ಬಳ್ಳಾರಿ
ಆಂಧ್ರಪ್ರದೇಶದ ಅನಂತಪುರ ಮತ್ತು ಕರ್ನೂಲ್ ಜಿಲ್ಲೆಗಳಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿದ್ದು, ಆ ಕಡೆಯಿಂದ ಬಳ್ಳಾರಿ ಕಡೆ ಜನ ಅಡ್ಡದಾರಿಗಳಿಂದ ನುಸುಳುತ್ತಿದ್ದಾರೆ ಎಂಬ ಮಾಹಿತಿ ಇದ್ದು,ಕೂಡಲೇ ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಅರಣ್ಯ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಆನಂದಸಿಂಗ್ ಸೂಚನೆ ನೀಡಿದರು.
ಕೋವಿಡ್-19ಗೆ ಸಂಬಂಧಿಸಿದಂತೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಬಳ್ಳಾರಿ ಸುರಕ್ಷಿತವೆಂಬ ಕಾರಣದಿಂದ ಅನಂತುಪರ,ಕರ್ನೂಲ್,ಆಲೂರು, ಗುಂತಕಲ್,ರಾಯದುರ್ಗ ಕಡೆಯಿಂದ ಬಹಳಷ್ಟು ಜನರು ಕ್ಯಾನಲ್ ಮಾರ್ಗಗಳು ಹಾಗೂ ಅಡ್ಡದಾರಿಗಳ ಮೂಲಕ ಈ ಕಡೆ ಬರುತ್ತಿದ್ದಾರೆ ಎಂಬ ಮಾಹಿತಿ ಇದ್ದು, ತಾವು ಪ್ರಮುಖ ರಸ್ತೆಗಳಿಗೆ ಚೆಕ್‍ಪೋಸ್ಟ್ ಹಾಕಿದರೇ ಸಾಲದು; ಈ ಮಾರ್ಗಗಳಲ್ಲಿಯೂ ಹದ್ದಿನಗಣ್ಣಿಟ್ಟು ಯಾರು ಆ ಕಡೆಯಿಂದ ಒಳನುಸುಳದಂತೆ ನೋಡಿಕೊಳ್ಳಬೇಕು ಎಂದು ಅವರು ಸೂಚಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಅವರು ತಮ್ಮ ಸೂಚನೆ ಅನುಸಾರ ಇಂದಿನಿಂದಲೇ ಕ್ರಮವಹಿಸಲಾಗುವುದು ಎಂದು ಹೇಳಿದರು.
ಜನಪ್ರತಿನಿಧಿಗಳ ಸಲಹೆ ಗಂಭೀರವಾಗಿ ಪರಿಗಣಿಸಿ: ಕೋವಿಡ್-19 ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದು,ಇದು ಇದೇ ರೀತಿ ಮುಂದುವರಿಯಲಿ ಎಂದು ಸಲಹೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು ಅಧಿಕಾರಿಗಳು ಜನಪ್ರತಿನಿಧಿಗಳು ನೀಡುವ ಸಲಹೆಗಳನ್ನು ಆಲಿಸಿ ಅವುಗಳನ್ನು ಗಂಭೀರವಾಗಿ ಅನುಷ್ಠಾನಕ್ಕೆ ಮುಂದಾಗಬೇಕು.
ಜನಪ್ರತಿನಿಧಿಗಳಿಗೆ ಸ್ಥಳೀಯ ಸ್ಥಿತಿಗತಿಗಳ ಅರಿವು ಇರುವುದರಿಂದ ಅವರು ಸಲಹೆಗಳನ್ನು ನೀಡುತ್ತಿರುತ್ತಾರೆ. ಆದ ಕಾರಣ ಅವುಗಳನ್ನು ಪರಿಗಣಿಸಬೇಕು; ಯಾವುದೇ ರೀತಿಯ ಪ್ರತಿಷ್ಠೆಯನ್ನಾಗಿ ತೆಗೆದುಕೊಳ್ಳಬಾರದು ಎಂದು ಅವರು ಸೂಚಿಸಿದರು. ಕಾರ್ಮಿಕರ ಮೇಲೆ ವಿಶೇಷ ಗಮನಹರಿಸಿ: ಹೊಟ್ಟೆಪಾಡಿಗಾಗಿ ಹಾಸನ್,ಮಂಡ್ಯ, ಮೈಸೂರು,ಚಿಕ್ಕಮಗಳೂರು, ಮಂಗಳೂರು ಸೇರಿದಂತೆ ವಿವಿಧೆಡೆ ತೆರಳಿ ಲಾಕ್‍ಡೌನ್ ಕಾರಣದಿಂದ ಸ್ವಗ್ರಾಮಕ್ಕೆ ಮರಳಿರುವ ಕಾರ್ಮಿಕರ ಮೇಲೆ ವಿಶೇಷ ನಿಗಾ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು.
ಹೊಟ್ಟೆಪಾಡಿಗಾಗಿ ವಿವಿಧೆಡೆ ಕೆಲಸಕ್ಕೆ ತೆರಳಿದ್ದ ಅನೇಕರು ಲಾಕ್‍ಡೌನ್ ಸಂದರ್ಭದಲ್ಲಿ ಊರಿಗೆ ಬಂದವರು ಬಂದಿದ್ದಾರೆ;ಇನ್ನೂ ಅನೇಕರು ಅಲ್ಲಲ್ಲಿಯೇ ಉಳಿದುಕೊಂಡಿದ್ದು, ಅವರನ್ನು ಕರೆತರುವುದಕ್ಕೆ ವಿಶೇಷ ವ್ಯವಸ್ಥೆ ಮಾಡಬೇಕು. ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವಂತೆ ಹಡಗಲಿ ಶಾಸಕ ಪಿ.ಟಿ.ಪರಮೇಶ್ವರ ನಾಯಕ್ ಅವರು ಒತ್ತಾಯಿಸಿದರು.
356 ರೈತರ 2602 ಹೆಕ್ಟೇರ್ ಜಮೀನಿಗೆ ಬೆಳೆಹಾನಿ: ಇತ್ತೀಚೆಗೆ ಸುರಿದ ಮಳೆಯಿಂದ ಅಪಾರ ಪ್ರಮಾಣದಲ್ಲಿ ಬೆಳೆಹಾನಿಯಾಗಿದ್ದು,ಇದಕ್ಕೆ ರಾಜ್ಯ ಸರಕಾರ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು ಶಾಸಕರ ಸಲಹೆಗಳನ್ನು ಆಲಿಸಿ ಹೇಳಿದರು.
ಇತ್ತೀಚೆಗೆ ಸುರಿದ ಮಳೆಯಿಂದಾಗಿ ಸಿರಗುಪ್ಪ,ಕಂಪ್ಲಿ,ಹಡಗಲಿ ಮತ್ತು ಹರಪನಳ್ಳಿ ತಾಲೂಕುಗಳಲ್ಲಿ 2602.40 ಹೆಕ್ಟೇರ್ ಬೆಳೆಹಾನಿಯಾಗಿದ್ದು, ಎನ್‍ಡಿಆರ್‍ಎಫ್ ನಿಯಮದ ಅನ್ವಯ 224.90 ಹೆಕ್ಟೇರ್ ನಾಶವಾಗಿದೆ. ಈ ಕುರಿತು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. 356 ರೈತರ ಜಮೀನುಗಳಲ್ಲಿ 30.02ಲಕ್ಷ ರೂ. ಹಾನಿಯಾಗಿರುವುದನ್ನು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಸಭೆಗೆ ವಿವರಿಸಿದರು.
ಈ ಲಾಕ್‍ಡೌನ್‍ನಿಂದಾಗಿ ಇಡೀ ನಾಡಿನ ರೈತರು ತೀವ್ರ ಸಂಕಷ್ಟಕ್ಕೊಳಗಾಗಿದ್ದು, ಇಂತಹ ಸಂದರ್ಭದಲ್ಲಿ ಅವರ ನೆರವಿಗೆ ಧಾವಿಸುವುದು ನಮ್ಮೆಲ್ಲರ ಕರ್ತವ್ಯ. ರೈತರ ಕೃಷಿ ಚಟುವಟಿಕೆಗಳಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ನೋಡಿಕೊಳ್ಳಿ ಎಂದು ಅವರು ಸೂಚಿಸಿದರು.
ತೋಟಗಾರಿಕೆ ಬೆಳೆಗಳ 41 ಸಾವಿರ ಮೆಟ್ರಿಕ್ ಟನ್ ಇಳುವರಿ ಇಂದು ಮಾರುಕಟ್ಟೆ ಸಮಸ್ಯೆ ಜಿಲ್ಲೆಯಲ್ಲಿ ಎದುರಿಸುತ್ತಿರುವುದನ್ನು ತೋಟಗಾರಿಕೆ ಇಲಾಖೆ ಅಧಿಕಾರಿ ಸಭೆಯಲ್ಲಿ ಬಿಚ್ಚಿಟ್ಟರು.
ಜಿಲ್ಲಾ ಖನಿಜ ನಿಧಿ ಹಣ ಬಳಕೆ ವಿಶೇಷ ಪ್ರಸ್ತಾವನೆ ಕೇಂದ್ರಕ್ಕೆ: ಈ ಲಾಕ್‍ಡೌನ್ ಸಂದರ್ಭದಲ್ಲಿ ಜಿಲ್ಲೆಯ ಬಡಜನರು ಅತ್ಯಂತ ಸಂಕಷ್ಟಕ್ಕೊಳಗಾಗಿದ್ದು,ದಿನದೂಡುವುದು ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಅವರಿಗೆ ನೆರವಾಗುವ ದೃಷ್ಟಿಯಿಂದ ಜಿಲ್ಲಾ ಖನಿಜ ನಿಧಿಯಲ್ಲಿ ಉಳಿದಿರುವ ಹಣದಲ್ಲಿ ವಿಶೇಷ ಪ್ರಸ್ತಾವನೆ ಸಿದ್ದಪಡಿಸಲಾಗಿದ್ದು, ಶಾಸಕರೊಂದಿಗೆ ಚರ್ಚಿಸಿ ಪ್ರಸ್ತಾವನೆಯನ್ನು ಕೇಂದ್ರ ಸರಕಾರಕ್ಕೆ ಕಳುಹಿಸಲಾಗುವುದು;ಒಪ್ಪಿಗೆ ದೊರೆತಲ್ಲಿ ಅನುಷ್ಠಾನಕ್ಕೆ ಕ್ರಮವಹಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ