ಕುಡಿಯುವ ನೀರಿನ ಸಮಸ್ಯೆ ನಿರ್ಲಕ್ಷ್ಯ ಮಾಡುವಂತಿಲ್ಲ : ವೆಂಕಟರಮಣಪ್ಪ

ಚಿತ್ರದುರ್ಗ

      ಚಿತ್ರದುರ್ಗ ಜಿಲ್ಲೆಯ ಎಲ್ಲಾ ತಾಲ್ಲೂಕುಗಳು ಬರಪೀಡಿತವಾಗಿದ್ದು ಕಳೆದ ವರ್ಷಕ್ಕಿಂತ ಈ ವರ್ಷವು ಭೀಕರವಾದ ಬರವನ್ನು ಎದುರಿಸುವಂತಾಗಿದೆ. ಈ ನಿಟ್ಟಿನಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ನಿರ್ಲಕ್ಷ್ಯತೆ ವಹಿಸದೆ ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವೆಂಕಟರಮಣಪ್ಪ ಸೂಚನೆ ನೀಡಿದರು.

       ಅವರು (ಮೇ 13) ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬರ ನಿರ್ವಹಣೆ, ಕುಡಿಯುವ ನೀರು, ಮೇವಿಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಧಿಕಾರಿಗಳು ಬರ ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡದಿರುವುದರಿಂದ ಜನರು ಪ್ರತಿಭಟನೆ ಮಾಡುವಂತಾಗಿದೆ.

      ಅಧಿಕಾರಿಗಳು ಕುಡಿಯುವ ನೀರಿಗಾಗಿ ಕೊಳವೆಬಾವಿ ಕೊರೆದಿರುವ ಹಾಗೂ ಪೈಪ್‍ಲೈನ್ ಅಳವಡಿಕೆ ಮತ್ತು ಮೇವು ಪೂರೈಕೆ ಬಗ್ಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ಮುಂದಿನ ಸಭೆಯನ್ನು ಜೂನ್ 1 ರಂದು ತೆಗೆದುಕೊಳ್ಳಲಿದ್ದು ಅಂದಿನ ಸಭೆಗೆ ಎಲ್ಲಾ ಮಾಹಿತಿಯೊಂದಿಗೆ ಸಭೆಗೆ ಬರಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರು ಈ ಬಗ್ಗೆ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಕೆಲಸವನ್ನು ತೆಗೆದುಕೊಳ್ಳಬೇಕೆಂದು ಸೂಚನೆ ನೀಡಿದರು.

        ಬೇಸಿಗೆಯಲ್ಲಿ ಜಿಲ್ಲೆಯ ಎಲ್ಲಾ ಅರು ತಾಲ್ಲೂಕುಗಳಲ್ಲಿ ಕುಡಿಯುವ ನೀರನ್ನು 139 ಗ್ರಾಮಗಳಿಗೆ ಟ್ಯಾಂಕರ್‍ಗಳ ಮೂಲಕ ಪೂರೈಕೆ ಮಾಡುತ್ತಿದ್ದು ಪ್ರತಿ ದಿನ 166 ಟ್ಯಾಂಕರ್‍ಗಳ ಮೂಲಕ 564 ಟ್ರಿಪ್‍ಗಳ ಮೂಲಕ ಸರಬರಾಜು ಮಾಡಲಾಗುತ್ತಿದೆ. ಮತ್ತು ಅಗತ್ಯವಿರುವ ಕಡೆ 45 ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಪೂರೈಕೆ ಮಾಡಲಾಗಿದೆ. ಹೊಸದುರ್ಗ ತಾಲ್ಲೂಕಿನಲ್ಲಿ ಮಾತ್ರ ಕುಡಿಯುವ ನೀರಿನ ಸಮಸ್ಯೆ ಅಷ್ಟೊಂದು ಕಾಣುತ್ತಿಲ್ಲ. ಆದರೆ ಉಳಿದ ಐದು ತಾಲ್ಲೂಕುಗಳಲ್ಲಿ ಹೆಚ್ಚಿನ ಸಮಸ್ಯೆ ಇದ್ದು ಮುಂದಿನ ದಿನಗಳಲ್ಲಿ ಬರಬಹುದಾದ ಸಮಸ್ಯಾತ್ಮಕ ಗ್ರಾಮಗಳ ಪಟ್ಟಿಯನ್ನು ತಯಾರಿಸಿಟ್ಟುಕೊಳ್ಳಲು ಸೂಚನೆ ನೀಡಿದರು.

        ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆ ಮತ್ತು ಟಾಸ್ಕ್ ಪೋರ್ಸ್‍ನಡಿ 2366 ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದೆ. ಇದರಲ್ಲಿ 2133 ಪೂರ್ಣಗೊಂಡಿದ್ದು 233 ಬಾಕಿ ಇವೆ. ಮತ್ತು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕುಡಿಯುವ ನೀರಿಗಾಗಿ ಒಟ್ಟು 1666 ಕೊಳವೆಬಾವಿಗಳನ್ನು ಕೊರೆಯಿಸಲಾಗಿದೆ.

       ಇದರಲ್ಲಿ 895 ಸಫಲ, 771 ಕಡಿಮೆ ನೀರಿನ ಇಳುವರಿ ಇದೆ ಎಂದು ಗ್ರಾಮೀಣ ನೀರು ಪೂರೈಕೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಮಂಜುನಾಥ್ ಸಭೆಗೆ ಮಾಹಿತಿ ನೀಡಿದರು. ಈ ವೇಳೆ ಸಚಿವರು ತೀವ್ರ ಅಸಮಧಾನಗೊಂಡು ಸಫಲ, ಕಡಿಮೆ ಮಾತ್ರ ತೋರಿಸಲಾಗಿದೆ.

       ಆದರೆ ಎಷ್ಟು ಕೊಳವೆಬಾವಿಗಳು ವಿಫಲವಾಗಿವೆ ಮತ್ತು ಇದಕ್ಕೆ ಕಾರಣವೇನು ಎಂಬ ಅಂಕಿ ಅಂಶಗಳ ವಿವರ ಇಲ್ಲದಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಮತ್ತು ಹಿರಿಯೂರು ತಾಲ್ಲೂಕಿನ 19 ಕೊಳವೆಬಾವಿಗಳನ್ನು ಮಾತ್ರ ಪುನಃ ಕೊರತೆಯಲಾಗಿದೆ.

       ಆದರೆ ಇನ್ನುಳಿದ ತಾಲ್ಲೂಕುಗಳಲ್ಲಿ ಇದನ್ನು ಮಾಡಿರುವುದಿಲ್ಲ. ಕೆಲವು ಕಡೆ ರೀ ಬೋರ್ ಕೊರೆದಲ್ಲಿ ನೀರು ಬರುವ ಸಾಧ್ಯತೆ ಇದ್ದು ಅಂತಹ ಕಡೆ ರೀಬೋರ್ ಕೊರೆಯಲು ತಿಳಿಸಿದರು. ಮತ್ತು ವಿಫಲವಾದ ಕೊಳವೆ ಬಾವಿಗಳ ವಿವರ ನೀಡದ ಕಾರ್ಯಪಾಲಕ ಇಂಜಿನಿಯರ್ ಮತ್ತು ಚಿತ್ರದುರ್ಗ ಸಹಾಯಕ ಕಾರ್ಯಪಾಲಕ ಇಂಜಿನಿಯರ್‍ರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಸಚಿವರು ಅಧಿಕಾರಿಗಳ ಇಂತಹ ನಿರ್ಲಕ್ಷ್ಯತೆಯನ್ನು ಎಂದಿಗೂ ಸಹಿಸಲಾಗುವುದಿಲ್ಲ ಎಂದು ಎಚ್ಚರಿಸಿದರು.

      ಜಿಲ್ಲೆಯಲ್ಲಿ 1080 ಶುದ್ದ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪನೆಗೆ ಮಂಜೂರಾಗಿದ್ದು ಇದರಲ್ಲಿ ಈಗಾಗಲೇ 999 ಅಳವಡಿಸಿ 980 ಚಾಲನೆ ನೀಡಲಾಗಿದೆ. ಇದರಲ್ಲಿ 902 ಕೆಲಸ ಮಾಡುತ್ತಿವೆ. 78 ಕಾರ್ಯನಿರ್ವಹಿಸುತ್ತಿಲ್ಲ. ಮತ್ತು 28 ಕಡೆ ನೀರಿನ ಸಮಸ್ಯೆಯನ್ನು ಎದುರಿಸುತ್ತಿವೆ. ಇಲ್ಲಿಗೆ ಟ್ಯಾಂಕರ್‍ಗಳ ಮೂಲಕ ನೀರು ಪೂರೈಕೆಗೆ ಸೂಚನೆ ನೀಡಲಾಗಿದೆ.

      ಮತ್ತು ಕೆಆರ್‍ಐಡಿಎಲ್ ನಿಂದ ಆರ್.ಓ.ಅಳವಡಿಕೆಗೆ ಬಾಕಿ ಇವೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಸತ್ಯಭಾಮ ತಿಳಿಸಿದರು. ಮುಂದಿನ ಹದಿನೈದು ದಿನಗಳಲ್ಲಿ ಅರ್.ಓ ಅಳವಡಿಸದಿದ್ದಲ್ಲಿ ಕೆಆರ್‍ಐಡಿಎಲ್ ನಿಂದ ಹಣವನ್ನು ವಾಪಸ್ ಪಡೆದು ಟೆಂಡರ್ ಮೂಲಕ ಕೆಲಸ ಮಾಡಿಸಿ ಎಂದು ಸೂಚನೆ ನೀಡಿದ ಸಚಿವರು ಜನರಿಗೆ ಶುದ್ದ ಕುಡಿಯುವ ನೀರು ಒದಗಿಸಲು ಹಣವನ್ನು ನೀಡಿದರೂ ಉಪಯೋಗವಾಗುತ್ತಿಲ್ಲ ಎಂದರೆ ಇದನ್ನು ಸಹಿಸಿಕೊಳ್ಳಲಾಗುವುದಿಲ್ಲ ಎಂದು ಎಚ್ಚರಿಸಿದರು.

      ಜಾನುವಾರು ಗಣತಿಯನ್ವಯ ಜಿಲ್ಲೆಯಲ್ಲಿ 426677 ಜಾನುವಾರುಗಳಿದ್ದು ಪ್ರತಿದಿನಕ್ಕೆ 14933 ಮೆಟ್ರಿಕ್ ಟನ್ ಮೇವು ಅಗತ್ಯವಿದೆ. ಪ್ರಸ್ತುತ 118497 ಮೆಟ್ರಿಕ್ ಟನ್ ಮೇವು ಲಭ್ಯವಿದೆ. ಆದರೂ ಸಹ ಜಾನುವಾರುಗಳ ರಕ್ಷಣೆಗಾಗಿ ಅಗತ್ಯವಿರುವ ಕಡೆ ಗೋಶಾಲೆಗಳನ್ನು ತೆರೆಯಬೇಕು. ಈ ಬಗ್ಗೆ ಪಶುಸಂಗೋಪನಾ ಇಲಾಖೆ ಉಪನಿರ್ದೇಶಕರು ಸಮರ್ಪಕವಾಗಿ ಮಾಹಿತಿ ನೀಡದಿರುವಾಗ ಜಿಲ್ಲಾಧಿಕಾರಿಗಳೊಂದಿಗೆ ಈ ಬಗ್ಗೆ ಚರ್ಚಿಸಲಾಗುತ್ತದೆ ಎಂದರು.

       ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಸತ್ಯಭಾಮ ಮಾತನಾಡಿ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಹಾಗೂ ಟಾಸ್ಕ್ ಪೋರ್ಸ್‍ರಡಿ ಜಿಲ್ಲೆಗೆ ಕಳೆದ ವರ್ಷ 112.31 ಕೋಟಿ ಹಂಚಿಕೆಯಾಗಿ ಇದರಲ್ಲಿ 99 ಕೋಟಿ ಬಿಡುಗಡೆಯಾಗಿದೆ. ಬಿಡುಗಡೆಯಾದ ಮೊತ್ತದಲ್ಲಿ 83 ಕೋಟಿ ವೆಚ್ಚ ಮಾಡಲಾಗಿದೆ. ಬರದ ಹಿನ್ನೆಲೆಯಲ್ಲಿ ಕುಡಿಯುವ ನೀರು ಪೂರೈಕೆಗಾಗಿ ಎಲ್ಲಾ ತಾಲ್ಲೂಕುಗಳಲ್ಲಿ ಸಹಾಯವಾಣಿಯನ್ನು ಸ್ಥಾಪಿಸಲಾಗಿದೆ. ಸಹಾಯವಾಣಿ ಮೂಲಕ 191 ಕರೆಗಳನ್ನು ಸ್ವೀಕರಿಸಿ ಕ್ರಮ ಜರುಗಿಸಲಾಗಿದೆ ಎಂದು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap