ತುಮಕೂರು:
ವಿದ್ಯಾರ್ಥಿಗಳು ಓದುವಾಗ ಆಸಕ್ತಿ ಇರಬೇಕೆ ಹೊರತು ಒತ್ತಡ ಇರಬಾರದು ಎಂದು ವ್ಯಕ್ತಿತ್ವ ವಿಕಸನ ತರಬೇತುದಾರರಾದ ಸಿ.ಸಿ. ಪಾವಟೆ ಅಭಿಪ್ರಾಯಪಟ್ಟರು.
ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ವಜ್ರ ಮಹೋತ್ಸವ ವರ್ಷಾಚರಣೆಯ ಅಂಗವಾಗಿ ಶ್ರೀ ಸಿದ್ಧಾರ್ಥ ವ್ಯವಹಾರ ನಿರ್ವಹಣಾ ಅಧ್ಯಯನ ಕೇಂದ್ರದ ವತಿಯಿಂದ ಸಮುದಾಯ ಬಾನುಲಿ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಶಿಕ್ಷಣದಲ್ಲಿ ಕೌಶಲ್ಯ ವಿಷಯ ಕುರಿತು ಮಾತನಾಡಿದ ಅವರು, ಮಕ್ಕಳಲ್ಲಿ ಜ್ಞಾಪಕ ಶಕ್ತಿ ವೃದ್ಧಿಸುವ ಹಾಗೂ ಓದುವ ಕೌಶಲ್ಯ ಹೆಚ್ಚಿಸುವ ಕಡೆಗೆ ಗಮನ ಹರಿಸಬೇಕಾಗಿದೆ ಎಂದರು.
ಓದು ಮಕ್ಕಳಿಗಷ್ಟೆ ಸೀಮಿತವಾಗುವುದಿಲ್ಲ. ಓದುವ ವಿದ್ಯಾರ್ಥಿ ಹಾಗೂ ಪೋಷಕರು ಮತ್ತು ಶಿಕ್ಷಕರು ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಭಾಗಿಯಾಗಿರುತ್ತಾರೆ. ಪರಸ್ಪರ ಪ್ರೋತ್ಸಾಹ ಮತ್ತು ಸಹಕಾರ ಇರಬೇಕು. ಕೆಲವರು ಬೇಗನೆ ವಿಷಯ ಗ್ರಹಿಸುವ ಸಾಮಥ್ರ್ಯ ಹೊಂದಿರುತ್ತಾರೆ. ಮತ್ತೆ ಕೆಲವರಿಗೆ ಇಂತಹ ಸಾಮಥ್ರ್ಯ ಇರುವುದಿಲ್ಲ. ಯಾರಲ್ಲಿ ಸಾಮಥ್ರ್ಯ ಇರುವುದಿಲ್ಲವೋ ಅಂತಹವರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಆಗಬೇಕು ಎಂದರು.
ಓದಿನ ಜೊತೆಗೆ ಆಹಾರ ಪದ್ಧತಿಯೂ ಪ್ರಮುಖವಾಗಿರುತ್ತದೆ. ಎಷ್ಟು ಬೇಕೊ ಅಷ್ಟು ಮಾತ್ರ ತಿನ್ನಬೇಕು. ಸಿಕ್ಕಿದ್ದನ್ನೆಲ್ಲಾ ತಿನ್ನುವ, ಆರೋಗ್ಯ ಹಾನಿ ಮಾಡಿಕೊಳ್ಳುವ ಪ್ರಯತ್ನ ಮಾಡಬಾರದು. ಶಿಕ್ಷಕರು ಪಾಠ ಮಾಡಿದ ವಿಷಯವನ್ನು ಮತ್ತೆ ಮನನ ಮಾಡಿಕೊಳ್ಳಬೇಕು. ಬೋಧನಾ ಕ್ರಿಯೆಯು ಬದಲಾವಣೆಗೊಳ್ಳಬೇಕು. ಸಾಂದರ್ಭಿಕವಾಗಿ ಘಟನೆಗಳನ್ನು ಉಲ್ಲೇಖಿಸುವ, ಕಥೆಗಳನ್ನು ನಿರೂಪಿಸುವ ಮೂಲಕ ವಿದ್ಯಾರ್ಥಿಗಳನ್ನು ಆಕರ್ಷಿಸಲು ಸಾಧ್ಯವಿದೆ. ಉದಾಹರಣೆಗಳ ಮೂಲಕ ವಿವರಿಸುವುದು ಹೆಚ್ಚು ಉತ್ತಮ ಎಂದ ಅವರು, ಲಾಕ್‍ಡೌನ್‍ನಂತಹ ಸಂದರ್ಭದಲ್ಲಿ ಪೋಷಕರ ಪಾತ್ರ ಹೆಚ್ಚಿನದಿದ್ದು, ಮನೆಯಲ್ಲಿ ಮಕ್ಕಳು ಏನು ಕಲಿಯುತ್ತಿದ್ದಾರೆ ಎಂಬುದರ ಬಗ್ಗೆ ಅವಲೋಕನ ಅಗತ್ಯ ಎಂದರು.
ಈ ಸಂದರ್ಭದಲ್ಲಿ ಸಿ.ಸಿ. ಪಾವಟೆ ಅವರನ್ನು ಸನ್ಮಾನಿಸಲಾಯಿತು. ಪ್ರಾಂಶುಪಾಲರಾದ ಡಾ.ಎನ್.ಎಸ್.ರವಿ ಕುಮಾರ್, ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥ ಡಾ.ಗುರುಪ್ರಸಾದ್, ಪ್ರಾಧ್ಯಾಪಕರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ