ತುಮಕೂರು
ಅಯೋಗ್ಯರು ರಾಜೀನಾಮೆ ಕೊಟ್ಟು ಸರ್ಕಾರವನ್ನು ಬೀಳಿಸಿದರು, ಅವರಿಗೆ ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ನೀಡಲಾಗಿದ್ದು, ಇಂತಹ ಅಯೋಗ್ಯರಿಗೆ ಮತ ಕೊಟ್ಟು ಮರ್ಯಾದೆಯನ್ನು ಕಳೆದುಕೊಳ್ಳಬೇಕೆ? ಮಾನ ಮರ್ಯಾದೆ ಇಲ್ಲದವರು ಅವರು ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅನರ್ಹ ಶಾಸಕರನ್ನು ತರಾಟೆಗೆ ತೆಗೆದುಕೊಂಡರು.
ಮಧುಗಿರಿ ತಾಲ್ಲೂಕಿನಲ್ಲಿ ಭೂಮಿ ಮತ್ತು ವಸತಿ ಹಕ್ಕು ವಂಚಿತರಿಗೆ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಧರಣಿ ಬೆಂಬಲಿಸಿ, ಪಾಲ್ಗೊಂಡು ಅವರು ಮಾತನಾಡಿದರು.
ಒಂದು ತತ್ವ ಸಿದ್ಧಾಂತವಿಲ್ಲದ ಕೋಟ್ಯಾಧಿಪತಿಗಳಿಗೆ ಜೈ ಎಂದು ಮತ ನೀಡಿ ನಾವು ಹೀಗಾಗಿದ್ದೇವೆ. ದೇಶಕ್ಕೆ ಒಳಿತಾಗಲಿ ಎಂದು ಸ್ವಾತಂತ್ಯ ಹೋರಾಟಗಾರರು ಹೋರಾಡಿದರು. ಸ್ವತಂತ್ರ್ಯ ನಂತರ ದೇಶ ಬದಲಾಗುತ್ತೆ ಎಂದು ನಂಬಿಕೊಂಡಿದ್ದ ಸ್ವಾತಂತ್ರ್ಯ ಹೋರಾಟಗಾರರಿಗೆ, ದೇಶದ ಜನರಿಗೆ ಮೋಸ ಮಾಡಿದರು. ಇದು ದೇಶವೇ? ಇದು ಆಡಳಿತವೇ? ದುಷ್ಟರ ಗುಂಪು ಕಟ್ಟಿಕೊಂಡು ಧ್ವಂಸ ಮಾಡುತ್ತಿದ್ದಾರೆ, ಇದು ರಾಜಕೀಯವೇ ಎಂದು ಟೀಕಿಸಿದರು.
ಭಾರತೀಯರೆಲ್ಲರಿಗೂ ಬದುಕುವ ಹಕ್ಕಿದೆ, ಅವರಿಗೆ ಅವಶ್ಯಕವಿರುವ ಸೌಲಭ್ಯವನ್ನು ನೀಡಬೇಕು ಎಂದು ಒತ್ತಾಯಿಸಿದ ಅವರು, ಸರ್ಕಾರ ಜನರನ್ನು ಉಪಯೋಗಿಸಿಕೊಳ್ಳುತ್ತಿದೆ ಹೊರತು, ಜನರಿಗೆ ಮರ್ಯಾದೆ ಕೊಡುತ್ತಿಲ್ಲ. ಮತ ನೀಡುವವರನ್ನು ನಿರ್ಲಕ್ಷ್ಯ ಮಾಡುವ ಅಧಿಕಾರಿಗಳು, ರಾಜಕಾರಣಿಗಳಿಗೆ ನಾಚಿಕೆಯಾಗಲ್ವೆ? ಎಷ್ಟು ದಿನ ಜನರು ಬೀದಿಯಲ್ಲಿರಬೇಕು? ಜನರು ಗುಡಿಸಲುಗಳಲ್ಲಿಯ ವಾಸ ಮಾಡಬೇಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ಭೂಮಿಯಿಲ್ಲ, ಸರ್ಕಾರ ಶ್ರೀಮಂತರ ಪರವಾಗಿ ಆಡಳಿತ ನೆಡೆಸುತ್ತಿದೆಯೇ? ಬಡವರು ಬೇಕಿಲ್ಲವೇ ಎಂದು ಪ್ರಶ್ನಿಸಿದ ಅವರು, ಜನರನ್ನು ಬೀದಿಗೆ ನಿಲ್ಲಿಸುವ ಅಧಿಕಾರವನ್ನು ಕೊಟ್ಟವರು ಯಾರು? ಯಾವ ಅಧಿಕಾರಿಗೂ, ಜನಪ್ರತಿನಿಧಿಗಳಿಗೂ ಜನರನ್ನು ಬೀದಿಗೆ ನಿಲ್ಲಿಸುವ ಅಧಿಕಾರವಿಲ್ಲ ಎಂದ ಅವರು, ಗುಡಿಸಲು ಜನರು ಒಂದಾಗಿ ಬೆಂಬಲವಾಗಿ ಹೋರಾಟಕ್ಕೆ ನಿಲ್ಲುವಂತೆ ಸಲಹೆ ನೀಡಿದರು.
ದೇಶದ ಜನರಿಗೆ ನ್ಯಾಯ ದೊರೆಯಬೇಕು, ಕೆಲವರೆ ಉದ್ಧಾರವಾಗುವ ವ್ಯವಸ್ಥೆ ನಮಗೆ ಬೇಕಿಲ್ಲ. ಹೋರಾಟದಿಂದ ಹಿಂದಕ್ಕೆ ಹೋಗುವುದಿಲ್ಲ, ಕೆಲಸ ಆಗಬೇಕು ಎಂದ ಅವರು, ನಾಲ್ಕು ಲಕ್ಷ ಎಕರೆ ಭೂಮಿ ಒತ್ತುವರಿಯಾಗಿದೆ. ಆರು ತಿಂಗಳ ಹಿಂದೆ ಹೋರಾಟ ಮಾಡಿದ್ದಾಗ ಒಪ್ಪಿಕೊಂಡು ಮಾತಿಗೆ ತಪ್ಪಿದ್ದಾರೆ. ಜಿಲ್ಲಾಧಿಕಾರಿ ಇದನ್ನು ಮಕ್ಕಳ ಆಟ ಮಾಡಿಕೊಂಡಿದ್ದಾರಾ? ಜಿಲ್ಲಾಧಿಕಾರಿಗಳು ಕರ್ತವ್ಯ ಲೋಪ ಮಾಡಿದ್ದಾರೆ. ಭೂಮಿ ಹಂಚದಿದ್ದರೆ ನಿರ್ಗತಿಕರು, ಭೂಮಿ ಮತ್ತು ವಸತಿ ವಂಚಿತರಿಂದ ಜೈಲ್ ಭರೋ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜನರು ಶಾಸಕರಿಗೆ ಬುದ್ಧಿ ಕಲಿಸಬೇಕು, ಜನರ ಕೆಲಸ ಮಾಡುವುದನ್ನು ಬಿಟ್ಟು ಬೇರೆ ಕೆಲಸ ಮಾಡುತ್ತಿದ್ದಾರೆ. ಜನರ ಸೇವಕ ಎಂಬುದನ್ನು ಮರೆತು ಸರ್ವಾಧಿಕಾರಿಗಳಂತೆ ಶಾಸಕರುಗಳು ವರ್ತಿಸುತ್ತಿದ್ದಾರೆ. ಕೋಟ್ಯಂತರ ರೂ. ಖರ್ಚು ಮಾಡಿ ಚುನಾವಣೆ ಯಲ್ಲಿ ಗೆಲ್ಲುವುದಷ್ಟೇ ಅವರಿಗೆ ಗೊತ್ತಿರುವುದು ಎಂದ ಅವರು, ಸಮಸ್ಯೆ ಇರುವವರೆಲ್ಲರೂ ಪ್ರತಿಭಟನೆಯಲ್ಲಿ ಭಾಗವಹಿಸಬೇಕು.ಹೋರಾಟವನ್ನು ತೀವ್ರಗೊಳಿಸಬೇಕು. ನಿದ್ದೆಯಲ್ಲಿರುವ ಜನರನ್ನು ಎಬ್ಬಿಸಿ ಸರ್ವೋದಯ ಸಮಾಜವನ್ನು ನಿರ್ಮಾಣ ಮಾಡೋಣ ಎಂದು ಕರೆ ನೀಡಿದರು.
ಭೂಮಿ ಮತ್ತು ವಸತಿ ಹಕ್ಕು ಹೋರಾಟ ಸಮಿತಿ ಕೇಂದ್ರ ಸಂಘಟನೆಯ ಸದಸ್ಯ ಸಿರಿಮನೆ ನಾಗರಾಜು ಮಾತನಾಡಿ, ಬಡವರು ಭೂಮಿಗಾಗಿ ಅಲೆದಾಡುತ್ತಿದ್ದಾರೆ, ನಿವೇಶನಕ್ಕಾಗಿ ಮನವಿ ಮಾಡುತ್ತಿದ್ದಾರೆ. ರಾಜ್ಯಾದ್ಯಂತ ಇಂತಹ ಸಮಸ್ಯೆ ತೀವ್ರವಾಗಿದ್ದು, ಸರ್ಕಾರ ಸ್ಪಂದಿಸುತ್ತಿಲ್ಲ. ಬಡವರಿಗೆ ಭೂಮಿ, ಮನೆ ನೀಡುವ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಯೋಚನೆ ಮಾಡುತ್ತಿಲ್ಲ ಎಂದು ಹೇಳಿದರು.
ಸರ್ಕಾರ ಕೊಡದಿದ್ದರೂ ಸರ್ಕಾರಿ ಭೂಮಿಯಲ್ಲಿ ಮನೆ ಕಟ್ಟಿಕೊಂಡವರನ್ನು ಒಕ್ಕಲೆಬ್ಬಿಸುತ್ತಿದ್ದಾರೆ. ಅರಣ್ಯ, ಪೋಲೀಸ್ ಇಲಾಖೆ ಯಿಂದ ಕಿರುಕುಳ ಹೆಚ್ಚುತ್ತಿದ್ದು, ಹೋರಾಟದಿಂದ ಮಾತ್ರ ಭೂಮಿ ಮತ್ತು ವಸತಿ ಹಕ್ಕನ್ನು ಕಂಡುಕೊಳ್ಳಲು ಸಾಧ್ಯ. ರಾಜ್ಯಾದ್ಯಂತ ಇಂತಹ ಹೋರಾಟಗಳು ಹೆಚ್ಚಬೇಕು. ಸರ್ಕಾರವನ್ನು ಬಗ್ಗಿಸದೆ ಹೋದರೆ ಹೋರಾಟಕ್ಕೆ ಯಶಸ್ಸು ಸಿಗುವುದಿಲ್ಲ ಎಂದು ಕರೆ ನೀಡಿದರು.
ಕೆ.ಮರಿಯಪ್ಪ ಮಾತನಾಡಿ, ಅಂಬೇಡ್ಕರ್ ಬರೆದ ಸಂವಿಧಾನದಲ್ಲಿ ಎಲ್ಲರಿಗೂ ಹಕ್ಕಿದೆ. ಆದರೆ ಈಗ ಅಂಬೇಡ್ಕರ್ ಸಂವಿ ಧಾನವನ್ನೇ ಬರೆದಿಲ್ಲ ಎನ್ನುವವರಿದ್ದಾರೆ. ಸ್ಲಂ ಜನರ ಮತ ನಮಗೆ ಬೇಡ ಎನ್ನುವ ಶಾಸಕರನ್ನು ಆರಿಸಿದ್ದೇವೆ ಎಂದರೆ ಎಂತಹ ಪರಿಸ್ಥಿತಿಯಲ್ಲಿ ಇದ್ದೇವೆ ಎನ್ನುವುದನ್ನು ಬಡ ಜನರು ಅರಿಯಬೇಕು ಎಂದರು.
ಧರಣಿಯಲ್ಲಿ ಜಿ.ಪಂ.ಸದಸ್ಯ ವೈ.ಎಚ್.ಹುಚ್ಚಯ್ಯ, ಮುಖಂಡರಾದ ಪಿ.ಎನ್.ರಾಮಯ್ಯ, ಸಿ.ಯತಿರಾಜು, ಯೋಗೀಶ್ ಮೆಳೆಕಲ್ಲಹಳ್ಳಿ, ಸಿದ್ದರಾಜು, ಜೆಸಿಬಿ ವೆಂಕಟೇಶ್, ಹಂದ್ರಾಳು ನಾಗಭೂಷಣ್, ರಾಜಸಿಂಹ, ಅತುಲ್ ಕುಮಾರ್, ನಾಗೇಶ್, ವಸಂತ್ ಕಹಳೆ, ಕುಮಾರ್ ಬಂಡೆ, ಸತ್ಯಣ್ಣ, ನಯಾಜ್, ತು.ಬಿ.ಮಲ್ಲೇಶ್, ಮೋಹನ್ ಕುಮಾರ್, ಪರಮೇಶ್ ಸೇರಿದಂತೆ ಇತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ