, ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಇದರ ನಡುವೆ ಅನರ್ಹರಿಗೆ ಟಿಕೆಟ್ ನೀಡಲಾಗುವುದೆಂದು ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಇಂದು ಮೂವರು ಅನರ್ಹ ಶಾಸಕರು ಸಂತೋಷ್ ಅವರನ್ನು ಭೇಟಿಯಾಗಿ ಟಿಕೆಟ್ ಖಾತ್ರಿ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

     ಉಪಚುನಾವಣೆಗೆ ಟಿಕೆಟ್ ನೀಡಲಾಗುವುದು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ , ರಾಜ್ಯ ಉಸ್ತುವಾರಿ ಮುರುಳೀಧರ್ ರಾವ್ ಸೇರಿದಂತೆ ಮತ್ತಿತರರು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಅವರೊಂದಿಗೆ ಚರ್ಚೆ ನಡೆಸುತ್ತೇವೆ. ನೀವು ಯಾರೇ ಏನೇ ಮಾತನಾಡಿದರೂ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ.

     ನ್ಯಾಯಾಲಯದ ತೀರ್ಪು ಬಂದ ಕೂಡಲೇ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಹಾಗೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ. ಉಪಚುನಾವಣೆಯನ್ನು ಎಲ್ಲರೂ ಒಮ್ಮತದಿಂದ ಎದುರಿಸೋಣ. ನ್ಯಾಯಾಲಯದಲ್ಲಿ ನಿಮ್ಮ ಪರ ತೀರ್ಪು ಬರುವ ವಿಶ್ವಾಸವಿದೆ.

     ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ಕೆಲವರು ನಿಮಗೆ ಮುಜುಗರ ತರುವುದಕ್ಕಾಗಿಯೇ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಾರೆ. ಈ ಬಗ್ಗೆ ತಲೆಕೆಡಸಿಕೊಳ್ಳಬೇಡಿ ಎಂದು ಸಂತೋಷ್ ಅನರ್ಹರಿಗೆ ಸಲಹೆ ಮಾಡಿದ್ದಾರೆ. ಸಂತೋಷ್ ಮತ್ತು ಅನರ್ಹ ಶಾಸಕರ ಭೇಟಿಯನ್ನು ಅತ್ಯಂತ ಗೌಪ್ಯವಾಗಿ ಇಡಲಾಗಿತ್ತು. ಅಪ್ಪಿತಪ್ಪಿಯೂ ಮಾಧ್ಯಮಗಳಿಗೆ ಸೋರಿಕೆಯಾಗದಂತೆ ಎಚ್ಚರಿಕೆ ವಹಿಸಲಾಗಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ