ಬ್ಯಾಡಗಿ:
ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ನಿಗಮ ಮಂಡಳಿಗಳ ಸಿಬ್ಬಂದಿಗಳನ್ನು ಕೃಷಿ ಮಾರಾಟ ಇಲಾಖೆ (ಎಪಿಎಂಸಿ) ತುಂಬಿಕೊಳ್ಳುತ್ತಿರುವುದನ್ನು ರಾಜ್ಯ ಕೃಷಿ ಮಾರಾಟ ಇಲಾಖೆ ಹಾಗೂ ಕೃಷಿ ಉತ್ಪನ್ನ ಸಮತಿಗಳ ನೌಕರರ ಸಂಘದ ರಾಜ್ಯಾಧ್ಯಕ್ಷ ಪ್ರಭು ದೊಡ್ಮನಿ ತೀವ್ರವಾಗಿ ಖಂಡಿಸಿದ್ದು, ಯಾವುದೇ ಕಾರಣಕ್ಕೂ ಇಂತಹ ಸಿಬ್ಬಂದಿಗಳನ್ನು ನಿಯೋಜನೆ ಮಾಡಿಕೊಳ್ಳದಂತೆ ಮನವಿ ಮಾಡಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿರುವ ಕೃಷಿ ಮಾರಾಟ ಇಲಾಖೆಯ ನಿರ್ದೇಶಕ ಎಂ.ಬಿ.ರಾಜೇಶಗೌಡ ಅವರಿಗೆ ಲಿಖಿತ ಮನವಿಯೊಂದನ್ನು ಸಲ್ಲಿಸಿರುವ ಅವರು, ವಿವಿಧ ನಿಗಮ ಮಂಡಳಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳನ್ನು ಕೃಷಿ ಮಾರಾಟ ಇಲಾಖೆಗೆ ಸೇರಿಸಿಕೊಳ್ಳುತ್ತಿರುವ ವಿಚಾರ ತಿಳಿದ್ದು ಬಂದಿದೆ, ನಿಗಮ ಮಂಡಳಿಗಳು ಪ್ರತ್ಯೇಕ ಸ್ವಂತ ಬೋರ್ಡ ಗಳಾಗಿದ್ದು (ಅಟಾನಮಸ್ ಬಾಡಿ) ಸರ್ಕಾರಿ ನೌಕರರೇ ಅಲ್ಲ, ಕಳೆದ ಮೂರು ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ಇಲಾಖೆ ನೌಕರರಿಗೆ ಇದೂವರೆಗೂ ಯಾವುದೇ ಪದೋನ್ನತಿ ನೀಡದೆ ಸತಾಯಿಸುತ್ತಾ ಬಂದಿದ್ದಾರೆ, ಇವರನ್ನು ಸೇರಿಸಿಕೊಳ್ಳುವುದರಿಂದ ಮೊದಲಿನಿಂದಲೂ ಸೇವೆ ಸಲ್ಲಿಸುತ್ತಾ ಬಂದಿರುವ ನೌಕರರಿಗೆ ಅಪ್ರತ್ಯಕ್ಷವಾಗಿ ಅನ್ಯಾಯವಾಗಲಿದೆ.
ಸರ್ಕಾರದ ನಿಯಮ ಗಾಳಿಗೆ: ಅಷ್ಟಕ್ಕೂ ಕಳೆದ 2005 ರಲ್ಲಿ ಸರ್ಕಾರವೇ ಹೊರಡಿಸಿದ ಸುತ್ತೋಲೆಯ ಪ್ರಕಾರ ನಿಗಮ ಮಂಡಳಿಗಳ ನೌಕರರನ್ನು ಸರ್ಕಾರಿ ಇಲಾಖೆಗಳಲ್ಲಿ ಸೇರಿಸಿಕೊಳ್ಳಲು ಅವಕಾಶವಿಲ್ಲ, ಆದರೆ ಇಂತಹ ನಿಯಮವನ್ನು ಗಾಳಿಗೆ ತೂರಿ ನಿಗಮಮಂಡಳಿಗಳ ನೌಕರರನ್ನು ಕೃಷಿ ಮಾರಾಟ ಇಲಾಖೆಗೆ ಸೇರ್ಪಡೆ ಮಾಡಿಕೊಳ್ಳುವಂತಹ ಪ್ರಯತ್ನವೊಂದು ನಡೆದಿದ್ದು ಕೂಡಲೇ ಅದನ್ನು ಸ್ಥಗಿತಗೊಳಿಸಬೇಕು..
ನ್ಯಾಯಾಲಯದ ಮೊರೆ: ಯಾವುದೇ ಕಾರಣಕ್ಕೂ ನ್ಯಾಯ ಸಮ್ಮತವಾದ ನಮ್ಮ ಮನವಿಯನ್ನು ಪುರಸ್ಕರಿಸಿ ನಿಗಮ ಮಂಡಳಿಗಳ ನೌಕರರ ಇಲಾಖೆಗೆ ಸೇರ್ಪಡೆ ವಿಚಾರ ಕೈಬಿಡಬೇಕು, ಮತ್ತು ಈಗಾಗಲೇ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಪದೋನ್ನತಿ ನೀಡುವ ಮೂಲಕ ಸಂಘದ ಬಹುದಿನದ ಬೇಡಿಕೆಯನ್ನು ಈಡೇರಿಸಬೇಕು ಇಲ್ಲದೇ ಹೋದಲ್ಲಿ ನ್ಯಾಯಾಲಯದ ಮೊರೆ ಹೋಗುವುದು ಅನಿವಾರ್ಯವಾಗಲಿದೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ..
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಅನಿಲಕುಮಾರ, ಕಾರ್ಯದರ್ಶಿ ಯಶೋದಾ, ವರದರಾಜ, ಭಾಗ್ಯ, ವೆಂಕಟೇಶ್ ಗೀತಾ, ಆರ್.ಎಫ್.ಲಮಾಣಿ, ಶ್ರೀಧರ, ಶ್ರೀಕಾಂತ್ ಗುಳೇದ, ರವಿ ಹಳ್ಳಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು..
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ