ಮುಲಾಜಿಲ್ಲದೆ ಅನಧಿಕೃತ ಒತ್ತುವರಿ ತೆರವುಗೊಳಿಸಿ : ವಿನೋತ್ ಪ್ರಿಯಾ

ಚಿತ್ರದುರ್ಗ:

    2009 ಸೆಪೆಟಂಬರ್ 29 ರ ನಂತರ ಸಾರ್ವಜನಿಕ ರಸ್ತೆಗಳಲ್ಲಿ, ಉದ್ಯಾನವನಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಾದ ರಸ್ತೆ, ಉದ್ಯಾನವನ, ಕೆರೆ, ಬಡಾವಣೆಯಲ್ಲಿನ ರಸ್ತೆಗಳನ್ನು ಒತ್ತುವರಿ ಮಾಡಿದ್ದಲ್ಲಿ ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ಆರ್. ವಿನೋತ್ ಪ್ರಿಯಾ ಅಧಿಕಾರಿಗಳಿಗೆ ಸೂಚಿಸಿದರು.

   ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ‘ಸಾರ್ವಜನಿಕ ರಸ್ತೆಗಳಲ್ಲಿ, ಉದ್ಯಾನವನಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಧಾರ್ಮಿಕ ಕಟ್ಟಡಗಳ ತೆರವು, ರಸ್ತೆ ಒತ್ತುವರಿ ತೆರವು ಹಾಗೂ ಕೆರೆ ಒತ್ತುವರಿಗೊಳಿಸುವ’ ಕುರಿತು ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

   ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಅನಧಿಕೃತ ಧಾರ್ಮಿಕ ಕಟ್ಟಡಗಳ ಸರ್ವೇ ಮತ್ತು ತೆರವು ಕಾರ್ಯಾಚರಣೆಯನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು. ನಿಯಮ ಉಲ್ಲಂಘನೆಯಾದರೆ ಸಂಬಂಧಿಸಿದ ಅಧಿಕಾರಿಗಳೇ ಹೊಣೆಯಾಗುತ್ತಾರೆ. ಈ ಕುರಿತ ಎಲ್ಲಾ ವಿವರಗಳ ಪ್ರಗತಿ ಕುರಿತು ಪ್ರತಿ ಮೂರು ತಿಂಗಳಿಗೊಮ್ಮೆ ಜಿಲ್ಲಾ ಮಟ್ಟದ ಪರಿಶೀಲನೆ ಕಾರ್ಯ ನಡೆಯಬೇಕು.

   ಸರ್ವೋಚ್ಚ ನ್ಯಾಯಾಲಯವು 29 ನೇ ಸೆಪ್ಟೆಂಬರ್ 2009 ರ ನಂತರ ಸಾರ್ವಜನಿಕ ರಸ್ತೆ, ಉದ್ಯಾನವನ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿರುವ ದೇವಸ್ಥಾನ, ಮಸೀದಿ, ಚರ್ಚ್ ಸೇರಿದಂತೆ ಯಾವುದೇ ಧಾರ್ಮಿಕ ಕಟ್ಟಡಗಳನ್ನು ಸರ್ವೇಯಾಧರಿತವಾಗಿ ನಿಯಮಾನುಸಾರ ತೆರವುಗೊಳಿಸಬೇಕು. ಈ ಎಲ್ಲಾ ವಿಷಯಗಳ ಕುರಿತು ತೆಗೆದುಕೊಂಡ ಕ್ರಮದ ಬಗ್ಗೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

    ತಹಶೀಲ್ದಾರ್‍ರರು ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಮ ಲೆಕ್ಕಿಗರು, ಪಿಡಿಒಗಳು, ಬಿಲ್‍ಕಲೆಕ್ಟರ್‍ಗಳನ್ನು ಒಳಗೊಂಡು ಎಲ್ಲಾ ತಾಲ್ಲೂಕು ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಅಧಿಕಾರಿಗಳ ತಂಡ ರಚಿಸಿ, ವ್ಯವಸ್ಥಿತವಾಗಿ ಯೋಜನೆ ರೂಪಿಸಿಕೊಂಡು ಸರ್ವೇ ಕಾರ್ಯ ನಡೆಸಬೇಕು. ಜೊತೆಗೆ ಪೊಲೀಸ್‍ರ ಭದ್ರತೆಯಲ್ಲಿ ತೆರವು ಕಾರ್ಯ ಕೈಗೊಳ್ಳಬೇಕು ಎಂದರು. ಕಾರ್ಯಾಚರಣೆ ವೇಳೆ ಯಾರಾದರೂ ಅಡ್ಡಿಯುಂಟು ಮಾಡಿದರೇ ಅವರು ಕೋರ್ಟ್ ಮೊರೆ ಹೋಗುವಂತೆ ಸಲಹೆ ನೀಡಬೇಕು ಎಂದರು.

    ಈ ಕಾರ್ಯ ಧಾರ್ಮಿಕ ನಿಷ್ಠೆ ಹಾಗೂ ನಂಬಿಕೆ ಒಳಗೊಂಡಿರುವುದರಿಂದ ತೆರವುಗೊಳಿಸುವ ವೇಳೆ ಸ್ಥಳೀಯರು ಸಹ ಆಯಾ ಧರ್ಮದವರ ಮನವೊಲಿಸಿ, ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಬೇಕು ಎಂದರು. ಗ್ರಾಮಲೆಕ್ಕಾಧಿಕಾರಿಗಳು ಸರ್ವೇ ಕಾರ್ಯವನ್ನು ಕೈಗೊಂಡು ಜ. 31 ರೊಳಗೆ, ತಹಶೀಲ್ದಾರ್‍ರರು ಅಥವಾ ನಗರಸಭೆ ಆಯುಕ್ತರು ಫೆಬ್ರವರಿ 28 ರೊಳಗೆ ಮಾಹಿತಿ ಸಂಗ್ರಹಿಸಿ ಕ್ರೂಢೀಕರಿಸಿ, ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು.

     ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ನಿರ್ಮಿಸಿರುವ ಕುರಿತು ಸಾರ್ವಜನಿಕರು ಸಹ ಮಾಹಿತಿ ನೀಡಬಹುದು. ಮಾಹಿತಿ ನೀಡಿದ ವ್ಯಕ್ತಿಯ ಹೆಸರನ್ನು ಗೌಪ್ಯವಾಗಿ ಇಡಲಾಗುವುದು, ಸಂಗ್ರಹಿಸಿದ ಮಾಹಿತಿಯನ್ನು ತಹಶೀಲ್ದಾರ್‍ರು ಅಥವಾ ನಗರಸಭೆ ಆಯುಕ್ತರು ಸಂಗ್ರಹಿಸಿ ಕ್ರೋಡಿಕೃತ ಮಾಹಿತಿಯನ್ನು ನಿಗದಿತ ನಮೂನೆಯಲ್ಲಿ ಭರ್ತಿಮಾಡಿ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಆರ್. ವಿನೋತ್ ಪ್ರಿಯಾ ಸಭೆಗೆ ತಿಳಿಸಿದರು.

    ಯಾವುದೇ ಸಾರ್ವಜನಿಕ ಆಸ್ತಿಯನ್ನು ಒತ್ತುವರಿ ಮಾಡಿದ್ದಲ್ಲಿ ಇದು ಸಾರ್ವಜನಿಕ ಉಪಯುಕ್ತವಾಗಿದೆ, ಇದರಿಂದ ಬೇರೆ ಯಾರಿಗೂ ತೊಂದರೆ ಇಲ್ಲ ಎಂದು ಅಧಿಕಾರಿಗಳು ಅಂದುಕೊಂಡಲ್ಲಿ ಅದು ಸರ್ವೋಚ್ಚ ನ್ಯಾಯಾಲಯದ ಆದೇಶಕ್ಕೆ ವಿರುದ್ದವಾಗಿರುತ್ತದೆ. ಯಾವುದೇ ಉದ್ಯಾನವನ, ಸಾರ್ವಜನಿಕ ರಸ್ತೆಯಲ್ಲಿ ಯಾವುದೇ ಒತ್ತುವರಿ ಮಾಡಲು ಅವಕಾಶವೇ ಇರುವುದಿಲ್ಲ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ಅಪರ ಜಿಲ್ಲಾಧಿಕಾರಿ ಸಂಗಪ್ಪ, ಉಪವಿಭಾಗಾಧಿಕಾರಿ ವಿ. ಪ್ರಸನ್ನ ಸೇರಿದಂತೆ ಎಲ್ಲಾ ತಾಲ್ಲೂಕಿನ ತಹಶೀಲ್ದಾರ್‍ಗಳು ಹಾಗೂ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap