ಸರ್ಕಾರದಿಂದ ಬಯಲುಸೀಮೆ ಕಡೆಗಣನೆ : ಎಂ ಕೆ ತಾಜ್ ಪೀರ್

ಚಿತ್ರದುರ್ಗ:        ರಾಜ್ಯ ಬಿಜೆಪಿ.ಸರ್ಕಾರ ಮಂಡಿಸಿರುವ ಬಜೆಟ್‍ನಿಂದ ಬಯಲುಸೀಮೆ ಚಿತ್ರದುರ್ಗ ಜಿಲ್ಲೆಗೆ ಅನ್ಯಾಯವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಟೀಕಿಸಿದರು.

    ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಜಿಲ್ಲೆಗೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜ್, ಅಪ್ಪರ್‍ಭದ್ರಾ ಯೋಜನೆ, ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗ ಯೋಜನೆ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಪ್ರಸ್ತಾಪಿಸದೆ ಜಿಲ್ಲೆಯನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ.

     ಈ ಹಿಂದೆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಹಾಗೂ ದೋಸ್ತಿ ಸರ್ಕಾರದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರವರು ಜಿಲ್ಲೆಗೆ ಕೊಡುಗೆಯಾಗಿ ನೀಡಿದ್ದ ಯೋಜನೆಗಳನ್ನು ಈಗಿನ ಬಿಜೆಪಿ.ಸರ್ಕಾರ ನಿರ್ಲಕ್ಷಿಸಿದೆ. ಮೂರು ಪ್ರಮುಖ ಯೋಜನೆಗಳಿಗೆ ಬಿಡಿಗಾಸು ಬಜೆಟ್‍ನಲ್ಲಿ ಮಂಜೂರಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

     ಜಿಲ್ಲೆಯ ಐದು ಮಂದಿ ಬಿಜೆಪಿ.ಶಾಸಕರು ಹಾಗೂ ಒಬ್ಬ ಸಂಸದರಿಗೆ ಅಧಿಕಾರ ಮುಖ್ಯವೇ ವಿನಃ ಜಿಲ್ಲೆಯ ಅಭಿವೃದ್ದಿ ಬೇಕಾಗಿಲ್ಲ. ಕೇಂದ್ರ ಕೋಮುವಾದಿ ಬಿಜೆಪಿ. ಅಧಿಕಾರಕ್ಕೆ ಬಂದಾಗಿನಿಂದಲೂ ಭರವಸೆಗಳ ಮಹಾಪೂರವನ್ನೇ ಹರಿಸುತ್ತಿದೆ. ಆದೇಶಗಳು ಕಾಗದದಲ್ಲಿ ಉಳಿದಿಕೊಂಡಿವೆ. ಯಾವುದೂ ಕಾರ್ಯರೂಪಕ್ಕೆ ಬರುತ್ತಿಲ್ಲದಿರುವುದು ನಾಚಿಕೆಗೇಡಿನ ಸಂಗತಿ ಎಂದು ಆಪಾದಿಸಿದರು.

   ಕೇಂದ್ರದಿಂದ ರಾಜ್ಯಕ್ಕೆ ಅನುದಾನ ತರುವಲ್ಲಿ ಮುಖ್ಯಮಂತ್ರಿಗಳು ಹಾಗೂ ಜಿಲ್ಲೆಯ ಶಾಸಕರುಗಳು ವಿಫಲರಾಗಿದ್ದಾರೆ. ಇದು ರಾಜ್ಯಕ್ಕೆ ಮಾಡುತ್ತಿರುವ ಮಲತಾಯಿ ಧೋರಣೆ. ಚೆನೈ-ಚಿತ್ರದುರ್ಗ ಇಂಡಸ್ಟ್ರಿಯಲ್ ಕಾರಿಡಾರ್ ಎಂದು ಘೋಷಿಸಿತ್ತು. ರಾಜ್ಯ ಸರ್ಕಾರ ದುಡಿಯುವ ಕೈಗಳಿಗೆ ಉದ್ಯೋಗ ನೀಡಿಲ್ಲ. ಜನಸಂಖ್ಯೆಗನುಗುಣವಾಗಿ ವಿವಿಧ ನಿಗಮ ಮಂಡಳಿಗಳಿಗೆ ಅನುದಾನ ನೀಡುವಲ್ಲಿಯೂ ರಾಜ್ಯ ಸರ್ಕಾರ ತಾರತಮ್ಯವೆಸಗಿದೆ ಎಂದು ಬಜೆಟನ್ನು ವಿರೋಧಿಸಿದರು.

   ಜಿಲ್ಲಾ ಕಾಂಗ್ರೆಸ್ ಹಿರಿಯ ಉಪಾಧ್ಯಕ್ಷ ಆರ್.ಕೆ.ನಾಯ್ಡು ಮಾತನಾಡಿ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರು ಮಂಡಿಸಿರುವ ಬಜೆಟ್ ಬಗ್ಗೆ ಬಿಜೆಪಿ.ಯವರೇ ವ್ಯಂಗ್ಯವಾಡುತ್ತಿದ್ದಾರೆ. ಜಿಲ್ಲೆಗೆ ಯಾವುದೇ ಸಂಪನ್ಮೂಲವಿಲ್ಲ. ಇದೊಂದು ಪ್ರಭಾವಿಗಳನ್ನು ಸಂತೋಷಪಡಿಸುವ ಬಜೆಟ್. ಬಿಜೆಪಿ.ಶಾಸಕರಿರುವ ಕಡೆ ಬಜೆಟ್‍ನಲ್ಲಿ ಹೆಚ್ಚು ಒತ್ತು ಕೊಡಲಾಗಿದೆ. ಸಂಪೂರ್ಣವಾಗಿ ಇದು ಕೇಸರಿ ಬಜೆಟ್ ಎಂದು ಮುಖ್ಯಮಂತ್ರಿ ಧೋರಣೆಯನ್ನು ಖಂಡಿಸಿದರು.

   ಬಹುವರ್ಷಗಳ ಕನಸು ಭದ್ರಾಮೇಲ್ದಂಡೆ ಯೋಜನೆ, ನೇರು ರೈಲು ಮಾರ್ಗ, ಮೆಡಿಕಲ್ ಕಾಲೇಜಿಗೆ ಬಜೆಟ್‍ನಲ್ಲಿ ಮಾನ್ಯತೆ ಸಿಕ್ಕಿಲ್ಲ. ಆದ್ದರಿಂದ ಮೊದಲು ಕಾಂಗ್ರೆಸ್ ಪಕ್ಷವನ್ನು ಜಿಲ್ಲೆಯಲ್ಲಿ ಬಲಪಡಿಸಿ ಸಂಘಟನೆಯ ಮೂಲಕ ಬಿಜೆಪಿ.ವಿರುದ್ದ ಹೋರಾಡಬೇಕಿದೆ ಎಂದು ಹೇಳಿದರು.

    ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸಿ.ಶಿವುಯಾದವ್, ಹಿರಿಯ ಉಪಾಧ್ಯಕ್ಷರುಗಳಾದ ಮಹಮದ್ ಸಾಧಿಕ್‍ವುಲ್ಲಾ, ಶಬ್ಬೀರ್ ಅಹಮದ್, ಓಬಿಸಿ.ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಡಿ.ಕುಮಾರ್, ಇಂಟೆಕ್ ರಾಜ್ಯ ಸಮಿತಿಯ ಮೆಹಬೂಬ್ ಖಾತೂನ್ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ