ಹೊಸಪೇಟೆ:
ಜಿಲ್ಲೆಯಲ್ಲಿ ಚಿಲ್ಲಿ ಆನ್‍ಲೈನ್ ಮಾರುಕಟ್ಟೆ ಸ್ಥಾಪಿಸಬೇಕು ಎಂದು ಬಳ್ಳಾರಿ ಲೋಕಸಭೆ ಸಂಸದ ವೈ. ದೇವೇಂದ್ರಪ್ಪರವರು ಒತ್ತಾಯಿಸಿದ್ದಾರೆ. ಈ ಬಗ್ಗೆ ಸೋಮವಾರ ಹೊಸದೆಹಲಿಯಲ್ಲಿ ಕೃಷಿ ಮತ್ತು ರೈತ ಕಲ್ಯಾಣ ಮಂತ್ರಿ ನರೇಂದ್ರ ಸಿಂಗ್ ತೂಮರ್ ಅವರನ್ನು ಭೇಟಿಯಾಗಿ ಜಿಲ್ಲೆಯ ರೈತರ ಸಮಸ್ಯೆಗಳ ಪರಿಹಾರಕ್ಕೆ ಮನವಿ ಸಲ್ಲಿಸಿದ್ದಾರೆ.
ಬಳ್ಳಾರಿ ಜಿಲ್ಲೆಯಲ್ಲಿ ಸುಮಾರು 50 ಸಾವಿರ ಹೆಕ್ಟರ್ ಪ್ರದೇಶದಲ್ಲಿ ರೈತರು 1.50 ಲಕ್ಷ ಮೆಟ್ರಿಕ್ ಟನ್ ನಷ್ಟು ಮೆಣಸಿನಕಾಯಿ ಬೆಳೆ ಬೆಳೆಯುತ್ತಿದ್ದಾರೆ. ಆದರೆ ಜಿಲ್ಲೆಯಲ್ಲಿ ಖರೀದಿದಾರರು ಇಲ್ಲದೇ ಪಕ್ಕದ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮಾರುಕಟ್ಟೆಗೆ 250 ಕಿ.ಮೀ ದೂರ ಸಾಗಿಸಬೇಕಾಗಿದೆ. ಇದರಿಂದ ರೈತರು ಸಾಕಷ್ಟು ಸಮಸ್ಯೆ ಅನುಭವಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಚಿಲ್ಲಿ ಮಾರುಕಟ್ಟೆ ಆರಂಭಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಜಿಲ್ಲೆಯಲ್ಲಿ ಅತ್ಯಧಿಕವಾಗಿ ಮೆಣಸಿನಕಾಯಿ ಬೆಳೆ ಬೆಳೆಯುತ್ತಿರುವುದರಿಂದ ಚಿಲ್ಲಿ ಸ್ಪೈಸ್ ಪಾರ್ಕ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು. ಮೆಣಸಿನಕಾಯಿ ಬೆಳೆ ಒಣಗಿಸಲು ಸರ್ಕಾರದ ವತಿಯಿಂದ ಸಾಮೂಹಿಕ ಒಣಗಿಸುವ ಕಣ ಘಟಕಗಳನ್ನು ನಿರ್ಮಿಸಬೇಕು. 2 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆ ಜಿಲ್ಲೆಯಲ್ಲಿ ಬೆಳೆಯಲಾಗುತ್ತಿದೆ. ರೈತರಿಗೆ ಅನುಕೂಲ ಮತ್ತು ಉತ್ತಮ ಲಾಭವನ್ನು ಕಲ್ಪಿಸಲು ಸ್ಟಾರ್ಚ ಎಕ್ಸ್ಟ್ರಕ್ಷನ್ ಯೂನಿಟ್ ಪ್ರಾರಂಭಿಸಬೇಕು.ರೈತರು ಬೆಳೆದಂತ ಬೆಳೆ ಸಂರಕ್ಷಿಸಲು ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಬಾಡಿಗೆ ಗೋದಾಮು, ಕೋಲ್ಡ್ ಸ್ಟೋರೆಜ್ ಸ್ಥಾಪಿಸಬೇಕು ಎಂದು ಮನವಿಮಾಡಿದ್ದಾರೆ.