ಶಿರಾ : ತಾ.ಪಂ. ಕಚೇರಿಯ ಮುಂದೆ ದಲಿತರ ಪ್ರತಿಭಟನೆ

 ಶಿರಾ

     ತಾಲ್ಲೂಕಿನ ದಲಿತ ಕುಟುಂಬಗಳ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ತಾಲ್ಲೂಕು ಆಡಳಿತ ಸಂಪೂರ್ಣವಾಗಿ ವಿಫಲಗೊಂಡಿದೆ. ದೊಡ್ಡ ಬಾಣಗೆರೆಯ ದಲಿತ ಕಾಲನಿಯ ಅರ್ಹ ಫಲಾನುಭವಿಗಳಿಗೆ ಮಂಜೂರಾದ ನಿವೇಶನಗಳನ್ನು ಹಂಚುವಲ್ಲಿಯೂ ತಾಲ್ಲೂಕು ಆಡಳಿತ ವಿಫಲಗೊಂಡಿದೆ ಎಂದು ಖಂಡಿಸಿ ತಾಲ್ಲೂಕು ದಲಿತ ಸಂಘರ್ಷ ಸಮಿತಿ ಸೇರಿದಂತೆ ವಿವಿಧ ದಲಿತ ಮುಖಂಡರು ಹಾಗೂ ದೊಡ್ಡಬಾಣಗೆರೆಯ ದಲಿತ ಕಾಲನಿಯ ನಿವಾಸಿಗಳು ಮತ್ತು ಗ್ರಾಮಸ್ಥರು ಶಿರಾ ತಾಲ್ಲೂಕು ಪಂಚಾಯ್ತಿಯ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು.

    ತಾಲ್ಲೂಕಿನಲ್ಲಿ ಅನೇಕ ದಲಿತ ಕಾಲನಿಗಳಿದ್ದು ಇಂತಹ ದಲಿತ ಕಾಲನಿಗಳ ಅರ್ಹ ಫಲಾನುಭವಿಗಳು ಸರ್ಕಾರದ ಸೌಲಭ್ಯಗಳಿಗಾಗಿ ಇಲಾಖೆಗಳ ಎಡತಾಕುವಂತಾಗಿದೆ. ಈವರೆಗೂ ಅಂತಹ ಫಲಾನುಭವಿಗಳು ಸೌಲಭ್ಯಗಳನ್ನು ಪಡೆಯಲಾಗಿಲ್ಲ. ಅನೇಕ ದಲಿತ ಕಾಲನಿಗಳಲ್ಲಿ ಇಂದಿಗೂ ಜನ ಸೂರಿಲ್ಲದೆ, ಶೌಚಾಲಯಗಳಿಲ್ಲದೆ ಬದುಕಿದ್ದಾರೆ. ಮೂಲಭೂತ ಸಮಸ್ಯೆಗಳಿಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕಿಂಚಿತ್ತೂ ಸ್ಪಂದಿಸದಂತಾಗಿದ್ದಾರೆ ಎಂದು ಖಂಡಿಸಿ ಡಿ.ಎಸ್.ಎಸ್. ಕಾರ್ಯಕರ್ತರು ಮತ್ತು ದೊಡ್ಡ ಬಾಣಗೆರೆಯ ಗ್ರಾಮಸ್ಥರು ಪ್ರತಿಭಟನೆಗೆ ಮುಂದಾಗಲು ಕಾರಣವಾಗಿದೆ.

     ಡಿ.ಎಸ್.ಎಸ್. ಸಂಚಾಲಕ ಟೈರ್ ರಂಗನಾಥ್ ಮಾತನಾಡಿ, ದೊಡ್ಡಬಾಣಗೆರೆ ಗ್ರಾಮದ ದಲಿತ ಕಾಲನಿಗೆ ಓಟಿಗಾಗಿ ಬರುವ ಜನಪ್ರತಿನಿಧಿಗಳು ಚುನಾವಣೆಯ ನಂತರ ಅತ್ತ ತಲೆ ಹಾಕಿಯೂ ಮಲಗುವುದಿಲ್ಲ. ಸ.ನಂ.24 ರಲ್ಲಿನ ಸರ್ಕಾರಿ ಗೋಮಾಳದ ಜಮೀನಿನಲ್ಲಿ ಈಗಾಗಲೇ ನಿವೇಶನಗಳನ್ನುವಿಂಗಡಿಸಲಾಗಿದ್ದು, ಈವರೆಗೂ ಸೂರಿಲ್ಲದೆ ಬದುಕುತ್ತಿರುವ ಸುಮಾರು 120 ಮಂದಿ ಅರ್ಹ ಫಲಾನುಭವಿಗಳಿಗೆ ನಿವೇಶನವನ್ನೂ ನೀಡಿಲ್ಲ ಎಂದು ಆರೋಪಿಸಿದರು.

    ಡಿ.ಎಸ್.ಎಸ್. ಸಂಘಟನೆಯ ಮತ್ತೋರ್ವ ಸಂಚಾಲಕ ಲಕ್ಷ್ಮೀಕಾಂತ್ ಮಾತನಾಡಿ, ದೊಡ್ಡಬಾಣಗೆರೆಯ ಪುಟ್ಟ ಪುಟ್ಟ ಒಂದೆ ಮನೆಯಲ್ಲಿ 2-3 ಕುಟುಂಬಗಳು ವಾಸ ಮಾಡುವಂತಾಗಿದೆ. ಈ ಕಾಲನಿಯಲ್ಲಿ ರಸ್ತೆಯಷ್ಟೇ ಅಲ್ಲದೆ ಶೌಚಾಲಯವೂ ಇಲ್ಲದೆ ಜನ ಮಲ ಮೂತ್ರ ವಿಸರ್ಜನೆಗೂ ಪರದಾಡುವಂತಾಗಿದೆ. ಇದಕ್ಕೆಲ್ಲಾ ಈ ಭಾಗದ ಜನಪ್ರತಿನಿಧಿಗಳ ನಿರ್ಲಕ್ಷ್ಯವೂ ಕಾರಣ ಎಂದು ಆರೋಪಿಸಿದರು.

      ದಲಿತ ಮುಖಂಡ ಕೊಟ್ಟ ಶಂಕರ್ ಮಾತನಾಡಿ, ಶಿರಾ ಭಾಗದ ದಲಿತರನ್ನು ಚುನಾವಣೆಯ ಸಮಯದಲ್ಲಿ ಓಟಿಗಾಗಿ ಬಳಸಿಕೊಳ್ಳುವ ರಾಜಕಾರಣಿಗಳು ನಂತರ ದಲಿತರನ್ನೆ ಕಡೆಗಣಿಸುತ್ತಾರೆ. ನಿವೇಶನ ಮತ್ತು ವಸತಿ ರಹಿತ ಫಲಾನುಭವಿಗಳನ್ನು ರಾಜೀವ್‍ಗಾಂಧಿ ವಸತಿ ನಿಗಮಕ್ಕೆ ಸೇರ್ಪಡೆ ಮಾಡಬೇಕು. ದಲಿತರಿಗೆ ಪ್ರತ್ಯೇಕ ಸ್ಮಶಾನ ಜಾಗ ಗುರ್ತಿಸಿಕೊಡಬೇಕು. ದೊಡ್ಡಬಾಣಗೆರೆ ಗ್ರಾಮದ ದಲಿತ ಕಾಲನಿಯ ಸಮಸ್ಯೆಗಳನ್ನು ಈ ಕೂಡಲೆ ಇತ್ಯರ್ಥಗೊಳಿಸಬೇಕು ಎಂದು ಒತ್ತಾಯಿಸಿದರು.

     ಹುಲಿಕುಂಟೆ ಹೋಬಳಿಯ ದೊಡ್ಡಬಾಣಗೆರೆ ಗ್ರಾಮದಲ್ಲಿ ಕಳೆದ ಮೂರು ವರ್ಷಗಳಿಂದಲೂ ನಿವೇಶನಗಳನ್ನು ವಿತರಿಸದೆ ತಾಲ್ಲೂಕು ಆಡಳಿತ ನಿರ್ಲಕ್ಷ್ಯ ತಾಳಿದ್ದು ಕೂಡಲೆ ಜನಪ್ರತಿನಿಧಿಗಳು ಸ್ಥಳಕ್ಕೆ ಬರುವವರೆಗೂ ಈ ಪ್ರತಿಭಟನೆಯನ್ನು ಸ್ಥಗಿತಗೊಳಿಸುವುದಿಲ್ಲ ಎಂದು ದಲಿತ ಮುಖಂಡರು ಮತ್ತು ಕಾರ್ಯಕರ್ತರು ಪಟ್ಟು ಹಿಡಿದರು.

    ಗುರುವಾರ ಬೆಳಗ್ಗೆ 10.30 ರಿಂದ ಆರಂಭಗೊಂಡ ಪ್ರತಿಭಟನೆಯ ಕಾವು ಹೆಚ್ಚಾದಂತೆ ತಾ.ಪಂ. ಅಧ್ಯಕ್ಷ ಚಂದ್ರಯ್ಯ, ಸ್ಥಾಯಿ ಸಮಿತಿಯ ಅಧ್ಯಕ್ಷ ತಿಮ್ಮಯ್ಯ, ತಾ.ಪಂ. ಉಪಾಧ್ಯಕ್ಷ ರಂಗನಾಥಗೌಡ, ತಾ.ಪಂ. ಇ.ಓ. ಮೋಹನ್‍ಕುಮಾರ್, ಗ್ರಾ.ಪಂ. ಅಧ್ಯಕ್ಷ ಚಂದ್ರಣ್ಣ ಸೇರಿದಂತೆ ಹುಲಿಕುಂಟೆ ಹೋಬಳಿಯ ಜಿ.ಪಂ. ಸದಸ್ಯ ರಾಮಕೃಷ್ಣ, ತಾ.ಪಂ. ಸದಸ್ಯ ಮಂಜುನಾಥ್, ಗ್ರಾ.ಪಂ. ಸದಸ್ಯ ಮಂಜುನಾಥ್ ಸೇರಿದಂತೆ ಹಲವು ಜನಪ್ರತಿನಿಧಿಗಳು ಪ್ರತಿಭಟನೆಯ ಸ್ಥಳಕ್ಕೆ ಭೇಟಿ ನೀಡಿದರು.

        ಕಳೆದ ಮೂರು ವರ್ಷಗಳಿಂದಲೂ ದೊಡ್ಡಬಾಣಗೆರೆ ದಲಿತ ಕಾಲನಿಯ ನಿವೇಶನಗಳ ಕುರಿತಂತೆ ವ್ಯಾಪಕ ಪ್ರಯತ್ನ ಮಾಡಿದ್ದೇನೆ. ರಸ್ತೆ ಅಭಿವೃದ್ಧಿಗೂ ಶ್ರಮಿಸಿದ್ದೇನೆ. ನಿವೇಶನಗಳ ಭೂಮಿ ದಾಖಲೆ ಪತ್ರಗಳನ್ನು ಹಿಡಿದು ಕಚೇರಿಗಳಿಗೂ ಅಲೆದಿದ್ದೇನೆ ಎಂದು ಪ್ರತಿಭಟನಾಕಾರರಿಗೆ ಜಿ.ಪಂ. ಸದಸ್ಯ ರಾಮಕೃಷ್ಣ ತಿಳಿಸಿದಾಗ, ಪ್ರತಿಭಟನಾಕಾರರು ಜಿ.ಪಂ. ಸದಸ್ಯರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗವೂ ನಡೆಯಿತು.

       ಒಬ್ಬ ಜನಪ್ರತಿನಿಧಿಯಾದ ನೀವು ನಿಮ್ಮ ಕೆಲಸವನ್ನು ಮಾಡಲೆಬೇಕು. ನಿಮ್ಮನ್ನು ಆಯ್ಕೆ ಮಾಡಿ ಕಳುಹಿಸಿರುವುದೆ ಸಾರ್ವಜನಿಕರ ಕೆಲಸಗಳಿಗೆ ಸ್ಪಂದಿಸಬೇಕೆಂದು. ಆದರೂ ಮೂರು ವರ್ಷಗಳಿಂದಲೂ ನಿವೇಶನ ನೀಡಲಾಗಿಲ್ಲ ಎಂದು ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡರಲ್ಲದೆ 120 ನಿವೇಶನಗಳನ್ನು ಅರ್ಹ ಎಲ್ಲಾ ಫಲಾನುಭವಿಗಳಿಗೆ ನೀಡಲೆಬೇಕೆಂದು ಪಟ್ಟು ಹಿಡಿದರು.
 

      ಹಲವು ಕಾನೂನಿನ ತೊಡಕುಗಳ ನಡುವೆಯೂ ಅರ್ಹ ದಲಿತ ಕುಟುಂಬಗಳನ್ನು ಗುರ್ತಿಸಿ ನಿವೇಶನ ನೀಡುವುದಾಗಿ ತಾ.ಪಂ. ಅಧಿಕಾರಿಗಳು, ಜಿ.ಪಂ. ಸದಸ್ಯರು ಭರವಸೆ ನೀಡಿದರಲ್ಲದೆ ಅರ್ಹರನ್ನು ಗುರ್ತಿಸಿ ಒಂದು ಪಟ್ಟಿಯನ್ನು ತಯಾರಿಸಲು ಸ್ಥಳದಲ್ಲಿಯೆ ಸಮಿತಿಯೊಂದನ್ನು ರಚಿಸಿದ ನಂತರ ಪ್ರತಿಭಟನೆಯನ್ನು ವಾಪಸ್ ಪಡೆಯಲಾಯಿತು.

     ಸಾಮಾಜಿಕ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ಸಿ.ಕೆ.ಮಹೇಶ್, ಮದಲೂರು ನರಸಿಂಹಮೂರ್ತಿ, ಕೋಟೆ ಲೋಕೇಶ್, ಕಾರೇಹಳ್ಳಿ ರಂಗನಾಥ್, ತಿಪ್ಪೇಸ್ವಾಮಿ, ಕೆ.ರಾಜು, ನೀರ್‍ಕಲ್ ನರಸಿಂಹಯ್ಯ, ಮಧುಗಿರಿ ಸಂಜೀವಯ್ಯ, ಚೆನ್ನನಕುಂಟೆ ರಂಗನಾಥ್, ಬರಗೂರಿನ ಮಂಜು, ಲೋಕೇಶ್, ಮಾಗೋಡು ಯೋಗಾನಂದ್, ಬೂತರಾಜು, ದೊಡ್ಡ ಬಾಣಗೆರೆಯ ನರಸಪ್ಪ, ರಂಗಪ್ಪ ಮುಂತಾದವರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap