ಅವಸಾನದ ಅಂಚಿನಲ್ಲಿರುವ ಪ್ರಜಾಪ್ರಭುತ್ವ: ಸಾಣೇಹಳ್ಳಿಶ್ರೀ

ಸಾಣೇಹಳ್ಳಿ:

     ಪ್ರಸ್ತುತ ಮತದಾರರು ಮತ ಮಾರಿಕೊಳ್ಳುತ್ತಿದ್ದರೆ, ರಾಜಕಾರಣಿಗಳು ಖರೀದಿಸುತ್ತಿರುವ ಪರಿಣಾಮ ಇಂದು ಪ್ರಜಾಪ್ರಭುತ್ವ ಅವಸಾನದ ಅಂಚಿನಲ್ಲಿದೆ ಎಂದು ತರಳಬಾಳು ಸಾಣೇಹಳ್ಳಿ ಶಾಖಾ ಮಠದ ಶ್ರೀಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
ಇಲ್ಲಿನ ಶಿವಕುಮಾರ ಬಯಲು ರಂಗಮಂದಿರದಲ್ಲಿ ಆಯೋಜಿಸಿರುವ ರಾಷ್ಟ್ರೀಯ ನಾಟಕೋತ್ಸವÀದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರನೇ ಪ್ರಭು ಆಗಿದ್ದಾನೆ. ಆದರೆ, ರಾಜಕಾರಣಿಗಳನ್ನು ಇದನ್ನು ಮರೆತಂತೆ ಕಾಣುತ್ತಿದೆ.

        ರಾಜಕಾರಣಿ ತಾನು ನಂಬಿದ ತತ್ವಗಳಿಗೆ ಬದ್ಧನಾಗಿರಬೇಕು. ಆದರೆ, ಅಧಿಕಾರಕ್ಕಾಗಿ ತತ್ವ ಸಿದ್ಧಾಂತಗಳಿಗೆ ತಿಲಾಂಜಲಿ ಇಟ್ಟು ಪರಸ್ಪರ ಕೈ ಕೈ ಹಿಡಿಯುವುದರಲ್ಲಿ ಎಂಥಹ ಬದ್ಧತೆ ಇದೆ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.

        ಇರುವುದರಲ್ಲಿಯೇ ತೃಪ್ತಿ ಪಡುವುದು ಹಾಗೂ ದುಡಿದು ಉಣ್ಣುವುದು ಚಲನಶೀಲತೆಯಾಗಿದೆ. ಇದು ಕೇವಲ ರಾಜಕೀಯ ಕ್ಷೇತ್ರದಲ್ಲಷ್ಟೇ ಅಲ್ಲ; ಜೀವನದ ಪ್ರತಿಯೊಂದ ಕ್ಷೇತ್ರದಲ್ಲಿರುವವರಿಗೂ ಬರಬೇಕು. ಸಂಗ್ರಹ ಬುದ್ಧಿ ಜಡತ್ವವಾಗಿದೆ ಎಂದ ಅವರು, ಒಬ್ಬರ ಮೇಲೊಬ್ಬರು ಗೂಬೆ ಕೂರಿಸದೇ, ತಮ್ಮ ಜವಾಬ್ದಾರಿ ಅರಿತು ನಡೆಯಬೇಕು. ಮೊದಲು ತನ್ನನ್ನು ತಾನು ತಿದ್ದಿಕೊಳ್ಳುವ ಮುನ್ನ ಸರಿಯಾಗಿ ಹೆಜ್ಜೆ ಇಡುವ ಸಂಕಲ್ಪ ಮಾಡಬೇಕೆಂದು ಸಲಹೆ ನೀಡಿದರು.

          ದೀಪಾವಳಿ ಕೇವಲ ಹೊರಗಡೆ ಬೆಳಕು ಮೂಡಿಸುವುದಲ್ಲ, ಒಳಗಡೆ ಜ್ಞಾನದ ಬೆಳಕು ಮೂಡಿಸುವುದಾಗಿದೆ. ಬಡತನ ಶಾಪವಲ್ಲ; ವರ. ಬಡತನ, ಹಸಿವು ಕಲಿಸಿದಷ್ಟು ಪಾಠವನ್ನು ಇನ್ನಾರೂ ಕಲಿಸಲು ಸಾಧ್ಯವಿಲ್ಲ ಎನ್ನುವುದನ್ನು ಪ್ರತಿಯೊಬ್ಬರು ಅರಿತು. ಕಲಿತ ಪಾಠದ ಮೂಲಕ ಸರಿಯಾದ ಜೀವನ ಸಾಗಿಸಬೇಕೆಂದು ಕರೆ ನೀಡಿದರು.

         ಮಾಡಾಳು ನಿರಂಜನ ಪೀಠದ ಶ್ರೀರುದ್ರಮುನಿ ಸ್ವಾಮೀಜಿ ಮಾತನಾಡಿ, ಇಂದು ಕಾಯುವ ಮುಖಂಡರೆ ಕಾಡುವವರಾಗಿದ್ದಾರೆ. ಮುಖಂಡರು ಅವರವರ ಕ್ಷೇತ್ರದ ಕೆಲಸಗಳನ್ನು ಶ್ರದ್ಧೆಯಿಂದ ಮಾಡಬೇಕು. ಮುಖಂಡರಲ್ಲಿ ಸರಳ ವ್ಯಕ್ತಿತ್ವ, ದೂರದೃಷ್ಟಿ, ನಿಷ್ಠುರತೆÉ, ನಿಸ್ವಾರ್ಥತೆ ಇಲ್ಲದಿರುವುದೇ ಇಂದಿನ ಎಲ್ಲ ಅನಾಹುತಗಳಿಗೆ ಕಾರಣವಾಗಿದೆ ಎಂದರು.

        `ಚಲನಶೀಲ ರಾಜಕಾರಣ’ ಕುರಿತು ಉಪನ್ಯಾಸ ನೀಡಿದ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್, ರಾಜಕಾರಣ ಎಂದಿಗೂ ಜಡವಾಗುವುದಿಲ್ಲ. ಆದರೆ, ಯಾವ ದಿಕ್ಕಿನತ್ತ ಚಲನಶೀಲಗೊಳ್ಳುತ್ತದೆ ಎನ್ನುವುದು ಬಹು ಮುಖ್ಯ. ಆಡಳಿತ ಜನಪರ ಚಲನಶೀಲತೆ ಹೊಂದಿರಬೇಕಾದುದು ಪ್ರಜಾಪ್ರಭುತ್ವದ ಆಶಯವಾಗಿದೆ. ಭಾರತ ಪ್ರಜಾಪ್ರಭುತ್ವ ದೇಶವಾಗಿದ್ದರೂ ಎಲ್ಲ ಪಕ್ಷಗಳಲ್ಲಿಯೂ ಮತ್ತೆ ವಂಶಾಡಳಿತ ಶುರುವಾಗಿರುವುದು ವಿಪರ್ಯಾಸವಾಗಿದೆ ಎಂದು ಹೇಳಿದರು.

        ಹಣಬಲ, ಜಾತಿಬಲ, ಅನುಕಂಪ, ವಂಶದ ಕುಡಿಯ ನೆರಳಿನ ಆಧಾರದ ಮೇಲೆ ಚುನಾವಣೆಗಳು ನಡೆಯುತ್ತಿರುವುದು ದುರದೃಷ್ಟಕರ ಸಂಗತಿಯಾಗಿದ್ದು, ಇದು ಚಲನಶೀಲತೆಯಲ್ಲ ಹಿಮ್ಮುಖ ನಡೆ. ಜನರಿಂದ ದೂರವಿದ್ದು ಯಾರೂ ರಾಜಕಾರಣ ಮಾಡಲು ಸಾಧ್ಯವಿಲ್ಲ. ಅಧಿಕಾರ ಸಿಕ್ಕಮೇಲೆ ತಾನು ಹಾಕಿದ ಬಂಡವಾಳ ವಾಪಸ್ ಪಡೆಯುವುದು ಸಹ ಚಲನಶೀಲ ರಾಜಕಾರಣವಲ್ಲ ಎಂದರು.

        ಚುನಾವಣೆಯಲ್ಲಿ ಶಿಕ್ಷಕರ ಕ್ಷೇತ್ರವೂ ಭ್ರಷ್ಟವಾಗಿದೆ. ಇನ್ನು ಅವರಿಂದ ಪಾಠ ಹೇಳಿಸಿಕೊಂಡ ವಿದ್ಯಾರ್ಥಿ ಯಾವ ರೀತಿಯ ನಿಸ್ವಾರ್ಥ ರಾಜಕಾರಣಿಯಾಗಬಲ್ಲ? ಎಂದು ಪ್ರಶ್ನಿಸಿದ ಅವರು, ದೇಶದಲ್ಲಿ ಪ್ರಜಾಪ್ರಭುತ್ವ ಇದ್ದರೂ ಪ್ರಭುತ್ವದ ಕಡೆಗೆ ಸಾಗುತ್ತಿರುವುದು ಚಲಶೀಲತೆಗೆ ವಿರುದ್ಧವಾದದು. ಸಮಾಜಕ್ಕೆ ಅಗತ್ಯವಾದ ಅಂಶಗಳನ್ನು ಗುರುತಿಸಿ ಅವುಗಳನ್ನು ಈಡೇಸುವುದೇ ನಿಜವಾದ ರಾಜಕಾರಣ ಎಂದರು.

          ನಟ ಎಂ ಕೆ ಸುಂದರರಾಜು ಮಾತನಾಡಿ, ಮನುಷ್ಯ ಮನುಷ್ಯನಾಗಿ ಕಾಣುವುದು ರಂಗಭೂಮಿಯಲ್ಲಿ ಮಾತ್ರ. ಇಡೀ ದೇಶದ ರಂಗಕರ್ಮಿಗಳಿಗೆಲ್ಲ ಸಾಣೇಹಳ್ಳಿ ಎಲ್ಲಿದೆ ಎನ್ನುವುದು ಗೊತ್ತಿದೆ. ಇದಕ್ಕೆ ಕಾರಣಕರ್ತರು ಪಂಡಿತಾರಾಧ್ಯ ಶ್ರೀಗಳು ಮತ್ತು ಸಿಜಿಕೆ ಎಂದರು.
ಹಿರೇಕೇರೂರು ಶಾಸಕ ಬಿ.ಸಿ.ಪಾಟೀಲ್ ಮಾತನಾಡಿ, ಕೇವಲ ಪೂಜೆ ಮಾಡಿದರೆ ಲಕ್ಷ್ಮಿ ಬರಲು ಸಾಧ್ಯವಿಲ್ಲ. ಬಸವಣ್ಣನ ಹೇಳಿದಂತೆ ಕಾಯಕವೇ ಕೈಲಾಸ ಎನ್ನುವುದನ್ನು ಅರಿಯಬೇಕು. ನನಗೆ ಸುಳ್ಳು ಹೇಳುವ ಅಭ್ಯಾಸವಿಲ್ಲ. ಆದರೆ, ಜನ ಸುಳ್ಳು ಹೇಳಿದರೆ ಖುಷಿಪಡುತ್ತಾರೆ. ರಾಜಕಾರಣಿಗಳು ಮೊದಲು ನಡವಳಿಕೆಗಳನ್ನು ತಿದ್ದಿಕೊಳ್ಳಬೇಕು ಎಂದರು.

           ಕಾರ್ಯಕ್ರಮದಲ್ಲಿ ಹೊಳಲ್ಕೆರೆ ಶಾಸಕ ಎಂ ಚಂದ್ರಪ್ಪ, ಬೇಲೂರು ಶಾಸಕ ಕೆ ಎಸ್ ಲಿಂಗೇಶ್, ಶೃಂಗೇರಿ ಶಾಸಕ ಟಿ ಡಿ ರಾಜೇಗೌಡ, ಹಿರಿಯ ಪತ್ರಕರ್ತ ಬಿ ಗಣಪತಿ, ಡಾ. ಡಿ ಸಿ ಲಿಂಗದೇವರು ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವೇದಿಕೆ ಕಾರ್ಯಕ್ರಮದ ನಂತರ ಕರ್ಣಭಾರಂ ನಾಟಕ ಪ್ರದರ್ಶನಗೊಂಡಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link