ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ದೇವೇಗೌಡರು.!

ಬೆಂಗಳೂರು

  ರಾಜ್ಯದಲ್ಲಿ ಪ್ರವಾಹ ಉಂಟಾಗಿ ಲಕ್ಷಾಂತರ ಕುಟುಂಬಗಳು ಬೀದಿ ಪಾಲಾಗಿ ಸಂಕಷ್ಟಕ್ಕೆ ಸಿಲುಕಿದ್ದರೂ ಇಲ್ಲಿಯವರೆಗೆ ಒಂದು ಬಿಡಿಗಾಸು ಬಿಡುಗಡೆ ಮಾಡದ ಕೇಂದ್ರ ಸರ್ಕಾರದ ಕ್ರಮವನ್ನು ಮಾಜಿ ಪ್ರಧಾನಿ ದೇವೇಗೌಡ ಅವರು ತರಾಟೆಗೆ ತೆಗೆದು ಕೊಂಡಿದ್ದಾರೆ.

     ಜೆಡಿಎಸ್ ಕಛೇರಿಯಲ್ಲಿ ಆಯೋಜಿಸಿದ್ದ 73ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಂಡ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಕಳೆದ ಒಂದು ವಾರಗಳಿಂದ ಉತ್ತರ ಕರ್ನಾಟಕ ಮತ್ತು ಕೊಡಗು ಜಿಲ್ಲೆಗಳಲ್ಲಿ ವರುಣನ ಆರ್ಭಟಕ್ಕೆ ಸಿಲುಕಿ ಲಕ್ಷಾಂತರ ಕುಟುಂಬಗಳು ಮನೆ, ಮಠ ಕಳೆದುಕೊಂಡು ಬೀದಿ ಪಾಲಾಗಿವೆ ಎಂದು ಕಳವಳ ವ್ಯಕ್ತಪಡಿಸಿದರು.

    ರಾಜ್ಯದಲ್ಲಿನ ಮಳೆ ಪ್ರವಾಹದ ಅನಾಹುತದ ಬಗ್ಗೆ ಕೇಂದ್ರಕ್ಕೆ ಸವಿಸ್ತಾರವಾಗಿ ಪತ್ರ ಬರೆದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಮುಖ್ಯಮಂತ್ರಿ ಕೇಂದ್ರಕ್ಕೆ 3 ಸಾವಿರ ಕೋಟಿ ರೂ. ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರೂ ಕೇಂದ್ರ ಒಂದು ಬಿಡಿಗಾಸು ಬಿಡುಗಡೆ ಮಾಡದೇ ನಿರ್ಲಕ್ಷ್ಯ ತಾಳಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

     ಕಳೆದ 2 ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕರ್ನಾಟಕದ ನೆರೆ ಸಂತ್ರಸ್ತರ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳದೆ , ಬೇರೆ ವಿಷಯಗಳ ಬಗ್ಗೆ ಚರ್ಚಿಸಲಾಗಿದೆ. ಕೇಂದ್ರ ಸಚಿವರು ಸಭೆಯಲ್ಲಿ ಹಾಜರಿದ್ದರೂ ಸಂತ್ರಸ್ತರ ಕಷ್ಟಕ್ಕೆ ಸ್ಪಂದಿಸುವಂತೆ ಮನವಿ ಮಾಡುವಲ್ಲಿ ವಿಫಲರಾಗಿದ್ದಾರೆ. ಈ ವಿಚಾರದಲ್ಲಿ ರಾಜಕೀಯ ಸಲ್ಲದು ಎಂದರು.

    ರಾಜ್ಯಕ್ಕೆ ಕೇಂದ್ರದ ತಂಡ ಆಗಮಿಸಿ ನೆರೆ ವೀಕ್ಷಿಸಿ ತೆರಳಿದ ನಂತರ ಅವರು ನೀಡುವ ವರದಿ ಆಧಾರದ ಮೇಲೆ ನಾನು ಕೇಂದ್ರಕ್ಕೆ ಮತ್ತೊಂದು ಪತ್ರ ಬರೆಯುವೆ. ಪ್ರವಾಹ ಇಳಿಮುಖವಾದ ನಂತರ ನಾನೇ ಖುದ್ದಾಗಿ ನೆರೆ ಹಾವಳಿಯಿಂದ ಹಾನಿಗೊಳಗಾಗಿರುವ ಪ್ರದೇಶಗಳಿಗೆ ಭೇಟಿ ನೀಡುತ್ತೇನೆ. ಒಂದು ವೇಳೆ ಮುಖ್ಯಮಂತ್ರಿಗಳು ಕೇಂದ್ರಕ್ಕೆ ನಿಯೋಗ ಕರೆದೊಯ್ದರೆ ನಾನು ಸಹ ಭಾಗಿಯಾಗುವೆ. ರಾಜ್ಯ ಹಾಗೂ ಕೇಂದ್ರದಲ್ಲಿ ಒಂದೇ ಸರ್ಕಾರ ಇದ್ದರೆ ಹೆಚ್ಚು ಅನುದಾನ ಬಿಡುಗಡೆ ಆಗುತ್ತದೆ ಎಂಬ ಜನರ ನಿರೀಕ್ಷೆ ಹುಸಿಯಾಗಿದೆ ಎಂದು ಆರೋಪಿಸಿದರು.

ರಾಜಕೀಯ ಪಿತೂರಿ

     ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿರುವ ಟೆಲಿಫೋನ್ ಕದ್ದಾಲಿಕೆಯು ರಾಜಕೀಯ ಪಿತೂರಿಯಿಂದ ಕೂಡಿದೆ. ಕುಮಾರಸ್ವಾಮಿ ಆಡಳಿತದಲ್ಲಿ ಯಾವುದೇ ಟೆಲಿಫೋನ್ ಕದ್ದಾಲಿಕೆ ನಡೆದಿಲ್ಲ. ಬಿಜೆಪಿ ಆಡಳಿತವಿರುವ ವಿವಿಧ ರಾಜ್ಯಗಳು ಸೇರಿದಂತೆ ದೇಶದಲ್ಲಿ ಏನೇನೂ ನಡೆದಿದೆ ಎಂಬುದು ನನಗೆ ತಿಳಿದಿದೆ.

      ಕಾಲ ಬಂದಾಗ ಇದಕ್ಕೆ ಉತ್ತರಿಸುವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಮಾಜಿ ಶಾಸಕ ನಾರಾಯಣ ರಾವ್, ಧ್ವಜಾರೋಹಣ ನಡೆಸಿ ಮಾತನಾಡಿ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಜಮ್ಮು-ಕಾಶ್ಮೀರದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದ್ದು, ಇಂದಿರಾಗಾಂಧಿ ಕಾಲದಲ್ಲಿ ನಡೆದ ತುರ್ತು ಪರಿಸ್ಥಿತಿ ಪುನರಾವರ್ತನೆ ಯಾಗುತ್ತಿದೆ ಎಂಬ ಭಾವನೆ ಜನಮಾನಸದಲ್ಲಿ ಮೂಡಿದೆ.

    ಮುಂದಿನ ದಿನಗಳಲ್ಲಿ ಇದರ ವಿರುದ್ಧ ಹೋರಾಡುವ ಸಂಕಲ್ಪ ತೊಡಬೇಕಾಗಿದ್ದು, ಮಾಜಿ ಪ್ರಧಾನಿ ದೇವೇಗೌಡರ ನೇತೃತ್ವದಲ್ಲಿ ಎಲ್ಲಾ ಪಕ್ಷಗಳನ್ನು ಒಗ್ಗೂಡಿಸಿಕೊಂಡು ಪ್ರಜಾಪ್ರಭುತ್ವ ಉಳಿವಿನ ಬಗ್ಗೆ ಹೋರಾಟ ನಡೆಸಲಾಗುವುದು ಎಂದರು

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link