ಬಳ್ಳಾರಿ
ಬಳ್ಳಾರಿ ಜಿಲ್ಲೆಯಲ್ಲಿ ಕೋವಿಡ್‍ಗಾಗಿ ಇದುವರೆಗೆ 10 ಕೋಟಿ ರೂ. ಜಿಲ್ಲಾ ಖನಿಜ ನಿಧಿ ಅನುದಾನ ಸೇರಿದಂತೆ 16.23 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದ್ದು, ಅಡಿಟ್ ವರದಿ ಕೂಡ ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಚಿವರಿಗೆ ವಿವರಿಸಿದರು.
ಮುಖ್ಯಮಂತ್ರಿಗಳು ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಪಂ ಸಿಇಒ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ನಡೆಸಿದ ವಿಡಿಯೋ ಸಂವಾದದಲ್ಲಿ ಬಳ್ಳಾರಿ ಜಿಲ್ಲಾಧಿಕಾರಿ ನಕುಲ್ ಅವರು ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ತೆಗೆದುಕೊಳ್ಳಲಾದ ಕ್ರಮಗಳು,ಪ್ರವಾಹ ಪರಿಸ್ಥಿತಿ ಹಾಗೂ ಉಂಟಾದ ಹಾನಿಗೆ ಸಂಬಂಧಿಸಿದಂತೆ ವಿವರಣೆ ನೀಡಿದರು.
ಜಿಲ್ಲೆಯಲ್ಲಿ ಪ್ರತಿದಿನ 2500 ಟೆಸ್ಟ್ ಮಾಡಲಾಗುತ್ತಿದೆ.ವಿಮ್ಸ್‍ನಲ್ಲಿ ಆರ್‍ಟಿಪಿಸಿಎಲ್ ಲ್ಯಾಬ್ ಇದ್ದು,ಜಿಂದಾಲ್‍ನವರು ಕೂಡ ಆರ್‍ಟಿಪಿಸಿಎಲ್ ಮಶೀನ್ ನೀಡಿರುವುದು ಉಪಯೋಗವಾಗಿದೆ. ಶೇ.20ರಷ್ಟು ಬೆಡ್‍ಗಳು ಖಾಲಿಯಿವೆ ಎಂಬುದನ್ನು ಅವರು ವಿವರಿಸಿದರು.
ಇತ್ತೀಚೆಗೆ ಉದ್ಘಾಟಿಸಲಾದ ಟ್ರಾಮಾಕೇರ್ ಕೇಂದ್ರದ ಕಾರ್ಯಾರಂಭದಿಂದ ತುಂಬಾ ಅನುಕೂಲಕರವಾಗಿದೆ. ಈಗ ಕಳೆದ ಮಾರ್ಚ್ ತಿಂಗಳಿಂದ ಜಿಲ್ಲಾ ಕೋವಿಡ್ ಆಸ್ಪತ್ರೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಜಿಲ್ಲಾಸ್ಪತ್ರೆಯನ್ನು ಮುಂಚೆಯಂತೇ ಅ.1ರಿಂದ ನಾನ್ ಕೋವಿಡ್ ಆಸ್ಪತ್ರೆಯನ್ನಾಗಿ ಕಾರ್ಯನಿರ್ವಹಿಸುವುದಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ 24915 ಪ್ರಕರಣಗಳು ದೃಢಪಟ್ಟಿದ್ದು , 20621 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು,ಸದ್ಯ 3979 ಪ್ರಕರಣಗಳು ಮಾತ್ರ ಸಕ್ರಿಯವಾಗಿವೆ. 315 ಜನರು ಇದುವರೆಗೆ ಕೋವಿಡ್‍ನಿಂದ ಮರಣವನ್ನಪ್ಪಿದ್ದು,ಮರಣದ ಪ್ರಮಾಣ ಶೇ.1.24ರಷ್ಟಿದೆ ಎಂದರು.
ಜಿಲ್ಲೆಯಲ್ಲಿ ಕೋವಿಡ್ 98 ವೆಂಟಿಲೇಟರ್ ಮತ್ತು ನಾನ್‍ಕೋವಿಡ್‍ಗಾಗಿ 39 ವೆಂಟಿಲೇಟರ್ ಸೇರಿದಂತೆ 137 ವೆಂಟಿಲೇಟರ್ ನಮ್ಮಲ್ಲಿದ್ದು,ಯಾವುದೇ ರೀತಿಯ ಸಮಸ್ಯೆ ಬಳ್ಳಾರಿಯಲ್ಲಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.ಮಳೆಹಾನಿಯಿಂದ 4 ಜನರ ಸಾವು;486 ಮನೆಹಾನಿ: ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ 4 ಜನರು ಸಾವನ್ನಪ್ಪಿದ್ದು, 59 ಜಾನುವಾರುಗಳು ಮೃತಪಟ್ಟಿವೆ. 486 ಮನೆಗಳು ಹಾನಿಯಾಗಿವೆ ಎಂದು ಜಿಲ್ಲಾಧಿಕಾರಿ ನಕುಲ್ ಅವರು ಮುಖ್ಯಮಂತ್ರಿಗಳಿಗೆ ವಿವರಿಸಿದರು.
ಸಾವನ್ನಪ್ಪಿದ ನಾಲ್ಕು ಜನರ ಕುಟುಂಬಗಳಿಗೆ ತಲಾ 5ಲಕ್ಷದಂತೆ 20 ಲಕ್ಷ ರೂ. ಪರಿಹಾರ ನೀಡಲಾಗಿದೆ. ಮೃತಪಟ್ಟ 59 ಜಾನುವಾರಗಳಲ್ಲಿ 44 ಜಾನುವಾರುಗಳ ಮಾಲೀಕರಿಗೆ ಪರಿಹಾರ ವಿತರಿಸಲಾಗಿದ್ದು,ಉಳಿದ ಜಾನುವಾರುಗಳ ಪರಿಹಾರ ಕೂಡ ಶೀಘ್ರ ವಿತರಿಸಲಾಗುವುದು. 486 ಮನೆಗಳಿಗೆ ಹಾನಿಯಾಗಿದ್ದು,429 ಮನೆಗಳಿಗೆ ಇದುವರೆಗೆ ಪರಿಹಾರ ವಿತರಿಸಲಾಗಿದೆ ಎಂದು ವಿವರಿಸಿದ ಡಿಸಿ ನಕುಲ್ ಅವರು ಇದುವರೆಗೆ ಈ ಕಾರ್ಯಗಳಿಗಾಗಿ 45ಲಕ್ಷ ರೂ.ಗಳನ್ನು ಖರ್ಚು ಮಾಡಲಾಗಿದೆ ಎಂದರು.ಇನ್ನೂ ವಿವಿಧ ವಿಷಯಗಳ ಕುರಿತು ಡಿಸಿ ಎಸ್.ಎಸ್.ನಕುಲ್ ಅವರು ಮುಖ್ಯಮಂತ್ರಿಗಳಿಗೆ ವಿವರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್, ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ, ಡಿಎಚ್‍ಒ ಡಾ.ಜನಾರ್ಧನ್, ವಿಮ್ಸ್ ನಿರ್ದೇಶಕ ಡಾ.ದೇವಾನಂದ, ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದಗಲ್ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
