ಬಾಲಭವನದ ಸೌಲಭ್ಯಕ್ಕಾಗಿ ಕ್ರಿಯಾಯೋಜನೆ ತಯಾರಿಸಿ : ಸಿಇಓ

ದಾವಣಗೆರೆ:

   ನಗರದ ಜೆ.ಹೆಚ್.ಪಟೇಲ್ ನಗರದಲ್ಲಿರುವ ನೂತನವಾಗಿ ನಿರ್ಮಿಸಲಾಗಿರುವ ಬಾಲಭವನದಲ್ಲಿ ನೀರಿನ ವ್ಯವಸ್ಥೆ, ಶೌಚಾಲಯ ನಿರ್ಮಾಣ ಹಾಗೂ ಮಕ್ಕಳಿಗಾಗಿ ಗಾರ್ಡನಿಂಗ್, ಶಿಲ್ಪಕಲೆ, ಚಿತ್ರಕಲೆ ಸೇರಿದಂತೆ ಇತರೆ ಮೂಲಭೂತ ಸೌಲಭ್ಯಗಳ ಬಗ್ಗೆ ಕ್ರಿಯಾ ಯೋಜನೆ ತಯಾರಿಸಬೇಕೆಂದು ಜಿಲ್ಲಾ ಪಂಚಾಯತ್ ಸಿಇಒ ಎಚ್.ಬಸವರಾಜೇಂದ್ರ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

    ನಗರದ ಜೆ.ಹೆಚ್.ಪಟೇಲ್ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಜಿಲ್ಲಾ ಬಾಲಭವನದಲ್ಲಿ ಮಂಗಳವಾರ ನಡೆದ ಜಿಲ್ಲಾ ಬಾಲಭವನ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನೂತನವಾಗಿ ನಿರ್ಮಿಸಿರುವ ಬಾಲಭವನಕ್ಕೆ ಚಾಲನೆ ದೊರಕಬೇಕೆಂದರೆ ಮುಖ್ಯವಾಗಿ ನೀರಿನ ವ್ಯವಸ್ಥೆಯಾಗಬೇಕು. ಶೌಚಾಲಯ ನಿರ್ಮಾಣಕ್ಕೆ ಕ್ರಿಯಾಯೋಜನೆ ತಯಾರಾಗಬೇಕೆಂದು ಹೇಳಿದರು.

    ಇದುವರೆಗೆ ಯಾಕೆ ನೀರಿನ ವ್ಯವಸ್ಥೆಯಾಗಿಲ್ಲವೆಂದು ಬಾಲಭವನದ ನಿರ್ವಾಹಕಿ ಶೃತಿ ಅವರನ್ನು ಸಿಇಒ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಶೃತಿ, ಹಲವಾರು ಬಾರಿ ದೂಡಾ ಗೆ ಭೇಟಿ ನೀಡಿ ನೀರಿನ ಬಗ್ಗೆ ವಿಚಾರಿಸಲಾಗಿದೆ. ಇಲ್ಲಿ ಸುತ್ತಮುತ್ತ ಎಲ್ಲೂ ಬೋರ್ ಯಶಸ್ವಿಯಾಗಿಲ್ಲ. ಆದರೆ ಭವನದ ಅಕ್ಕ ಪಕ್ಕದ ಮನೆಗಳಿಗೆ ಪಾಲಿಕೆ ನೀರಿನ ಸಂಪರ್ಕವಿದ್ದು ಇಲ್ಲೂ ಪಡೆಯಬಹುದು ಎಂದರು.

     ಸಿಇಓ ಪಾಲಿಕೆ ಕಾರ್ಯಪಾಲಕ ಅಭಿಯಂತರರನ್ನು ಕರೆಯಿಸಿ ನೀರಿನ ಸಂಪರ್ಕ ಒದಗಿಸುವಂತೆ ಸೂಚಿಸಿದರು. ಅಭಿಯಂತರರು ಈ ಸ್ಥಳ ಇನ್ನೂ ದೂಡಾದಿಂದ ಪಾಲಿಕೆಗೆ ವರ್ಗಾವಣೆಯಾಗಿಲ್ಲ. ದೂಡಾದೊಂದಿಗೆ ಈ ಬಗ್ಗೆ ಚರ್ಚಿಸಿ, ಪಾಲಿಕೆಯಿಂದ ಶೀಘ್ರದಲ್ಲೇ ನೀರಿನ ವ್ಯವಸ್ಥೆ ಮಾಡಿಕೊಡಲಾಗುವುದು. ಹಾಗೂ ಮುಂದಿನ ಸಾಲಿನಿಂದ 24*7 ಜಲಸಿರಿ ಯೋಜನೆ ಇಲ್ಲಿಯೂ ಜಾರಿಯಾಗುವುದರಿಂದ ಮುಂದೆ ನೀರಿನ ಸಮಸ್ಯೆ ಉದ್ಭವಿಸುವಿಲ್ಲವೆಂದರು.

     ಸಿಇಓ ಸುಮಾರು 50 ಸಾವಿರ ಲೀಟರ್‍ನ ಸಂಪು ನಿರ್ಮಿಸಲು ಹಾಗೂ ನಿರ್ಮಿತಿಯವರಿಂದ ಶೌಚಾಲಯ ನಿರ್ಮಾಣಕ್ಕೆ ಕ್ರಿಯಾಯೋಜನೆ ತಯಾರು ಮಾಡುವಂತೆ ಸೂಚಿಸಿದರು.

    ಪ್ರತಿ ಶನಿವಾರ ಸಂಜೆ 4.30 ರಿಂದ 7 ಗಂಟೆವರೆಗೆ ತಲಾ ನಾಲ್ಕು ಶಾಲೆಗಳಿಂದ ಮಕ್ಕಳನ್ನು ಕರೆತಂದು ಚಿತ್ರಕಲೆ, ಶಿಲ್ಪಕಲೆ ಅಥವಾ ಇನ್ನಿತರೆ ಮಕ್ಕಳಿಗೆ ಮನೋರಂಜನೆ ಜೊತೆಗೆ ಕೌಶಲ್ಯ ನೀಡುವ ಯಾವುದೇ ಕಲೆ, ಚಟುವಟಿಕೆಗಳನ್ನು ಕೈಗೊಳ್ಳಲು ಕ್ರಿಯಾಯೋಜನೆ ತಯಾರಿಸುವಂತೆ ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪರವರಿಗೆ ಸೂಚನೆ ನೀಡಿದರು. ಹಾಗೂ ಶಿಕ್ಷಣ ಇಲಾಖೆ ಮತ್ತು ಸಿಡಿಪಿಓ ಇವರಿಗೆ ಮಕ್ಕಳ ಕಾರ್ಯಾಕ್ರಮಗಳು, ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳನ್ನು ನಡೆಸಬಹುದೆಂದರು.

    ವಾರ್ಷಿಕ ಆರು ಪ್ರಾಯೋಜಿತ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು. ಹಾಗೂ ಮಾಹೆಯಾನ ಒಂದಾದರೂ ಮಕ್ಕಳಿಗೆ ಚಟುವಟಿಕೆಗಳನ್ನು ಕೈಗೊಳ್ಳಬೇಕು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಕಲೆ-ಸಾಹಿತ್ಯದ ಕುರಿತು ಶಿಬಿರಗಳು, ತೋಟಗಾರಿಕೆ ಇಲಾಖೆಯಿಂದ ಮಕ್ಕಳಿಗೆ ತೋಟಗಾರಿಕೆ(ಗಾರ್ಡನಿಂಗ್) ಹಾಗೂ ಟೆರೇಸ್ ಗಾರ್ಡನಿಂಗ್ ಕುರಿತಾದ ಕಾರ್ಯಾಗಾರ, ಶಿಬಿರಗಳನ್ನು ಆಯೋಜಿಸುವಂತೆ ಸೂಚಿಸಿದರು.

    ಪ್ರತಿ ಶನಿವಾರ ಮತ್ತು ಭಾನುವಾರಗಳಂದು ಮಧ್ಯಾಹ್ನ 2 ರಿಂದ 8 ರವರೆಗೆ ಪ್ರತಿ ಅರ್ಧಗಂಟೆಗೊಂದು ಕೆಎಸ್‍ಆರ್‍ಟಿಸಿ ಬಸ್ ಬಾಲಭವನಕ್ಕೆ ಬರುವಂತೆ ವ್ಯವಸ್ಥೆ ಮಾಡಬೇಕೆಂದು ಕೆಎಸ್‍ಆರ್‍ಟಿಸಿ ಅಧಿಕಾರಿಗೆ ಸೂಚನೆ ನೀಡಿದರು. ಹಾಗೂ ಪುಟಾಣಿ ರೈಲನ್ನು ಓಡಿಸಿ ಅದರ ನಿರ್ವಹಣೆಯನ್ನು ನೋಡಿಕೊಳ್ಳಲು ಒಬ್ಬರು ಹೊರ ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲು ತಿಳಿಸಿದರು.

     ಶಿಲ್ಪಕಲಾ ಅಕಾಡೆಮಿ ಮತ್ತು ಲಲಿತ ಕಲಾ ಅಕಾಡೆಮಿ ವತಿಯಿಂದ ಇಲ್ಲಿ ಕಲಾಕೃತಿಗಳನ್ನು ಕೆತ್ತಿಸಬಹುದಾಗಿದ್ದು, ಶಿಲ್ಪಕಲಾ ಅಕಾಡೆಮಿಯವರು ಸಮಿತಿ ವತಿಯಿಂದ ಕಲ್ಲುಗಳನ್ನು ಖರೀದಿಸಿ ನೀಡಿದರೆ ವಿದ್ಯಾರ್ಥಿಗಳು ಶಿಲ್ಪಕಲೆಗಳನ್ನು ಕೆತ್ತಿಕೊಡಲಿದ್ದಾರೆಂದು ಶೃತಿ ಹೇಳಿದರು.

     ಕರ್ನಾಟಕ ಮಕ್ಕಳ ಅಕಾಡೆಮಿಯ ಜಿಲ್ಲಾ ಅಧ್ಯಕ್ಷ ದೊಗ್ಗಳ್ಳಿ ಗೌಡ್ರ ಪುಟ್ಟರಾಜ ಮಾತನಾಡಿ, ತಮ್ಮ ಅಕಾಡೆಮಿ ವತಿಯಿಂದ ಮಕ್ಕಳಿಗೆ ವಾರ್ಷಿಕವಾಗಿ 8 ಕಾರ್ಯಕ್ರಮಗಳನ್ನು ಪ್ರಾಯೋಜಿಸಲಾಗುವುದು ಎಂದರು.ಸಭೆಯಲ್ಲಿ ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೆರಿ, ಸಿಡಿಪಿಯು ವೀಣಾ, ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap