ನಗರವನ್ನು ಧೂಳು ಮುಕ್ತ ಮಾಡುವಂತೆ ಡಿವೈಎಫ್‍ಐ ಆಗ್ರಹ.

ಹೊಸಪೇಟೆ :

         ನಗರದಲ್ಲಿ ವಿವಿಧ ಕಾಮಗಾರಿ ಹೆಸರಿನಲ್ಲಿ ಎಲ್ಲಾ ರಸ್ತೆಗಳನ್ನು ಅಗೆಯಲಾಗಿದೆ. ಒಂದು ಕೂಡ ಪೂರ್ಣಗೊಂಡಿಲ್ಲ. ಇದರಿಂದ ಸಾರ್ವಜನಿಕರು ರಸ್ತೆಯಲ್ಲಿ ಸಂಚರಿಸಬೇಕಾದರೆ ಧೂಳು ಆವರಿಸಿಕೊಂಡು ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿದೆ. ನಗರಸಭೆ ಹಾಗು ಶಾಸಕರು ಇತ್ತ ಗಮನ ಹರಿಸಿ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್(ಡಿ.ವೈ.ಎಫ್.ಐ) ಸದಸ್ಯರು ಶುಕ್ರವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

         ಈ ವೇಳೆ ಡಿವೈಎಫ್‍ನ ರಾಜ್ಯ ಉಪಾಧ್ಯಕ್ಷ ಬಿಸಾಟಿ ಮಹೇಶ್ ಮಾತನಾಡಿ, ಪ್ರವಾಸೋಧ್ಯಮ ಕೇಂದ್ರವಾಗಿರುವ ಹೊಸಪೇಟೆ ನಗರವು ರಾಜ್ಯದಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಇಂಥ ನಗರವು ಇಂದು ಬರೀ ಧೂಳಿನಿಂದ ಕೂಡಿ “ಧೂಳುಪೇಟೆ”ಯಾಗಿ ಕುಖ್ಯಾತಿ ಹೊಂದಲು ಹೊರಟಿದೆ. ಇದಕ್ಕೆ ಪ್ರಮುಖ ಕಾರಣ ನಗರದಲ್ಲಿ ವಿವಿಧ ಕಾಮಗಾರಿ ಹೆಸರಿನಲ್ಲಿ ರಸ್ತೆಗಳನ್ನು ಅಗೆದು, ನಂತರ ಮಣ್ಣು ಮುಚ್ಚಿ ಕೈ ಬಿಟ್ಟಿದ್ದರಿಂದ ವಾಹನ ಸವಾರರಿಗೆ ನಿತ್ಯ ಧೂಳಿನಭಿಷೇಕ ಆಗುತ್ತಿದೆ. ಇದರಿಂದ ಸಾರ್ವಜನಿಕರಿಗೆ, ಮಕ್ಕಳಿಗೆ ಉಸಿರಾಟದ ಸಮಸ್ಯೆ, ಶ್ವಾಸಕೋಶದ ಸಮಸ್ಯೆ, ಕಣ್ಣು ಉರಿತ, ಧರ್ಮ ಉರಿತ ಸಮಸ್ಯೆಗಳು ಕಾಡುತ್ತಿವೆ ಎಂದು ಆರೋಪಿಸಿದರು.

          ನಗರಸಭೆಯಿಂದ ನಡೆಯುವ ಕಾಮಗಾರಿಗಳು ಸರಿಯಾದ ಯೋಜನೆಗಳಿಲ್ಲದೆ ನಡೆಯುತ್ತಿವೆ. ಕೆಲವು ವಾರ್ಡಗಳಲ್ಲಿ ಸಿಮೆಂಟ್ ರಸ್ತೆ ಮೊದಲು ಮಾಡಿ, ನಂತರ ಮತ್ತೆ ಯು.ಜಿ.ಡಿ ಇಲ್ಲವೆ 24*7 ಕುಡಿಯುವ ನೀರಿನ ಕಾಮಗಾರಿಯನ್ನು ಪ್ರಾರಂಭಿಸುವುದು ಆ ಮೂಲಕ ಈಗಾಗಲೇ ಮಾಡಲಾದ ರಸ್ತೆಯನ್ನು ಮತ್ತೆ ಅಗೆಯಲಾಗುತ್ತಿದೆ. ಯುಜಿಡಿಯ ಹೆಸರಿನಲ್ಲಿ ಮಾಡಲಾಗುತ್ತಿರುವ ಯೋಜನೆಯು ಒಂದು ಅಸಂಬದ್ದ ಯೋಜನೆಯಾಗಿದೆ ಏಕೆಂದರೆ ಮೊದಲು ಪೈಪ್ ಲೈನ್‍ನ್ನು ಹಾಕಲು ರಸ್ತೆ ಅಗೆಯುತ್ತಾರೆ ನಂತರ ಚೆಂಬರ್ ಕಟ್ಟಲು ಮತ್ತೆ ರಸ್ತೆಯನ್ನು ಅಗೆಯುತ್ತಾರೆ.

        ಒಂದೇ ಸಾರಿ ಮಾಡಬಹುದಾದ ಕೆಲಸವನ್ನು ಎರಡು ಇಲ್ಲವೇ ಮೂರು ಬಾರಿ ಮಾಡುವುದು ಮಾಡಲು ಬೇಕಾದ ಸಮಯಕ್ಕಿಂತ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತಿದ್ದಾರೆ. 24*7 ಕುಡಿಯುವ ನೀರಿನ, ಯು.ಜಿ.ಡಿ ಕಾಮಗಾರಿ, ಕೇಬಲ್ ಕಾಮಗಾರಿಗಾಗಿ ರಸ್ತೆಯನ್ನು ಅಗೆದಾಗ ರಸ್ತೆಯನ್ನು ರಿಸ್ಟೋರೆಷನ್ ಮಾಡಲಾಗುತ್ತಿಲ್ಲ ಅನೇಕ ಕಡೆ ಹಾಗೆಯೇ ಮಣ್ಣು ಹಾಕಿ ಮುಚ್ಚಲಾಗಿದೆ ಆದರೆ ಅದರ ಬೀಲ್ ಮಾಡಲಾಗಿದೆಂದು ಆರೋಪಗಳಿವೆ. ರಿಸ್ಟೋರೇಷನ್ ಕಾಲಮೀತಿಯ ಒಳಗೆ ಮಾಡಲಾಗುತ್ತಿಲ್ಲ, ಗುಣಮಟ್ಟವಂತೂ ಇಲ್ಲವೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

       ಕಾರ್ಯದರ್ಶಿ ಕಲ್ಯಾಣಯ್ಯ ಮಾತನಾಡಿ, ಈಗಾಗಲೇ ಮಾಡಿದ ಅನಂತಶಯನಗುಡಿಯ ಬೈಪಾಸ್ ರಸ್ತೆ, ನಮ್ಮ ವಿಶ್ವಪ್ರಸಿದ್ದ ಹಂಪೆಗೆ ಹೋಗುವ ಅನಂತಶಯನಗುಡಿಯ ರಸ್ತೆ, ಚಿತ್ರಕೇರಿಯಿಂದ ಉಕ್ಕಡಕೇರಿಯ ರಸ್ತೆ, ಚಿತ್ರಕೇರಿಯಿಂದ ಬಸ್‍ಡಿಪೋಗೆ ಹೋಗುವ ರಸ್ತೆಗಳು ಗುಂಡಿ ಬಿದ್ದು ಹಾಳಾಗಿವೆ. ಅನಂತಶಯನ ಗುಡಿಯ ಬಳ್ಳಾರಿ ಬೈಪಾಸ್ ರಸ್ತೆಯಲ್ಲಿರುವ ವಿದ್ಯುತ್ ಕಂಬಗಳಿವೆ ಆದರೆ ಅಲ್ಲಿ ಲೈಟ್‍ಗಳು ಇಲ್ಲವಾಗಿವೆ. ಈಗೆ ಅನೇಕ ರಸ್ತೆ, ಒಳಚರಂಡಿ, ವಿದ್ಯುತ್ ಕಂಬ ಸೇರಿದಂತೆ ಅನೇಕ ಸಮಸ್ಯೆಗಳಿಂದ ಜನ ರೋಸಿ ಹೋಗಿದ್ದಾರೆ.

         ಕೂಡಲೇ ಮಾನ್ಯ ಶಾಸಕರು ಹಾಗು ನಗರಸಭೆಯವರು ಜನರಿಗಾಗುವ ತೊಂದರೆಯನ್ನು ತಪ್ಪಿಸಿ, ಒಂದು ವಾರದೊಳಗೆ ಸುಂದರ ನಗರವನ್ನಾಗಿ ಮಾಡಲು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಡಿವೈಎಫ್‍ಐ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.ಬಳಿಕ ನಗರಸಭೆ ಅಧ್ಯಕ್ಷ ಗುಜ್ಜಲ ನಿಂಗಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.ಈ ಸಂಧರ್ಭದಲ್ಲಿ ನಗರ ಘಟಕ ಅಧ್ಯಕ್ಷ ಕಿನ್ನಾಳ ಹನುಮಂತ, ಪದಾಧಿಕಾರಿಗಳಾದ ಈ.ಮಂಜುನಾಥ, ಬಂಡೆ ತಿರುಕಪ್ಪ, ಕೆ.ಎಂ.ಸಂತೋಷ, ಹನುಮಾನಾಯ್ಕ್, ವಿಜಯಕುಮಾರ್,ರಾಜ ಚಂದ್ರಶೇಖರ, ಹಾಗು ಶಿವುಕುಮಾರ್ ಇದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link