ಬಳ್ಳಾರಿ
ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ, ಸಂಸ್ಕೃತಿ – ಸಂಸ್ಕಾರಗಳನ್ನು ಕಲಿಸುವ ಮೂಲಕ ಬದುಕಿನಲ್ಲಿ ನೈತಿಕ ಮೌಲ್ಯಗಳನ್ನು ಕಲಿಸಿ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು ಎಂದು ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳು ಕರೆ ನೀಡಿದ್ದಾರೆ.
ಕೊಟ್ಟೂರು ಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮಂಗಳವಾರ ನಡೆದ ಕಾಲೇಜಿನ ದಾನಿಗಳ ದಿನಾಚರಣೆ ಮತ್ತು 2018 – 19ರ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಆಶೀರ್ವಚನ ನೀಡಿ ಶ್ರೀಗಳು ಮಾತನಾಡಿದರು.
ಶಿಕ್ಷಕರನ್ನು ರೂಪಿಸುತ್ತಿರುವ ಕೊಟ್ಟೂರುಸ್ವಾಮಿ ಶಿಕ್ಷಣ ಮಹಾವಿದ್ಯಾಲಯದ ಶಿಕ್ಷಕರು ಶಿಸ್ತು ಮತ್ತು ಸಂಸ್ಕಾರ, ಶೈಕ್ಷಣಿಕ ಸಾಧನೆಯಿಂದ ಖ್ಯಾತಿ ಪಡೆದಿದ್ದಾರೆ. ಕಠಿಣ ವಿಷಯವನ್ನು ಸುಲಭವಾಗಿ ಕಲಿಸುವ ಕೌಶಲ್ಯವನ್ನು ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಪ್ರಶಿಕ್ಷಣಾರ್ಥಿಗಳು ಹೆಚ್ಚಿನ ಕಲಿಕೋತ್ಸಾಹಿಗಳು ಆಗಬೇಕು ಎಂದರು.
ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಉಡೇದ ಬಸವರಾಜ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಗುಣಮಟ್ಟದ ಶಿಕ್ಷಣ ಬೋಧನೆ ಮತ್ತು ಕಲಿಕೆಯಲ್ಲಿ ಕೊಟ್ಟೂರುಸ್ವಾಮಿ ಶಿಕ್ಷಣ ಮಹಾವಿದ್ಯಾಲಯದ ಸಿಬ್ಬಂದಿಗಳು ಮತ್ತು ಪ್ರಶಿಕ್ಷಣಾರ್ಥಿಗಳು ಶಿಕ್ಷಣ ಕ್ಷೇತ್ರದಲ್ಲಿ ವಿಶಿಷ್ಟವಾದ ಛಾಪನ್ನು ಮೂಡಿಸಿದ್ದಾರೆ ಎಂದರು.
ವೀರಶೈವ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಎಚ್.ಎಂ. ವೀರಭದ್ರಶರ್ಮ ಅವರು ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿ, ಕೊಟ್ಟೂರುಸ್ವಾಮಿ ಶಿಕ್ಷಣ ಮಹಾವಿದ್ಯಾಲಯವು ಗುಣಮಟ್ಟದ ಬೋಧನೆ, ಕೌಶಲ್ಯ ಕಲಿಕೆಯಲ್ಲಿ ವಿಶೇಷವಾಗಿ ಗುರುತಿಸಿಕೊಂಡಿದೆ ಎಂದರು.
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಿಂದ ಬಿಎಡ್ ಪದವಿಯಲ್ಲಿ ರ್ಯಾಂಕ್ ಪುರಸ್ಕøತರಾದ ಜಿ. ಐಶ್ವರ್ಯಲಕ್ಷ್ಮಿ (ಪ್ರಥಮ), ಸಯಿದಾ ತಸನಿಂ (ದ್ವಿತೀಯ), ನಿಷದ್ ಅಜುಂ (ತೃತೀಯ), ನೇತ್ರಾವತಿ (ನಾಲ್ಕನೇ), ಎಂ. ಅಕ್ಷತಾ (ಹತ್ತನೇ) ರ್ಯಾಂಕ್ ಪಡೆದವರನ್ನು ಈ ಸಂದರ್ಭದಲ್ಲಿ ಅಭಿನಂದಿಸಿ, ಗೌರವಿಸಲಾಯಿತು. ವೀರಶೈವ ವಿದ್ಯಾವರ್ಧಕ ಸಂಘವು ರ್ಯಾಂಕ್ ಪುರಸ್ಕøತ ಆರು ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ತಲಾ ಐದು ಸಾವಿರ ರೂಪಾಯಿಗಳ ಪ್ರೋತ್ಸಾಹಧನ ನೀಡಿ, ಶುಭ ಹಾರೈಸಿತು.
ವೀರಶೈವ ವಿದ್ಯಾವರ್ಧಕ ಸಂಘದ ಹೊಸಪೇಟೆಯ ಷಾ ಭವರಲಾಲ್ ಬಾಬುಲಾಲ್ ನಾಹರ್ ಶಿಕ್ಷಣ ಮಹಾವಿದ್ಯಾಲಯದ ಪಿಎಚ್‍ಡಿ ಪದವಿ ಪಡೆದ ಉಪನ್ಯಾಸಕರಾದ ಡಾ. ಜಗದೀಶ ಶೇಖರಯ್ಯ, ಡಾ. ಸತೀಶ್ ಸೂರಿಮಠ, ಡಾ. ಶಿವನಗೌಡ ಎಸ್. ಸತ್ಮಾರ್ ಮತ್ತು ಡಾ. ಸಿದ್ಧಲಿಂಗಸ್ವಾಮಿ ಇವರುಗಳನ್ನು ಈ ಸಂಧರ್ಭದಲ್ಲಿ ಗೌರವಿಸಿ, ಅಭಿನಂದಿಸಲಾಯಿತು.
ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಟಿ. ಕೊಟ್ರಪ್ಪ ಅವರು ವಿದ್ಯಾರ್ಥಿ ಸಂಘದ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಸಂಘದ ಸಹಕಾರ್ಯದರ್ಶಿ ಕೆ. ವೀರೇಶಗೌಡ, ಕೋಶಾಧಿಕಾರಿ ಕೋಳೂರು ಮಲ್ಲಿಕಾರ್ಜುನಗೌಡ, ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ಅರವಿ ಬಸವನಗೌಡ, ಕಾರ್ಯಕಾರಿ ಸಮಿತಿ ಸದಸ್ಯರಾದ ಕೆ. ಉಮಾಶಂಕರ್, ಕೆ. ರಾಮನಗೌಡ, ಕಾಲೇಜಿನ ಆಡಳಿತ ಮಂಡಲಿ ಸದಸ್ಯರಾದ ಎಚ್.ಎಂ. ಕೊಟ್ರಯ್ಯ, ಎಲ್.ಟಿ. ಶೇಖರ್, ಎಚ್. ಎಂ. ಮಹೇಂದ್ರ ಕುಮಾರ್ ವೇದಿಕೆಯಲ್ಲಿದ್ದರು.
ಕಾಲೇಜಿನ ಪ್ರಾಂಶುಪಾಲ ಸತೀಶ್ ಎ. ಹಿರೇಮಠ್ ಸ್ವಾಗತಿಸಿದರು. ಕಾಲೇಜಿನ ಉಪನ್ಯಾಸಕ ಡಾ. ಜಗದೀಶ್ ಬಸಾಪುರ ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ದಾನಿಗಳ ಕುರಿತು ಉಪನ್ಯಾಸರಾದ ಶ್ರೀ ಎನ್.ಜಿ. ಜಯಣ್ಣ ಹಾಗೂ ಡಾ. ವಿಕ್ರಮ್ ಪಿ. ಹಿರೇಮಠ್ ರವರು ಮಾತನಾಡಿದರು, ವಿದ್ಯಾರ್ಥಿಗಳು ಪ್ರಾರ್ಥನೆ ಸಲ್ಲಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
