ದಾವಣಗೆರೆ :
ವಿದ್ಯಾರ್ಥಿಗಳು ನೆನಪಿನ ಶಕ್ತಿ ವೃದ್ಧಿಗಾಗಿ ಜ್ಯೋತಿಷಿ, ಪೂಜಾರಿ ಹಾಗೂ ಪುರೋಹಿತರ ಮೊರೆ ಹೋಗಬಾರದು ಎಂದು ಚಿತ್ರದುರ್ಗದ ಮುರುಘರಾಜೇಂದ್ರ ಬೃಹನ್ಮಠದ ಡಾ.ಶ್ರೀಶಿವಮೂರ್ತಿ ಮುರುಘಾ ಶರಣರು ಸಲಹೆ ನೀಡಿದರು.
ನಗರದ ಶಿವಯೋಗ ಮಂದಿರದಲ್ಲಿ ಬಸವಕೇಂದ್ರ, ಶ್ರೀ ಎಸ್.ಜೆ.ಎಂ. ಶಿವಯೋಗಾಶ್ರಮ ಟ್ರಸ್ಟ್ ಆಶ್ರಯದಲ್ಲಿ ಶುಕ್ರವಾರದಿಂದ ಆರಂಭವಾಗಿರುವ ಲಿಂ.ಶ್ರೀಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ 62ನೇ ಸ್ಮರಣೋತ್ಸವ ಹಾಗೂ ಶರಣಸಂಸ್ಕತಿ ಉತ್ಸವದ ಪ್ರಯುಕ್ತ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಅವರು ಮಾತನಾಡಿದರು.
ಎಷ್ಟೋ ಜವ ವಿದ್ಯಾರ್ಥಿಗಳು ಪರೀಕ್ಷೆಯ ಹಿಂದಿನ ದಿನ ನೆನಪಿನ ಶಕ್ತಿ ವೃದ್ಧಿಗಾಗಿ ಜ್ಯೋತಿಷಿ, ಪುರೋಹಿತರು ಹಾಗೂ ಪೂಜಾರಿಗಳ ಬಳಿ ಹೋಗಿ ತಾಯಿತಾ ಕಟ್ಟಿಸಿಕೊಂಡು, ಲಿಂಬೆಹಣ್ಣು ಮಂತ್ರಿಸಿಕೊಂಡು ಬಂದಿರುತ್ತಾರೆ. ಆದರೆ, ಆ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರದಲ್ಲಿ ಕೊಟ್ಟ ಪ್ರಶ್ನೆ ಪತ್ರಿಕೆಯನ್ನು ನೋಡಿದಾಕ್ಷಣ ಬೇವರು ಬರುತ್ತೆ ಹೊರತು, ಉತ್ತರ ನೆನಪಾಗುವುದಿಲ್ಲ ಎಂದು ಹೇಳಿದರು.
ವಿದ್ಯಾರ್ಥಿಗಳು ನೆನಪಿನ ಶಕ್ತಿ ವೃದ್ಧಿಗೆ ಜ್ಯೋತಿಷಿಗಳ ಹತ್ತಿರ ಹೋಗುವುದಕ್ಕಿಂತ, ಚೆನ್ನಾಗಿ ಓದಿಕೊಳ್ಳಬೇಕು. ವಿದ್ಯಾರ್ಥಿಯು ಪರೀಕ್ಷೆಯ ಮುಂಚೆಯೇ ಚೆನ್ನಾಗಿ ಓದಿಕೊಂಡಿದ್ದರೆ, ಉತ್ತರ ನೆನಪಿಗೆ ಬರುತ್ತೆ. ಇಲ್ಲದಿದ್ದರೆ, ಪ್ರಶ್ನೆ ಪತ್ರಿಕೆ ನೋಡಿದಾಕ್ಷಣ ಬೇವರು ಬರುತ್ತೆ. ಆದ್ದರಿಂದ ವಿದ್ಯಾರ್ಥಿಗಳು ತರಗತಿಯಲ್ಲಿ ಮೈ ಎಲ್ಲಾ ಕಿವಿಯಾಗಿ ಕೇಳಿಸಿಕೊಳ್ಳುವ ಮೂಲಕ ಕೇಳಿಸಿಕೊಳ್ಳುವ ಶಕ್ತಿಯನ್ನು, ಚೆನ್ನಾಗಿ ಗ್ರಹಿಸುವ ಮೂಲಕ ಗ್ರಹಣ ಶಕ್ತಿಯನ್ನು ವೃದ್ಧಿಸಿಕೊಂಡರೇ, ನೆನಪಿನ ಶಕ್ತಿ ತಾನಾಗಿಯೇ ಬರುತ್ತದೆ ಎಂದರು.
ಸಂವಾದದಲ್ಲಿ ವಿದ್ಯಾರ್ಥಿಗಳ ಮುಂದಿರುವ ಜ್ವಲಂತೆ ಸಮಸ್ಯೆಗಳು ಯಾವ್ಯಾವು? ಎಂಬುದಾಗಿ ಮುರುಘಾ ಶರಣರು ಕೇಳಿದ ಪ್ರಶ್ನೆಗೆ ವಿದ್ಯಾರ್ಥಿನಿಯೊಬ್ಬರು, “ನಿದ್ರೆ” ಎಂದು ಉತ್ತರಿಸಿದರು. ಇದಕ್ಕೆ ಪ್ರತಿಕ್ರಯಿಸಿದ ಸ್ವಾಮೀಜಿ, ವಿದ್ಯಾರ್ಥಿಗಳ ಬದುಕನ್ನು ಕಾಡುವ ಜ್ವಲಂತ ಸಲಸ್ಯೆಗಳಲ್ಲಿ ನಿದ್ದೆಯೂ ಒಂದಾಗಿದ್ದು, ವಿದ್ಯಾರ್ಥಿಗಳು ಶಾಲೆಗೆ ಹೋಗುವ ಮುನ್ನ ಹೆಚ್ಚು ಊಟ ಮಾಡುವ ಬದಲು ಒಣ ಹಣ್ಣುಗಳನ್ನು(ಡ್ರೈಫ್ರೂಟ್ಸ್) ಸೇವಿಸುವುದರಿಂದ ನಿದ್ದೆಯನ್ನು ದೂರ ಮಾಡಬಹುದು ಎಂದರು.
ಬಿಇಎ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಗಣೇಶ್ ಸ್ವಾಮೀಜಿ ಪ್ರಶ್ನೆಗೆ, ವಿದ್ಯಾರ್ಥಿಗಳ ಮುಂದಿರುವ ಸಮಸ್ಯೆ “ಮರುವು” ಎಂಬುದಾಗಿ ಉತ್ತರಿಸಿದರು. ಇದಕ್ಕೆ ಪ್ರತಿಕ್ರಯಿಸಿದ ಶ್ರೀಗಳು, ಮರುವಿಗೆ ಯಾವುದೇ ಔಷಧಿಗಳಿಲ್ಲ. ಮರುವು ದೂರ ಮಾಡಿ ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಬೇಕಾದರೆ, ಧ್ಯಾನ, ಪ್ರಾರ್ಥನೆ ಮಾಡುವುದರ ಜೊತೆಗೆ ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಪರೀಕ್ಷೆ ದೂರವಿದ್ದಾಗ ಚೆಲ್ಲಾಟ, ಚಿನ್ನಾಟ. ಹತ್ತಿರ ಬಂದಾಗ ಪೀಕಲಾಟ ಎಂಬ ಮಾತಿನಂತೆ, ಪರೀಕ್ಷೆ ಸಮೀಪಿಸುವಾಗ ಓದುವವರ ಸಂಖ್ಯೆಯೇ ಹೆಚ್ಚಾಗಿದೆ. ಇದು ಸರಿಯಾದ ಓದಿನ ಕ್ರಮವಲ್ಲ. ಅಂದಂದಿನ ಪಾಠ-ಪ್ರವಚನವನ್ನು ಅಂದಂದೇ ಪರಿಪೂರ್ಣ ಮಾಡಿಕೊಳ್ಳಬೇಕು. ಅಲ್ಲದೆ, ಕ್ಲಿಷ್ಟಕರ ಎಂದೆನಿಸುವ ವಿಷಯಗಳ ಬಗ್ಗೆ ಶಿಕ್ಷಕರೊಂದಿಗೆ ಚರ್ಚಿಸಿ ಅಂದೇ ಬಗೆಹರಿಸಿಕೊಳ್ಳುವುದರಿಂದ ಮರುವಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ದಿನಕ್ಕೆ ಎಷ್ಟು ಗಂಟೆ ಆಟ ಆಡುತ್ತೀರಿ ಎಂಬ ಸ್ವಾಮೀಜಿ ಪ್ರಶ್ನೆಗೆ ಅದೇ ಗಣೇಶ್ ಸಂಜೆ ಐದು ಗಂಟೆಯಿಂದ ಆರು ಗಂಟೆಯ ವರೆಗೆ ಆಟ ಆಡುವುದಾಗಿ ಉತ್ತರಿಸಿದ. ಇದಕ್ಕೆ ಪ್ರತಿಕ್ರಯಿಸಿದ ಶ್ರೀಗಳು, ಮನೆ ಹೊರಗಿನ ಆಟವನ್ನು ಸಂಜೆ ಆರು ಗಂಟೆಯ ವರೆಗೆ ಆಡಬಹುದು. ಆದರೆ, ಮನೆಯೊಳಗಿನ ಮೊಬೈಲ್, ಟಿವಿ ಎಂಬ ಆಟಗಳನ್ನು ಮಲುಗುವ ವರೆಗೂ ಆಡುತ್ತೀರಾ? ಹೀಗಾದರೆ ಓದುವುದು ಯಾವಾಗ ಹಾಗೂ ದಿನಕ್ಕೆ ಎಷ್ಟು ಗಂಟೆ ಓದುತ್ತೀರಿ? ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಯಶವಂತ್ ಎಂಬ ವಿದ್ಯಾರ್ಥಿ 2 ಗಂಟೆ ಓದುವುದಾಗಿ ತಿಳಿಸಿದರು. ಈ ವೇಳೆ ಮಾತನಾಡಿದ ಸ್ವಾಮೀಜಿ, ದಿನಕ್ಕೆ ಕನಿಷ್ಠ ಐದರಿಂದ ಆರು ಗಂಟೆ ಓದಬೇಕು ಎಂದು ಸಲಹೆ ನೀಡಿದರು.ಮುರುಘಾ ಶರಣರ ಸಲಹೆಗೆ ಸಮ್ಮತಿ ಸೂಚಿಸಿ ಮಾತನಾಡಿದ ಸೇಂಟ್ ಪಾಲ್ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಚಿನ್ಮಯಿ, ಮೊಬೈಲ್ ಗೇಮ್ಸ್ ಆಡುವುದನ್ನು ಹಾಗೂ ಟಿವಿ ನೋಡುವುದನ್ನು ಕಡಿಮೆ ಮಾಡಿ, ಓದಿಗೆ ಹೆಚ್ಚು ಆದ್ಯತೆ ನೀಡಬೇಕು. ಪರಿಣಾಮ ಕಾರಿಯಾಗಿ ಪರೀಕ್ಷೆ ಎದುರಿಸಿ ಹೆಚ್ಚಿನ ಅಂಕಗಳಿಕೆಗೆ ಸಹಕಾರಿಯಾಗಲಿದೆ ಎಂದರು.
ಈ ವೇಳೆ ಮಾತನಾಡಿದ ಸ್ವಾಮೀಜಿ, ನೋಡಿ ಆ ವಿದ್ಯಾರ್ಥಿನಿ ಈ ವಯಸ್ಸಿಗೆ ಬಹಳಷ್ಟು ತಿಳಿದುಕೊಂಡಿದ್ದಾಳೆ.
ವಿದ್ಯಾರ್ಥಿನಿಯರೇ ಇಂದು ಎಲ್ಲಾ ಕ್ಷೇತ್ರಗಳಲ್ಲಿ ಮುಂದಿದ್ದಾರೆ. ಅವರಂತೆ ಗಂಡು ಮಕ್ಕಳು ಮುಂದು ಬರಬೇಕು. ಹೀಗಾಗಿ ಡೈವರ್ಟು ಆಗಿ, ಯಡವಟ್ಟು ಮಾಡಿಕೊಳ್ಳಬೇಡ್ರೊ ಎನ್ನುತ್ತಿದ್ದಂತೆ,ಮತ್ತೆ ಮಾತಿಗಿಳಿದ ಚಿನ್ಮಯಿ, ಗಂಡು ಮಕ್ಕಳು ಹೆಚ್ಚು ಹೊರಗಡೆ ಸುತ್ತುತ್ತಾರೆ. ಆದರೆ, ಹೆಣ್ಮಕ್ಕಳು ಮನೆಯಲ್ಲಿಯೇ ಕೂತು ಓದುತ್ತಾರೆ. ಹೀಗಾಗಿ ನಾವು ಮುಂದಿದ್ದೇವೆ ಎಂದಳು. ಆಗ ಸ್ವಾಮೀಜಿ, ನಿಮಗೇಕೆ ಹೊರಗಡೆ ಬಿಡಲ್ಲ ಎಂದು ವಿದ್ಯಾರ್ಥಿಯನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ವಿದ್ಯಾರ್ಥಿನಿ, ಗಂಡಮಕ್ಕಳಿಗೆ ಬೈಕ್ ಕೊಡಿಸುತ್ತಾರೆ. ನಾವು ಕೇಳಿದ್ರೆ, ನಿನಿಗೇಕೆ ಬೈಕು ಅಂತ ದಬಾಯಿಸುತ್ತಾರೆ ಎಂದು ಅಸಹಾಯಕತೆ ವ್ಯಕ್ತಪಡಿಸಿದಳು.
ಆಗ ಸ್ವಾಮೀಜಿ ಮಾತನಾಡಿ, ಪ್ರಸ್ತುತ ಸಮಾಜದಲ್ಲಿ ಗಂಡು ಸಂತಾನವನ್ನು ಹೆಚ್ಚು ಪ್ರೀತಿಸುತ್ತಾರೆ. ಆ ಕಾರಣಕ್ಕೆ ಕೆಲ ವಿಷಯಗಳಲ್ಲಿ ಹೆಣ್ಣು ಮಕ್ಕಳನ್ನು ಕಡೆಗಣಿಸಲಾಗುತ್ತೆ. ಆದ್ದರಿಂದ ಹೆಣ್ಣು ಮಕ್ಕಳು ಸಹ ಪ್ರಶ್ನೆ ಮಾಡುವ ಮೂಲಕ ತಮ್ಮ ಅಧಿಕಾರ ಚಲಾಯಿಸಿ, ಹಕ್ಕು ಪಡೆಯಬೇಕೆಂದು ಕಿವಿಮಾತು ಹೇಳಿದರು.ಸಂವಾದದಲ್ಲಿ ವಿವಿಧ ಶಾಲೆಗಳ ಮಕ್ಕಳು ಭಾಗವಹಿಸಿದ್ದರು.ಈ ವೇಳೆ ವಿರಕ್ತಮಠದ ಶ್ರೀಬಸವಪ್ರಭು ಸ್ವಾಮೀಜಿ, ಶಿಕ್ಷಕ ರುದ್ರಪ್ಪ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
