ಡಾಬಸ್‌ಪೇಟೆ ಕಸ ತುಮಕೂರು ನಗರಕ್ಕೆ!

0
32

ತುಮಕೂರು

      ತುಮಕೂರು ನಗರದಲ್ಲೇ ಪ್ರತಿನಿತ್ಯ 100 ರಿಂದ 110 ಟನ್ ಕಸ ಉತ್ಪತ್ತಿಯಾಗುತ್ತಿದ್ದು, ಅದನ್ನು ಸಮರ್ಪಕವಾಗಿ ವಿಲೇವಾರಿ ಮಾಡುವುದೇ ದೊಡ್ಡ ಸಮಸ್ಯೆಯಾಗಿ ಕಾಡುತ್ತಿರುವಾಗ, ಪಕ್ಕದ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸೇರಿದ ಡಾಬಸ್‌ಪೇಟೆಯಿಂದ ಕಸವನ್ನು ತಂದು ತುಮಕೂರು ನಗರದ ಹೊರವಲಯದಲ್ಲಿ ರಸ್ತೆ ಬದಿ ಸುರಿಯುತ್ತಿದ್ದುದನ್ನು ತುಮಕೂರು ಮಹಾನಗರ ಪಾಲಿಕೆ ಸಿಬ್ಬಂದಿ ಪತ್ತೆ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

      ಕಳೆದ ತಿಂಗಳು ಮತ್ತು ಈ ತಿಂಗಳು ಒಟ್ಟು ಎರಡು ಈ ರೀತಿಯ ಪ್ರಕರಣಗಳು ಪತ್ತೆ ಆಗಿವೆ. ತುಮಕೂರು ನಗರದ ಕ್ಯಾತಸಂದ್ರ ಬಳಿ (ಹಿಂದಿನ ಟ್ರಕ್ ಟರ್ಮಿನಲ್ ಹತ್ತಿರ) ಸರ್ವೀಸ್ ರಸ್ತೆಯಲ್ಲಿ ಲಘುವಾಹನದಲ್ಲಿ ಕಸ ತಂದು ಸುರಿಯುತ್ತಿದ್ದುದನ್ನು ಸೆಪ್ಟೆಂಬರ್ 7 ರಂದು ಪಾಲಿಕೆ ಸಿಬ್ಬಂದಿ ಪತ್ತೆ ಮಾಡಿ, ವಾಹನದವರಿಗೆ 2000 ರೂ. ದಂಡ ವಿಧಿಸಿದ್ದಾರೆ. ಸದರಿ ವಾಹನದವರು ಪಕ್ಕದ ಡಾಬಸ್‌ಪೇಟೆಯಿಂದ ಕಸವನ್ನು ತುಂಬಿಕೊಂಡು ಬಂದು ಇಲ್ಲಿ ಸುರಿಯುತ್ತಿದ್ದರೆಂಬುದು ಆಗ ಪಾಲಿಕೆಗೆ ತಿಳಿದುಬಂದಿದೆ.

       ಅಕ್ಟೋಬರ್ 4 ರಂದು ಸಹ ಇದೇ ರೀತಿ ಲಘುವಾಹನದಲ್ಲಿ ಕಸ ತಂದು ಸುರಿಯುವಾಗ ಪಾಲಿಕೆ ಸಿಬ್ಬಂದಿಗೆ ಸಿಕ್ಕಿ ಬಿದ್ದಿದ್ದು, ಪಾಲಿಕೆ ಅಧಿಕಾರಿಗಳು 1000 ರೂ. ದಂಡ ವಿಧಿಸಿದ್ದಾರೆ. ಇದೂ ಸಹ ಡಾಬಸ್‌ಪೇಟೆಯಿಂದ ಬಂದಿದ್ದ ಕಸವಾಗಿತ್ತು. ಮಾರುತಿ ಓಮ್ನಿ ಮತ್ತು ಲಗೇಜ್ ಸಾಗಿಸುವ ಲಘು ವಾಹನದಲ್ಲಿ ಈ ರೀತಿ ಕಸ ತುಂಬಿಕೊಂಡು ಬಂದು ಸುರಿಯಲಾಗುತ್ತಿತ್ತು.

      ‘‘ಕೆಲವು ದಿನಗಳಿಂದ ಕ್ಯಾತಸಂದ್ರ ಹೊರವಲಯದ ಸರ್ವೀಸ್ ರಸ್ತೆಯ ಬದಿ ಕಸ ಸುರಿಯುತ್ತಿದ್ದುದು ಕಂಡುಬಂದಿತು. ಆಗ ಅಲ್ಲಿ ಪಾಲಿಕೆ ಸಿಬ್ಬಂದಿಯನ್ನು ನಿಯೋಜಿಸಿ ಗಮನಿಸಿದಾಗ, ಇವೆರಡು ಪ್ರಕರಣಗಳು ಬೆಳಕಿಗೆ ಬಂದವು’’ ಎಂದು ಪಾಲಿಕೆಯ ಮೂಲಗಳು ‘‘ಪ್ರಜಾಪ್ರಗತಿ’’ಗೆ ತಿಳಿಸಿವೆ.

ಶೆಟ್ಟಿಹಳ್ಳಿ ಬಳಿ ರಿಂಗ್‌ರಸ್ತೆ,
ರೋಟಿಘರ್ ಪಕ್ಕದ ರಸ್ತೆಯಲ್ಲಿ

         ಈ ಮಧ್ಯ ಇತ್ತೀಚೆಗೆ ತುಮಕೂರು ನಗರದ ಶೆಟ್ಟಿಹಳ್ಳಿಯ ಕೆರೆ ಏರಿಗೆ ಹೊಂದಿಕೊಂಡಿರುವ ರಿಂಗ್ ರಸ್ತೆಯ ಇಕ್ಕೆಲಗಳಲ್ಲಿ ಹಳೆ ಕಟ್ಟಡಗಳ ಅವಶೇಷವುಳ್ಳ ಮಣ್ಣು-ಕಲ್ಲು ಇತ್ಯಾದಿ ತ್ಯಾಜ್ಯವನ್ನು ತಂದು ಸುರಿಯುವ ಪ್ರಕರಣಗಳು ಹೆಚ್ಚುತ್ತಿದೆಯೆಂದು ಹಾಗೂ ಇದರ ಜೊತೆಗೆ ಇತರೆ ಕಸವನ್ನೂ ಎಲ್ಲಿಂದಲೋ ತಂದು ಸುರಿಯುತ್ತಿದ್ದು ಇದರಿಂದ ದುರ್ವಾಸನೆ ಉಂಟಾಗುತ್ತಿದೆಯೆಂದು ಈ ಭಾಗದ ಸಾರ್ವಜನಿಕರು ಆತಂಕದಿಂದ ದೂರುತ್ತಿದ್ದಾರೆ.

         ರಿಂಗ್ ರಸ್ತೆಯ ಬದಿಯಲ್ಲೇ ಇಂಥ ಕಟ್ಟಡ ತ್ಯಾಜ್ಯದ ರಾಶಿಗಳು ಉಂಟಾಗುತ್ತಿವೆ. ಇದರಿಂದ ವಾಹನಗಳ ಸಂಚಾರಕ್ಕೂ ತೊಡಕಾಗುವ ಸಂಭವವಿದೆ. ಅಲ್ಲದೆ ನಗರದ ಸೌಂದರ್ಯಕ್ಕೂ ಧಕ್ಕೆ ಆಗುತ್ತಿದೆ. ಈ ರಾಶಿಗಳ ನಡುವೆ ಇನ್ನಿತರೆ ಕಸವನ್ನೂ ತಂದು ಸುರಿಯಲಾಗುತ್ತಿದೆ. ಇದರಿಂದ ದುರ್ವಾಸನೆ ಉಂಟಾಗಿ, ಇಲ್ಲಿ ನಡೆದುಕೊಂಡು ಹೋಗುವವರಿಗೆ ಹಾಗೂ ವಾಹನಗಳಲ್ಲಿ ಸಂಚರಿಸುವವರಿಗೆ ವಿಪರೀತ ಕಿರಿಕಿರಿ ಉಂಟಾಗುತ್ತಿದೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.

       ಇದೇ ರಸ್ತೆಯ ರೋಟಿಘರ್ ಪಕ್ಕದಿಂದ ಬಟವಾಡಿ ಕಡೆಗೆ ಬರುವ ರಸ್ತೆಯಲ್ಲೂ ಇದೇ ಸಮಸ್ಯೆ ಕಾಡುತ್ತಿದೆ. ಇಲ್ಲೂ ಸಹ ಶೆಟ್ಟಿಹಳ್ಳಿ ಕೆರೆ ಪ್ರದೇಶವಿದ್ದು. ಉದ್ದಕ್ಕೂ ಕಸವನ್ನು ತಂದು ರಾಶಿ ಹಾಕಲಾಗುತ್ತಿದೆ. ದುರ್ನಾತದ ನಡುವೆಯೇ ಇಲ್ಲಿ ಸಾರ್ವಜನಿಕರು ಸಂಚರಿಸುವಂತಾಗಿದೆ. ಇತ್ತೀಚೆಗೆ ಈ ಗಲೀಜು ಇಲ್ಲಿ ಹೆಚ್ಚುತ್ತಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

        ಈಗ ಸಂಜೆ ಬೇಗನೆ ಕತ್ತಲಾಗುವುದರಿಂದ ಸಂಜೆ ವೇಳೆಯಲ್ಲೇ ಸಣ್ಣಪುಟ್ಟ ವಾಹನಗಳಲ್ಲಿ ಕಸವನ್ನು ತಂದು ಇಲ್ಲಿ ಎಸೆದು ಹೋಗುವುದನ್ನು ಕಾಣಬಹುದಾಗಿದೆ. ಅಲ್ಲದೆ ಈ ಭಾಗದಲ್ಲಿ ಸೂಕ್ತ ಬೀದಿದೀಪಗಳು ಇಲ್ಲದಿರುವುದು ಇಂಥ ಕೃತ್ಯಕ್ಕೆ ಪೂರಕವಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಿದ್ದಾರೆ.

        ‘‘ರಿಂಗ್ ರಸ್ತೆಯ ಒಂದು ಬದಿಯಲ್ಲಿ ಶೆಟ್ಟಿಹಳ್ಳಿ ಕೆರೆ ಇದೆ. ಇನ್ನೊಂದು ಬದಿಯಲ್ಲಿ ಆಂಜನೇಯ ಸ್ವಾಮಿ ದೇವಾಲಯವಿದೆ. ಇನ್ನು ರೋಟಿಘರ್ ಪಕ್ಕದ ರಸ್ತೆಯಲ್ಲಿ ಸಮೀಪದಲ್ಲೇ ವಸತಿ ಬಡಾವಣೆ ಹಾಗೂ ಶಾಲೆಗಳು ಇವೆ. ಮುಂಜಾನೆ ಹಾಗೂ ಸಂಜೆ ವೇಳೆಯಲ್ಲಿ ಈ ರಸ್ತೆಗಳಲ್ಲಿ ವಾಯುವಿಹಾರಿಗಳು ಅಧಿಕ ಸಂಖ್ಯೆಯಲ್ಲೇ ಸಂಚರಿಸುತ್ತಿರುತ್ತಾರೆ. ಆದ್ದರಿಂದ ಈಗ ಇಲ್ಲಿ ಉಂಟಾಗುತ್ತಿರುವ ಈ ಸಮಸ್ಯೆಯನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ನಿರ್ದಾಕ್ಷಿಣ್ಯವಾಗಿ ನಿವಾರಿಸಬೇಕು’’ ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

LEAVE A REPLY

Please enter your comment!
Please enter your name here