ಸೂಕ್ತ ಪರಿಹಾರ ನೀಡದೆ ಹೋದರೆ ಎತ್ತಿನಹೊಳೆ ಕಾಮಗಾರಿ ಸಾಧ್ಯವಿಲ್ಲ

ತಿಪಟೂರು :
   
    ದೀಪದ ಬುಡದಲ್ಲಿ ಕತ್ತಲು, ಹಿತ್ತಲಗಿಡ ಮದ್ದಲ್ಲ ಎನ್ನುವ ಗಾದೆಗೆ ಹೇಳಿ ಮಾಡಿಸಿದಂತೆ ಇರುವ ಎತ್ತಿನ ಹೊಳೆ ಕಾಮಗಾರಿಯು ನಡೆಯುತ್ತಿದ್ದು ತೀವ್ರ ಬರಗಾಲದಿಂದ ಕೂಡಿರುವ ಜನರು ಜಮೀನು ಬಿಟ್ಟುಕೊಟ್ಟರು ಹನಿ ನೀರು ದಕ್ಕದಿರುವುದು ವಿಪರ್ಯಾಸ ಎಂದು ಎತ್ತಿನಹೊಳೆ ಹೋರಾಟ ಸಮಿತಿಯ ಕಾರ್ಯದರ್ಶಿ ಎಸ್.ಎನ್ ಸ್ವಾಮಿ ತಿಳಿಸಿದರು.
     ನಗರದ ರೈತ ಭವನದಲ್ಲಿ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನಲ್ಲಿ ಹಾದು ಹೋಗುತ್ತಿರುವ ಎತ್ತಿನಹೊಳೆ ಯೋಜನೆಗೆ ತಾಲ್ಲೂಕಿನ ನೂರಾರು ಎಕರೆ ಜಮೀನು ಸ್ವಾಧೀನವಾಗುತ್ತಿದ್ದು, ಸಾವಿರಾರು ಜನರು ಬದುಕನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಈ ಯೋಜನೆಯಲ್ಲಿ ಇಲ್ಲಿಯ ತಾಲ್ಲೂಕಿನ ರೈತರಿಗೆ ತುಂಬಾ ಅನ್ಯಾಯವಾಗಿದೆ. ಮೊದಲಿಗೆ, ಎತ್ತಿನಹೊಳೆ ಯೋಜನೆಯ ಕಾಲುವೆಯು ಹಾದು ಹೋಗುವ ತಿಪಟೂರಿನ ಭಾಗದಲ್ಲಿ ತೀವ್ರ ಬರ ಪರಿಸ್ಥಿತಿಯಿದೆ.
 
    ಕಳೆದ ಹಲವಾರು ವರ್ಷಗಳಿಂದ ಮಳೆಯಿಲ್ಲದೆ, ನೀರಿಲ್ಲದೆ ಈ ಭಾಗದ ಜನರು ತತ್ತರಿಸಿ ಹೋಗಿದ್ದಾರೆ. ಏಕೆಂದರೆ, ಮಳೆ ಬಾರದೆ ಕೆರೆ, ಕಟ್ಟೆಗಳು ತುಂಬಿಲ್ಲ. ಇಲ್ಲಿ ಅಂತರ್ಜಲ ತೀವ್ರವಾಗಿ ಕುಸಿದಿದ್ದು ಸಾವಿರಕ್ಕೂ ಹೆಚ್ಚು ಅಡಿ ಆಳಕ್ಕೆ ಹೋಗಬೇಕಾಗಿದೆ. ಇಲ್ಲಿ ಕುಡಿಯುವ ನೀರಿಗೆ, ಜೊತೆಗೆ ಮನೆ ಬಳಕೆಯ ನೀರಿಗೂ ಕಿಲೋಮೀಟರ್‍ಗಟ್ಟಲೆ ಹೋಗಿ ತರಬೇಕಾಗಿದೆ. ಈ ಪರಿಸ್ಥಿತಿಯು ಕಸಬಾ, ಹೊನ್ನವಳ್ಳಿ, ಕಿಬ್ಬನಹಳ್ಳಿ ಹೋಬಳಿಗಳ ಹಲವಾರು ಹಳ್ಳಿಗಳಲ್ಲಿ ಇದೆ.
    ಆದರೆ ದುರಂತವೆಂದರೆ, ಎತ್ತಿನಹೊಳೆ ಯೋಜನೆಯಲ್ಲಿ ತಿಪಟೂರಿಗೆ ನೀರಿನ ಪಾಲು ನೀಡಿಲ್ಲ. ಜೊತೆಗೆ, ತಿಪಟೂರು ತಾಲ್ಲೂಕಿಗೆ ಹೇಮಾವತಿ ನೀರನಲ್ಲೂ ಮೋಸವಾಗಿದೆ. ಬಹುಗ್ರಾಮ ಕುಡಿಯುವ ಯೋಜನೆಯಲ್ಲಿ  ಕೆರೆಯ ಶೇ.10 ರಿಂದ 20 ಭಾಗದಷ್ಟು ಮಾತ್ರ ನೀರನ್ನು ತುಂಬಿಸಲಾಗುತ್ತದೆ. ಅದರಿಂದ ಅಂತರ್ಜಲ ಅಭಿವೃದ್ಧಿಯಿರಲಿ, ಗುಂಡಿ ತುಂಬುವ ನೀರನ್ನು ಮಣ್ಣು ಹೀರಿಕೊಳ್ಳುತ್ತದೆ ಮತ್ತು ಆವಿಯಾಗಿ ಹೋಗುತ್ತದೆ. ಆ ನೀರು ಕೂಡ ಯೋಜನೆಯಡಿ ಬರುವ ಎಲ್ಲಾ ಕೆರೆಗಳಿಗೂ ನಿಗದಿಯಾದ ಪ್ರಮಾಣದಲ್ಲಿ ಸಿಗುವುದಿಲ್ಲ. ಹೀಗೆ ಎಲ್ಲಾ ರೀತಿಯಲ್ಲೂ ನೀರಿನ ವಂಚನೆ ನಡೆಯುತ್ತಿದೆ. ಅದ್ದರಿಂದ, ತಿಪಟೂರು ತಾಲ್ಲೂಕಿಗೂ ಅಗತ್ಯವಾದಷ್ಟು, ಕನಿಷ್ಟ ಪಕ್ಷ 1.5 ಟಿಎಂಸಿ ನೀರನ್ನು ಹಂಚಿಕೆ ಮಾಡಬೇಕು.
    ಈ ಯೋಜನೆಗೆಂದು ನಡೆದ ಸಾಮಾಜಿಕ ಪರಿಣಾಮ ವರದಿಯನ್ನು ಇದುವರೆಗೂ ಬಹಿರಂಗಪಡಿಸಿಲ್ಲ. ಇದರಿಂದಾಗಿ ಪರಿಹಾರ ಹಾಗೂ ಇತರೆ ಸೌಲಭ್ಯಗಳನ್ನು ಸಂತ್ರಸ್ತರು ಪಡೆಯಲು ಅಸಾಧ್ಯವಾಗುತ್ತದೆ. ಆದ್ದರಿಂದ ವರದಿಯ ವಿವರಗಳನ್ನು ಕೂಡಲೆ ಬಹಿರಂಗವಾಗಿ ಪ್ರಕಟಿಸಬೇಕು. ಕಾಮಗಾರಿಗೂ ಮುನ್ನ ಭೂಮಿ, ಮರ, ಕಟ್ಟಡ, ಇನ್ನಿತರ ಪರಿಹಾರದ ಜೊತೆಗೆ ಆರ್‍ಎಫ್‍ಸಿಟಿಎಲ್‍ಎಆರ್‍ಆರ್-2013 ಕಾಯ್ದೆಯಡಿ ಬರುವ ಎರಡನೆ ಷೆಡ್ಯೂಲ್‍ನ ಸವಲತ್ತುಗಳನ್ನು ಘೋಷಿಸಬೇಕು.
     ಈಗಾಗಲೆ ತ್ರಿಪಕ್ಷೀಯ ಒಪ್ಪಂದಗಳನ್ನು ಮಾಡಿಕೊಂಡು ರೈತರಿಗೆ ಒಂದಿಷ್ಟು ಹಣ ಚೆಲ್ಲಿ ಕಾಮಗಾರಿ ನಡೆಸುತ್ತಾ, ವಂಚನೆ ನಡೆಸುತ್ತಿರುವುದನ್ನು ನಿಲ್ಲಿಸಬೇಕು. ಹಿಡುವಳಿದಾರರ/ಸಂತ್ರಸ್ತರ ಅನುಪಸ್ಥಿತಿಯಲ್ಲಿ ಜೆ.ಎಂ.ಸಿ ಮಾಡಬಾರದು. ಈಗಾಗಲೆ ಇದರಿಂದ ಸಂತ್ರಸ್ತ ರೈತರಿಗೆ ಅನ್ಯಾಯವಾಗಿದೆ. ಜೊತೆಗೆ ಆರ್.ಎಫ್.ಸಿ.ಟಿ.ಎಲ್. ಎ.ಆರ್.ಆರ್- 2013 ಕಾಯ್ದೆಯ ಪ್ರಕಾರ ಅದು ಅಸಿಂಧುವಾಗುತ್ತದೆ ನಮಗೆ ನೀರು, ಸೂಕ್ತ ಪರಿಹಾರ ನೀಡದೆ ಹೋದರೆ ಯಾವುದೆ ಕಾರಣಕ್ಕೂ ಎತ್ತಿನ ಹೊಳೆ ಕಾಮಗಾರಿ ಮಾಡಲು ಬಿಡುವುದಿಲ್ಲವೆಂದು ತಿಳಿಸಿದರು ಮತ್ತು ಇದರ ಬಗ್ಗೆ ಇದೆ ತಿಂಗಳ 24ರಂದು ತಿಪಟೂರಿನ ಕೋಡಿ ಸರ್ಕಲ್ ನಿಂದ ಎ.ಸಿ. ಕಛೇರಿವರೆಗೆ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದ್ದು ಎಲ್ಲ ಆ ರೈತ ಬಾಂದವರು, ಸಂತ್ರಸ್ತರುಗಳು ಭಾಗವಹಿಸಲಿದ್ದಾರೆಂದು ತಿಳಿಸಿದರು.
     ಎತ್ತಿನಹೊಳೆ ಹೋರಾಟ ಸಮಿತಿಯ ಸಹ ಕಾರ್ಯದರ್ಶಿ ಮನೋಹರ್ ಪಟೇಲ್ ಮಾತನಾಡಿ ಈ ಕಾಮಗಾರಿಗಾಗಿ ಹೊನ್ನವಳ್ಳಿ ಅಮೃತ ಮಹಲ್ ಕಾವಲಿನ ಸುಮಾರು 500 ಎಕರೆ ಎತ್ತಿನ ಹೊಳೆಗೆ ಬಲಿಯಾಗುತ್ತಿದ್ದು ಇಲ್ಲಿನ ಜೈವಿಕ ಪರಿಸರದ ಮೇಲೆ ತುಂಬಾ ಪರಿಣಾಮ ಬೀರಿ ಅಲ್ಲಿನ ಜನ, ಜಾನುವಾರು, ಕಾಡುಪ್ರಾಣಿಗಳಿಗೆ ತುಂಬಲಾರದ ನಷ್ಟವಾಗಿ ಎಲ್ಲಿಗೆ ಹೋಗುತ್ತವೆ ಮತ್ತು ಸಂತ್ರಸ್ತ ಜನರಿಗೆ ಎಲ್ಲಿ ಯೋಜನೆಯನ್ನು ಕಲ್ಪಿಸಲಿದ್ದೀರಾ ಎಂದು ಪ್ರಶ್ನಿಸಿದರು.
     ಇದೆ ಸಂದರ್ಭದಲ್ಲಿ ಸಭೆಯಲ್ಲಿದ್ದ ಎತ್ತಿನ ಹೊಳೆ ಹೋರಾಟ ಸಮಿತಿಯ ನಿರ್ದೇಶಕರು, ಸದ್ಯರು, ಸಂತ್ರಸ್ತ ರೈತರೆಲ್ಲ ಒಕ್ಕೊರಲಿನಿಂದ ನಾವು ತಾಲ್ಲೂಕಿಗೆ ಎಷ್ಟು ನೀರು ಹಂಚಿಕೆಯಾಗಿದೆ, ಪರಿಹಾರವೆಷ್ಟು, ಸಂತ್ರಸ್ತರಿಗೆ ಯಾವ ಯೋಜನೆಯನ್ನು ನೀಡುತ್ತೀದ್ದೀರಾ ಎಂದು ತಿಳಿಸುವ ಜಿ.ಓ ಆಗುವವರೆಗೂ ಯಾವುದೆ ಕಾರಣಕ್ಕೂ ಕಾಮಗಾರಿ ಮಾಡಲು ಬಿಡುವುದಿಲ್ಲವೆಂದು ಆಕ್ರೋಷ ವ್ಯಕ್ತಪಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap