ದಾವಣಗೆರೆ:
ದೇಶದಲ್ಲಿ ಸಂವಿಧಾನ ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದ್ದು, ಇದಕ್ಕೆ ಯಾರೂ ಆಸ್ಪದ ನೀಡಬಾರದು ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಕರೆ ನೀಡಿದರು.
ಜಿಲ್ಲೆಯ ಹರಿಹರ ತಾಲೂಕು ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ಭಾನುವಾರ ವಾಲ್ಮೀಕಿ ಜಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದು ದೇಶದಲ್ಲಿ ಸಂವಿಧಾನವನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ. ಇದರಿಂದ ಸಂವಿಧಾನ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೂ ಧಕ್ಕೆಯಾಗುತ್ತಿದೆ. ಹೀಗಾಗಿ ಅಭಿವ್ಯಕ್ತಿ ಸ್ವಾತಂತ್ರ ಹತ್ತಿಕ್ಕಲು ಬಿಡಬಾರದು ಎಂದು ಕಿವಿಮಾತು ಹೇಳಿದರು.
ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಕೇವಲ ಮುಸ್ಲಿಮರಿಗೆ ಮಾತ್ರ ಅನ್ಯಾಯವಾಗುವುದಿಲ್ಲ. ಅದಕ್ಕಿಂತಲೂ ಹೆಚ್ಚಾಗಿ ಈ ದೇಶದ ಬಡವರು, ಅಲೆಮಾರಿಗಳು, ಪರಿಶಿಷ್ಟರು ಹಾಗೂ ಆದಿವಾಸಿಗಳಿಗೆ ಅನ್ಯಾಯವಾಗುತ್ತದೆ. ಆದ್ದರಿಂದ ಸಾರ್ವಜನಿಕರು ಈ ಬಗ್ಗೆ ಜಾಗೃತರಾಗಬೇಕು ಎಂದರು.
ದೇಶದಲ್ಲಿ ಜಾತಿ ವ್ಯವಸ್ಥೆಯಿಂದಾಗಿ ಅಸಮಾನತೆ ತಾಂಡವವಾಡುತ್ತಿದೆ. ಶತ, ಶತಮಾನಗಳಿಂದ ಕಾಯಕ ಜೀವಿಗಳಿಗೆ ಶಿಕ್ಷಣ ಕೊಡಲಿಲ್ಲ. ನಮ್ಮಂತಹ ಶೋಷಿತ ಸಮುದಾಯಗಳಿಗೆ ಶಿಕ್ಷಣ ದೊರೆತದ್ದೆ, ಬ್ರಿಟಿಷರು ಭಾರತಕ್ಕೆ ಆಗಮಿಸಿದ ನಂತರ. ಶೋಷಿತರು ಸಾಮಾಜಿಕ, ಧಾರ್ಮಿಕ, ಆರ್ಥಿಕ ಜಾಗೃತಿ ಹೊಂದಿದರೆ ಮಾತ್ರ ಜಾತ್ಯತೀತ ಸಮಾಜ ನಿರ್ಮಾಣಕ್ಕೆ ಸಾಧ್ಯವಾಗಲಿದೆ ಎಂದು ಅವರು ಪ್ರತಿಪಾದಿಸಿದರು.
ಭಾರತ ಸ್ವಾತಂತ್ರ್ಯಗೊಂಡಾಗ ಸಾಕ್ಷರತೆ ಪ್ರಮಾಣ ಶೇ.12 ರಷ್ಟಿತ್ತು. ಈಗ ದೇಶದ ಸಾಕ್ಷರತೆ ಪ್ರಮಾಣ ಶೇ.74ರಷ್ಟಾಗಿದ್ದು, ಈಗಲೂ ಶೇ.36ರಷ್ಟು ಜನ ಅವಿದ್ಯಾವಂತರಾಗಿದ್ದಾರೆ. ಅದರಲ್ಲಿ ಶೂದ್ರ ಸಮುದಾಯದವರೇ ಹೆಚ್ಚು. ದೇಶದ ಜನತೆ ಸಂಪೂರ್ಣವಾಗಿ ಸಾಕ್ಷರತರಾದಾಗ ಮಾತ್ರ ಸಮ ಸಮಾಜದ ಕನಸು ನನಸಾಗಲು ಸಾಧ್ಯ ಎಂದು ಹೇಳಿದರು.
ವಾಲ್ಮೀಕಿ ಪೀಠದ ಮೊದಲ ಗುರುಗಳು ಪುಣ್ಯಾನಂದ ಸ್ವಾಮೀಜಿಯವರು ಸಮಾಜವನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಜಾಗೃತಗೊಳಿಸುವ ಪ್ರಯತ್ನ ಮಾಡಿದ್ದರು. ಆದರೆ, ಅವರು ಲಿಂಗೈಕ್ಯರಾದ ಮೇಲೆ ಈಗಿನ ಪ್ರಸನ್ನಾನಂದಪುರಿ ಸ್ವಾಮೀಜಿ ಸಮಾಜವನ್ನು ಸಂಘಟಿಸುವ ಮೂಲಕ ಹಿರಿಯ ಶ್ರೀಗಳ ಸಾವಿನ ಕೊರತೆಯನ್ನು ನೀಗಿಸಿದ್ದಾರೆ ಎಂದರು.
ಈಗ ನೀಡುತ್ತಿರುವ ಶೇ.3ರಷ್ಟು ಮೀಸಲಾತಿಯನ್ನು ಶೇ.7.5ಕ್ಕೆ ಹೆಚ್ಚಿಸಬೇಕೆಂದು ಆಗ್ರಹಿಸಿ ಬೆಂಗಳೂರಿನ ವರೆಗೂ ಶ್ರೀಪ್ರಸನ್ನಾನಂದಪುರಿ ಸ್ವಾಮೀಜಿ ಪಾದಯಾತ್ರೆ ನಡೆಸಿದರು. ಆಗ ನಮ್ಮ ಸಮ್ಮಿಶ್ರ ಸರ್ಕಾರ ಈ ಬಗ್ಗೆ ಪರಿಶೀಲನೆಗೆ ನ್ಯಾ.ನಾಗಮೋಹನದಾಸ್ ಸಮಿತಿ ರಚಿಸಿದ್ದು, ಸಮಿತಿಯು ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಲು ಶಿಫಾರಸು ಮಾಡಿ, ಆದಷ್ಟು ಬೇಗ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಆಗ್ರಹಿಸಿದರು.
ನಾನು ಯಾವತ್ತೂ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿಲ್ಲ. ಇದರಲ್ಲಿ ರಾಜೀ ಆಗುವ ಪ್ರಶ್ನೆಯೇ ಇಲ್ಲ. ಸಂಪತ್ತು, ಅಧಿಕಾರದಲ್ಲಿ ಸಮ ಪಾಲು ಪಡೆಯುವುದು ಸಂವಿಧಾನಬದ್ಧ ಹಕ್ಕು ಆಗಿದೆ. ಈಗ ಎಸ್‍ಟಿ ಜನರಿಗೆ ನೀಡುತ್ತಿರುವ ಮೀಸಲಾತಿ ಜನಸಂಖ್ಯೆಗೆ ಅನುಗುಣವಾಗಿಲ್ಲ. ಹೀಗಾಗಿ ಸರ್ಕಾರ ಪರಿಶಿಷ್ಟ ಪಂಗಡಕ್ಕೆ ಶೇ.7.5ರಷ್ಟು ಮೀಸಲಾತಿ ನೀಡಬೇಕೆಂದು ಆಗ್ರಹಿಸಿದ ಅವರು, ತಮ್ಮ ಸರ್ಕಾರದ ಅವಧಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಕಲ್ಯಾಣಕ್ಕಾಗಿ ಜಾರಿಗೆ ತಂದ ಕಾರ್ಯಕ್ರಮಗಳನ್ನು ಪಟ್ಟಿ ಮಾಡಿದರು.
ಇದಕ್ಕೂ ಮುನ್ನ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಲಿಂಗೈಕ್ಯ ಶ್ರೀ ಪುಣ್ಯಾನಂದಪುರಿ ಸ್ವಾಮಿಗಳ ಪುತ್ಥಳಿಯನ್ನು ಮಾಜಿ ಸಿಎಂ ಸಿದ್ದರಾಮಯ್ಯ ಅನಾವರಣಗೊಳಿಸಿದರು. ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ, ಚಿತ್ರದುರ್ಗ ಬೃಹನ್ಮಠದ ಡಾ.ಶಿವಮೂರ್ತಿ ಮುರುಘಾ ಶರಣರು, ಪಂಚಮಸಾಲಿ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ, ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಸೇರಿದಂತೆ ಅನೇಕ ಮಠಾಧೀಶರು, ಸಚಿವ ಬಿ.ಶ್ರೀರಾಮುಲು, ಮಾಜಿ ಸಚಿವರಾದ ಸತೀಶ ಜಾರಕಿಹೊಳಿ, ಪಿ.ಟಿ.ಪರಮೇಶ್ವರ ನಾಯ್ಕ, ಕೆ.ಶಿವಮೂರ್ತಿ ನಾಯ್ಕ, ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
