ಚಿತ್ರದುರ್ಗ
ಜಿಲ್ಲೆಯಲ್ಲಿ ಮಳೆಗಾಲ ಪ್ರಾರಂಭಗೊಂಡು, ಬರ ಪರಿಸ್ಥಿತಿ ಸುಧಾರಿಸುವವರೆಗೂ ಜನ- ಜಾನುವಾರುಗಳಿಗೆ ಯಾವುದೇ ತೊಂದರೆ ಯಾಗದಂತೆ ಅಧಿಕಾರಿಗಳು ಸೂಕ್ತ ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿನ ಬರ ಪರಿಹಾರ ಕಾರ್ಯಗಳ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿನ ಬರ ಪರಿಸ್ಥಿತಿಯ ಕಾರಣದಿಂದ ಜನರಿಗೆ ಕುಡಿಯುವ ನೀರಿನ ತೊಂದರೆ ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗದಂತೆ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಸೂಚನೆ ನೀಡಲಾಗಿತ್ತು. ಅಲ್ಲದೆ ಎಲ್ಲ ಗ್ರಾಮಗಳ ಗೋಕಟ್ಟೆಗಳಿಗೂ ನೀರು ತುಂಬಿಸುವಂತೆ ಸೂಚನೆ ನೀಡಲಾಗಿತ್ತು. ಆದರೆ ಕೆಲ ಅಧಿಕಾರಿಗಳು ಇದನ್ನು ಸಮರ್ಪಕವಾಗಿ ಪಾಲಿಸುತ್ತಿಲ್ಲ.
ಸಮಸ್ಯಾತ್ಮಕ ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸುವಂತೆ ಹಾಗೂ ಸೂಕ್ತ ದಾಖಲಾತಿ ಸಹಿತ 15 ದಿನಕ್ಕೊಮ್ಮೆ ಬಿಲ್ ಅನ್ನು ತಹಸಿಲ್ದಾರರ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸುವಂತೆ ತಿಳಿಸಲಾಗಿದ್ದರೂ, ಕೆಲ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ಅಪೂರ್ಣ ಮಾಹಿತಿ ಹಾಗೂ ಟ್ರಿಪ್ ಶೀಟ್ ರಹಿತವಾಗಿ ಬಿಲ್ ಅನ್ನು ಸಲ್ಲಿಸುತ್ತಿದ್ದು, ಇದರಿಂದ ಹಣ ಬಿಡುಗಡೆಗೆ ತೊಂದರೆಯಾಗುತ್ತಿದೆ.
ದಾಖಲೆ ರಹಿತವಾಗಿ ಬಿಲ್ ಪಾವತಿಸಿದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ತೊಂದರೆಗೆ ಸಿಲುಕುವುದು ಖಚಿತ ಹೀಗಾಗಿ ಸೂಕ್ತ ದಾಖಲೆ ಸಹಿತ ಬಿಲ್‍ಗಳನ್ನು ಸಲ್ಲಿಸುವಂತೆ ಸೂಚನೆ ನೀಡಿದರು. ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಲಭ್ಯರಿರಬೇಕು. ಎಲ್ಲ ತಾಲ್ಲೂಕುಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಅಗತ್ಯವಿರುವ ಪ್ರಮಾಣದಲ್ಲಿ ಮೇವನ್ನು ಶೇಖರಿಸಿಟ್ಟುಕೊಳ್ಳಬೇಕು. ಮೇವು ಪೂರೈಕೆಗೆ ಸಂಬಂಧಿಸಿದಂತೆ ಯಾವುದೇ ಪರಿಸ್ಥಿತಿ ಬಂದರೂ ಸೂಕ್ತವಾಗಿ ನಿಭಾಯಿಸಲು ಸಿದ್ಧರಿರಬೇಕು.
ಮುಂದಿನ 2 ತಿಂಗಳುಗಳನ್ನು ಗಮನದಲ್ಲಿಟ್ಟುಕೊಂಡು, ಈಗಿನ ಪರಿಸ್ಥಿತಿ ಮುಂದುವರೆದಲ್ಲಿ, ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಬಹುದಾದ ಸಮಸ್ಯಾತ್ಮಕ ಗ್ರಾಮಗಳ ಪಟ್ಟಿ ಹಾಗೂ ಇದಕ್ಕೆ ಪರಿಹಾರ ಕಾರ್ಯ ತಂತ್ರಗಳ ಬಗ್ಗೆಯೂ ಕ್ರಿಯಾ ಯೋಜನೆ ಸಿದ್ಧಪಡಿಸಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಸತ್ಯಭಾಮ, ಅಪರ ಜಿಲ್ಲಾಧಿಕಾರಿ ಸಂಗಪ್ಪ, ಉಪವಿಭಾಗಾಧಿಕಾರಿ ವಿಜಯಕುಮಾರ್ ಸೇರಿದಂತೆ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು, ತಹಸಿಲ್ದಾರರು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.