ಫೆ.17 ರಿಂದ ಡಿಸ್‍ಪ್ಲೆ ಕಾರ್ಡ್ ಇಲ್ಲದ ಆಟೋಗಳ ವಿರುದ್ಧ ಕ್ರಮ

ತುಮಕೂರು
   ತುಮಕೂರು ನಗರದಲ್ಲಿ ಸಂಚರಿಸುತ್ತಿರುವ ಆಟೋರಿಕ್ಷಾಗಳನ್ನು ಒಂದು ನಿಯಂತ್ರಣದಲ್ಲಿಡಲು ಮತ್ತು ಆಟೋ ಪ್ರಯಾಣಿಕರ ಸುರಕ್ಷತೆ ಹಿನ್ನೆಲೆಯಲ್ಲಿ ಟ್ರಾಫಿಕ್ ಪೊಲೀಸರು ಜಾರಿಗೆ ತರುತ್ತಿರುವ ಡಿಸ್‍ಪ್ಲೆ ಕಾರ್ಡ್‍ಗಳನ್ನು ಅಳವಡಿಸಿಕೊಳ್ಳದಿರುವ ಆಟೋರಿಕ್ಷಾಗಳ ವಿರುದ್ಧ ಫೆ.17 ರಿಂದ ಕಾನೂನು ಕ್ರಮ ಜರುಗಿಸಲು ಟ್ರಾಫಿಕ್ ಪೊಲೀಸರು ಸಜ್ಜಾಗಿದ್ದಾರೆ.
   ಡಿಸ್‍ಪ್ಲೆ ಕಾರ್ಡ್ ಅಳವಡಿಸಿಕೊಳ್ಳಲು ಹಾಗೂ ಕ್ರಮ ಸಂಖ್ಯೆ ಹಾಕಿಸಿಕೊಳ್ಳಲು ಸುಮಾರು ಮೂರೂವರೆ ತಿಂಗಳಷ್ಟು ಸುದೀರ್ಘ ಕಾಲಾವಕಾಶವನ್ನು ನೀಡಲಾಗಿತ್ತು. ಆದರೂ ಸಹ ಇನ್ನೂ ಹಲವು ಆಟೋರಿಕ್ಷಾದವರು ಈ ಹೊಸ ಪದ್ಧತಿಗೆ ಒಳಪಟ್ಟಿಲ್ಲ. ಆದ್ದರಿಂದ ಫೆ.17 ರಿಂದ ಇಂತಹ ಆಟೋರಿಕ್ಷಾಗಳಿಗೆ ದಂಡ ವಿಧಿಸುವ ಕ್ರಮ ಜರುಗಿಸಲು ಟ್ರಾಫಿಕ್ ಪೊಲೀಸರು ನಿರ್ಧರಿಸಿದ್ದಾರೆ. 
ಕೇವಲ 2000 ಆಟೋಗಳು 
ಡಿಸ್‍ಪ್ಲೆ ಕಾರ್ಡ್ ಪಡೆದಿವೆ
   ತುಮಕೂರು ನಗರದಲ್ಲಿ ಪರ್ಮಿಟ್ ಹೊಂದಿರುವ 7600 ಆಟೋರಿಕ್ಷಾಗಳಿವೆ. ಇವುಗಳ ಪೈಕಿ ಈವರೆಗೆ ಕೇವಲ 2000 ಆಟೋರಿಕ್ಷಾಗಳು ಮಾತ್ರ ಡಿಸ್‍ಪ್ಲೆ ಕಾರ್ಡ್ ಅಳವಡಿಸಿಕೊಂಡಿವೆ. ಮಿಕ್ಕ 5600 ಆಟೋರಿಕ್ಷಾಗಳು ಈ ಬಗ್ಗೆ ನಿರ್ಲಕ್ಷ್ಯ ತಾಳಿವೆ. ಈ ಹಿನ್ನೆಲೆಯಲ್ಲಿ ಇಂತಹ ಆಟೋಗಳನ್ನು ವಶಪಡಿಸಿಕೊಳ್ಳಲಾಗುವುದು. ನ್ಯಾಯಾಲಯದಲ್ಲಿ ದಂಡ ಪಾವತಿಸಿದ ಬಳಿಕವಷ್ಟೇ ಸದರಿ ಆಟೋಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.
   ತುಮಕೂರು ನಗರದಲ್ಲಿ ಸಂಚರಿಸುವ ಆಟೋರಿಕ್ಷಾಗಳನ್ನು ಒಂದು ಶಿಸ್ತಿಗೆ ಒಳಪಡಿಸುವ ಸಲುವಾಗಿ ಅವುಗಳ ಸಮಗ್ರ ಮಾಹಿತಿ ಲಭಿಸಲೆಂದು ಡಿಸ್‍ಪ್ಲೆ ಕಾರ್ಡ್ ಅಳವಡಿಸಲು ಉದ್ದೇಶಿಸಲಾಗಿದೆ. ಚಾಲಕನ ಆಸನದ ಹಿಂಭಾಗ ಪ್ರಯಾಣಿಕರಿಗೆ ಕಾಣಿಸುವಂತೆ ಈ ಡಿಸ್‍ಪ್ಲೆ ಕಾರ್ಡ್ ಅಳವಡಿಸಲಾಗುವುದು.
   ಅದರಲ್ಲಿ ಆಟೋ ರಿಕ್ಷಾದ ಮಾಲೀಕ/ಚಾಲಕನ ಹೆಸರು, ವಿಳಾಸ, ಚಾಲನಾ ಪರವಾನಗಿ ಸಂಖ್ಯೆ, ಆಟೋರಿಕ್ಷಾದ ದಾಖಲಾತಿ ವಿವರ ಇತ್ಯಾದಿ ಮಾಹಿತಿಗಳು ಇರಲಿದ್ದು, ಆಟೋದಲ್ಲಿ ಕುಳಿತವರಿಗೆ ಇವೆಲ್ಲವೂ ಸುಲಭವಾಗಿ ಗೊತ್ತಾಗುತ್ತದೆ. ಇದಲ್ಲದೆ ಪ್ರತಿ ಆಟೋರಿಕ್ಷಾದ ಮುಂಭಾಗ ಮತ್ತು ಹಿಂಭಾಗ ನಿರ್ದಿಷ್ಟ ಸ್ಥಳದಲ್ಲಿ ಸದರಿ ಆಟೋರಿಕ್ಷಾಗೆ ನೀಡಲಾದ ಕ್ರಮ ಸಂಖ್ಯೆಯ ಸ್ಟಿಕ್ಕರ್ ಅಂಟಿಸಲಾಗುತ್ತದೆ. ಇದರಿಂದ ಸದರಿ ಕ್ರಮ ಸಂಖ್ಯೆಯನ್ನು ಹೇಳಿದರೆ ಸಾಕು, ಆ ಆಟೋದ ಸಮಗ್ರ ವಿವರ ಸುಲಭವಾಗಿ ದೊರಕುತ್ತದೆ.
 
    ಇವೆಲ್ಲ ಸಮಗ್ರ ಮಾಹಿತಿಯನ್ನು ಆನ್‍ಲೈನ್‍ನಲ್ಲಿ ಲಭಿಸುವಂತೆ ಮಾಡಲು ಒಂದು ಆಪ್ ಸಹ ಸಿದ್ಧವಾಗಲಿದೆ. ಸ್ಮಾರ್ಟ್‍ಫೋನ್‍ನಲ್ಲಿ ಈ ಆಪ್ ಅಳವಡಿಸಿಕೊಂಡರೆ ಸಾಕು, ಆಟೋರಿಕ್ಷಾದ ಕ್ರಮಸಂಖ್ಯೆ ನಮೂದಿಸಿದರೆ ಆ ಆಟೋರಿಕ್ಷಾದ ವಿವರ ಫೋನ್ ಪರದೆಯಲ್ಲಿ ಪ್ರದರ್ಶನವಾಗುತ್ತದೆ. ಈ ಕ್ರಮದಿಂದ ಮಹಿಳೆಯರಿಗೆ, ವಿಶೇಷವಾಗಿ ರಾತ್ರಿ ವೇಳೆ ಆಟೋದಲ್ಲಿ ಸಂಚರಿಸುವವರಿಗೆ ಸುರಕ್ಷತೆ ಲಭಿಸುತ್ತದೆ. ಜೊತೆಗೆ ಆಟೋರಿಕ್ಷಾಗಳೂ ಒಂದು ಶಿಸ್ತಿಗೆ ಒಳಪಡಲಿದೆಯೆಂಬ ಕಾರಣದಿಂದ ಟ್ರಾಫಿಕ್ ಪೊಲೀಸ್ ವಿಭಾಗವು ಇಂತಹುದೊಂದು ಕ್ರಮವನ್ನು ಅನುಷ್ಠಾನಗೊಳಿಸುತ್ತಿದೆಯೆಂದು ಮೂಲಗಳು ಹೇಳಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link